ಒಕ್ಕಲಿಗ ಮೀಸಲಾತಿ ಹೋರಾಟದ ಮೂಲಕ ಸಿಎಂ ಆಸೆ ಬಿಚ್ಚಿಟ್ಟ ಡಿಕೆಶಿ
ಒಕ್ಕಲಿಗ ಸಮಾಜದಲ್ಲಿ ನನ್ನನ್ನು ಮುಂದೆ, ಹಿಂದೆ ಅಥವಾ ಮಧ್ಯದಲ್ಲಿ ಆದರೂ ಸೇರಿಸಿಕೊಳ್ಳಿ. ಈಗ ನಮ್ಮನ್ನು ವಿಧಾನಸೌಧಕ್ಕೆ ತೆಗೆದುಕೊಂಡು ಹೋಗಿ ಕೂರಿಸುವ ತಾಕತ್ತು ನಿಮಗಿದ್ದು, ಮನೆ ಬಾಗಿಲಿಗೆ ಬಂದಿರುವ ಅವಕಾಶ ಕಳೆದುಕೊಳ್ಳಬೇಡಿ. ಸಮುದಾಯದ ಆಶಿರ್ವಾದ ನನ್ನ ಮೇಲೆ ಇರಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿ ಆಗುವ ಬಯಕೆಯನ್ನು ಪರೋಕ್ಷವಾಗಿ ಬಿಚ್ಚಿಟ್ಟರು.
ಬೆಂಗಳೂರು (ನ.27): ರಾಜ್ಯದಲ್ಲಿನ ಎಲ್ಲ ಪಕ್ಷಗಳಲ್ಲಿರುವ ನಾಯಕರು ನಮ್ಮಲ್ಲಿರುವ ವೈಷಮ್ಯ ಬಿಟ್ಟು ಸ್ವಾಮಿಜಿಗಳ ನೇತೃತ್ವದಲ್ಲಿ ಹೋರಾಟ ಮಾಡಿದರೆ ಯಶಸ್ಸು ಸಿಗುತ್ತದೆ. ನಮ್ಮ ಸಮಾಜದಲ್ಲಿ ನನ್ನನ್ನು ಮುಂದಾದರು ಸೇರಿಸಿಕೊಳ್ಳಿ, ಹಿಂದಾದರೂ ಸೇರಿಸಿಕೊಳ್ಳಿ ಅಥವಾ ಮಧ್ಯದಲ್ಲಿ ಆದರೂ ಸೇರಿಸಿಕೊಳ್ಳಿ. ನಮ್ಮನ್ನು ವಿಧಾನಸೌಧಕ್ಕೆ ತೆಗೆದುಕೊಂಡು ಹೋಗಿ ಕೂರಿಸುವ ತಾಕತ್ತು ನಿಮಗಿದ್ದು, ಮನೆ ಬಾಗಿಲಿಗೆ ಬಂದಿರುವ ಅವಕಾಶ ಕಳೆದುಕೊಳ್ಳಬೇಡಿ. ಸಮುದಾಯದ ಆಶಿರ್ವಾದ ನನ್ನ ಮೇಲೆ ಇರಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿ ಆಗುವ ಬಯಕೆಯನ್ನು ಪರೋಕ್ಷವಾಗಿ ಬಿಚ್ಚಿಟ್ಟರು.
ಬೆಂಗಳೂರಿನ ಒಕ್ಕಲಿಗರ ಸಂಘದ ಕಚೇರಿಯಲ್ಲಿ ಇಂದು ನಡೆದ ಮೀಸಲಾತಿ ಹೆಚ್ಚಳ ಹೋರಾಟದ ಕುರಿತ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಸರ್ಕಾರದ ನಿಲುವು, ಪಕ್ಷದ ನಿಲುವು ಬೇರೆ ಬೇರೆ ಇರುತ್ತದೆ. ನಾವು ಯಾರ ಹಕ್ಕು ಕಿತ್ತುಕೊಳ್ಳಲು ಮುಂದಾಗಿಲ್ಲ. ಅರ್ಜಿ ಹಾಕಿ ನಾವು ಇಂತದೆ ಜಾತಿಲಿ ಹುಟ್ಟಬೇಕು ಎಂದು ಹುಟ್ಟಿಲ್ಲ. ಹುಟ್ಟುವಾಗ ಹೆಸರು ಇರಲ್ಲ, ಸಾಯುವಾಗ ಉಸಿರು ಇರಲ್ಲ ಆದರೆ ಹೆಸರು ಇರುತ್ತದೆ. ಎಲ್ಲದಕ್ಕೂ ಮನುಷ್ಯತ್ವ ಮೂಲವಾಗಿದೆ. ನಾವೆಲ್ಲಾ ಒಕ್ಕಲಿಗರಾಗಿ ಹುಟ್ಟಿದ್ದೇವೆ. ನಮ್ಮನ್ನೆಲ್ಲಾ ಒಕ್ಕಲಿಗ ಎಂದು ಗುರುತಿಸಲಾಗುತ್ತಿದೆ. ಇಂದು ನಮ್ಮ ಸಮುದಾಯದ ಎಸ್.ಎಂ. ಕೃಷ್ಣ ಅವರ ಬಳಿಕ ಒಕ್ಕಲಿಗ ಸಮುದಾಯದಲ್ಲಿ ನಾನು ಕೆಪಿಸಿಸಿ ಅಧ್ಯಕ್ಷನಾಗಿದ್ದೇನೆ. ಸಂಘಟನೆ ಶಕ್ತಿ ಇನ್ನೊಂದು ಮತ್ತೊಂದು ಆಮೇಲೆ. ಒಕ್ಕಲಿಗರ ಮೀಸಲಾತಿ ಕುರಿತ ಸಭೆಯಲ್ಲಿ ಕುಳಿತಿರುವ ಆರ್ ಅಶೋಕ್ ಸೇರಿ ಹಲವು ಸಚಿವರು ನಮ್ಮ ಸಮುದಾಯ ಪ್ರತಿನಿಧಿಸುತ್ತಾರೆ. ಎಲ್ಲತರೂ ಒಗ್ಗಟ್ಟಾಗಿ ಹೋರಾಟ ಮಾಡಬೇಕಿದೆ ಎಂದರು.
ಮೀಸಲಾತಿಗಾಗಿ ಒಕ್ಕಲಿಗರ ಮೀಟಿಂಗ್: ಸರ್ಕಾರಕ್ಕೆ ಹೊಸ ಟೆನ್ಶನ್
ಅಧಿಕಾರ ಕೊಡೋದು ಬಿಡೋದು ನಿಮ್ಮ ಕೈಲಿದೆ: ನಮ್ಮ ಸಮಾಜದ ಜನಸಂಖ್ಯೆ ಎಷ್ಟಿದೆ. ಅದಕ್ಕೆ ಸರಿಯಾಗಿ ಮೀಸಲಾತಿ ನೀಡಿ ಎಂದು ಕೇಳುತ್ತಿದ್ದು, ನಮಗೆ ಬೇರೆಯವರದ್ದೇನು ಬೇಡ. ಉಳಿ ಪೆಟ್ಟು ಬಿಳದೆ ಶಿಲೆ ಮೂರ್ತಿ ಆಗೋದಿಲ್ಲ, ಊಳದೆ ಫಲ ನೀಡಲು ಸಾಧ್ಯವಿಲ್ಲ. ದೇವರು ವರವನ್ನು ಕೊಡಲ್ಲ, ಶಾಪವನ್ನು ಕೊಡುವುದಿಲ್ಲ. ಆದರೆ, ನಾವು ವರವಾಗಿ ಬಳಸಿಕೊಳ್ಳಬೇಕು. ಆದರೆ, ಈ ಬಗ್ಗೆ ನಿರ್ಧಾರ ಕೈಗೊಳ್ಳಲು ನಿಮ್ಮ ಕೈಲಿ ಅಧಿಕಾರ ಇಲ್ಲ, ಎಂದರೆ ಏನು ಮಾಡೋಕೆ ಆಗಲ್ಲ. ಅಧಿಕಾರ ಕೊಡೊದು ಬಿಡೊದು ನಿಮ್ಮ ಕೈಲಿ ಇದೆ. ಸಮಾಜ ನನ್ನ ಕಷ್ಟಕಾಲದಲ್ಲಿ ನಿಂತಿದೆ. ಜೈಲಿಗೆ ಹೋಗಿದ್ದಾಗಲು ಜೊತೆ ನಿಂತಿದೆ. ಗಟ್ಟಿ ಆಗಿ ಮಾತಾಡಲು ಶಕ್ತಿ ನೀಡಿದ ಸಮಾಜದ ಮೇಲೆ ನನಗೆ ಋಣ ಇದೆ. ಆ ಋಣ ತೀರಿಸಬೇಕಿದೆ ಎಂದರು.
ವಿಧಾನಸೌಧದಲ್ಲಿ ಕೂರಿಸುವ ತಾಕತ್ತು ನಿಮಗಿದೆ: ದೊಡ್ಡ ಹೋರಾಟಕ್ಕೆ ಎಲ್ಲಾ ಸಿದ್ಧವಾಗಬೇಕಿದೆ. ಸಮಾಜದಲ್ಲಿ ಸಂಘಟನೆ ಇಲ್ಲದೆ ಏನು ಮಾಡೋಕೆ ಆಗೋದಿಲ್ಲ. ಬಸ್ ಕಳಿಸಿದರೆ ಜನ ಬರೊ ಕಾಲ ಮುಗಿತು. ನಮ್ಮ ಸಮಾಜದಲ್ಲಿ ನನ್ನನ್ನು ಮುಂದಾದರು ಸೇರಿಸಿಕೊಳ್ಳಿ, ಹಿಂದಾದರೂ ಸೇರಿಸಿಕೊಳ್ಳಿ ಅಥವಾ ಮಧ್ಯದಲ್ಲಿ ಆದರೂ ಸೇರಿಸಿಕೊಳ್ಳಿ. ನಮ್ಮ ಸಮುದಾಯದ ಜನರ ಶಕ್ತಿ ಉತ್ಸಾಹ ನೋಡಿದರೆ, ನಮ್ಮನ್ನು ವಿಧಾನಸೌಧಕ್ಕೆ ತೆಗೆದುಕೊಂಡು ಹೋಗಿ ಕೂರಿಸುವ ತಾಕತ್ತು ಇದೆ. ಅವಕಾಶ ನಿಮ್ಮ ಮನೆ ಬಾಗಿಲಿಗೆ ಬಂದಿದೆ. ಈ ಅವಕಾಶ ಕಳೆದುಕೊಳ್ಳಬೇಡಿ. ಸಮುದಾಯದ ಆಶಿರ್ವಾದ ನನ್ನ ಮೇಲೆ ಇರಲಿ ಎಂದು ಮುಖ್ಯಮಂತ್ರಿ ಆಗುವ ಬಯಕೆಯನ್ನು ಪರೋಕ್ಷವಾಗಿ ಡಿ.ಕೆ. ಶಿವಕುಮಾರ್ ಹೇಳಿಕೊಂಡರು.