ನಾನು ಇಂಧನ ಸಚಿವನಾಗಿದ್ದಾಗ ಸೋಲಾರ್ ಪಾರ್ಕ್ ಮಾಡಿ ವಿಶ್ವದ ಗಮನ ಸೆಳೆದಿದ್ದೆ: ಡಿಕೆಶಿ
ಗಡಿ ಪ್ರದೇಶ ಚಾಮರಾಜನಗರದಲ್ಲಿ ಕೈಗಾರಿಕೆಗೆ ಬಂಡವಾಳ ಹೂಡಿಕೆ ಮಾಡುವವರಿಗೆ ನಮ್ಮ ಸರ್ಕಾರ ಪ್ರೋತ್ಸಾಹ ನೀಡಲಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.

ಚಾಮರಾಜನಗರ (ಆ.27): ಗಡಿ ಪ್ರದೇಶ ಚಾಮರಾಜನಗರದಲ್ಲಿ ಕೈಗಾರಿಕೆಗೆ ಬಂಡವಾಳ ಹೂಡಿಕೆ ಮಾಡುವವರಿಗೆ ನಮ್ಮ ಸರ್ಕಾರ ಪ್ರೋತ್ಸಾಹ ನೀಡಲಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಮೊದಲ ಬಾರಿಗೆ ಚಾಮರಾಜನಗರಕ್ಕೆ ಆಗಮಿಸಿದ್ದು, ಇಲ್ಲಿ ಕೈಗಾರಿಕಾ ಪ್ರದೇಶದಲ್ಲಿ ಸೌರಶಕ್ತಿ ಶೇಖರಣೆಯ ಬ್ಯಾಟರಿ ಉತ್ಪಾದನಾ ಘಟಕದ ಶಂಕು ಸ್ಥಾಪನೆಗೆ ಬಂದಿದ್ದೇನೆ. ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಇಂಧನ ಸಚಿವನಾಗಿದ್ದಾಗ ಸೋಲಾರ್ ಪಾರ್ಕ್ ಮಾಡಿ ವಿಶ್ವದ ಗಮನ ಸೆಳೆದಿದ್ದೆ. ನಮ್ಮ ಮಾದರಿಯನ್ನು ಇಡೀ ದೇಶ ಮೆಚ್ಚಿ ಕೇಂದ್ರ ಸರ್ಕಾರ ಎಲ್ಲಾ ತಾಲೂಕುಗಳಲ್ಲಿ ಸೌರಶಕ್ತಿ ಯೋಜನೆ ಜಾರಿಗೆ ತಂದಿದ್ದಾರೆ.
ಟ್ರಾನ್ಸ್‌ಮಿಷನ್‌ನಲ್ಲಿ ವೆಚ್ಚ ಉಳಿತಾಯ ಮಾಡುವಲ್ಲಿ ಕರ್ನಾಟಕ ದೇಶಕ್ಕೆ ಮಾದರಿಯಾಗಿತ್ತು. ಈಗ ವಿದ್ಯುತ್ ಶೇಖರಣೆ ಬಗ್ಗೆ ಕೆಲಸ ಮಾಡಲಾಗುತ್ತಿದೆ. ಖಾಸಗಿ ಕಂಪನಿ ಸುಮಾರು 2 ಸಾವಿರ ಕೋಟಿ ರು. ಬಂಡವಾಳ ಹೂಡಿಕೆ ಮಾಡಲು ಮುಂದಾಗಿದ್ದು, ಮೊದಲ ಹಂತದಲ್ಲಿ 500 ಕೋಟಿ ರು. ಇಲ್ಲಿ ಹೂಡಿಕೆ ಮಾಡಿ ಬ್ಯಾಟರಿ ಉತ್ಪಾದನಾ ಘಟಕ ನಿರ್ಮಾಣ ಮಾಡುತ್ತಿದ್ದಾರೆ. ಇದಕ್ಕೆ ಉತ್ತೇಜನ ನೀಡಲು ಇಲ್ಲಿಗೆ ಬಂದಿದ್ದೇನೆ. ರೇಣುಕಾಚಾರ್ಯ ಅವರ ಭೇಟಿ ಬಗ್ಗೆ ಕೇಳಿದಾಗ, ‘ನಮಗೆ ಆಪರೇಷನ್ ಹಸ್ತದ ಅಗತ್ಯವಿಲ್ಲ. ಆದರೆ ಕಾಂಗ್ರೆಸ್ ಪಕ್ಷಕ್ಕೆ ಸೇರಲು ಬಯಸುವವರನ್ನು ತಡೆವುದಿಲ್ಲ. ನಮ್ಮ ಪಕ್ಷಕ್ಕೆ ಬಲತುಂಬುವವರು, ನಮ್ಮ ಮೇಲೆ ವಿಶ್ವಾಸ ಇಡುವವರನ್ನು ನಾವು ಪಕ್ಷಕ್ಕೆ ಸ್ವಾಗತಿಸುತ್ತೇವೆ’ ಎಂದರು.
ಸರ್ಕಾರಿ ವಕೀಲರ ವೈಫಲ್ಯದಿಂದ ಸರ್ಕಾರಕ್ಕೆ ಕೆಟ್ಟ ಹೆಸರು: ಸಿಎಂ ಸಿದ್ದರಾಮಯ್ಯ
ಚಾಮರಾಜನಗರ ಆಕ್ಸಿಜನ್ ದುರಂತ ಪ್ರಕರಣ ಸಂತ್ರಸ್ತರಿಗೆ ಈವರೆಗೂ ನ್ಯಾಯ ಸಿಕ್ಕಿಲ್ಲ ಎಂಬ ಪ್ರಶ್ನೆಗೆ, ‘ನಾನು ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವೈದ್ಯಕೀಯ ಶಿಕ್ಷಣ ಸಚಿವರಿಗೆ ಸೂಚನೆ ನೀಡಿ, ಮೆಡಿಕಲ್ ಕಾಲೇಜಿನಲ್ಲಿ ಈ ಸಂತ್ರಸ್ತ ಕುಟುಂಬ ಸದಸ್ಯರಿಗೆ ನ್ಯಾಯ ಒದಗಿಸಿಕೊಡಲು ತಿಳಿಸಿದ್ದೇವೆ. ಜಿಲ್ಲಾ ಉಸ್ತುವಾರಿ ಸಚಿವರಿಗೂ ಈ ಬಗ್ಗೆ ಸೂಚನೆ ನೀಡಿದ್ದೇವೆ’ ಎಂದು ತಿಳಿಸಿದರು. ಈ ಬಗ್ಗೆ ವೈದ್ಯಕೀಯ ಶಿಕ್ಷಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಚರ್ಚಿಸಲಾಗಿದೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯೊಂದಿಗು ಸಭೆ ಮಾಡಲಾಗಿದೆ ಆಕ್ಸಿಜನ್ ದುರಂತದ ಬಗ್ಗೆ ಪರಿಶೀಲಿಸಲು ಸೂಚಿಸಲಾಗಿದೆ ಸಂತ್ರಸ್ತರಿಗೆ ಸಹಾಯ ಹಾಗೂ ನ್ಯಾಯ ಒದಗಿಸುವುದು ನಮ್ಮ ಆದ್ಯತೆ ಆಗಿದೆ ಎಂದರು.
ಕಾಂಗ್ರೆಸ್ ಸರ್ಕಾರದಲ್ಲೂ ಬಣ ರಾಜಕೀಯ?: ಚಾಮರಾಜನಗರ: ಕಾಂಗ್ರೆಸ್ ಸರ್ಕಾರದಲ್ಲಿ ಎಲ್ಲವೂ ಸರಿಯಿಲ್ಲ. ಸಚಿವರ ನಡುವೆ ಹೊಂದಾಣಿಕೆ ಇಲ್ಲ ಎಂಬುದು ಸಾಬೀತಾಗಿದೆ. ಚಾಮರಾಜನಗರಕ್ಕೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಬರುವುದನ್ನು ಕಾಯದೆ ಮೊದಲೇ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಕೈಗಾರಿಕಾ ಪ್ರದೇಶಕ್ಕೆ ಭೇಟಿ ನೀಡಿ ಕಾರ್ಯಕ್ರಮಕ್ಕೆ ಶುಭ ಕೋರಿ ತೆರಳಿದರು.
ನಮ್ಮ ಹಣ್ಣನ್ನು ಬೇರೆಯವರಿಗೆ ಬಿಡಬಾರದು: ಎಸ್‌ಟಿಎಸ್ ಬಗ್ಗೆ ಡಿಕೆಶಿ ಮಾರ್ಮಿಕ ನುಡಿ
ಮುಖ್ಯಮಂತ್ರಿ ಸಿದ್ದರಾಮಯ್ಯ ಬಣದ ಬೈರತಿ ಸುರೇಶ್ ಬೆಂಗಳೂರಿನಿಂದ ನೂರಾರು ಕಿ.ಮೀ. ದೂರದ ಚಾಮರಾಜನಗರಕ್ಕೆ ಬಂದು ಯಾವುದೇ ಯೋಜನೆ ಬಗ್ಗೆ ಪ್ರಸ್ತಾಪ ಮಾಡದೆ, ಕನಿಷ್ಠ ಅಧಿಕಾರಿಗಳ ಸಭೆ, ಕಾಮಗಾರಿಗಳ ಪರಿಶೀಲನೆ ಮಾಡದೆ ತೆರಳಿದರು. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೂ ಕಾಯದೆ ಕೈಗಾರಿಕಾ ಪ್ರದೇಶಕ್ಕೆ ಭೇಟಿ ನೀಡಿ ಡಿ.ಕೆ.ಶಿವಕುಮಾರ್ ಬರುವ ಮೊದಲೇ ವಾಪಸ್ ಭೈರತಿ ಸುರೇಶ್ ತೆರಳಿದ್ದು, ಕಾಂಗ್ರೆಸ್ ಸರ್ಕಾರದಲ್ಲಿ ಎಲ್ಲವು ಸರಿಯಲ್ಲ ಎಂಬುದಕ್ಕೆ ಸಾಕ್ಷಿಯಾಯಿತು. ಬೆಂಗಳೂರಿನಿಂದ ಇಬ್ಬರೂ ಪ್ರತ್ಯೇಕ ಹೆಲಿಕಾಪ್ಟರ್‌ಗಳಲ್ಲಿ ಆಗಮಿಸಿದ್ದರು. ಹೊಂದಾಣಿಕೆ ಇದ್ದರೆ ಒಟ್ಟಿಗೆ ಒಂದೇ ಹೆಲಿಕಾಪ್ಟರ್‌ನಲ್ಲಿ ಬರಬಹುದಿತ್ತು ಒಟ್ಟಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಒಟ್ಟಿಗೆ ತೆರಳಬಹುದಿತ್ತು ಎಂದು ಜನಸಾಮಾನ್ಯರ ಚರ್ಚೆಯ ವಿಷಯವಾಗಿತ್ತು.