ಶಾಸಕಿಯಾಗಿ ಸೋತರೂ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸ್ಥಾನ ಉಳಿಸಿಕೊಳ್ಳಲು ಮಮತಾ ಬ್ಯಾನರ್ಜಿ ಯತ್ನಿಸುತ್ತಿದ್ದಾರೆ. ಬಹುಮತ ಸಾಬೀತುಪಡಿಸಲು ಸಂವಿಧಾನದಲ್ಲಿ ಅವಕಾಶವಿದ್ದರೂ, ಟಿಎಂಸಿಗೆ ಸ್ಥಾನಗಳ ಕೊರತೆಯಿದೆ. ಈ ನಡುವೆ ಅಖಿಲೇಶ್ ಯಾದವ್ ಅವರ ಭೇಟಿ, ದೀದಿಯ ಮುಂದಿನ ರಾಜಕೀಯ ನಡೆಗಳ ಬಗ್ಗೆ ಕುತೂಹಲ ಮೂಡಿಸಿದೆ.

ನೀವು ನನ್ನನ್ನು ವಜಾಗೊಳಿಸಿದ್ರೂ ಪರವಾಗಿಲ್ಲ, ನಾನು ಸೀಟು ಬಿಟ್ಟುಕೊಡಲ್ಲ ಎಂದು ಪಟ್ಟು ಹಿಡಿದು ಕುಳಿತಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಏನಾದರೂ ಮಾಡಿಯಾದರೂ, ಮುಖ್ಯಮಂತ್ರಿ ಸ್ಥಾನವನ್ನು ಮತ್ತೆ ಮರಳಿ ಪಡೆಯುವ ತವಕದಲ್ಲಿ ಇದ್ದಾರೆ. ಪಶ್ಚಿಮ ಬಂಗಾಳವನ್ನು ಸೋತಿದ್ದೂ ಅಲ್ಲದೇ, ಕೊನೆಯ ಪಕ್ಷ ಶಾಸಕಿಯಾಗಲೂ ಆಗಲಿಲ್ಲ. ಈ ಪರಿಯಲ್ಲಿ ಬಂಗಾಳದ ಜನರ ಅವರಿಗೆ ಛೀಮಾರಿ ಹಾಕಿದ್ದಾರೆ. 15 ವರ್ಷಗಳಲ್ಲಿ ಪಶ್ಚಿಮ ಬಂಗಾಳದಲ್ಲಿ ನಡೆದ ಹಿಂಸಾಚಾರ, ಅ*ತ್ಯಾಚಾರ, ಅ*ತ್ಯಾಚಾರಿಗಳಿಗೆ ರಕ್ಷಣೆ ಸಹಿಸಿಕೊಂಡಿರುವ ಜನರು ಈ ಬಾರಿ ಅವರನ್ನು ಹೀನಾಯವಾಗಿ ಸೋಲಿಸಿದ್ದಾರೆ. ಅವರು ಸೋತಿದ್ದು ಅದೆಷ್ಟರ ಮಟ್ಟಿಗೆ ಫಲಿತಾಂಶ ಕೊಟ್ಟಿದೆ ಎಂದರೆ, ಕಾಂಗ್ರೆಸ್ಸಿನ ಕಾರ್ಯಕರ್ತರು ಜೈಕಾರ ಹಾಕಿದ್ದಾರೆ. ಇದಕ್ಕೆ ಕಾರಣ, ಕಾಂಗ್ರೆಸ್​ ಕಚೇರಿಯನ್ನು ಕೂಡ ಟಿಎಂಸಿ ವಶಕ್ಕೆ ಪಡೆದಿತ್ತು. ನಿನ್ನೆ ಕಾಂಗ್ರೆಸ್​ ಕಾರ್ಯಕರ್ತರು, ಟಿಎಂಸಿ ಆಕ್ರಮಿಸಿಕೊಂಡಿದ್ದ ಕಚೇರಿಯ ಬೀಗ ಒಡೆದು, ಸರಸ್ವತಿ ಪೂಜೆ ಸಲ್ಲಿಸಿ ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.

ಸಿಎಂ ಆಗ್ಬೋದು

ಇಷ್ಟಾದರೂ ಮಮತಾ ಮುಖ್ಯಮಂತ್ರಿಯಾಗಲು ಒಂದು ಛಾನ್ಸ್​ ನಮ್ಮ ಸಂವಿಧಾನ ನೀಡಿದೆ. ಅದೇನೆಂದರೆ, ರಾಜ್ಯಪಾಲರು ಮಮತಾ ಬ್ಯಾನರ್ಜಿ ಅವರಿಗೆ ವಿಧಾನ ಸಭೆಯಲ್ಲಿ ಬಹುಮತ ಸಾಬೀತುಪಡಿಸಲು ಸೂಚಿಸುತ್ತಾರೆ. ಒಂದು ವೇಳೆ ಮಮತಾ ಬಹುಮತ ಸಾಧಿಸುವಲ್ಲಿ ಯಶಸ್ವಿಯಾದರೆ, ಅವರು ಮುಖ್ಯಮಂತ್ರಿಯಾಗಿ ಮುಂದುವರೆಯುವ ಅವಕಾಶವಿದೆ. ಅವರು ಹಾಗೆ ಮಾಡಲು ಸಾಧ್ಯವಾಗದೇ ಹೋದರೆ, ಅವರನ್ನು ವಜಾಗೊಳಿಸುವ ಅಧಿಕಾರ ರಾಜ್ಯಪಾಲರಿಗೆ ಇದೆ ಎನ್ನುವುದು ತಜ್ಞರ ಅಭಿಮತ. ಇನ್ನು ಸದ್ಯದ ಸ್ಥಿತಿ ನೋಡುವುದಾದರೆ, ತೃಣಮೂಲ ಕಾಂಗ್ರೆಸ್​ಗೆ 80 ಸ್ಥಾನಗಳು ಬಂದಿವೆ. ಬಹುಮತಕ್ಕೆ 68 ಸ್ಥಾನಗಳ ಕೊರತೆಯಿದೆ. ಆದ್ದರಿಂದ ಈ 68 ಸ್ಥಾನವನ್ನು ಪಡೆಯುವಲ್ಲಿ ಮಮತಾ ಯಶಸ್ವಿಯಾದರೆ ಮುಖ್ಯಮಂತ್ರಿ ಆಗಬಹುದು. ಪರಿಸ್ಥಿತಿ ಕೈಮೀರಿದರೆ, ಮುಖ್ಯಮಂತ್ರಿಯನ್ನು ವಜಾ ಮಾಡುವ ಅಧಿಕಾರ ರಾಜ್ಯಪಾಲರಿಗೆ ಇದೆ. ಇಲ್ಲವೇ ಸುಪ್ರೀಂಕೋರ್ಟ್​ಗೆ ಅವರು ಹೋಗಬಹುದು.

ಸುದೀರ್ಘ ಮಾತುಕತೆ

ಇದರ ನಡುವೆಯೇ, ಪಶ್ಚಿಮ ಬಂಗಾಳದಲ್ಲಿ ಒಂದೂ ಸ್ಥಾನ ಗೆಲ್ಲದ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ನಿನ್ನೆ ಮಮತಾ ಬ್ಯಾನರ್ಜಿ ಅವರ ನಿವಾಸಕ್ಕೆ ಭೇಟಿ ನೀಡಿದ ಸುದೀರ್ಘ ಮಾತುಕತೆ ನಡೆಸಿದ್ದಾರೆ. ಇಲ್ಲಿ ಮುಖ್ಯಮಂತ್ರಿಯಾಗಿ ಮುಂದುವರೆಯುವ ಸಂಬಂಧ ಏನೋ ಮಾಸ್ಟರ್​ ಪ್ಲ್ಯಾನ್​ ಹಾಕಿದಂತಿದೆ ಎಂದು ಸಾಕಷ್ಟು ಚರ್ಚೆಯಾಗುತ್ತಿದೆ. ಆದರೆ ಏನು ಮಾಡಿದರೂ ಮಮತಾಗೆ ಬಹುಮತ ಬೇಕೇ ಬೇಕು. ಬಿಜೆಪಿ 207 ಸ್ಥಾನಗಳನ್ನು ಗೆದ್ದಿದ್ದರೆ, ಟಿಎಂಸಿ 80 ಸ್ಥಾನ ಗೆದ್ದಿದೆ. ಆದ್ದರಿಂದ ಬಹುಮತ ಸಾಬೀತು ಮಾಡುವುದು ಮಮತಾಗೆ ಭಾರಿ ಕಷ್ಟ ಇದ್ದರು, ಏನಾದರೂ ಮಾಡಿ ಇದನ್ನು ಸಾಧ್ಯವಾಗಿಸುವ ಕನಸಿನ ಬಗ್ಗೆ ಈ ಸಂದರ್ಭದಲ್ಲಿ ಚರ್ಚೆ ನಡೆಸಿರಬಹುದು ಎನ್ನುವ ಮಾತು ಕೇಳಿಬರುತ್ತಿದೆ.

ಆಗಿದ್ದೇನು?

ಅಷ್ಟಕ್ಕೂ ಅಖಿಲೇಶ್​ ಅವರು ದೀದಿ ಅವರಿಗೆ ನಿಮ್ಮ ಜೊತೆ ನಾನಿದ್ದೇನೆ, ನೀವೇನು ಚಿಂತೆ ಮಾಡಬೇಡಿ ಎಂದಿದ್ದಾರೆ ಎನ್ನಲಾಗಿದೆ. ಈ ಭೇಟಿಯ ಬಗ್ಗೆ ಪಕ್ಷದ ಮೂಲಗಳು, ಸಭೆಯು ಸೌಹಾರ್ದಯುತ ವಾತಾವರಣಕ್ಕೆ ಸಾಕ್ಷಿಯಾಯಿತು. ಉಭಯ ನಾಯಕರು ಶುಭಾಶಯ ವಿನಿಮಯ ಮಾಡಿಕೊಂಡರು ಮತ್ತು ಸಭೆಯ ಆರಂಭದಲ್ಲಿ, ಅಖಿಲೇಶ್ ಯಾದವ್ ಮತ್ತು ಅಭಿಷೇಕ್ ಬ್ಯಾನರ್ಜಿ ಪರಸ್ಪರ ಅಪ್ಪಿಕೊಂಡರು ಎಂದು ತಿಳಿಸಿವೆ. ಟಿಎಂಸಿ ಅಧಿಕೃತ ಮೂಲಗಳು ಹೇಳುವಂತೆ ಚರ್ಚೆಯು ಸಕಾರಾತ್ಮಕವಾಗಿತ್ತು. ಅಖಿಲೇಶ್ ಯಾದವ್, ಅಭಿಷೇಕ್ ಬ್ಯಾನರ್ಜಿಗೆ "ನೀವೆಲ್ಲರೂ ಎಂತಹ ಶ್ಲಾಘನೀಯ ಯುದ್ಧ ಮಾಡಿದ್ದೀರಿ" ಎಂದು ಹೇಳಿದ್ದಾರೆ. "ದೀದಿ, ನೀವು ಸೋತಿಲ್ಲ" ಎಂದು ಅಖಿಲೇಶ್ ಯಾದವ್ ಅವರು ಮಮತಾ ಬ್ಯಾನರ್ಜಿಗೆ ಹೇಳಿದ್ದಾರೆ ಎಂದು ವರದಿಯಾಗಿದೆ.