ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರ ಮಂಗಳೂರು ಭೇಟಿಯ ವೇಳೆ, ಡಿ.ಕೆ. ಶಿವಕುಮಾರ್ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬೆಂಬಲಿಗರು ಪ್ರತ್ಯೇಕವಾಗಿ ಶಕ್ತಿ ಪ್ರದರ್ಶನ ನಡೆಸಿದರು. ಮಂಗಳೂರು ವಿಮಾನ ನಿಲ್ದಾಣವು ಕಾಂಗ್ರೆಸ್‌ನ ಎರಡು ಬಣಗಳ ಘೋಷಣೆಗಳಿಂದ ಮಾರ್ದನಿಸಿತು.
ಮಂಗಳೂರು: ಕೊಣಾಜೆಯಲ್ಲಿ ನಾರಾಯಣ ಗುರು-ಗಾಂಧಿ ಸಂವಾದ ಶತಮಾನೋತ್ಸವದಲ್ಲಿ ಭಾಗಿಯಾಗಲು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಸಂದರ್ಭದಲ್ಲಿ ಕಾಂಗ್ರೆಸ್ ಒಳರಾಜಕಾರಣ ಮತ್ತೊಮ್ಮೆ ಮಂಗಳೂರಿನ ವೇದಿಕೆಯಲ್ಲಿ ಸ್ಪಷ್ಟವಾಗಿ ಹೊರಹೊಮ್ಮಿದೆ. ದೆಹಲಿಯಿಂದ ನೇರವಾಗಿ ಮಂಗಳೂರಿಗೆ ಬಂದ ವೇಣುಗೋಪಾಲ್ ಅವರನ್ನು ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹಾಗೂ ಜಿಲ್ಲೆಯ ಕಾಂಗ್ರೆಸ್ ನಾಯಕರು ಸ್ವಾಗತಿಸಿದರು. ವಿಮಾನ ನಿಲ್ದಾಣದಿಂದ ಹೊರಬರುತ್ತಿದ್ದಂತೆ, ಡಿ.ಕೆ.ಶಿವಕುಮಾರ್ ಪರ ಘೋಷಣೆಗಳೊಂದಿಗೆ ಕಾರ್ಯಕರ್ತರು ಭಾರೀ ಜಮಾವಣೆ ನಡೆಸಿ ಬಣಶಕ್ತಿ ಪ್ರದರ್ಶನ ಮಾಡಿದರು.
ಡಿ.ಕೆ. ಶಿವಕುಮಾರ್ ಪರ ಘೋಷಣೆಗಳಿಂದ ಎದ್ದು ಕೇಳಿದ ಮಂಗಳೂರು ಏರ್ಪೋರ್ಟ್
ಡಿ.ಕೆ.ಶಿವಕುಮಾರ್ ಆಪ್ತ ಮಿಥುನ್ ರೈ ಹಾಗೂ ಅವರ ಬೆಂಬಲಿಗರ ನೇತೃತ್ವದಲ್ಲಿ “ಡಿ.ಕೆ… ಡಿ.ಕೆ…” ಎಂದು ಘೋಷಣೆ ಕೂಗಿದ ಕಾರ್ಯಕರ್ತರು, ವೇಣುಗೋಪಾಲ್ ಎದುರಲ್ಲೇ ತಮ್ಮ ಶಕ್ತಿಯನ್ನು ತೋರಿಸಿದರು. “ನಮ್ಮ ನಾಯಕರ ಪರವಾಗಿ ನಾವು ಘೋಷಣೆ ಕೂಗಿದ್ದೇವೆ. ಸಿದ್ದರಾಮಯ್ಯ ಈ ನಾಡು ಕಂಡ ಒಬ್ಬ ಉತ್ತಮ ಮುಖ್ಯಮಂತ್ರಿ. ಆದರೆ ಈ ಬಾರಿ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗಬೇಕು. ಮುಂದಿನ ಎರಡೂವರೆ ವರ್ಷ ಡಿ.ಕೆ ಮುಖ್ಯಮಂತ್ರಿ ಆಗಬೇಕು. ಹಾಗಾಗಿ ಡಿಕೆ ಪರ ವೇಣುಗೋಪಾಲ್ ಅವರ ಎದುರಲ್ಲಿ ಘೋಷಣೆ ಕೂಗಿದ್ದೇವೆ. ಹೈಕಮಾಂಡ್ ಗೆ ನಮ್ಮ ಮನವಿ ಹೋಗಿ ತಲುಪಬೇಕು. ನಾವು ಸಿದ್ದರಾಮಯ್ಯ ಅವರ ವಿರುದ್ದ ಅಲ್ಲ, ಅವರು ಬಂದಾಗಲೂ ಘೋಷಣೆ ಕೂಗ್ತೇವೆ. ಅದರೆ ಈ ಬಾರಿ ಸಿಎಂ ಆಗಿ ಡಿಕೆಶಿ ಅವರನ್ನು ನೋಡಬೇಕು ಎಂದರು. ಅಚಾನಕ್ ಆಗಿ ದೊಡ್ಡ ಸಂಖ್ಯೆಯಲ್ಲಿ ಸೇರಿದ ಕಾರ್ಯಕರ್ತರ ನೂಕಾಟ–ತಳ್ಳಾಟದಿಂದ ವಿಮಾನ ನಿಲ್ದಾಣದಲ್ಲಿ ಕೆಲವು ಕ್ಷಣಗಳು ಗದ್ದಲದ ವಾತಾವರಣ ನಿರ್ಮಾಣವಾಯಿತು. ವೇಣುಗೋಪಾಲ್ ತಮ್ಮ ವಾಹನಕ್ಕೆ ತಲುಪಲು ಹರಸಾಹಸ ಪಡಬೇಕಾದಂತಾಯಿತು.
ಪ್ರತಿಕ್ರಿಯೆಗೆ ವೇಣುಗೋಪಾಲ್ ನಕಾರ
ಈ ಸಂದರ್ಭದಲ್ಲಿ ಕೆ.ಸಿ. ವೇಣುಗೋಪಾಲ್ ಯಾವುದೇ ರಾಜಕೀಯ ಅಭಿಪ್ರಾಯ ನೀಡದೆ, “ಕೊಣಾಜೆಯಲ್ಲಿ ಸಿದ್ದರಾಮಯ್ಯರನ್ನು ಭೇಟಿ ಮಾಡ್ತೀನಿ” ಎಂದಷ್ಟೇ ಹೇಳಿ ನಕಾರ ವ್ಯಕ್ತಪಡಿಸಿದರು. ಇದರಿಂದ, ಮಂಗಳೂರಿನ ಡಿಕೆ ಪರ ಬಣವು ಹೈಕಮಾಂಡ್‌ಗೆ ಸಂದೇಶ ರವಾನಿಸಲು ಈ ಅವಕಾಶವನ್ನು ಬಳಸಿಕೊಂಡಿದೆಯೇ ಎಂಬ ಚರ್ಚೆಗೆ ಮತ್ತಷ್ಟು ಬಣ್ಣ ಸೇರಿತು. ಮಂಗಳೂರಿನ ಬೆಂಬಲಿಗರ ಮೂಲಕ ಹೈಕಮಾಂಡ್ ಗೆ ಸಂದೇಶ ರವಾನಿಸಿದ್ರಾ ಡಿ.ಕೆ.ಶಿವಕುಮಾರ್? ಮಂಗಳೂರಿನ ಡಿಕೆಶಿ ಅತ್ಯಾಪ್ತ ಮಿಥುನ್ ರೈ ಬೆಂಬಲಿಗರಿಂದ ಡಿಕೆ ಪರ ಘೋಷಣೆ. ಡಿಕೆಶಿ ಪರ ಘೋಷಣೆ ಕೂಗಲು ಮೊದಲೇ ಸಿದ್ಧವಾಗಿತ್ತಾ ಪ್ಲಾನ್? ಮೇಲಿನ ಸೂಚನೆಯಂತೆ ವೇಣುಗೋಪಾಲ್ ಎದುರು ಘೋಷಣೆಗೆ ಪ್ಲಾನ್. ಆದರೆ ಏರ್ಪೋರ್ಟ್ ನಲ್ಲಿ ಏಕಾಏಕಿ ಮುತ್ತಿಗೆ ಮಾದರಿಯಲ್ಲಿ ಸೇರಿದ ಕಾರ್ಯಕರ್ತರು. ಭಾರೀ ಕಾರ್ಯಕರ್ತರ ನೂಕಾಟ ತಳ್ಳಾಟದ ಪರಿಣಾಮ ಗದ್ದಲ. ಏಕಾಏಕಿ ನೂಕಾಟ ತಳ್ಳಾಟದಿಂದ ತಬ್ಬಿಬ್ಬಾದ ಕೆ.ಸಿ.ವೇಣುಗೋಪಾಲ್. ಏರ್ಪೋರ್ಟ್ ನಿಂದ ಕಾರಿನ ಬಳಿ ಬರಲು ವೇಣುಗೋಪಾಲ್ ಹರಸಾಹಸ ಪಟ್ಟರು.
ಸಿದ್ದರಾಮಯ್ಯ ಆಗಮನ, ಬೆಂಬಲಿಗರ ಪ್ರತಿಘೋಷಣೆ
ಕೆಲವೇ ಗಂಟೆಗಳ ಬಳಿಕ, ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಗಳೂರಿನಿಂದ ವಿಶೇಷ ವಿಮಾನದಲ್ಲಿ ಮಂಗಳೂರಿಗೆ ಆಗಮಿಸಿದರು. ಅವರೊಂದಿಗೆ ಗೃಹ ಸಚಿವ ಡಾ. ಜಿ. ಪರಮೇಶ್ವರ್, ಸತೀಶ್ ಜಾರಕಿಹೊಳಿ, ಜಮೀರ್ ಅಹ್ಮದ್ ಖಾನ್, ಲಕ್ಷ್ಮೀ ಹೆಬ್ಬಾಳ್ಕರ್ ಸೇರಿ ಹಲವು ನಾಯಕರು ಆಗಮಿಸಿದರು. ಸಿದ್ದರಾಮಯ್ಯ ವಿಮಾನ ನಿಲ್ದಾಣದ ಹೊರಬಂದು ವಾಹನದತ್ತ ತೆರಳುತ್ತಿದ್ದಂತೆಯೇ, ಎಂಎಲ್‌ಸಿ ಐವನ್ ಡಿಸೋಜಾ ನೇತೃತ್ವದಲ್ಲಿ ದೊಡ್ಡ ಸಂಖ್ಯೆಯ ಕಾರ್ಯಕರ್ತರು “ಸಿದ್ದು… ಸಿದ್ದು… ಪೂರ್ಣಾವಧಿ ಸಿದ್ದು!” ಎಂದು ಘೋಷಣೆ ಕೂಗಿ ಸಿದ್ದರಾಮಯ್ಯ ಪರ ಬಣದ ಶಕ್ತಿ ಪ್ರದರ್ಶನ ಮಾಡಿದರು. ಈ ಮೂಲಕ ಬಣ ರಾಜಕಾರಣದ ಗುದ್ದಾಟಕ್ಕೆ ಮಂಗಳೂರು ಏರ್ಪೋರ್ಟ್ ಸಾಕ್ಷಿಯಾಯಿತು.
ಡಿಕೆ ಪರ ಮತ್ತು ಸಿದ್ದು ಪರ ಕಾರ್ಯಕರ್ತರ ಎರಡೂ ಶಕ್ತಿ ಪ್ರದರ್ಶನದ ಪರಿಣಾಮ, ಮಂಗಳೂರು ಏರ್ಪೋರ್ಟ್ ಈ ಬಾರಿ ರಾಜ್ಯ ರಾಜಕೀಯದ ಬಣ ಗುದ್ದಾಟಕ್ಕೆ ನೇರ ಸಾಕ್ಷಿಯಾಯಿತು. ಡಿಕೆ ಪರ ಕಾರ್ಯಕರ್ತರು ಮೊದಲಿಗೆ ಭಾರೀ ಸಂಖ್ಯೆಯಲ್ಲಿ ಜಮಾವಣೆಗೊಂಡಿದ್ದರೆ, ಸಿದ್ದರಾಮಯ್ಯ ಪರ ಬೆಂಬಲಿಗರು ನಂತರದ ಆಗಮನದ ವೇಳೆ ಸಮಾನ ಶಕ್ತಿಯಲ್ಲಿ ಘೋಷಣೆಗಳನ್ನು ಮೊಳಗಿಸಿದರು.


