ಮುಖ್ಯಮಂತ್ರಿಗಳ ಅಧಿಕಾರ ತ್ಯಾಗದ ಹೇಳಿಕೆ ಕುರಿತು ಸಚಿವ ಸತೀಶ್ ಜಾರಕಿಹೊಳಿ ಪ್ರತಿಕ್ರಿಯಿಸಿ. ಯಾರಿಗೂ ಅಧಿಕಾರ ಶಾಶ್ವತವಲ್ಲ, ಸಿಎಂ ಮೂವತ್ತು ತಿಂಗಳ ನಂತರ ಅಥವಾ ಅದಕ್ಕೂ ಮೊದಲೇ ಅಧಿಕಾರ ಬಿಡಬಹುದು ಎಂದಿದ್ದಾರೆ. ಅಂತಿಮ ನಿರ್ಧಾರ ಹೈಕಮಾಂಡ್‌ಗೆ ಸೇರಿದ್ದು, ದಲಿತ ಸಿಎಂ ಚರ್ಚೆ ಸದ್ಯಕ್ಕೆ ಇಲ್ಲ ಎಂದರು.
ಬೆಂಗಳೂರು(ಡಿ.3): ಮುಖ್ಯಮಂತ್ರಿಗಳ ಅಧಿಕಾರ ತ್ಯಾಗದ ಕುರಿತ ವೈರಾಗ್ಯದ ಹೇಳಿಕೆಯು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ಸಚಿವ ಸತೀಶ್ ಜಾರಕಿಹೊಳಿ ಅವರು ಮಹತ್ವದ ಹೇಳಿಕೆ ನೀಡಿದ್ದಾರೆ. ಸಿ.ಎಂ. ಮಾತುಗಳನ್ನು ಸಮರ್ಥಿಸಿಕೊಂಡಿರುವ ಅವರು, 'ಯಾರಿಗೂ ಅಧಿಕಾರ ಶಾಶ್ವತವಲ್ಲ' ಎಂದು ಪುನರುಚ್ಚರಿಸಿದರು.
ಅಧಿಕಾರ ತ್ಯಾಗದ ಬಗ್ಗೆ ಸ್ಪಷ್ಟನೆ:
ಮುಖ್ಯಮಂತ್ರಿಗಳು ಮಾನಸಿಕವಾಗಿ ಸಿದ್ಧರಾಗಿದ್ದಾರೆ ಎಂದಲ್ಲ, ಆದರೆ 'ಮೂವತ್ತು ತಿಂಗಳ ನಂತರವಾದರೂ ಬಿಡಬಹುದು, ಅದಕ್ಕೂ ಮೊದಲೇ ಬಿಡಬಹುದು. ಬಿಡುವುದಂತೂ ಪಕ್ಕಾ. ಯಾವಾಗಲಾದ್ರೂ ಬಿಡಲೇಬೇಕು' ಎಂದು ಜಾರಕಿಹೊಳಿ ಹೇಳಿದ್ದಾರೆ.
ಹೈಕಮಾಂಡ್ ನಿರ್ಧಾರವೇ ಅಂತಿಮ:
ಮುಖ್ಯಮಂತ್ರಿ ಸ್ಥಾನದ ಬಗ್ಗೆ ಎಲ್ಲಾ ನಿರ್ಧಾರವನ್ನು ಹೈಕಮಾಂಡ್ ತೆಗೆದುಕೊಳ್ಳಲಿದೆ. ಯಾವ ರೀತಿಯಲ್ಲಿ ಹೈಕಮಾಂಡ್ ಬಗೆಹರಿಸುತ್ತೆ ಅಂತ ನೋಡೋಣ. ಪಕ್ಷದಲ್ಲಿ ಒಳ್ಳೆಯ ವಾತಾವರಣ ಇರಬೇಕು ಅಂತ ಕಾರ್ಯಕರ್ತರು ಬಯಸುತ್ತಾರೆ ಎಂದರು. ಇದೇ ವೇಳೆ ದಲಿತ ಸಿಎಂ ವಿಚಾರ ತಳ್ಳಿಹಾಕಿದ ಸಚಿವರು, ಈ ಅವಧಿಯಲ್ಲಿ ದಲಿತ ಸಿಎಂ ಬಗ್ಗೆ ಯಾವುದೇ ಚರ್ಚೆ ಇಲ್ಲ. ಪರಮೇಶ್ವರ್ ಒಬ್ಬ ಸೀನಿಯರ್ ಇದ್ದಾರೆ. ಸಿಎಂ ಬಗ್ಗೆ ಎಲ್ಲ ಮುಗಿದಿದೆ ಈಗ ಮತ್ತೆ ಶುರು ಮಾಡುವುದು ಬೇಡ. ನಿನ್ನೆ ಎಲ್ಲ ಮುಗಿದಿದೆ, ಪದೇ ಪದೇ ಆ ವಿಚಾರ ಮಾತನಾಡುವುದು ಬೇಡ ಎಂದರು.


