ಸಿಎಂ ಜತೆ 5 ನಿಮೀಷ ಚರ್ಚಿಸಿ ಖಾಸಗಿ ಕಾರನ್ನೇರಿದ ಶ್ರೀರಾಮುಲು, ತೀವ್ರ ಕುತೂಹಲ ಮೂಡಿಸಿದ ನಡೆ
ರಾಜ್ಯದ ಎರಡು ಕ್ಷೇತ್ರಗಳಲ್ಲಿ ಉಪ ಚುನಾವಣೆ, ಸಚಿವ ಸಂಪುಟ ವಿಸ್ತರಣೆ ಅಥವಾ ಪುನರಾಚನೆ ಸುದ್ದಿಗಳ ಮಧ್ಯೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಸೋಮವಾರ ಪ್ರಮುಖ ಇಬ್ಬರು ಸಚಿವರುಗಳ ಖಾತೆಗಳನ್ನು ಬದಲಾವಣೆ ಮಾಡಿದ್ದು, ಶ್ರೀರಾಮುಲು ಅವರ ಅಸಮಾಧಾನಕ್ಕೆ ಕಾರಣವಾಗಿದೆ.
ಬೆಂಗಳೂರು, (ಅ.12): ಉಪಮುಖ್ಯಮಂತ್ರಿ ಹುದ್ದೆ ಮೇಲೆ ಕಣ್ಣಿಟ್ಟಿದ್ದ ಬಿ. ಶ್ರೀರಾಮುಲು ಅವರಿಗೆ ಅದು ದೊರಕಿಲ್ಲ. ಈ ಹಿನ್ನೆಲೆಯಲ್ಲಿ ಮೊದಲಿನಿಂದಲೂ ರಾಮುಲು ಬೇಸರದಲ್ಲಿದ್ದರು.
"
ಸಾಲದಕ್ಕೆ ಇದೀಗ ಆರೋಗ್ಯ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಖಾತೆಯನ್ನು ಸಹ ಸಿಎಂ ಹಿಂಪಡೆದಿದ್ದು, ಶ್ರೀರಾಮುಲು ಅವರ ಕಣ್ಣು ಮತ್ತುಷ್ಟು ಕೆಂಪಾಗಿಸಿದೆ.
ರಾಮುಲುನವರ ಆರೋಗ್ಯ ಖಾತೆ ಕಿತ್ತುಕೊಂಡಿದ್ದು ಸಿಎಂ ಏಕಮುಖ ತೀರ್ಮಾನವಲ್ಲ..!
ದಿಢೀರ್ ಖಾತೆ ಬದಲಾವಣೆ ಮಾಡಿದ್ದರಿಂದ ಅಚ್ಚರಿಗೊಂಡ ಶ್ರೀರಾಮುಲು ರಾತ್ರೋರಾತ್ರಿ ಬಳ್ಳಾರಿಯಿಂದ ಬೆಂಗಳೂರಿ ಆಗಮಿಸಿದ್ದು, ಇಂದು (ಸೋಮವಾರ) ಮಧ್ಯಾಹ್ನ ಸಿಎಂ ನಿವಾಸ ಕಾವೇರಿಗೆ ತೆರಳಿ ಬಿಎಸ್ ಯಡಿಯೂರಪ್ಪನವರನ್ನ ಭೇಟಿ ಮಾಡಿ ಈ ಬಗ್ಗೆ ಚರ್ಚಿಸಿದರು. ಕೇವಲ 5 ನಿಮಿಷ ಮಾತ್ರ ಶ್ರೀರಾಮುಲು ಜತೆ ಮಾತನಾಡಿದ ಸಿಎಂ, ಸಂಜೆ ಭೇಟಿ ಮಾಡುವಂತೆ ತಿಳಿಸಿದ್ದಾರೆ.
ಕೇವಲ 5 ನಿಮಿಷ ನಡೆದ ಮಾತುಕತೆ
ನನ್ನ ಗಮನಕ್ಕೆ ತರದೇ ನನ್ನ ಬಳಿಯಿದ್ದ ಖಾತೆಗಳನ್ನು ಹಿಂಪಡೆದದ್ದು ಸರಿಯೇ? ಎಂದು ಯಡಿಯೂರಪ್ಪ ಅವರನ್ನು ಸಚಿವ ಬಿ.ಶ್ರೀರಾಮುಲು ಪ್ರಶ್ನಿಸಿದ್ದಾರೆ.
ಇದಕ್ಕುತ್ತರಿಸಿದ ಸಿಎಂ, ಆರೋಗ್ಯ ಇಲಾಖೆಯಲ್ಲಿ ಯಾವುದೇ ಸಮಸ್ಯೆ ಆಗುವುದು ಬೇಡ. ಸಮಾಜ ಕಲ್ಯಾಣ ಇಲಾಖೆಯನ್ನು ನೀವು ಈ ಮೊದಲೇ ಕೇಳಿದ್ರಿ. ಹಾಗಾಗಿ ಅದನ್ನು ನಿನಗೆ ಕೊಟ್ಟಿದ್ದೇನೆ ಎಂದು ಸಮಜಾಯಿಷಿ ನೀಡಿದರು. ಖಾತೆ ಬದಲಾವಣೆ ಬಗ್ಗೆ ಯಾವುದೇ ಬೇಸರ ಇಟ್ಟುಕೊಳ್ಳಬೇಡ. ಸಂಜೆ ಬನ್ನಿ ಸುಧೀರ್ಘವಾಗಿ ಮಾತನಾಡೋಣ ಎಂದು ಬಿಎಸ್‌ವೈ ಹೇಳಿದರು.
ಆರೋಗ್ಯ ಇಲಾಖೆ ಖಾತೆ ಕಿತ್ತುಕೊಂಡ ಬೆನ್ನಲ್ಲೇ ಶ್ರೀರಾಮುಲುಗೆ ಮತ್ತೊಂದು ಶಾಕ್ ಕೊಟ್ಟ ಬಿಎಸ್‌ವೈ
ಹಿಂದುಳಿದ ಸಚಿವರ ಖಾತೆ ಬದಲಾಗಿದೆ. ಅದು ನಿಮ್ಮ ಪರಮಾಧಿಕಾರ. ಇದನ್ನು ನಾನು ಪ್ರಶ್ನೆ ಮಾಡಲ್ಲ. ಆದ್ರೆ ನನ್ನ ಗಮನಕ್ಕೂ ತಾರದೆ ಬದಲಾಯಿಸಿದ್ದೇಕೆ ಎಂದ ಶ್ರೀರಾಮುಲು, ಉಪ ಚುನಾವಣಾ ಪ್ರಚಾರಕ್ಕೆ ಬರುವೆ ಎಂದಷ್ಟೇ ಹೇಳಿ ಬೇಸರದಿಂದ ಹೊರಬಂದರು ಎಂದು ತಿಳಿದುಬಂದಿದೆ.
ಇನ್ನು ಪ್ರಮುಖವಾಗಿ ಗಮನಿಸಬೇಕಾದ ಅಂಶ ಅಂದ್ರೆ, ಆರೋಗ್ಯ ಖಾತೆ ಕಿತ್ತುಕೊಂಡ ಬೆನ್ನಲ್ಲೇ ಸರ್ಕಾರಿ ವಾಹನ ಬಿಟ್ಟು ಖಾಸಗಿ ಕಾರಿನಲ್ಲಿ ಸಿಎಂ ನಿವಾಸಕ್ಕೆ ಶ್ರೀರಾಮುಲು ಬಂದದ್ದು ಭಾರೀ ಕುತೂಹಲ ಮೂಡಿಸಿದೆ. ಇದೀಗ ಸದ್ಯ ಶ್ರೀರಾಮುಲು ಅವರು ಯಾರ ಜೊತೆನೂ ಮಾತನಾಡದೇ ಏಕಾಂಗಿಯಲ್ಲಿ ಮನೆಯಲ್ಲಿ ಕುಳಿತುಕೊಂಡು ಈ ಬಗ್ಗೆ ಚಿಂತನೆ ಮಾಡುತ್ತಿದ್ದಾರೆ.
ಒಟ್ಟಿನಲ್ಲಿ ಡಿಸಿಎಂ ಹುದ್ದೆ ಸಿಗಲಿಲ್ಲ. ಇದೀಗ ಏಕಾಏಕಿ ಎರಡೂ ಖಾತೆ ಕಿತ್ತುಕೊಂಡಿರುವುದಕ್ಕೆ ರಾಮುಲು ಅಸಮಾಧಾನಗೊಂಡಿದ್ದು, ಅವರ ಮುಂದಿನ ನಡೆ ತೀವ್ರ ಕುತೂಹಲ ಮೂಡಿಸಿದೆ.