10 ತಿಂಗಳ ಹಿಂದೆ ಭಾರೀ ಹೈಡ್ರಾಮಾ ನಡೆದು ಮಹಾ ಅಘಾಡಿ ಸರ್ಕಾರದ ಪತನಕಂಡಿದ್ದ ಮಹಾರಾಷ್ಟ್ರ ಮತ್ತೊಂದು ರಾಜಕೀಯ ಕ್ಷಿಪ್ರಕ್ರಾಂತಿಗೆ ಸಜ್ಜಾಗುತ್ತಿದೆ ಎಂಬ ಗುಸುಗುಸು ಹಬ್ಬಿದೆ.
ಮುಂಬೈ: 10 ತಿಂಗಳ ಹಿಂದೆ ಭಾರೀ ಹೈಡ್ರಾಮಾ ನಡೆದು ಮಹಾ ಅಘಾಡಿ ಸರ್ಕಾರದ ಪತನಕಂಡಿದ್ದ ಮಹಾರಾಷ್ಟ್ರ ಮತ್ತೊಂದು ರಾಜಕೀಯ ಕ್ಷಿಪ್ರಕ್ರಾಂತಿಗೆ ಸಜ್ಜಾಗುತ್ತಿದೆ ಎಂಬ ಗುಸುಗುಸು ಹಬ್ಬಿದೆ. ಹಾಲಿ ಅಧಿಕಾರದಲ್ಲಿರುವ ಶಿವಸೇನೆ- ಬಿಜೆಪಿ ಸರ್ಕಾರದ ಬದಲಾಗಿ, ರಾಜ್ಯದಲ್ಲಿ ಎನ್‌ಸಿಪಿ-ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿದೆ. ಎನ್‌ಸಿಪಿ ನಾಯಕ ಅಜಿತ್ ಪವಾರ್ (Ajit Pawar) ನೂತನ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ವರದಿಗಳು ತಿಳಿಸಿವೆ.
ಶಿವಸೇನೆ (Shivasena symbol)ಹೆಸರು, ಚಿಹ್ನೆ ಕಳೆದುಕೊಂಡ ಬಳಿಕ ಮಾಜಿ ಸಿಎಂ ಉದ್ಧವ್ ಮತ್ತು ಅವರ ಪುತ್ರನ ಬಗ್ಗೆ ಜನರ ಅನುಕಂಪ ಹೆಚ್ಚಾಗಿದೆ. ಈಗ ಚುನಾವಣೆ ನಡೆದರೆ ಮಹಾ ಅಘಾಡಿ ಸರ್ಕಾರ ಹೆಚ್ಚಿನ ಸ್ಥಾನ ಪಡೆಯಲಿದೆ ಎಂದು ಬಿಜೆಪಿ ಆಂತರಿಕ ಸಮೀಕ್ಷೆ ಹೇಳಿದೆ. ಮತ್ತೊಂದೆಡೆ ಬಿಜೆಪಿ ಜೊತೆ ಸೇರಿ ಸರ್ಕಾರ ರಚಿಸಿರುವ ಸಿಎಂ ಏಕನಾಥ್ ಶಿಂಧೆ ಬಣದ ಸದಸ್ಯರ ಅನರ್ಹತೆ ಪ್ರಕರಣ ಸದ್ಯ ಸುಪ್ರೀಂಕೋರ್ಟ್‌ನಲ್ಲಿದೆ. ಅದೇನಾದರೂ ಶಿಂಧೆಗೆ ವಿರುದ್ಧವಾಗಿ ಬಂದರೆ ಸರ್ಕಾರ ಪತನಗೊಳ್ಳುತ್ತದೆ. ಹೀಗಾದರೆ ಮಹಾರಾಷ್ಟ್ರ ತನ್ನ ಕೈತಪ್ಪಲಿದೆ ಎಂಬುದು ಬಿಜೆಪಿ ಆತಂಕ.
ಜನ ಮೋದಿ ವರ್ಚಸ್ಸಿಗೆ ವೋಟ್ ಹಾಕಿದ್ದಾರೇ ಹೊರತು ಪದವಿ ನೋಡಲ್ಲ: ನಮೋ ಪರ ಬ್ಯಾಟ್ ಬೀಸಿದ ಎನ್‌ಸಿಪಿ ನಾಯಕ
ಇದೇ ಕಾರಣಕ್ಕಾಗಿ, ಪಕ್ಷದ ಅಧ್ಯಕ್ಷ ಶರದ್ ಪವಾರ್ ಅವರಿಂದ ದೂರವಾದರೂ ಸರಿ ಸಿಎಂ ಆಗಲೇಬೇಕು ಎಂಬ ಆಸೆ ಹೊತ್ತಿರುವ ಎನ್‌ಸಿಪಿ ನಾಯಕ ಅಜಿತ್ ಪವಾರ್ ಜೊತೆ ಸೇರಿ ಸರ್ಕಾರ ರಚಿಸಲು ಬಿಜೆಪಿ ನಾಯಕರು ಯೋಜಿಸಿದ್ದಾರೆ. ಅಜಿತ್‌ಗೆ ಕನಿಷ್ಠ 35-40 ಶಾಸಕರ ಬೆಂಬಲ ಇದೆ. ಅವರು ಪವಾರ್ ಬಣದಿಂದ ಸಿಡಿದೆದ್ದು ಬಂದರೂ ಅನರ್ಹತೆ ಕಾಡದು ಎಂಬ ಲೆಕ್ಕಾಚಾರ ಹಾಕಲಾಗಿದೆ. ಇದರ ಭಾಗವಾಗಿಯೇ ಇತ್ತೀಚೆಗೆ ಅಜಿತ್ ಪವಾರ್, ಪ್ರಫುಲ್ ಪಟೇಲ್ (Praful patel) ಮತ್ತಿತರೆ ನಾಯಕರು ರಹಸ್ಯವಾಗಿ ದೆಹಲಿಗೆ ತೆರಳಿ ಅಮಿತ್ ಶಾ ಅವರನ್ನು ಭೇಟಿ ಮಾಡಿ ಬಂದಿದ್ದಾರೆ ಎಂದು ವರದಿಗಳು ತಿಳಿಸಿವೆ.
2019ರಲ್ಲೂ ಒಮ್ಮೆ ಹೀಗೆ ಅಜಿತ್ ಬಂಡೆದ್ದು ಬಿಜೆಪಿ ಜೊತೆಗೆ ಸರ್ಕಾರ ರಚನೆಗೆ ಮುಂದಾಗಿದ್ದರು. ಅದರೆ ಪವಾರ್ ಒಪ್ಪದ ಕಾರಣ ಅದು ಫಲ ಕೊಟ್ಟಿರಲಿಲ್ಲ. ಹೀಗಾಗಿ ಅಜಿತ್ ಆಪ್ತರು ಬಿಜೆಪಿ ಮೈತ್ರಿ ಬಗ್ಗೆ ಮೊದಲು ಪವಾರ್ ಸಮ್ಮತಿ ಪಡೆಯುವಂತೆ ಕೋರಿದ್ದರು ಎನ್ನಲಾಗಿದೆ. ಆದರೆ ರಾಜಕೀಯ ಜೀವನದ ಈ ಘಟ್ಟದಲ್ಲಿ ಬಿಜೆಪಿ ಜೊತೆ ಕೈಜೋಡಿಸಲು ತಾವು ಸಿದ್ಧರಿಲ್ಲ. ಇಂಥ ಯಾವುದೇ ಪ್ರಯತ್ನ ತಮ್ಮ ಪಾಲಿಗೆ ಆತ್ಮಹತ್ಯೆಗೆ ಸಮನಾಗಲಿದೆ. ಅದು ಬಿಟ್ಟು ಉಳಿದಿದ್ದು ನಿಮ್ಮ ವೈಯಕ್ತಿಕ ನಿರ್ಧಾರ ಎಂಬ ಸಂದೇಶವನ್ನು ಶರದ್ ಪವಾರ್ (Sharad Pawar) ಬಂಡಾಯ ನಾಯಕರಿಗೆ ರವಾನಿಸಿದ್ದಾರೆ. ಹೀಗಾಗಿ ಯಾವುದೇ ಹೊತ್ತಿನಲ್ಲೇ ಅಜಿತ್ ಪವಾರ್ ಬಣ ಬಂಡೆದ್ದು, ಬಿಜೆಪಿ ಜೊತೆ ಸೇರಿ ಸರ್ಕಾರ ರಚಿಸುವ ಸಾಧ್ಯತೆ ದಟ್ಟವಾಗಿದೆ ಎಂದು ವರದಿಗಳು ತಿಳಿಸಿವೆ.
ಮಹಾ ಉಪ ಮುಖ್ಯಮಂತ್ರಿಗೆ ಬೇನಾಮಿ ಆಸ್ತಿ ಸಂಕಷ್ಠ; 1,000 ಕೋಟಿ ಮೌಲ್ಯದ ಆಸ್ತಿ ಜಪ್ತಿ!