Kodagu: ಕಾಫಿ ಬೆಳೆಗಾರರ 10 ಹೆಚ್‌ಪಿವರೆಗಿನ ಪಂಪ್ ಸೆಟ್ಗೆ ಉಚಿತ ವಿದ್ಯುತ್: ಸಿಎಂ ಬೊಮ್ಮಾಯಿ ಘೋಷಣೆ
ಚುನಾವಣೆ ಸಮೀಪಿಸುತ್ತಿರುವ ಈ ಸಂದರ್ಭದಲ್ಲಿ ಕೊಡಗಿನಲ್ಲಿ ಫಲಾನುಭವಿಗಳ ಸಮಾವೇಶ ಮತ್ತು ಕೊಡವ ಕೌಟುಂಬಿಕ ಹಾಕಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಿಎಂ ವಿವಿಧ ಯೋಜನೆಗಳು, ಭರವಸೆಗಳನ್ನು ಘೋಷಿಸುವ ಮೂಲಕ ಕೊಡಗಿನ ಜನತೆಯ ಮತ ಬುಟ್ಟಿಗೆ ಕೈಹಾಕುವ ಪ್ರಯತ್ನ ಮಾಡಿದ್ದಾರೆ.
ವರದಿ: ರವಿ.ಎಸ್.ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು
ಕೊಡಗು (ಮಾ.19): ಚುನಾವಣೆ ಸಮೀಪಿಸುತ್ತಿರುವ ಈ ಸಂದರ್ಭದಲ್ಲಿ ಕೊಡಗಿನಲ್ಲಿ ಫಲಾನುಭವಿಗಳ ಸಮಾವೇಶ ಮತ್ತು ಕೊಡವ ಕೌಟುಂಬಿಕ ಹಾಕಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಿಎಂ ವಿವಿಧ ಯೋಜನೆಗಳು, ಭರವಸೆಗಳನ್ನು ಘೋಷಿಸುವ ಮೂಲಕ ಕೊಡಗಿನ ಜನತೆಯ ಮತ ಬುಟ್ಟಿಗೆ ಕೈಹಾಕುವ ಪ್ರಯತ್ನ ಮಾಡಿದ್ದಾರೆ. ರೈತರ ವಿಷಯವನ್ನು ಪ್ರಸ್ತಾಪಿಸಿದ ಸಿಎಂ ಬಸವರಾಜ ಬೊಮ್ಮಾಯಿ ಅವರು ಕೊಡಗಿನ ಕಾಫಿ ಬೆಳೆಗಾರರ ಹಲವು ವರ್ಷಗಳ ಬೇಡಿಕೆಯಾದ 10 ಹೆಚ್‌ಪಿವರೆಗಿನ ಪಂಪ್ ಸೆಟ್‌ಗಳಿಗೆ ಉಚಿತ ವಿದ್ಯುತ್ ನೀಡುವುದಾಗಿ ಘೋಷಿಸಿ ಅವರ ಬೇಡಿಕೆ ಈಡೇರಿಸುವುದಾಗಿ ಹೇಳಿದರು.
ಅಷ್ಟೇ ಅಲ್ಲ ಈ ಹಿಂದೆ 10 ಹೆಚ್ಪಿವರೆಗಿನ ಪಂಪ್ ಸೆಟ್ಗಳ ವಿದ್ಯುತ್ ಬಿಲ್ಲನ್ನು ಕೊಡಗಿನ ರೈತರು ಎಷ್ಟು ಬಾಕಿ ಉಳಿಸಿಕೊಂಡಿದ್ದರೂ ಅದನ್ನು ಮನ್ನಾ ಮಾಡಿ, ಉಚಿತ ವಿದ್ಯುತ್ ನೀಡಲು ಅಧಿಕಾರಿಗಳಿಗೆ ಈಗಾಗಲೇ ಸೂಚಿಸುತ್ತಿದ್ದೇನೆ ಎಂದರು. ಆ ಮೂಲಕ ಕೊಡಗಿನ ಕಾಫಿ ಬೆಳೆಗಾರರ ಮತಗಳನ್ನು ಸೆಳೆಯುವ ಪ್ರಯತ್ನ ನಡೆಸಿದರು. ರೈತನಿಗೆ ಲೈಫ್ ಇನ್ಸುರೆನ್ಸ್ ಇರಲಿಲ್ಲ, ಈ ಬಾರಿ 180 ಕೋಟಿ ಮೀಸಲಿಟ್ಟು ಅವರಿಗಾಗಿ ಜೀವನ ಜ್ಯೋತಿ ಯೋಜನೆ ಆರಂಭಿಸಿದ್ದೇವೆ ಎಂದರು. ಕೊಡಗಿನ ಅಭಿವೃದ್ಧಿಗಾಗಿ ಅದರಲ್ಲೂ ರಸ್ತೆಗಾಗಿ 100 ಕೋಟಿ ರೂಪಾಯಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡಲಾಗಿದೆ ಎಂದರು.
ಬಿಜೆಪಿಯತ್ತ ಮುಖ ಮಾಡಿದ ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ
ಕೊಡವ ಜನಾಂಗಕ್ಕಾಗಿ ಬೆಂಗಳೂರಿನಲ್ಲಿ 7 ಎಕರೆ ಜಾಗವನ್ನು ನೀಡಲಾಗಿದೆ ಎಂದು ಹೇಳುವ ಮೂಲಕ ನೇರವಾಗಿ ಕೊಡವ ಮತಗಳನ್ನು ಸೆಳೆಯುವ ಪ್ರಯತ್ನ ನಡೆಸಿದರು. ಇಷ್ಟೇ ಅಲ್ಲ ಮಡಿಕೇರಿ ತಾಲ್ಲೂಕಿನ ನಾಪೋಕ್ಲಿನ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 23 ನೇ ಕೊಡವ ಕೌಟಂಬಿಕ ಹಾಕಿ ಉತ್ಸವಕ್ಕೆ ಚಾಲನೆ ನೀಡಲು ಬಂದಿದ್ದ ಸಿಎಂ ಬೊಮ್ಮಾಯಿ ಕೊಡವ ಸಾಂಪ್ರಾದಾಯಿಕ ಉಡುಗೆ ಕುಪ್ಪೆಚಾಲೆ ಧರಿಸಿ, ಸೊಂಟಕ್ಕೆ ಪೀಚೆ ಕತ್ತಿ ಸಿಕ್ಕಿಸಿ ವೇದಿಕೆಗೆ ಬರುವ ಮೂಲಕ ನೆರೆದಿದ್ದ ಕೊಡವರು ಅಚ್ಚರಿಗೊಳ್ಳುವಂತೆ ಮಾಡಿದರು.
ಶಾಸಕ ಅಪ್ಪಚ್ಚು ರಂಜನ್ ಮತ್ತು ಕೆ.ಜಿ. ಬೋಪಯ್ಯ ಇಬ್ಬರು ಸಾಮಾನ್ಯ ಉಡುಪು ಧರಿಸಿಯೇ ವೇದಿಕೆ ಬಂದಿದ್ದರೂ, ಬಸವರಾಜ ಬೊಮ್ಮಾಯಿ ಅವರು ಕೊಡವ ಉಡುಗೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು. ಅಷ್ಟೇ ಅಲ್ಲ ಕಾರ್ಯಕ್ರಮ ಉದ್ಘಾಟನೆ ಬಳಿಕ ಮಾತನಾಡಲು ಶುರು ಮಾಡಿದ ಬಸವರಾಜು ಬೊಮ್ಮಾಯಿ ಅವರು ಕೊಡವ ಭಾಷೆಯಲ್ಲಿಯೇ ಭಾಷಣ ಆರಂಭಿಸಿ ನೆರೆದಿದ್ದ ಸಭಿಕರನ್ನು ಮತ್ತಷ್ಟು ಸಂತೋಷ ಪಡಿಸಿದರು. ಆ ಮೂಲಕ ಕೊಡವ ಮತಗಳನ್ನು ಸೆಳೆಯುವ ಪ್ರಯತ್ನ ಮಾಡಿದರು. ಮುಂದುವರಿದ ಮಾತನಾಡಿದವರು ಕೊಡವರು ಹಲವು ವರ್ಷಗಳಿಂದ ಕೊಡವ ಅಭಿವೃದ್ಧಿ ನಿಗಮ ಸ್ಥಾಪನೆ ಬೇಡಿಕೆ ಇದೆ.
ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಅಸಲಿಮುಖ ಮತ್ತೊಮ್ಮೆ ಕಳಚಿ ಬಿದ್ದಿದೆ: ಅನಿತಾ ಕುಮಾರಸ್ವಾಮಿ ಟೀಕೆ
ಆದಷ್ಟು ಶೀಘ್ರವೇ ಕೊಡವ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಲಾಗುವುದು ಎಂದು ಭರವಸೆ ನೀಡಿದರು. ಆಗಂತು ನೆರೆದಿದ್ದ ಕೊಡವರು ಜೋರಾಗಿ ಚಪ್ಪಾಳೆ ತಟ್ಟಿ ಸಂಭ್ರಮಿಸಿದ್ದಂತು ಸತ್ಯ. ಈ ವೇಳೆ ಒಂದುವರೆ ಅಡಿ ಎತ್ತರದ ಬೆಳ್ಳಿ ಹಾಕಿ ಸ್ಟಿಕ್ ನೀಡಿ ಸಿಎಂ ಬೊಮ್ಮಾಯಿ ಅವರನ್ನು ಸನ್ಮಾನಿಸಲಾಯಿತು. ಈ ಎರಡು ಕಾರ್ಯಕ್ರಮದಲ್ಲಿ ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಭಾಗವಹಿಸಿದ್ದರು. ಜೊತೆಗೆ ಸಿಎಂ ಪ್ರವಾಸೋದ್ಯಮವನ್ನು ಪ್ರಸ್ತಾಪಿಸಿ ಅಂತರಾಷ್ಟ್ರೀಯ ಮಟ್ಟದಲ್ಲಿ ಕೊಡಗಿನ ಪ್ರವಾಸೋದ್ಯಮ ದಾಖಲಾಗಿದೆ. ಇದರ ಅಭಿವೃದ್ಧಿ ಉತ್ತೇಜನ ನೀಡುವುದಾಗಿ ಹೇಳಿದರು. ಒಟ್ಟಿನಲ್ಲಿ ಕೊಡಗಿನಲ್ಲಿ ಎಲ್ಲಾ ವಿಭಾಗದ ಜನರಿಗೂ ವಿವಿಧ ಯೋಜನೆಗಳನ್ನು ನೀಡುವುದಾಗಿ ಹೇಳುವ ಮೂಲಕ ಜಿಲ್ಲೆಯ ಜನರ ಮತಗಳಿಗೆ ಗಾಳ ಹಾಕಿದರು.