‘ಎಸ್‌.ಟಿ.ಸೋಮಶೇಖರ್‌ ಅವರೊಂದಿಗೆ 35 ವರ್ಷದ ಸ್ನೇಹ ಹೊಂದಿದ್ದೇನೆ. ರಾಜಕೀಯವಾಗಿ ನೀರು, ಗೊಬ್ಬರ ಹಾಕಿ ಬೆಳೆಸಿದ್ದೇವೆ. ಹಣ್ಣು ಬಿಟ್ಟಿದೆ. ಅದನ್ನು ಬೇರೆಯವರು ಕಿತ್ಕೊಂಡು ತಿನ್ನೋದಕ್ಕೆ ಬಿಡಬಾರದು ಅನ್ನೋದು ನನ್ನ ಭಾವನೆ’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಮಾರ್ಮಿಕವಾಗಿ ಹೇಳಿದ್ದಾರೆ.

ಬೆಂಗಳೂರು (ಆ.27): ‘ಎಸ್‌.ಟಿ.ಸೋಮಶೇಖರ್‌ ಅವರೊಂದಿಗೆ 35 ವರ್ಷದ ಸ್ನೇಹ ಹೊಂದಿದ್ದೇನೆ. ರಾಜಕೀಯವಾಗಿ ನೀರು, ಗೊಬ್ಬರ ಹಾಕಿ ಬೆಳೆಸಿದ್ದೇವೆ. ಹಣ್ಣು ಬಿಟ್ಟಿದೆ. ಅದನ್ನು ಬೇರೆಯವರು ಕಿತ್ಕೊಂಡು ತಿನ್ನೋದಕ್ಕೆ ಬಿಡಬಾರದು ಅನ್ನೋದು ನನ್ನ ಭಾವನೆ’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಮಾರ್ಮಿಕವಾಗಿ ಹೇಳಿದ್ದಾರೆ. ಯಶವಂತಪುರ ವಿಧಾನಸಭಾ ಕ್ಷೇತ್ರದ ಹೆಮ್ಮಿಗೆಪುರ ವಾರ್ಡ್‌ನ ನಿವಾಸಿಗಳ ಸಂಘದ ಜತೆಗೆ ಭಾನುವಾರ ಆಯೋಜಿಸಿದ್ದ ಜನಸ್ಪಂದನದಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಅವರು ಮಾತನಾಡಿದರು.

ಸೋಮಶೇಖರ್‌ ಇತ್ತೀಚೆಗೆ ಬಹಳ ಸುದ್ದಿಯಲ್ಲಿದ್ದಾರೆ. ಕ್ಷೇತ್ರದ ಜನರು ಮತ್ತು ಅವರು ಕುಳಿತುಕೊಂಡು ತೀರ್ಮಾನ ಮಾಡಿ. ಕಾಂಗ್ರೆಸ್‌ ಸರ್ಕಾರ ರಾಜ್ಯದಲ್ಲಿ ಇನ್ನೂ ಐದು ವರ್ಷ ಅಧಿಕಾರದಲ್ಲಿ ಇರಲಿದೆ. ಪ್ರಜ್ಞಾವಂತರಿದ್ದೀರಿ. ಸೂಕ್ತ ತೀರ್ಮಾನ ತೆಗೆದುಕೊಳ್ಳತ್ತೀರೆಂದು ಭಾವಿಸಿದ್ದೇನೆ ಎಂದರು. ನನ್ನ ಕ್ಷೇತ್ರವಾದ ಕನಕಪುರಕ್ಕೆ ಹೋಗಲು ಸಾಧ್ಯವಾಗಿಲ್ಲ. ಆದರೆ, ಸೋಮಶೇಖರ್‌ ಎರಡು ಬಾರಿ ಯಶವಂತಪುರ ಕ್ಷೇತ್ರಕ್ಕೆ ಎಳೆದುಕೊಂಡು ಬಂದಿದ್ದಾರೆ. ಇಲ್ಲಿನ ಜನರ ಸಮಸ್ಯೆ ಬಗ್ಗೆ ಸರ್ಕಾರಕ್ಕೆ ಕಾಳಜಿ ಇದೆ ಎಂದು ಹೇಳಿದರು.

ಸರ್ಕಾರಿ ವಕೀಲರ ವೈಫಲ್ಯದಿಂದ ಸರ್ಕಾರಕ್ಕೆ ಕೆಟ್ಟ ಹೆಸರು: ಸಿಎಂ ಸಿದ್ದರಾಮಯ್ಯ

ಸಮರ್ಪಕ ರಸ್ತೆ, ಒಳಚರಂಡಿ, ಸುಗಮ ವಾಹನ ಸಂಚಾರ, ಸರ್ಕಾರಿ ಆಸ್ಪತ್ರೆ, ಅರಣ್ಯ ಇಲಾಖೆಯಿಂದ ಬಿಡಿಎ ನಿವೇಶನ ಸ್ವಾಧೀನ, ರಸ್ತೆ ಅಗಲೀಕರಣ, ಕಸ ವಿಲೇವಾರಿ ಘಟಕ, ಬಹುಮಹಡಿ ಪಾರ್ಕಿಂಗ್‌, ಬಿಎಂಟಿಸಿ ಬಸ್‌ ಡಿಪೋ, ಬಿಬಿಎಂಪಿ ಅನುಮೋದಿತ ಬಡಾವಣೆಗಳನ್ನು ಬಿಬಿಎಂಪಿಗೆ ಹಸ್ತಾಂತರ, ಸುಸಜ್ಜಿತ ಶಾಲೆ ಮತ್ತಿತರ ಸೌಲಭ್ಯಗಳಿಗಾಗಿ ಮನವಿ ಮಾಡಿದ್ದೀರಿ. ಈ ಎಲ್ಲಾ ಸಮಸ್ಯೆಗಳನ್ನು ಅಧಿಕಾರಿಗಳು ಪರಿಹಾರ ಮಾಡಲಿದ್ದಾರೆ ಎಂದು ಭರವಸೆ ನೀಡಿದರು.

ಸುಳ್ಳು ಸುದ್ದಿ ಪತ್ತೆಗೆ ವಿಶೇಷ ಘಟಕ ರಚನೆ: ಪೊಲೀಸ್‌ ಆಯುಕ್ತ ಬಿ.ದಯಾನಂದ್‌

ಶಾಸಕ ಎಸ್‌.ಟಿ.ಸೋಮಶೇಖರ್‌ ಮಾತನಾಡಿ, ಬಿಬಿಎಂಪಿಗೆ 111ನೇ ಹಳ್ಳಿಯಾಗಿ ಸೇರ್ಪಡೆಯಾಗಿರುವ ಮಲ್ಲಸಂದ್ರದ ರಸ್ತೆ ಅಗಲೀಕರಣ, ಕಾವೇರಿ ನೀರು ಪೂರೈಕೆ, ಒಳಚರಂಡಿ ವ್ಯವಸ್ಥೆಗೆ ಬಜೆಟ್‌ನಲ್ಲಿ ಅನುದಾನ ಮೀಸಲಿಡಲಾಗಿದೆ ಎಂದು ಹೇಳಿದರು. ಲಿಂಗಧೀರನಹಳ್ಳಿ ಕಸದ ಘಟಕದ ಸಮಸ್ಯೆ, ಖಾತಾ ಸಮಸ್ಯೆ, ನೀರಿನ ಸಮಸ್ಯೆ ಬಗ್ಗೆ ಉಪ ಮುಖ್ಯಮಂತ್ರಿ ಗಮನಕ್ಕೆ ತರಲಾಗಿದೆ. ಕಾವೇರಿ ನೀರಿನ ಪೂರೈಕೆಯನ್ನು ವಾರಕ್ಕೆ ಎರಡರಿಂದ ಮೂರು ದಿನಕ್ಕೆ ವಿಸ್ತರಣೆ ಮಾಡುವಂತೆ ಮನವಿ ಮಾಡಲಾಗಿದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ನೆಲಮಂಗಲ ಶಾಸಕ ಶ್ರೀನಿವಾಸ್‌, ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌, ಜಂಟಿ ಆಯುಕ್ತ ನಾಗರಾಜ್‌, ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.