ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ರಾಜ್ಯದ ಹಿರಿಯ ನಾಯಕರು ಮತ್ತು ಮಾಜಿ ಮುಖ್ಯಮಂತ್ರಿಗಳ ಅನುಭವವನ್ನು ಪಡೆದು ಆಡಳಿತ ನಡೆಸುವುದಾಗಿ ತಿಳಿಸಿದ್ದಾರೆ. ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ..

ಬೆಂಗಳೂರು (ಜೂ.04): ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ರಾಜ್ಯದ ಹಿರಿಯ ನಾಯಕರು ಮತ್ತು ಮಾಜಿ ಮುಖ್ಯಮಂತ್ರಿಗಳ ಅನುಭವವನ್ನು ಪಡೆದು ಆಡಳಿತ ನಡೆಸುವುದಾಗಿ ತಿಳಿಸಿದ್ದಾರೆ. ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಕ್ಕೆ ಸೇವೆ ಸಲ್ಲಿಸಿದ ಹಿರಿಯರನ್ನು ಸ್ಮರಿಸುವುದು ತಮ್ಮ ಕರ್ತವ್ಯ ಎಂದು ಹೇಳಿದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

"ನಾಡಿನ ಹಿರಿಯರು ಹಾಗೂ ತಾಯಿ ಭುವನೇಶ್ವರಿಗೆ ಗೌರವ ಸಲ್ಲಿಸುವುದು ನನ್ನ ಜವಾಬ್ದಾರಿ. ಕೆಂಗಲ್ ಹನುಮಂತಯ್ಯ, ನಿಜಲಿಂಗಪ್ಪ ಅವರಂತಹ ಮೇರು ವ್ಯಕ್ತಿತ್ವಗಳನ್ನು ಸದಾ ಸ್ಮರಿಸಬೇಕು," ಎಂದು ಅವರು ಹೇಳಿದರು. ಮಾಜಿ ಮುಖ್ಯಮಂತ್ರಿಗಳೊಂದಿಗೆ ಸಮಾಲೋಚನೆ ನಡೆಸುವ ಕುರಿತು ಮಾತನಾಡಿದ ಡಿಕೆ ಶಿವಕುಮಾರ್, "ನಾಳೆ ಕುಮಾರಸ್ವಾಮಿ, ಸದಾನಂದ ಗೌಡ ಸೇರಿದಂತೆ ಹಲವು ಮಾಜಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡುತ್ತೇನೆ. ಅವರ ಆಡಳಿತ ಅನುಭವ, ಸಲಹೆ ಮತ್ತು ಮಾರ್ಗದರ್ಶನವನ್ನು ಪಡೆದುಕೊಳ್ಳುವುದು ನನಗೆ ಮುಖ್ಯವಾಗಿದೆ," ಎಂದರು.

ರಾಜ್ಯಸಭೆ ಚುನಾವಣೆಯ ಕುರಿತು ಪ್ರತಿಕ್ರಿಯಿಸಿದ ಅವರು, "ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ನಾಳೆ ರಾಜ್ಯಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಲಿದ್ದಾರೆ. ಆ ಸಂದರ್ಭದಲ್ಲಿ ರಾಹುಲ್ ಗಾಂಧಿ ಸೇರಿದಂತೆ ಪಕ್ಷದ ಪ್ರಮುಖ ನಾಯಕರು ಉಪಸ್ಥಿತರಿರುತ್ತಾರೆ. ಕಾಂಗ್ರೆಸ್ ಐದು ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ತೀರ್ಮಾನ ಕೈಗೊಂಡಿದ್ದು, ಅಗತ್ಯ ಸಂಖ್ಯಾಬಲವನ್ನು ಪರಿಗಣಿಸಿ ಈ ನಿರ್ಧಾರ ಮಾಡಲಾಗಿದೆ," ಎಂದು ತಿಳಿಸಿದರು.

ಐದು ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತಿದ್ದೇವೆ

ಜೆಡಿಎಸ್ ಅಭ್ಯರ್ಥಿಗಳ ಕುರಿತು ಕೇಳಿದ ಪ್ರಶ್ನೆಗೆ, "ಅವರು ಅಭ್ಯರ್ಥಿ ಹಾಕುತ್ತಾರೋ ಇಲ್ಲವೋ ಎಂಬುದು ಅವರ ನಿರ್ಧಾರ. ನಾವು ನಮ್ಮ ರಾಜಕೀಯ ಲೆಕ್ಕಾಚಾರಗಳನ್ನು ಗಮನದಲ್ಲಿಟ್ಟುಕೊಂಡೇ ಐದು ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತಿದ್ದೇವೆ," ಎಂದು ಹೇಳಿದರು. ತಮ್ಮ ಸರ್ಕಾರದ ಹೊಸ ಯೋಜನೆಗಳ ಕುರಿತು ಬಿಜೆಪಿ ವ್ಯಂಗ್ಯ ಮಾಡಿರುವ ಬಗ್ಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, "ಅವರು ಹಾಗೆ ಹೇಳಿದ್ದರೆ ಸಂತೋಷ. ಅವರಿಗೆ ಒಳ್ಳೆಯದಾಗಲಿ," ಎಂದು ಸಂಕ್ಷಿಪ್ತವಾಗಿ ಉತ್ತರಿಸಿದರು.

ಸಚಿವ ಸಂಪುಟದ ಖಾತೆ ಹಂಚಿಕೆ ಕುರಿತು ಮಾತನಾಡಿದ ಅವರು, "ಎಲ್ಲಾ ಸಚಿವರಿಗೆ ಖಾತೆ ಹಂಚಿಕೆ ಅಂತಿಮಗೊಂಡಿದೆ. ಪಟ್ಟಿ ಈಗಾಗಲೇ ಹೈಕಮಾಂಡ್‌ಗೆ ಕಳುಹಿಸಲಾಗಿದೆ. ಶೀಘ್ರದಲ್ಲೇ ಅಧಿಕೃತವಾಗಿ ಪ್ರಕಟಿಸಲಾಗುತ್ತದೆ," ಎಂದು ಹೇಳಿದರು. ಇದೇ ವೇಳೆ ಸಚಿವ ರಾಮಲಿಂಗಾ ರೆಡ್ಡಿ ಅಸಮಾಧಾನಗೊಂಡಿದ್ದಾರೆ ಎಂಬ ಪ್ರಶ್ನೆಗೆ ಯಾವುದೇ ಪ್ರತಿಕ್ರಿಯೆ ನೀಡದೆ ಮುಖ್ಯಮಂತ್ರಿ ಅಲ್ಲಿಂದ ತೆರಳಿದರು.