ಸಿಎಂ ಸಿದ್ದರಾಮಯ್ಯ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಮಂಗಳೂರಿನಲ್ಲಿ ಭೇಟಿಯಾಗಲಿದ್ದಾರೆ. ರಾಜ್ಯದಲ್ಲಿ ಪವರ್ ಶೇರಿಂಗ್ ಮತ್ತು ಸಿಎಂ ಬದಲಾವಣೆಯ ಚರ್ಚೆಗಳು ತೀವ್ರಗೊಂಡಿರುವಾಗ, ಈ ಮುಖಾಮುಖಿಯು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿದೆ.

ಮಂಗಳೂರು: ರಾಜ್ಯ ರಾಜಕೀಯದಲ್ಲಿ ಸಿಎಂ–ಡಿಸಿಎಂ ಪವರ್ ಶೇರಿಂಗ್ ಚರ್ಚೆಗಳು ತೀವ್ರಗೊಂಡಿರುವ ಸಂದರ್ಭದಲ್ಲಿ ಮಂಗಳೂರಿನಲ್ಲಿ ನಡೆಯಲಿರುವ ಸಿಎಂ ಸಿದ್ದರಾಮಯ್ಯ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ರ ಮುಖಾಮುಖಿ ವಿಶೇಷ ಮಹತ್ವ ಪಡೆದಿದೆ. ನಾರಾಯಣ ಗುರು–ಮಹಾತ್ಮ ಗಾಂಧಿ ಐತಿಹಾಸಿಕ ಸಂವಾದದ ಶತಮಾನೋತ್ಸವ ಕಾರ್ಯಕ್ರಮಕ್ಕೆ ಇಬ್ಬರೂ ಆಗಮಿಸಲಿದ್ದು, ರಾಜಕೀಯ ಚರ್ಚೆಗಳು ಮಂಗಳೂರಿನ ವಾತಾವರಣವನ್ನು ಇನ್ನಷ್ಟು ಗರಿಗೆದರಿಸಿವೆ.

ಶತಮಾನೋತ್ಸವ ಕಾರ್ಯಕ್ರಮಕ್ಕೆ ಆಗಮಿಸುವ ಇಬ್ಬರು ಹಿರಿಯ ನಾಯಕರು

ಉಳ್ಳಾಲ ತಾಲೂಕಿನ ಕೊಣಾಜೆ ಮೈದಾನದಲ್ಲಿ ನಾರಾಯಣಗುರು–ಗಾಂಧೀಜಿ ಸಂವಾದದ ಶತಮಾನೋತ್ಸವ ಮಹೋತ್ಸವ ನಡೆಯಲಿದ್ದು, ಕಾರ್ಯಕ್ರಮವನ್ನು ಸಿಎಂ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಮುಖ್ಯ ಪ್ರಾಸಂಗಿಕ ಸಂದೇಶ ನೀಡಲಿದ್ದಾರೆ. ಬಿ.ಕೆ. ಹರಿಪ್ರಸಾದ್ ನೇತೃತ್ವದ ಸಮಿತಿಯು ಕಾರ್ಯಕ್ರಮದ ಎಲ್ಲಾ ಸಿದ್ಧತೆಗಳನ್ನು ಪೂರ್ಣಗೊಳಿಸಿದ್ದು, ಸುರಕ್ಷತಾ ಪರಿಶೀಲನೆಗಳನ್ನು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ನಡೆಸಿದ್ದಾರೆ.

ರಾಜಕೀಯ ಕುತೂಹಲ ಹೆಚ್ಚಿಸಿದ ಸಿಎಂ–ವೇಣುಗೋಪಾಲ್ ಭೇಟಿ

ರಾಜ್ಯದಲ್ಲಿ ಸಿಎಂ ಬದಲಾವಣೆ, ಪವರ್ ಶೇರಿಂಗ್ ಪರಿಷ್ಕರಣೆ ಸೇರಿದಂತೆ ಹಲವು ರಾಜಕೀಯ ಚರ್ಚೆಗಳು ಚುರುಕುಗೊಂಡಿವೆ. ಈ ನಡುವೆ ಮಂಗಳೂರಿನಲ್ಲಿ ಸಿಎಂ ಮತ್ತು ಕೆ.ಸಿ. ವೇಣುಗೋಪಾಲ್ ಭೇಟಿ ಹೊಂದುತ್ತಿರುವುದು ರಾಜಕೀಯ ವಲಯದಲ್ಲಿ ಹೊಸ ಕುತೂಹಲ ಕೆರಳಿಸಿದೆ. ಸಿಎಂ ಬದಲಾವಣೆ ಕುರಿತು ಗೌಪ್ಯ ಚರ್ಚೆ ಸಾಧ್ಯತೆ ಇದ್ದು, ಹೈಕಮಾಂಡ್ ನೀಡಿರುವ ಸಂದೇಶವನ್ನು ವೇಣುಗೋಪಾಲ್ ಸಿಎಂಗೆ ತಿಳಿಸುವ ಸಾಧ್ಯತೆ. ದೆಹಲಿಗೆ ಕರೆದು ಮುಂದಿನ ಹಂತದ ಮಾತುಕತೆ ನಡೆಸುವ ಬಗ್ಗೆ ಚರ್ಚೆ ಸಾಧ್ಯತೆ. ಇತ್ತೀಚೆಗೆ ನಡೆದ ಬ್ರೇಕ್‌ಫಾಸ್ಟ್ ಮೀಟಿಂಗ್ ಕುರಿತು ಸಿಎಂ ವಿವರಣೆ ನೀಡಬಹುದು. ಇದೇ ಕಾರಣಕ್ಕೆ ನಾಳೆಯ ಭೇಟಿ ರಾಜಕೀಯವಾಗಿ ಅತ್ಯಂತ ಮಹತ್ವ ಪಡೆದಿದೆ.

ಡಿಕೆಶಿ–ಸಿದ್ದರಾಮಯ್ಯ ಬ್ರೇಕ್‌ಫಾಸ್ಟ್ ಮೀಟಿಂಗ್‌ನ ಹಿನ್ನೆಲೆ

ಕೆ.ಸಿ. ವೇಣುಗೋಪಾಲ್ ಸೂಚನೆಯ ಮೇರೆಗೆ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ಇತ್ತೀಚೆಗೆ ಬ್ರೇಕ್‌ಫಾಸ್ಟ್ ನಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದ್ದರು. ಇಬ್ಬರೂ ಹೈಕಮಾಂಡ್ ನಿರ್ಧಾರಕ್ಕೆ ಬದ್ದರಾಗಿದ್ದೇವೆ ಎಂದು ಸ್ಪಷ್ಟಪಡಿಸಿದ್ದರು. ನಾಳೆಯ ಮಂಗಳೂರಿನ ಭೇಟಿಯಲ್ಲಿ ಈ ವಿಷಯದ ಕುರಿತು ವೇಣುಗೋಪಾಲ್‌ಗೆ ಸಿಎಂ ವಿವರ ನೀಡುವ ಸಾಧ್ಯತೆ ರಾಜಕೀಯ ವಲಯದಲ್ಲಿ ವಿಶೇಷ ಗಮನ ಸೆಳೆದಿದೆ.

ಸಿಎಂ ಸಿದ್ದರಾಮಯ್ಯ ಅವರ ನಾಳೆಯ ಮಂಗಳೂರು ಪ್ರವಾಸ ವೇಳಾಪಟ್ಟಿ

ಬೆಳಿಗ್ಗೆ 11:00 ಗಂಟೆಗೆ: ವಿಶೇಷ ವಿಮಾನದ ಮೂಲಕ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮನ.

ಬೆಳಿಗ್ಗೆ 11:40ಕ್ಕೆ: ಕೊಣಾಜೆಯಲ್ಲಿ ಗಾಂಧೀಜಿ–ನಾರಾಯಣ ಗುರು ಸಂವಾದ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಉದ್ಘಾಟನೆ.

ಮಧ್ಯಾಹ್ನ 12:30ಕ್ಕೆ: ಪೇಸ್, ಜ್ಞಾನನಗರ ಕೊಣಾಜೆ ವತಿಯಿಂದ ಆಯೋಜಿಸಿರುವ ಪೇಸ್ ಮತ್ತು ಎಐ ಉನ್ನತ ಅಧ್ಯಯನ ಕೇಂದ್ರ,

ಪೇಸ್ ಟ್ರೇಡ್ ಪಾರ್ಕ್, ಪೇಸ್ ಸ್ಪೋರ್ಟ್ಸ್ ಅರೆನಾ ಶಿಲಾನ್ಯಾಸ.

ಪೇಸ್‌ಕೇರ್ಸ್ ಸಮುದಾಯ ಸೇವಾ ಯೋಜನೆಗಳ ಉದ್ಘಾಟನೆ.

ಮಧ್ಯಾಹ್ನ 1:15ಕ್ಕೆ: ಮಂಗಳೂರು ಸರ್ಕ್ಯೂಟ್ ಹೌಸ್‌ನಲ್ಲಿ ಜಿಲ್ಲೆ ಜನಪ್ರತಿನಿಧಿಗಳು ಮತ್ತು ವಕೀಲರ ಸಂಘದವರ ಭೇಟಿ.

ಬಳಿಕ ಜಿಲ್ಲಾಧಿಕಾರಿ, ಪೊಲೀಸ್, ಮಹಾನಗರಪಾಲಿಕೆ ಮತ್ತು ಬೇರೆ ಇಲಾಖೆಗಳೊಂದಿಗೆ ಪರಿಶೀಲನಾ ಸಭೆ.

ಸಂಜೆ 4:30ಕ್ಕೆ: ವಿಶೇಷ ವಿಮಾನದ ಮೂಲಕ ಮಂಗಳೂರಿನಿಂದ ಬೆಂಗಳೂರಿಗೆ ವಾಪಸ್ಸು.

ಕಾರ್ಯಕ್ರಮದ ಸಿದ್ಧತೆ ಪೂರ್ಣಗೊಳಿಸಿದ ಆಯೋಜಕರು

ಗುರು–ಗಾಂಧಿ ಸಂವಾದ ಶತಮಾನೋತ್ಸವ ಕಾರ್ಯಕ್ರಮದ ಸಿದ್ಧತೆಗಳನ್ನು ಬಿ.ಕೆ. ಹರಿಪ್ರಸಾದ್ ಅವರು ಸ್ವತಃ ಪರಿಶೀಲಿಸಿದ್ದು, ವೇದಿಕೆ, ವ್ಯವಸ್ಥೆಗಳು, ಭದ್ರತಾ ಕ್ರಮಗಳು ಎಲ್ಲವೂ ಸೂಕ್ತವಾಗಿ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ಸಿಎಂ ಭೇಟಿ ಹಿನ್ನೆಲೆಯಲ್ಲಿ ಪೋಲಿಸ್ ಇಲಾಖೆ ಭದ್ರತೆ ಕಟ್ಟು ನಿಟ್ಟಾಗಿ ವ್ಯವಸ್ಥೆ ಮಾಡಿದೆ.

ರಾಜಕೀಯ ಚರ್ಚೆಗೆ ವೇದಿಕೆ ಸಿದ್ಧ: ಮಂಗಳೂರು ನಾಳೆ ಹೈಲೈಟ್

ನಾರಾಯಣಗುರು–ಗಾಂಧೀಜಿ ಸಂವಾದ ಶತಮಾನೋತ್ಸವವು ಒಂದು ಐತಿಹಾಸಿಕ, ಸಾಮಾಜಿಕ ಕಾರ್ಯಕ್ರಮವಾದರೂ ರಾಜಕೀಯವಾಗಿ ಗಮನಸೆಳೆದಿರುವುದು ಸಿಎಂ–ಕೆ.ಸಿ. ವೇಣುಗೋಪಾಲ್ ಮುಖಾಮುಖಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಪವರ್ ಶೇರಿಂಗ್ ಚರ್ಚೆ, ಸಿಎಂ ಬದಲಾವಣೆಯ ಊಹಾಪೋಹಗಳು ಮತ್ತಷ್ಟು ಗರಿಗೆದರಿರುವ ಸಂದರ್ಭದಲ್ಲಿ, ಮಂಗಳೂರಿನ ನಾಳೆಯ ಭೇಟಿ ರಾಜ್ಯ ರಾಜಕೀಯಕ್ಕೆ ಹೊಸ ತಿರುವು ನೀಡಬಹುದಾದ ದಿನವಾಗಲಿದೆ.