ಮಾಜಿ ಸಚಿವ ಕೆ.ಎನ್. ರಾಜಣ್ಣ ಅವರು, ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ಅವರ 'ಬ್ರೇಕ್ ಫಾಸ್ಟ್ ಮೀಟಿಂಗ್' ಅನ್ನು 'ಕುರಿ ಕೋಳಿ ಬಲಿ'ಗೆ ಹೋಲಿಸಿ ವ್ಯಂಗ್ಯವಾಡಿದ್ದಾರೆ. ಸದ್ಯಕ್ಕೆ ರಾಜ್ಯ ನಾಯಕತ್ವದಲ್ಲಿ ಯಾವುದೇ ಬದಲಾವಣೆ ಇಲ್ಲವೆಂದು ಸ್ಪಷ್ಟಪಡಿಸಿದರು.

ತುಮಕೂರು (ಡಿ.03): ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಬ್ರೇಕ್ ಫಾಸ್ಟ್ ಮೀಟಿಂಗ್ ಹೇಗೆ ಆಗಿದೆ ಎಂದರೆ, 'ಈ ಹಳ್ಳಿಗಳಲ್ಲಿ ಶಾಂತಿ ಆಗಬೇಕು ಅಂದ್ರೆ ಕುರಿ ಕೋಳಿ ಬಲಿ ಕೊಡ್ತಾರೆ. ಆ ರೀತಿಯಾಗಿ ಎರಡು ಮನೆಯಲ್ಲಿ ಆಗಿದೆ. ಇಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ ಅಂತ ನಾವು ಅಂದುಕೊಂಡಿದ್ದೇವೆ. ಒಂದು ವೇಳೆ ಬದಲಾವಣೆ ಇದ್ದರೆ, ಅದನ್ನು ಹೈಕಮಾಂಡ್ ಸ್ಪಷ್ಟವಾಗಿ ಹೇಳುತ್ತದೆ ಎಂದು ಮಾಜಿ ಸಚಿವ ಕೆ.ಎನ್. ರಾಜಣ್ಣ ಹೇಳಿದರು.

ತುಮಕೂರಿನಲ್ಲಿ ಮಾಜಿ ಸಚಿವ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಕೆ.ಎನ್. ರಾಜಣ್ಣ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಡುವಿನ ಇತ್ತೀಚಿನ 'ಬ್ರೇಕ್ ಫಾಸ್ಟ್ ಮೀಟಿಂಗ್' ಬಗ್ಗೆ ವ್ಯಂಗ್ಯವಾಡುತ್ತಲೇ, ರಾಜ್ಯ ನಾಯಕತ್ವದ ಬದಲಾವಣೆ ಕುರಿತ ಊಹಾಪೋಹಗಳಿಗೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ. ಸದ್ಯ ಇರುವ ರಾಜಕೀಯ ಸ್ಥಿತಿಗತಿ ಯಾವುದೇ ಬದಲಾವಣೆ ಆಗುವುದಿಲ್ಲ. ಇರೋದು ಏನಿದಿಯೋ ಅದೇ ಮುಂದುವರಿದುಕೊಂಡು ಹೋಗುತ್ತದೆ.

'ಬ್ರೇಕ್ ಫಾಸ್ಟ್ ಮೀಟಿಂಗ್' ಅಂದರೆ 'ಬೀಗತನ' ಮಾಡಿದಂತೆ!

ನಾಯಕತ್ವ ಬದಲಾವಣೆ ಕುರಿತ ಆಂತರಿಕ ಭಿನ್ನಾಭಿಪ್ರಾಯಗಳ ಬಗ್ಗೆ ಪರೋಕ್ಷವಾಗಿ ಮಾತನಾಡಿದ ಅವರು, 'ಈ ಹಳ್ಳಿಗಳಲ್ಲಿ ಶಾಂತಿ ಆಗಬೇಕು ಅಂದ್ರೆ ಕುರಿ ಕೋಳಿ ಬಲಿ ಕೊಡ್ತಾರೆ. ಆ ರೀತಿಯಾಗಿ ಎರಡು ಮನೆಯಲ್ಲಿ ಆಗಿದೆ. ಬದಲಾವಣೆ ಇಲ್ಲ ಅಂತ ನಾವು ಅಂದುಕೊಂಡಿದ್ದೇವೆ. ಒಂದು ವೇಳೆ ಬದಲಾವಣೆ ಇದ್ದರೆ ಅದನ್ನು ಹೈಕಮಾಂಡ್ ಸ್ಪಷ್ಟವಾಗಿ ಹೇಳುತ್ತದೆ. ಈ 'ಬ್ರೇಕ್ ಫಾಸ್ಟ್ ಮೀಟಿಂಗ್ ಒಂದು ರೀತಿಯಲ್ಲಿ ಬೀಗತನ ಮಾಡಿದಂತೆ ಆಗಿದೆ. ಮೊದಲು ಒಂದು ಕಡೆ ಹೆಣ್ಣು ನೋಡೋಕೆ ಬರ್ತಾರೆ, ಆ ಮೇಲೆ ಗಂಡು ನೋಡೋಕೆ ಬರ್ತಾರೆ, ಆ ರೀತಿಯಾಗಿದೆ ಈ ಬ್ರೇಕ್ ಫಾಸ್ಟ್ ಮೀಟಿಂಗ್' ಎಂದು ಗ್ರಾಮೀಣ ಶೈಲಿಯಲ್ಲಿ ಉದಾಹರಣೆ ನೀಡಿ ವ್ಯಂಗ್ಯವಾಡಿದರು.

ಸಚಿವ ಸಂಪುಟ ವಿಸ್ತರಣೆ ಮತ್ತು ದಲಿತ ಸಿಎಂ ವಿಚಾರ

ಸಚಿವ ಸಂಪುಟ ವಿಸ್ತರಣೆ ಕುರಿತು ಪ್ರತಿಕ್ರಿಯಿಸಿದ ರಾಜಣ್ಣ, ಬೆಳಗಾವಿ ಅಧಿವೇಶನದ ನಂತರ ವಿಸ್ತರಣೆಯಾಗುವ ಸಾಧ್ಯತೆ ಇದೆ. 'ಅನಿವಾರ್ಯವಾಗಿ ಸಿದ್ದರಾಮಯ್ಯನವರನ್ನ ಪದಚ್ಯುತಿ ಮಾಡಿದರೆ, ಆಗ ದಲಿತ ಸಿಎಂ ಪರಮೇಶ್ವರ್ ಅವರು ಆಗಬೇಕು ಎಂದು ಆಭಿಪ್ರಾಯ ವ್ಯಕ್ತಪಡಿಸಿದರು.

ರಾಜೇಂದ್ರ ರಾಜಣ್ಣ ಅವರು ಬಿಜೆಪಿ ಸಚಿವರನ್ನು ಭೇಟಿ ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ, 'ನನ್ನ ಪುತ್ರ ರಾಜೇಂದ್ರ ಸ್ಕ್ರೀಪ್ಕೋ (SCREEPCO) ದಲ್ಲಿ ಸಿನೀಯರ್ ನಿರ್ದೇಶಕನಾಗಿದ್ದಾನೆ. ಸ್ಕ್ರೀಪ್ಕೋ ಮತ್ತು ಇಸ್ಕೋ (ISCO) ಸಂಸ್ಥೆಗಳಲ್ಲಿ ಆರ್ಟಿಫಿಸಿಯಲ್ ಮೆನ್ಯೂರ್ (ಕೃತಕ ಗೊಬ್ಬರ) ಮಾಡಬೇಕಾಗಿದೆ. ಈ ಎರಡು ಸಮಿತಿಗಳು ಏಷ್ಯಾ ಖಂಡದಲ್ಲಿ ಅತಿ ದೊಡ್ಡ ಸಹಕಾರಿ ಸಂಸ್ಥೆಗಳು. ಇವೆಲ್ಲವೂ ಕೇಂದ್ರ ಸಹಕಾರಿ ಸಚಿವರ (ಅಮಿತ್ ಶಾ) ಅಡಿಯಲ್ಲಿ ಬರುತ್ತವೆ. ಇದರ ಬಗ್ಗೆ ಚರ್ಚೆಗಳಿದ್ದಾಗ ಅವರೊಬ್ಬರೇ ಅಲ್ಲ, ಇತರೆ ಎಲ್ಲಾ ನಿರ್ದೇಶಕರು ದೆಹಲಿಗೆ ಹೋಗುತ್ತಾರೆ. ಕೇಂದ್ರ ಸಚಿವ ಅಮಿತ್ ಶಾ ಕೂಡ ಸಭೆ ಕರೆಯುತ್ತಿರುತ್ತಾರೆ. ಆದ್ದರಿಂದ ಈ ಭೇಟಿಗೆ ಯಾವುದೇ ವಿಶೇಷ ಅರ್ಥ ಕಲ್ಪಿಸುವುದು ಬೇಡ' ಎಂದು ರಾಜಣ್ಣ ಮಾಧ್ಯಮಗಳಿಗೆ ಮನವಿ ಮಾಡಿದರು.

ದೆಹಲಿಗೆ ಹೋಗಿ ಬಂದ ಶಾಸಕರ ಪ್ರಯತ್ನವೂ ಸಫಲವೂ ಆಗಿಲ್ಲ ವಿಫಲವೂ ಆಗಿಲ್ಲ ಎಂದು ಹೇಳುವ ಮೂಲಕ, ರಾಜ್ಯ ರಾಜಕೀಯದಲ್ಲಿ ಸದ್ಯಕ್ಕೆ ಯಾವುದೇ ದೊಡ್ಡ ಮಟ್ಟದ ಬದಲಾವಣೆಗಳಿಲ್ಲ ಎಂದು ತೀರ್ಮಾನ ನೀಡಿದರು. ರಾಜಣ್ಣ ಅವರ ಈ ಹೇಳಿಕೆಗಳು ರಾಜ್ಯ ಕಾಂಗ್ರೆಸ್ ಮತ್ತು ನಾಯಕತ್ವದ ಬಗ್ಗೆ ಇರುವ ಗೊಂದಲಗಳಿಗೆ ತಾತ್ಕಾಲಿಕ ವಿರಾಮ ನೀಡಿದಂತಿದೆ.