ಬೆಂಗಳೂರು, (ಅ.12): ನನ್ನ ಬಳಿ ಇದ್ದ ಹೆಚ್ಚುವರಿ ಖಾತೆಯನ್ನು ಸಚಿವ ಶ್ರೀರಾಮುಲುಗೆ ನೀಡಿರುವುದಕ್ಕೆ ನನಗೆ ಯಾವುದೇ ರೀತಿಯ ಅಸಮಾಧಾನ ಇಲ್ಲ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಸ್ಪಷ್ಟಪಡಿಸಿದ್ದಾರೆ. ಇದರಿಂದ ಸಿಎಂ ಬಿಎಸ್‌ವೈ ಕೊಂಚ ನಿರಾಳಗಿದ್ದಾರೆ.

ವಿಧಾನಸೌಧದಲ್ಲಿ  ಇಂದು (ಸೋಮವಾರ) ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕಾರಜೋಳ, ಯಡಿಯೂರಪ್ಪ ಅವರು, ಖಾತೆ ಬದಲಾವಣೆ ಮಾಡುವ ಬಗ್ಗೆ ನನ್ನ ಬಳಿ ಈ ಹಿಂದೆಯೇ ಚರ್ಚೆ ಮಾಡಿದ್ದರು. ಇದಕ್ಕೆ ನಾನು ಒಪ್ಪಿಗೆಯನ್ನು ನೀಡಿದ್ದೆ ಎಂದು ಸ್ಪಷ್ಟಪಡಿಸಿದರು.

ಸಿಎಂ ಜತೆ 5 ನಿಮೀಷ ಚರ್ಚಿಸಿ ಖಾಸಗಿ ಕಾರನ್ನೇರಿದ ಶ್ರೀರಾಮುಲು, ತೀವ್ರ ಕುತೂಹಲ ಮೂಡಿಸಿದ ನಡೆ

ಯಾರಿಗೆ ಯಾವ ಖಾತೆಯನ್ನು ನೀಡಬೇಕು ಎಂಬುದು ಮುಖ್ಯಮಂತ್ರಿಗಳ ವಿವೇಚನೆಗೆ ಬಿಟ್ಟ ವಿಷಯ. ಸಮಾಜ ಕಲ್ಯಾಣ ಖಾತೆಯನ್ನು ರಾಮುಲುಗೆ ನೀಡುವುದಾಗಿ ಮೊದಲೇ ನನಗೆ ಮಾಹಿತಿ ನೀಡಿದ್ದರು. ಇದರಿಂದ ನನಗೆ ಅಸಮಾಧಾನ ಉಂಟಾಗಿಲ್ಲ. ಇರುವ ಖಾತೆಯನ್ನು ಸಮರ್ಪಕವಾಗಿ ನಿಭಾಯಿಸುತ್ತೇನೆ ಎಂದು ಹೇಳಿದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯನ್ನು ಹೆಚ್ಚುವರಿಯಾಗಿ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ಗೆ ನೀಡಲಾಗಿದೆ. ಶ್ರೀರಾಮುಲು ಈ ಖಾತೆಯನ್ನು ಸಮಪರ್ಕವಾಗಿಯೇ ನಿಭಾಯಿಸಿದ ಕಾರಣ, ಅವರಿಗೆ ಮಹತ್ವದ ಈ ಜವಾಬ್ದಾರಿಯನ್ನು ನೀಡಲಾಗಿದೆ ಎಂದು ತಿಳಿಸಿದರು.

ಕಾರಜೋಳ ಅವರೇನೋ ಅಸಮಾಧಾನ ಇಲ್ಲ ಎಂದು ಬಹಿರಂಗವಾಗಿ ಹೇಳಿಕೆ ಕೊಟ್ಟಿದ್ದಾರೆ. ಆದ್ರೆ, ಶ್ರೀರಾಮುಲು ಅವರು ಅಸಮಾಧಾನಗೊಂಡಿರುವುದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪಗೆ ಹೊಸ ತಲೆ ನೋವು ಶುರುವಾಗಿದೆ.

ಆರೋಗ್ಯ ಖಾತೆಯ ಹೆಚ್ಚುವರಿ ಉಸ್ತುವಾರಿಯನ್ನು ಕೂಡ ವೈದ್ಯಕೀಯ ಶಿಕ್ಷಣ ಸಚಿವ ಡಾ ಕೆ ಸುಧಾಕರ್ ಹೆಗಲಿಗೆ ಸಿಎಂ ಹಾಕಿದ್ದಾರೆ. ಆರೋಗ್ಯ ಸಚಿವರಾಗಿದ್ದ ಶ್ರೀರಾಮುಲು ಅವರಿಗೆ ಸಮಾಜ ಕಲ್ಯಾಣ ಇಲಾಖೆ ಖಾತೆ ನೀಡಲಾಗಿದೆ. ಅವರ ಬಳಿಯಿದ್ದ ಹಿಂದುಳಿದ ವರ್ಗಗಳ ಅಭಿವೃದ್ಧಿ ಇಲಾಖೆಯನ್ನು ಸಿಎಂ ವಾಪಸ್ ಪಡೆದುಕೊಂಡಿದ್ದಾರೆ.

ಇನ್ನು ಉಪ ಮುಖ್ಯಮಂತ್ರಿ ಹಾಗೂ ಸಮಾಜ ಕಲ್ಯಾಣ ಇಲಾಖೆ ಖಾತೆ ಹೊತ್ತಿದ್ದ ಗೋವಿಂದ ಎಂ ಕಾರಜೋಳ ಅವರಿಗೆ ಲೋಕೋಪಯೋಗಿ ಖಾತೆಯನ್ನು ಉಳಿಸಲಾಗಿದೆ.