ಗಡಿಯಾರ, ಚಸ್ಮಾಗಳಲ್ಲಿ ಕ್ಯಾಮೆರಾ ಇಟ್ಟು ಟ್ರ್ಯಾಪ್ ಮಾಡುವ ಯತ್ನಗಳು ನಡೆಯುತ್ತಿದ್ದು, ಸಚಿವರು ಮತ್ತು ಶಾಸಕರು ಎಚ್ಚರದಿಂದಿರಬೇಕು ಎಂದು ಸಚಿವ ಸತೀಶ್ ಜಾರಕಿಹೊಳಿ ಎಚ್ಚರಿಸಿದ್ದಾರೆ. ಅಲ್ಲದೆ, ಅಕ್ಟೋಬರ್ 26 ರಂದು ಬೆಳಗಾವಿಯಲ್ಲಿ ಕಬ್ಬು ಬೆಳೆಗಾರರ ಸಭೆ ನಡೆಯಲಿದೆ ಎಂದರು.

ಧಾರವಾಡ (ಅ.22): ಗಡಿಯಾರ, ಚಸ್ಮಾ, ಉಂಗುರದಲ್ಲಿ ಕ್ಯಾಮೆರಾ ಇಟ್ಟು, ಟ್ರ್ಯಾಪ್‌ ಮಾಡುವ ಪ್ರಯತ್ನ ನಡೆದಿದ್ದು, ಸಚಿವರು ಹಾಗೂ ಶಾಸಕರು ಎಚ್ಚರ ವಹಿಸಬೇಕೆಂದು ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಟ್ರ್ಯಾಪ್‌ ಮಾಡಲು ಏಜೆನ್ಸಿ ಅವರು ನಿಮ್ಮ ಹಿಂದೆ ಬಿದ್ದಿದ್ದು, ಹುಷಾರಾಗಿ ಇರಲು ಸ್ವತಃ ಮುಖ್ಯಮಂತ್ರಿಗಳೇ ಹೇಳಿದ್ದಾರೆ ಎಂದು ತಿಳಿಸಿದರು. ನಿತ್ಯವೂ ನೂರಾರು ಜನರು ಭೇಟಿಗೆ ಬರುತ್ತಾರೆ. ಹೀಗಾಗಿ ಸ್ಟಿಂಗ್ ಮಾಡುವವರನ್ನು ಕಂಡು ಹಿಡಿಯುವುದು ಅಸಾಧ್ಯ. ಎಲ್ಲಿವರೆಗೂ ಮಾಧ್ಯಮಗಳು ಸ್ಟಿಂಗ್ ಆಪರೇಷನ್ ನಿಲ್ಲಿಸುವುದಿಲ್ಲವೋ ಅಲ್ಲಿ ವರೆಗೂ ಮುಂದುವರಿಯಲಿದೆ ಎಂದರು.

ಅ.26ಕ್ಕೆ ರೈತರ ಸಭೆ:

ಬೆಳಗಾವಿಯಲ್ಲಿ ರೈತರ ಧರಣಿ ವೇಳೆ ರಸ್ತೆ ಖಾಲಿ ಮಾಡಿಸಿದ ಪ್ರಶ್ನೆಗೆ ಉತ್ತರಿಸಿದ ಸಚಿವ ಜಾರಕಿಹೊಳಿ, ನಾವು ಯಾರ ಪರವಾಗಿಯೂ, ಯಾರ ವಿರೋಧವೂ ಇಲ್ಲ. ನ್ಯಾಯದ ಪರ ಇದ್ದು ಅ. ೨೬ಕ್ಕೆ ಬೆಳಗಾವಿಯಲ್ಲಿ ಕಬ್ಬು ಬೆಳೆಗಾರರ ಸಭೆ ಜರುಗಲಿದೆ ಎಂದು ತಿಳಿಸಿದರು.

ಭಿನ್ನಮತವಿಲ್ಲ:

ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಭಿನ್ನಮತವಿಲ್ಲ. ಎಲ್ಲರೂ ಒಗ್ಗೂಡಿಯೇ ರಾಜ್ಯದಲ್ಲಿ ನಡೆಯುವ ನಾಲ್ಕು ವಿಧಾನ ಪರಿಷತ್ ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸುತ್ತಿದ್ದಾರೆ. ಈ ಗೆಲವು ಮುಂಬರುವ ವಿಧಾನಸಭೆ ಚುನಾವಣೆಗೂ ದಿಕ್ಸೂಚಿಯಾಗಲಿದೆ ಎಂದು ಹೇಳಿದರು.