ಕಾಂಗ್ರೆಸ್ ಹೈಕಮಾಂಡ್ ಮಾರ್ಗಸೂಚಿ ಅನ್ವಯ ನೂತನ ಸಚಿವ ಸಂಪುಟ ರಚನೆ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ. ಈ ಸೂತ್ರದ ಅನ್ವಯ, ಸುಮಾರು 20-25 ಹಿರಿಯ ಸಚಿವರಿಗೆ ಕೊಕ್ ನೀಡಿ, ಯುವಕರಿಗೆ ಹಾಗೂ ಹೊಸ ಮುಖಗಳಿಗೆ ಅವಕಾಶ ನೀಡುವ ಸಾಧ್ಯತೆಯಿದೆ.

ಬೆಂಗಳೂರು (ಮೇ.30): ಕಾಂಗ್ರೆಸ್‌ ಹೈಕಮಾಂಡ್‌(Congress Highcommand) ನೀಡಿರುವ ಮಾರ್ಗಸೂಚಿ ಅನುಸಾರ ನೂತನ ಸಚಿವ ಸಂಪುಟಕ್ಕೆ ಸೇರ್ಪಡೆಯಾಗುವ ಅಭ್ಯರ್ಥಿಗಳ ಹೆಸರು ಅಖೈರುಗೊಳಿಸುವ ಪ್ರಕ್ರಿಯೆ ಶನಿವಾರ ನಡೆಯುವ ಸಾಧ್ಯತೆಯಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಶನಿವಾರ ಆಯೋಜನೆಯಾಗಿರುವ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆ ನಂತರ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ರಾಜ್ಯ ಉಸ್ತುವಾರಿ ರಣದೀಪ್‌ಸಿಂಗ್‌ ಸುರ್ಜೇವಾಲ, ಹಂಗಾಮಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತ್ಯೇಕ ಸಭೆ ನಡೆಸಲಿದ್ದು, ಸಭೆಯಲ್ಲಿ ಮೊದಲ ಹಂತದಲ್ಲಿ ಸಂಪುಟ ಸೇರ್ಪಡೆಯಾಗಲಿರುವವರ ಹೆಸರು ಬಹುತೇಕ ಅಖೈರುಗೊಳ್ಳಲಿದೆ.

ಅಲ್ಲದೆ, ಎರಡನೇ ಹಂತದಲ್ಲಿ ಸಂಪುಟ ಸೇರ್ಪಡೆಯಾಗುವವರ ಹೆಸರುಗಳ ಬಗ್ಗೆಯೂ ಈ ಸಭೆಯಲ್ಲಿ ಚರ್ಚೆ ನಡೆಯಲಿದ್ದು, ಪಟ್ಟಿ ಅಂತಿಮಗೊಳ್ಳಲಿದೆ. ನಂತರ ಈ ಪಟ್ಟಿಯನ್ನು ಹೈಕಮಾಂಡ್ ಒಪ್ಪಿಗೆ ದೊರೆತ ನಂತರ ಎರಡನೇ ಹಂತದ ಪ್ರಮಾಣ ವಚನ ಸ್ವೀಕಾರ ದಿನಾಂಕ ನಿರ್ಧಾರವಾಗಲಿದೆ ಎಂದು ಮೂಲಗಳು ಹೇಳಿವೆ.

20 ರಿಂದ 25 ಸಚಿವರಿಗೆ ಕೊಕ್:

ಈ ಮೂಲಗಳ ಪ್ರಕಾರ ನೂತನ ಸಂಪುಟ ರಚನೆಗೆ ಹೈಕಮಾಂಡ್‌ ಕೆಲವೊಂದು ಮಾರ್ಗಸೂಚಿ ನೀಡಿದೆ. ಈ ಮಾರ್ಗಸೂಚಿ ಅನುಸರಿಸುವ ಉದ್ದೇಶದಿಂದ ಸಿದ್ದರಾಮಯ್ಯ ಅವರ ಸಂಪುಟದಲ್ಲಿ ಸಚಿವರಾಗಿರುವ 20 ರಿಂದ 25 ಮಂದಿಗೆ ಕೊಕ್ ದೊರೆಯಲಿದೆ.

ಏಕೆಂದರೆ, ಹೊಸ ಸಂಪುಟದಲ್ಲಿ ಇಂತಿಷ್ಟು ಪ್ರಮಾಣದಲ್ಲಿ ಮಾತ್ರ 65 ವರ್ಷ ವಯಸ್ಸಾದ ಹಿರಿಯರಿಗೆ ಅವಕಾಶ ನೀಡಬೇಕು (ಬಹುತೇಕ 5 ರಿಂದ 7 ಮಂದಿಗೆ ಮಾತ್ರ) ಅವಕಾಶ ನೀಡಬೇಕು. ಸುಮಾರು 8 ರಿಂದ 10 ಮಂದಿ 50 ವರ್ಷದೊಳಗಿನವರಿಗೆ ಅವಕಾಶ ನೀಡಬೇಕು. ಜಾತಿ ಹಾಗೂ ಪ್ರಾದೇಶಿಕ ಹಂಚಿಕೆ ಸಮರ್ಪಕವಾಗಿ ನಡೆಯಬೇಕು ಮಹಿಳೆಯರಿಗೂ ಅವಕಾಶ ನೀಡಬೇಕು ಎಂದು ಹೈಕಮಾಂಡ್ ಮಾರ್ಗಸೂಚಿ ನೀಡಿದೆ.

ಪ್ರತ್ಯೇಕ ಪಟ್ಟಿ ನೀಡಿರುವ ನಾಯಕರು:

ದೆಹಲಿ ಪ್ರವಾಸದ ವೇಳೆ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರು ನೂತನ ಸಂಪುಟಕ್ಕೆ ಪ್ರತ್ಯೇಕ ಪಟ್ಟಿ ನೀಡಿದ್ದಾರೆ ಎನ್ನಲಾಗುತ್ತಿದೆ. ಸಿದ್ದರಾಮಯ್ಯ ಅವರು ಸುಮಾರು 8 ಮಂದಿ ಹೆಸರು ಸೂಚಿಸಿದ್ದರೆ, ಡಿ.ಕೆ.ಶಿವಕುಮಾರ್ ಇನ್ನೂ ಹೆಚ್ಚಿನ ಹೆಸರು ನೀಡಿದ್ದಾರೆ ಎನ್ನಲಾಗುತ್ತಿದೆ.

ಕುತೂಹಲದ ಸಂಗತಿಯೇನೆಂದರೆ, ರಾಜ್ಯ ನಾಯಕರು ನೀಡಿರುವ ಪಟ್ಟಿ ಮಾತ್ರವಲ್ಲದೆ ಹೈಕಮಾಂಡ್‌ ತನ್ನದೇ ಆದ 10 ಹೆಸರುಗಳ ಪಟ್ಟಿಯನ್ನೂ ಸಿದ್ಧಪಡಿಸಿಕೊಂಡಿದ್ದು, ಈ ಎಲ್ಲ ಹೆಸರುಗಳನ್ನು ಮುಂದಿಟ್ಟುಕೊಂಡು ಹೈಕಮಾಂಡ್‌ ಮಾರ್ಗಸೂಚಿ, ಜಾತಿ ಹಾಗೂ ಪ್ರಾದೇಶಿಕ ಹಂಚಿಕೆ ಸರಿದೂಗಿಸಿ ಅಂತಿಮ ಪಟ್ಟಿ ಸಿದ್ಧಗೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ.

ಆದರೆ, ಮೊದಲ ಹಂತದಲ್ಲಿ ಸಂಪುಟ ಸೇರಲಿರುವ 8 ರಿಂದ 10 ಹೆಸರುಗಳು ಈಗಾಗಲೇ ಬಹುತೇಕ ಅಖೈರುಗೊಂಡಿದೆ ಎಂದು ಮೂಲಗಳು ಹೇಳಿವೆ.