ಮಹಾರಾಷ್ಟ್ರದಲ್ಲಿ ಬಿಜೆಪಿ ಶಿವಸೇನೆ ಸರ್ಕಾರ ಇನ್ನು 20 ದಿನದಲ್ಲಿ ಪತನವಾಗಲಿದೆ. ಏಕನಾಥ್ ಶಿಂಧೆ ಮುಖ್ಯಮಂತ್ರಿ ಸ್ಥಾನ 10 ತಿಂಗಳಿಗೆ ಅಂತ್ಯವಾಗಲಿದೆ ಎಂದು ಉದ್ಧವ್ ಠಾಕ್ರೆ ಬಣದ ಸಂಜಯ್ ರಾವುತ್ ನೀಡಿದ ಹೇಳಿಕೆ ಇದೀಗ ಮಹಾರಾಷ್ಟ್ರದಲ್ಲಿ ಸಂಚಲನ ಸೃಷ್ಟಿಸಿದೆ.
ಮುಂಬೈ(ಏ.23): ಮಹಾರಾಷ್ಟ್ರದಲ್ಲಿ ಬಿಜೆಪಿ ಶಿವಸೇನೆ ಸರ್ಕಾರ ರಚನೆಗೊಂಡು ಸರಿಸುಮಾರು 10 ತಿಂಗಳು ಕಳೆದಿದೆ. ಇದೀಗ ಪತನದ ಹಾದಿಯಲ್ಲಿದೆ ಅನ್ನೋ ಮಾತುಗಳು ಕೇಳಿಬರುತ್ತಿದೆ. ಇದಕ್ಕೆ ಪೂರಕವಾದ ಬೆಳವಣಿಗೆ ಮಹಾರಾಷ್ಟ್ರ ರಾಜಕೀಯದಲ್ಲಿ ನಡೆಯುತ್ತಿದೆ. ಬಿಜೆಪಿ ಎನ್‌ಸಿಪಿ ಸರ್ಕಾರ ರಚನೆಗೆ ಕಸರತ್ತು ನಡೆಯುತ್ತಿದೆ ಎಂದು ರಾಜಕೀಯ ತಜ್ಞರು ಹೇಳುತ್ತಿರುವ ಬೆನ್ನಲ್ಲೇ ಇದೀಗ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ಬಣದ ಸಂಜಯ್ ರಾವತ್, ಮತ್ತೊಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ. ಸದ್ಯ ಏಕನಾಥ್ ಶಿಂಧೆಯ ಮುಖ್ಯಮಂತ್ರಿ ಸ್ಥಾನ ಗರಿಷ್ಠ 20 ದಿನ ಮಾತ್ರ. ನಾವು ಸುಪ್ರೀಂ ಕೋರ್ಟ್ ತೀರ್ಪಿಗೆ ಕಾಯುತ್ತಿದ್ದೇವೆ. 15 ರಿಂದ 20 ದಿನದಲ್ಲಿ ಶಿಂಧೆ ಸರ್ಕಾರ ಪತನವಾಗಲಿದೆ ಎಂದು ಸಂಜಯ್ ರಾವತ್ ಹೇಳಿದ್ದಾರೆ.
ಏಕನಾಥ್ ಶಿಂಧೆ ಸೇರಿದಂತೆ ಶಿವಸೇನೆಯ 16 ಶಾಸಕರ ಅನರ್ಹತೆ ವಿಚಾರಣೆ ಶೀಘ್ರದಲ್ಲೇ ಅಂತ್ಯಗೊಳ್ಳಲಿದ್ದು, ಸುಪ್ರೀಂ ಕೋರ್ಟ್ ತೀರ್ಪು ಪ್ರಕಟಿಸಲಿದೆ. ಈ ತೀರ್ಪು ಶಿಂಧೆ ಬಣದ ವಿರುದ್ಧವಾಗಿರಲಿದೆ ಎಂದು ಸಂಜಯ್ ರಾವತ್ ಹೇಳಿದ್ದಾರೆ. ಇದರಿಂದ ಬಿಜೆಪಿ ಶಿವಸೇನೆ ಸರ್ಕಾರದ 40 ಹಾಲಿ ಶಾಸಕರು ಸ್ಥಾನ ಕಳೆದುಕೊಳ್ಳಲಿದ್ದಾರೆ . ಸರ್ಕಾರ ಪತನಗೊಳ್ಳಲಿದೆ ಎಂದು ರಾವತ್ ಹೇಳಿದ್ದಾರೆ.
‘ಮಹಾ’ ಬಿಜೆಪಿಗೆ ಅಜಿತ್ ಪವಾರ್ ಹಾಗೂ 40 ಶಾಸಕರ ಬೆಂಬಲ? ಎನ್‌ಸಿಪಿ ನಾಯಕನ ಪ್ರತಿಕ್ರಿಯೆ ಹೀಗಿದೆ..
ಇತ್ತೀಚೆಗೆ ಸಂಜಯ್ ರಾವುತ್, ಮಹಾರಾಷ್ಟ್ರದಲ್ಲಿ ಹೊಸ ಸರ್ಕಾರ ರಚನೆಯಾಗಲಿದ್ದು, ಎನ್‌ಸಿಪಿ ನಾಯಕ ಅಜಿತ್ ಪವಾರ್ ಮುಖ್ಯಮಂತ್ರಿಯಾಗಲಿದ್ದಾರೆ ಎಂದಿದ್ದರು. ಇದರ ಬೆನ್ನಲ್ಲೇ ಏಕನಾಥ್ ಶಿಂಧೆ ಬಣ ಬಿಜೆಪಿ ಹಾಗೂ ಶಿವೇಸನೆಗೆ ಎಚ್ಚರಿಕೆ ನೀಡಿತ್ತು. ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಬಿಜೆಪಿ ಜೊತೆಗೂಡಿ ಸರ್ಕಾರ ರಚಿಸಿದರೆ, ನಾವು ಸರ್ಕಾರದ ಭಾಗವಾಗಿ ಇರಲ್ಲ ಎಂದು ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಬಣ ಹೇಳಿದೆ. ಈ ಕುರಿತು ಹೇಳಿಕೆ ನೀಡಿರುವ ಪಕ್ಷದ ವಕ್ತಾರ ಸಂಜಯ್ ಶಿರ್ಸಾಟ್, ‘ಎನ್‌ಸಿಪಿ ನೇರವಾಗಿ ಬಿಜೆಪಿಯೊಂದಿಗೆ ಹೋಗುವುದಿಲ್ಲ ಎಂದು ಭಾವಿಸುತ್ತೇವೆ. ಈ ಬಗ್ಗೆ ನಮ್ಮ ನಿಲುವು ಸ್ಪಷ್ಟವಾಗಿದೆ. ದ್ರೋಹ ಬಗೆಯುವ ಎನ್‌ಸಿಪಿಯೊಂದಿಗೆ ಅಧಿಕಾರದಲ್ಲಿಯೂ ನಾವು ಇರಲ್ಲ. ಎನ್‌ಸಿಪಿಯೊಂದಿಗೆ ಬಿಜೆಪಿ ಸೇರಿದರೆ ಅದನ್ನು ಮಹಾರಾಷ್ಟ್ರ ಒಪ್ಪುವುದಿಲ್ಲ. ಹಾಗಾದರೆ ನಾವು ಹಿಂದೆ ಸರಿಯುತ್ತೇವೆ’ ಎಂದಿದ್ದರು.
ಶಿವಸೇನೆ ಹೆಸರು, ಚಿಹ್ನೆ ಕಳೆದುಕೊಂಡ ಬಳಿಕ ಮಾಜಿ ಸಿಎಂ ಉದ್ಧವ್ ಮತ್ತು ಅವರ ಪುತ್ರನ ಬಗ್ಗೆ ಜನರ ಅನುಕಂಪ ಹೆಚ್ಚಾಗಿದೆ. ಈಗ ಚುನಾವಣೆ ನಡೆದರೆ ಮಹಾ ಅಘಾಡಿ ಸರ್ಕಾರ ಹೆಚ್ಚಿನ ಸ್ಥಾನ ಪಡೆಯಲಿದೆ ಎಂದು ಬಿಜೆಪಿ ಆಂತರಿಕ ಸಮೀಕ್ಷೆ ಹೇಳಿದೆ. ಮತ್ತೊಂದೆಡೆ ಬಿಜೆಪಿ ಜೊತೆ ಸೇರಿ ಸರ್ಕಾರ ರಚಿಸಿರುವ ಸಿಎಂ ಏಕನಾಥ್ ಶಿಂಧೆ ಬಣದ ಸದಸ್ಯರ ಅನರ್ಹತೆ ಪ್ರಕರಣ ಸದ್ಯ ಸುಪ್ರೀಂಕೋರ್ಚ್‌ನಲ್ಲಿದೆ. ಅದೇನಾದರೂ ಶಿಂಧೆಗೆ ವಿರುದ್ಧವಾಗಿ ಬಂದರೆ ಸರ್ಕಾರ ಪತನಗೊಳ್ಳುತ್ತದೆ. ಹೀಗಾದರೆ ಮಹಾರಾಷ್ಟ್ರ ತನ್ನ ಕೈತಪ್ಪಲಿದೆ ಎಂಬುದು ಬಿಜೆಪಿ ಆತಂಕ.
ಮತ್ತೊಂದು ಕ್ಷಿಪ್ರ ರಾಜಕೀಯ ಕ್ರಾಂತಿಗೆ ಸಾಕ್ಷಿಯಾಗಲಿದೆಯಾ ಮಹಾರಾಷ್ಟ್ರ?
ಇದೇ ಕಾರಣಕ್ಕಾಗಿ, ಪಕ್ಷದ ಅಧ್ಯಕ್ಷ ಶರದ್ ಪವಾರ್ ಅವರಿಂದ ದೂರವಾದರೂ ಸರಿ ಸಿಎಂ ಆಗಲೇಬೇಕು ಎಂಬ ಆಸೆ ಹೊತ್ತಿರುವ ಎನ್‌ಸಿಪಿ ನಾಯಕ ಅಜಿತ್ ಪವಾರ್ ಜೊತೆ ಸೇರಿ ಸರ್ಕಾರ ರಚಿಸಲು ಬಿಜೆಪಿ ನಾಯಕರು ಯೋಜಿಸಿದ್ದಾರೆ. ಅಜಿತ್‌ಗೆ ಕನಿಷ್ಠ 35-40 ಶಾಸಕರ ಬೆಂಬಲ ಇದೆ.2019ರಲ್ಲೂ ಒಮ್ಮೆ ಹೀಗೆ ಅಜಿತ್ ಬಂಡೆದ್ದು ಬಿಜೆಪಿ ಜೊತೆಗೆ ಸರ್ಕಾರ ರಚನೆಗೆ ಮುಂದಾಗಿದ್ದರು. ಅದರೆ ಪವಾರ್ ಒಪ್ಪದ ಕಾರಣ ಅದು ಫಲ ಕೊಟ್ಟಿರಲಿಲ್ಲ.
