Asianet Suvarna News Asianet Suvarna News

ಸರ್ಕಾರಿ ವಕೀಲರ ವೈಫಲ್ಯದಿಂದ ಸರ್ಕಾರಕ್ಕೆ ಕೆಟ್ಟ ಹೆಸರು: ಸಿಎಂ ಸಿದ್ದರಾಮಯ್ಯ

ಅಧಿಕಾರಿಗಳು ಮತ್ತು ಸರ್ಕಾರಿ ವಕೀಲರ ವೈಫಲ್ಯದಿಂದ ಸರ್ಕಾರಕ್ಕೆ ಕೆಟ್ಟಹೆಸರು ಬರುತ್ತದೆ. ಸರ್ಕಾರಿ ವಕೀಲರು, ಅಧಿಕಾರಿಗಳು ಕರ್ತವ್ಯ ಪ್ರಜ್ಞೆಯೊಂದಿಗೆ ಕೆಲಸ ಮಾಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. 

Bad name due to government lawyers failure Says CM Siddaramaiah gvd
Author
First Published Aug 27, 2023, 9:07 AM IST

ಬೆಂಗಳೂರು (ಆ.27): ಅಧಿಕಾರಿಗಳು ಮತ್ತು ಸರ್ಕಾರಿ ವಕೀಲರ ವೈಫಲ್ಯದಿಂದ ಸರ್ಕಾರಕ್ಕೆ ಕೆಟ್ಟಹೆಸರು ಬರುತ್ತದೆ. ಸರ್ಕಾರಿ ವಕೀಲರು, ಅಧಿಕಾರಿಗಳು ಕರ್ತವ್ಯ ಪ್ರಜ್ಞೆಯೊಂದಿಗೆ ಕೆಲಸ ಮಾಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳ ಇಲಾಖೆ ಹಾಗೂ ಕರ್ನಾಟಕ ಕಾನೂನು ಮತ್ತು ಸಂಸದೀಯ ಸುಧಾರಣಾ ಸಂಸ್ಥೆ ಸಹಯೋಗದಲ್ಲಿ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಶನಿವಾರ ನಡೆದ ‘ಕರ್ನಾಟಕ ಸರ್ಕಾರಿ ವ್ಯಾಜ್ಯ ನಿರ್ವಹಣಾ ಅಧಿನಿಯಮ 2023’ ಸಭೆಯಲ್ಲಿ ಮಾತನಾಡಿದರು.

ಸರ್ಕಾರಿ ವಕೀಲರು ಮತ್ತು ಅಧಿಕಾರಿಗಳು ವ್ಯಾಜ್ಯಗಳು ಸಣ್ಣದಿರಲಿ ಅಥವಾ ದೊಡ್ಡದಿರಲಿ ಅದನ್ನು ಗಂಭೀರವಾಗಿ ಪರಿಗಣಿಸಬೇಕು. ಅದಕ್ಕೆ ತಕ್ಕಂತೆ ಹೋಂ ವರ್ಕ್ ಮಾಡಿಕೊಳ್ಳಬೇಕು. ಜನರ ಹಣದಲ್ಲಿ ನಮಗೆ ಸವಲತ್ತುಗಳು ಸಿಗುತ್ತಿದೆ. ಆ ಬಗ್ಗೆ ನಾವು ಯೋಚಿಸಬೇಕು ಎಂದರು. ಕಾನೂನಿನ ದೃಷ್ಟಿಯಲ್ಲಿ ಎಲ್ಲರೂ ಸಮಾನರು. ಜನರ ಹಿತ ಕಾಪಾಡುವುದು ಎಂದರೆ ಅದು ಸರ್ಕಾರದ ಹಿತ ಕಾಪಾಡಿದಂತೆ. ಸರ್ಕಾರಿ ವಕೀಲರಿಗೆ ಸರ್ಕಾರದ ಪ್ರಕರಣಗಳೆಂದರೆ ನಿರ್ಲಕ್ಷ್ಯ ಇರಬಾರದು. ಜನರಿಗೆ ನ್ಯಾಯ ಸಿಗುವ ಪ್ರಮಾಣ ಮತ್ತಷ್ಟುಹೆಚ್ಚಬೇಕು. ಬಡವರಿಗೆ ನ್ಯಾಯ ಸಿಗದಿದ್ದರೆ ಸರ್ಕಾರಿ ವಕೀಲರನ್ನು ನೇಮಿಸಿಕೊಳ್ಳುವುದು ವ್ಯರ್ಥ ಎಂದು ತಿಳಿಸಿದರು.

ಸುಳ್ಳು ಸುದ್ದಿ ಪತ್ತೆಗೆ ವಿಶೇಷ ಘಟಕ ರಚನೆ: ಪೊಲೀಸ್‌ ಆಯುಕ್ತ ಬಿ.ದಯಾನಂದ್‌

ಯಾವುದೇ ಪ್ರಕರಣಗಳ ಕುರಿತು ಪ್ಲೀಡಿಂಗ್ಸ್‌ ಅನ್ನು ಸರಿಯಾಗಿ ಮತ್ತು ಪರಿಣಾಮಕಾರಿಯಾಗಿ ಬರೆಯುವುದು ಮುಖ್ಯ. ಈ ಹಂತದಲ್ಲೇ ಅಸಡ್ಡೆ, ಉಡಾಫೆತನ ಪ್ರದರ್ಶಿಸಿದರೆ ನ್ಯಾಯ ಪ್ರಕ್ರಿಯೆಯ ಮುಂದಿನ ಎಲ್ಲ ಹಂತಗಳಲ್ಲೂ ವೈಫಲ್ಯ ಎದುರಿಸಬೇಕಾಗುತ್ತದೆ. ಹೀಗಾಗಿ ಸರ್ಕಾರಿ ವಕೀಲರು ಜವಾಬ್ದಾರಿಯಿಂದ ವರ್ತಿಸಬೇಕು. ಕೆಲ ನ್ಯಾಯಾಧೀಶರು ಮುಖ ನೋಡಿ ಮಣೆ ಹಾಕುತ್ತಾರೆ ಎಂಬ ಅಭಿಪ್ರಾಯವಿದೆ. ಅದನ್ನು ಎಲ್ಲರೂ ಒಟ್ಟಾಗಿ ಅಳಿಸಬೇಕು. ಕ್ರಿಮಿನಲ್‌ ಪ್ರಕರಣಗಳಲ್ಲಿ ಆರೋಪಿಗಳಿಗೆ ಜಾಮೀನು ನೀಡುವುದನ್ನು ವಿರೋಧಿಸಬೇಕು ಎಂದು ಹೇಳಿದರು. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ಅಡ್ವೊಕೇಟ್‌ ಜನರಲ್‌ ಶಶಿಕಿರಣ್‌ ಶೆಟ್ಟಿ, ಸರ್ಕಾರದ ಅಪರ ಮುಖ್ಯಕಾರ್ಯದರ್ಶಿ ರಜನೀಶ್‌ ಗೋಯಲ್‌ ಇತರರಿದ್ದರು.

15 ದಿನಗಳಲ್ಲಿ ಮಧ್ಯಸ್ಥಿಕೆ ಪ್ರಕರಣ ಮಾರ್ಗದರ್ಶಿ ಸೂತ್ರ: ಸರ್ಕಾರಿ ವ್ಯಾಜ್ಯ ನಿರ್ವಹಣೆ ಅಧಿನಿಯಮ ಜಾರಿಯಿಂದಾಗಿ ರಾಜ್ಯದಲ್ಲಿ ನ್ಯಾಯಾಲಯಗಳು ಹಾಗೂ ಶಾಸನಬದ್ಧ ನ್ಯಾಯಾಧಿಕರಣಗಳ ಮುಂದೆ ಸರ್ಕಾರಿ ವ್ಯಾಜ್ಯಗಳನ್ನು ನಡೆಸುವ ಕುರಿತು ನಿಯಮ, ಆದೇಶ, ಅಧಿಸೂಚನೆ, ಸುತ್ತೋಲೆಗಳ ದಿಕ್ಸೂಚಿ ರಹಿತ ನಿರ್ದೇಶನಗಳನ್ನು ಬದಲಿಸಲಾಗುತ್ತಿದೆ. ಅದರ ಜತೆಗೆ ಮಧ್ಯಸ್ಥಿಕೆ ಪ್ರಕರಣಗಳಲ್ಲಿ ಹಲವು ರೀತಿಯ ಲೋಪಗಳಾಗುತ್ತಿದ್ದು, ಅದನ್ನು ಸರಿಪಡಿಸಲು ಸರ್ಕಾರಿ ವಕೀಲರು ಸಕಾಲಕ್ಕೆ ನ್ಯಾಯಾಲಯಕ್ಕೆ ದಾಖಲೆಗಳನ್ನು ಸಲ್ಲಿಸುವಂತೆ ಕ್ರಮ ಕೈಗೊಳ್ಳಲಾಗುವುದು. 

ಲೋಕಸಭೆ ಚುನಾವಣೆಗೆ ಪುತ್ರನ ಸ್ಪರ್ಧೆ ಹಾವೇರಿಯಲ್ಲಿಯೇ ಖಚಿತ: ಕೆ.ಎಸ್‌.ಈಶ್ವರಪ್ಪ

ಜತೆಗೆ ಮಧ್ಯಸ್ಥಿಕೆ ಪ್ರಕರಣಗಳಲ್ಲಿ ಸರ್ಕಾರದ ಉನ್ನತ ಅಧಿಕಾರಿಗಳು ಸೇರಿದಂತೆ ತಜ್ಞರೊಂದಿಗೆ ಚರ್ಚಿಸಿ 15 ದಿನಗಳಲ್ಲಿ ಮಾರ್ಗದರ್ಶಿ ಸೂತ್ರಗಳನ್ನು ರಚಿಸಲಾಗುವುದು ಎಂದು ಕಾನೂನು ಸಚಿವ ಎಚ್‌.ಕೆ. ಪಾಟೀಲ್‌ ತಿಳಿಸಿದರು. ರಾಜ್ಯದ ಎಲ್ಲ ನ್ಯಾಯಾಲಯಗಳಲ್ಲಿ ಪ್ರಸ್ತುತ 21.4 ಲಕ್ಷ ಪ್ರಕರಣಗಳು ವಿಚಾರಣಾ ಹಂತದಲ್ಲಿವೆ. ಕೆಳ ಹಂತದ ನ್ಯಾಯಾಲಯಗಳಲ್ಲಿ 18.9 ಲಕ್ಷ ಪ್ರಕರಣಗಳಿದ್ದರೆ, ಹೈಕೋರ್ಚ್‌ನಲ್ಲಿ 2.50 ಲಕ್ಷ ಪ್ರಕರಣಗಳಿವೆ. 1,626 ಪ್ರಕರಣಗಳು 20ರಿಂದ 30 ವರ್ಷ ಹಳೆಯವಾಗಿವೆ. 172 ಪ್ರಕರಣಗಳು 30 ವರ್ಷಕ್ಕಿಂತ ಹಳೆಯದ್ದಾಗಿವೆ. ಅಂತಹ ಪ್ರಕರಣಗಳನ್ನು ಶೀಘ್ರದಲ್ಲಿ ಇತ್ಯರ್ಥ ಮಾಡಬೇಕಿದೆ ಎಂದರು.

Follow Us:
Download App:
  • android
  • ios