‘ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿದ್ದ ದಿವಂಗತ ಧ್ರುವನಾರಾಯಣ ಅವರ ಪುತ್ರನಿಗೆ ನಂಜನಗೂಡು ಟಿಕೆಟ್‌ ನೀಡುವ ವಿಚಾರವಾಗಿ ಕಾಂಗ್ರೆಸ್‌ ಚುನಾವಣಾ ಸಮಿತಿ ಸಭೆಯಲ್ಲಿ ಚರ್ಚೆಯಾಗಿಲ್ಲ. ಆದರೆ, ನಾನು ದರ್ಶನ್‌ ಧ್ರುವನಾರಾಯಣ ಪರವಾಗಿದ್ದೇನೆ. ಅವರಿಗೆ ಟಿಕೆಟ್‌ ದೊರೆಯಲಿದೆ’ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಬೆಂಗಳೂರು (ಮಾ.19): ‘ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿದ್ದ ದಿವಂಗತ ಧ್ರುವನಾರಾಯಣ ಅವರ ಪುತ್ರನಿಗೆ ನಂಜನಗೂಡು ಟಿಕೆಟ್‌ ನೀಡುವ ವಿಚಾರವಾಗಿ ಕಾಂಗ್ರೆಸ್‌ ಚುನಾವಣಾ ಸಮಿತಿ ಸಭೆಯಲ್ಲಿ ಚರ್ಚೆಯಾಗಿಲ್ಲ. ಆದರೆ, ನಾನು ದರ್ಶನ್‌ ಧ್ರುವನಾರಾಯಣ ಪರವಾಗಿದ್ದೇನೆ. ಅವರಿಗೆ ಟಿಕೆಟ್‌ ದೊರೆಯಲಿದೆ’ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಮಾಜಿ ಸಚಿವ ಡಾ.ಎಚ್‌.ಸಿ. ಮಹದೇವಪ್ಪ ಅವರಿಗೆ ಮಾತನಾಡಿದ್ದೇನೆ. ಅವರು ಖುದ್ದು ದರ್ಶನ್‌ ಅವರನ್ನು ಭೇಟಿಯಾಗಿ ತಾನು ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದಾರೆ. ನಂಜನಗೂಡು ಕ್ಷೇತ್ರದಿಂದ ಟಿಕೆಟ್‌ ಅರ್ಜಿ ಸಲ್ಲಿಸಿದ್ದು ಮಹದೇವಪ್ಪ ಹಾಗೂ ಧ್ರುವನಾರಾಯಣ ಇಬ್ಬರೇ. ಇದೀಗ ಮಹದೇವಪ್ಪ ಅವರು ಸ್ಪರ್ಧಿಸಲ್ಲ ಎಂದು ಹೇಳಿರುವುದರಿಂದ ದರ್ಶನ್‌ ಧ್ರುವನಾರಾಯಣ ಅವರಿಗೆ ಟಿಕೆಟ್‌ ಸಿಗಲಿದೆ. ನಾನು ಅವರ ಪರವಾಗಿದ್ದೆನೆ ಎಂದು ಹೇಳಿದರು.

ಎದುರಾಳಿಗಳಿಗೆ ಟಕ್ಕರ್ ಕೊಟ್ಟ ಮಾಲೂರು ಬಿಜೆಪಿ ಸಂಭಾವ್ಯ ಅಭ್ಯರ್ಥಿ ಹೂಡಿ ವಿಜಯಕುಮಾರ್!

ಅಪೂರ್ಣ ಕಾಮಗಾರಿ ಉದ್ಘಾಟನೆ: ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್‌ ಕಾರಿಡಾರ್‌ನಲ್ಲಿ ನೀರು ತುಂಬಿಕೊಂಡಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ದಶಪಥ ಹೆದ್ದಾರಿಯ ಕಾಮಗಾರಿ ಪೂರ್ತಿ ಆಗಿಲ್ಲ. ಇನ್ನೂ ಶೇ.25 ರಷ್ಟು ಕಾಮಗಾರಿ ಬಾಕಿ ಇರುವಾಗಲೇ ತರಾತುರಿಯಲ್ಲಿ ಪ್ರಚಾರ ಗಿಟ್ಟಿಸಿಕೊಳ್ಳಲು ಮೋದಿಯಿಂದ ಉದ್ಘಾಟನೆ ಮಾಡಿದರು. ಅಪೂರ್ಣ ರಸ್ತೆಗೆ ಟೋಲ್‌ ಸಂಗ್ರಹಿಸುವ ಮೂಲಕ ಜನರನ್ನೂ ಲೂಟಿ ಮಾಡುತ್ತಿದ್ದಾರೆ. ಇದೀಗ ಸಣ್ಣ ಮಳೆಗೂ ನೀರು ನಿಂತು ಅವ್ಯವಸ್ಥೆಯಾಗಿದೆ. ಜನರು ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಎಂದು ಹೇಳಿದರು.

ಹೆದ್ದಾರಿಯ ಕ್ರೆಡಿಟ್‌ ಪಡೆಯಲು ನಾನಾ ನಾಟಕ ಮಾಡಿದರು. ಆಸ್ಕರ್‌ ಫರ್ನಾಂಡೀಸ್‌ ಕೇಂದ್ರ ಸಚಿವರಾಗಿದ್ದಾಗ ರಾಜ್ಯ ಹೆದ್ದಾರಿ ರಾಷ್ಟ್ರೀಯ ಹೆದ್ದಾರಿಯಾಗಿ ಅನುಮೋದನೆಯಾಯಿತು. ನಮ್ಮ ಕಾಲದಲ್ಲಿ ರಾಷ್ಟ್ರೀಯ ಹೆದ್ದಾರಿ ಆಯಿತು. ಆಗ ನಾನು ಮುಖ್ಯಮಂತ್ರಿ ಹಾಗೂ ಮಹದೇವಪ್ಪ ಲೋಕೋಪಯೋಗಿ ಸಚಿವರಾಗಿದ್ದರು. ಇನ್ನು ಎಕ್ಸ್‌ಪ್ರೆಸ್‌ ವೇಗೆ ಭೂ ಸ್ವಾಧೀನ ಮಾಡಿಕೊಂಡಿದ್ದೂ ಸಹ ನಮ್ಮ ಸರ್ಕಾರ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದರು.

ರಾಜ್ಯ ಉಳಿಯಲು ಬಿಜೆಪಿ ಸೋಲಿಸಿ: ಬಿಜೆಪಿ ಅಧಿಕಾರಕ್ಕೆ ಬಂದು ನಾಲ್ಕು ವರ್ಷದಲ್ಲಿ ಲೂಟಿ ಹೊಡೆದದ್ದು ಬಿಟ್ಟರೆ ಬೇರೇನೂ ಮಾಡಿಲ್ಲ. ರಾಜ್ಯ ಉಳಿಯಬೇಕಾದರೆ ಈ ಬಾರಿ ಬಿಜೆಪಿ ಸೋಲಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಪ್ರಣಾಳಿಕೆಯಲ್ಲಿ ಇನ್ನೂ 2 ಗ್ಯಾರಂಟಿ ಕೊಡುತ್ತೇವೆ. ಕಾಂಗ್ರೆಸ್‌ ನುಡಿದಂತೆ ನಡೆದ ಪಕ್ಷ. ನಾವು ಬಿಜೆಪಿ ರೀತಿ ಸುಳ್ಳು ಹೇಳಲ್ಲ. 2013ರ ಚುನಾವಣೆಯಲ್ಲಿ 165 ಭರವಸೆಗಳಲ್ಲಿ 158 ಕಾರ್ಯಕ್ರಮ ಅನುಷ್ಠಾನ ಮಾಡಿದ್ದು, ಇನ್ನೂ 30 ಹೊಸ ಕಾರ್ಯಕ್ರಮ ನೀಡಿದ್ದೇವೆ. ಬಿಜೆಪಿ ಕೊಟ್ಟಭರವಸೆ ಈಡೇರಿಸದೆ ವಚನ ಭ್ರಷ್ಟವಾಗಿದೆ ಎಂದರು.

ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ನಾಲ್ಕು ವರ್ಷಗಳಲ್ಲಿ ಬರೀ ಲೂಟಿ ಹೊಡೆಯುವ ಕೆಲಸ ಮಾಡಿದೆ. ಅವರನ್ನು ಅಲಿಬಾಬಾ ಮತ್ತು ನಲವತ್ತು ಜನ ಕಳ್ಳರು ಎಂದು ಕರೆಯುತ್ತೇನೆ. ಆ ಕಳ್ಳರಲ್ಲಿ ಬಿ.ಸಿ. ಪಾಟೀಲ ಕೂಡ ಒಬ್ಬ. ಚನ್ನಗಿರಿಯ ಶಾಸಕ ಮಾಡಾಳ್‌ ವಿರೂಪಾಕ್ಷಪ್ಪ ಅವರ ಪುತ್ರ ಪ್ರಶಾಂತ್‌ ಲೋಕಾಯುಕ್ತ ದಾಳಿ ಮಾಡಿದಾಗ ಲಂಚ ತೆಗೆದುಕೊಳ್ಳುವಾಗ ಸಿಕ್ಕಿಹಾಕಿಕೊಂಡ. ಅವರ ಮನೆಯಲ್ಲಿ 8 ಕೋಟಿ ಸಿಕ್ಕಿದೆ. ಒಬ್ಬ ಸಚಿವ ಬಿ.ಸಿ. ಪಾಟೀಲ ಮನೆ ಮೇಲೆ ರೈಡ್‌ ಮಾಡಿದರೆ ಎಷ್ಟುಕೋಟಿ ಸಿಗಬಹುದು? ಕನಿಷ್ಠ 1 ಸಾವಿರ ಕೋಟಿ ಸಿಗಬಹುದು. ರೈತರ ಹೆಸರು ಹೇಳಿ ಲೂಟಿ ಹೊಡೆಯೋದೇ ಅವರ ಕೆಲಸ. ಇಂಥವನನ್ನು ನೀವು ಸೋಲಿಸದಿದ್ದರೆ ರಾಜ್ಯ ಮತ್ತು ಹಿರೇಕೆರೂರು ಉಳಿಯಲ್ಲ. ಬಸವರಾಜ ಬೊಮ್ಮಾಯಿ ಮಾತೆತ್ತಿದರೆ ದಾಖಲಾತಿ ಕೊಡಿ ಅಂತಾರೆ. ಅವರದೇ ಪಕ್ಷದ ಶಾಸಕ ರೆಡ್‌ ಹ್ಯಾಂಡ್‌ ಆಗಿ ಸಿಕ್ಕ ಮೇಲೂ ಇವರಿಗೆ ದಾಖಲೆ ಬೇಕಾ? ಮಾನ ಮರ್ಯಾದೆ ಇದ್ದರೆ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದರು.

ಕಾಫಿ ಬೆಳೆಗಾರರ 10 ಹೆಚ್‌ಪಿವರೆಗಿನ ಪಂಪ್ ಸೆಟ್​ಗೆ ಉಚಿತ ವಿದ್ಯುತ್: ಸಿಎಂ ಬೊಮ್ಮಾಯಿ‌ ಘೋಷಣೆ

ನಾನು ಮುಖ್ಯಮಂತ್ರಿ ಆಗಿದ್ದಾಗ ಬಡವರಿಗೆ 5 ಲಕ್ಷ ಮನೆ ಕೊಟ್ಟಿದ್ದೆ. ಬಿಜೆಪಿ ಸರ್ಕಾರ ಒಂದೇ ಒಂದು ಸೂರು ಕೊಟ್ಟಿಲ್ಲ. ಬಡವರಿಗೆ ಸೂರು ಕೊಡಲಾಗದವರು ಅಧಿಕಾರದಲ್ಲಿ ಏಕೆ ಇರಬೇಕು. ಅಭಿವೃದ್ಧಿ ಕೆಲಸ ಮಾಡದೇ ಸುಳ್ಳು ಹೇಳಿಕೊಂಡು ಓಡಾಡುತ್ತಿದ್ದಾರೆ. ನಾನು ಸಿಎಂ ಆಗಿದ್ದಾಗ ಬಡವರಿಗೆ ಉಚಿತವಾಗಿ 7 ಕೆಜಿ ಅಕ್ಕಿ ಕೊಡುತ್ತಿದ್ದೆ. ಇವರು ಅಧಿಕಾರಕ್ಕೆ ಬಂದ ತಕ್ಷಣ 5 ಕೆಜಿಗೆ ಇಳಿಸಿದರು. ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬರುವುದು ನಿಶ್ಚಿತ. ಆಗ ಎಲ್ಲ ಬಿಪಿಎಲ್‌ ಕಾರ್ಡ್‌ದಾರರಿಗೆ ಪ್ರತಿ ತಿಂಗಳು ಪ್ರತಿ ವ್ಯಕ್ತಿಗೆ ಉಚಿತವಾಗಿ ತಲಾ 10 ಕೆಜಿ ಅಕ್ಕಿ ಕೊಡುತ್ತೇವೆ ಎಂದರು.