ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರಾಜ್ಯದ ಮುಖ್ಯಮಂತ್ರಿ ಆಗಬೇಕೆಂಬುದು ರಾಜ್ಯದ ಲಕ್ಷಾಂತರ ಜನರ ಅಭಿಲಾಷೆ, ಅದನ್ನು ಭಗವಂತ ಈಡೇರಿಸಿದ್ದಾನೆ ಎಂದು ಶಾಸಕ ಇಕ್ಬಾಲ್ ಹುಸೇನ್ ಸಂತಸ ವ್ಯಕ್ತಪಡಿಸಿದರು.
ರಾಮನಗರ (ಮೇ.29): ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರಾಜ್ಯದ ಮುಖ್ಯಮಂತ್ರಿ ಆಗಬೇಕೆಂಬುದು ರಾಜ್ಯದ ಲಕ್ಷಾಂತರ ಜನರ ಅಭಿಲಾಷೆ, ಅದನ್ನು ಭಗವಂತ ಈಡೇರಿಸಿದ್ದಾನೆ ಎಂದು ಶಾಸಕ ಇಕ್ಬಾಲ್ ಹುಸೇನ್ ಸಂತಸ ವ್ಯಕ್ತಪಡಿಸಿದರು. ನಗರದ ಎಪಿಎಂಸಿ ಬಳಿಯಿರುವ ಈದ್ಗಾ ಮೈದಾನದಲ್ಲಿ ಗುರುವಾರ ಬಕ್ರೀದ್ ಹಬ್ಬದ ಅಂಗವಾಗಿ ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್ ಅವರು ರಾಜ್ಯದ ಮುಖ್ಯಮಂತ್ರಿ ಆಗುವ ಶುಭ ಸುದ್ದಿ ಬಕ್ರೀದ್ ಹಬ್ಬದಂದು ಸಿಕ್ಕಿರುವುದು ಶುಭ ಮತ್ತು ಯಶಸ್ಸಿನ ಸಂಕೇತ ಎಂದರು.
8 ಬಾರಿ ವಿಧಾನಸಭಾ ಸದಸ್ಯರಾಗಿ ಹಾಗೂ ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ.ಶಿವಕುಮಾರ್ ಅವರು ಸಾಕಷ್ಟು ರಾಜಕೀಯ ಅನುಭವ ಹೊಂದಿದ್ದಾರೆ. ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವುದರ ಹಿಂದೆ ಅವರ ಶ್ರಮ, ಬಲಿದಾನವಿದೆ ಎಂದು ಹೇಳಿದರು. ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾದ ಡಿ.ಕೆ.ಶಿವಕುಮಾರ್ ಅವರು ರಾಜ್ಯದ ಮುಖ್ಯಮಂತ್ರಿ ಆಗಬೇಕೆಂದು ರಾಜ್ಯದ ಲಕ್ಷಾಂತರ ಕಾರ್ಯಕರ್ತರು, ಮುಖಂಡರು ಹಾಗೂ ಜನರ ಆಸೆಯಾಗಿತ್ತು. ಅದರಂತೆ ನನಗೂ ಸಹ ಆಸೆ, ಅಭಿಲಾಷೆ ಇದ್ದು ಅದು ಸಾಕಾರವಾಗುತ್ತಿದೆ ಎಂದರು.
ಸಾರ್ವಜನಿಕವಾಗಿ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗಬೇಕೆಂದು ನಾನು ಮೌನ ಮುರಿದು ಮಾತಾಡಿದ್ದೆ. ಕೆಲವರು ಮೌನವಾಗಿಯೇ ದೇವರಲ್ಲಿ ಪ್ರಾರ್ಥನೆ ಮಾಡಿದ್ದರು. ಅದು ಈಡೇರುವ ಕಾಲ ಹತ್ತಿರ ಬಂದಿದೆ. ನಮ್ಮ ನಾಯಕರಿಗೆ ದೆಹಲಿ ವರಿಷ್ಠರು, ಸಿದ್ದರಾಮಯ್ಯ ಅವರು ಅವಕಾಶ ಕಲ್ಪಿಸಿಕೊಡುತ್ತಿದ್ದಾರೆ. ಭಗವಂತನಿಗೆ ಕೋಟಿ ನಮಸ್ಕಾರಗಳನ್ನು ಮಾಡುತ್ತೇನೆ ಎಂದು ತಿಳಿಸಿದರು.
ಕೇಳುವುದರಲ್ಲಿ ತಪ್ಪೇನಿಲ್ಲ
ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರಿಗೆ ಸಿಎಂ ಸ್ಥಾನಕ್ಕೆ ಬೇಡಿಕೆ ಇಟ್ಟಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಶಾಸಕರು, ಪರಮೇಶ್ವರ್ ಕೂಡಾ ನಮ್ಮ ನಾಯಕರೇ, ಅವರು ನಮ್ಮ ಹಿರಿಯ ನಾಯಕರು. ಅವರು ಕೇಳುವುದರಲ್ಲಿ ತಪ್ಪೇನಿಲ್ಲ.ಈ ಹಿಂದೆ ಅವರು ಕೂಡಾ ಕೆಪಿಸಿಸಿ ಅಧ್ಯಕ್ಷರಾಗಿದ್ದವರು ಅವಕಾಶ ಕೇಳುವುದರಲ್ಲಿ ತಪ್ಪೇನು ಇಲ್ಲ. ನಮ್ಮ ಜಿಲ್ಲೆಯವದಾದ ಡಿಸಿಎಂ ಡಿ.ಕೆ.ಶಿವಕುಮಾರ್ ಗೆ ಅವಕಾಶ ಸಿಗಬೇಕೆಂಬುದು ನಮ್ಮೆಲ್ಲರ ಮೊದಲ ಆದ್ಯತೆ. ಅದು ಖಂಡಿತ ಈಡೇರಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಈ ವೇಳೆ ಯುವ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಎಂ.ಮುಷೀರ್, ಮುಖಂಡ ಇನಾಯತ್ ಸೇರಿದಂತೆ ಅಲ್ಪಸಂಖ್ಯಾತ ಮುಖಂಡರು ಹಾಜರಿದ್ದರು.


