ಹೂತು ಹಾಕಿರುವ ಸ್ಥಳಗಳಲ್ಲಿ ಸಿಗುವ ಮೃತದೇಹಗಳ ಅವಶೇಷಗಳ ಆಧಾರದ ಮೇಲೆಯೇ ತನಿಖೆ ಆಗಬೇಕು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಬೆಂಗಳೂರು (ಜು.21): ಧರ್ಮಸ್ಥಳ ಗ್ರಾಮದ ಸುತ್ತಮುತ್ತ ನಡೆದಿದ್ದ ಅನುಮಾನಾಸ್ಪದ ಸಾವುಗಳ ತನಿಖೆಗೆ ಎಸ್ಐಟಿ ರಚನೆ ಆಗಬೇಕು ಎಂಬ ಒತ್ತಾಯದ ಹಿನ್ನೆಲೆಯಲ್ಲಿ ಇದೀಗ ಸರ್ಕಾರ ಎಸ್‌ಐಟಿ ರಚಿಸಿದ್ದು, ಹೂತು ಹಾಕಿರುವ ಸ್ಥಳಗಳಲ್ಲಿ ಸಿಗುವ ಮೃತದೇಹಗಳ ಅವಶೇಷಗಳ ಆಧಾರದ ಮೇಲೆಯೇ ತನಿಖೆ ಆಗಬೇಕು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ನೂರಾರು ಹತ್ಯೆ ಆಗಿದ್ದರೆ ಅದು ಬಹಳ ದೊಡ್ಡ ವಿಷಯ ಆಗುತ್ತದೆ. ಹೀಗಾಗಿಯೇ ತನಿಖೆಗೆ ಆದೇಶಿಸಿದ್ದು, ತನಿಖೆಗೆ ಮೊದಲೇ ಯಾರೋ ಒಬ್ಬರ ತೇಜೋವಧೆ ಮಾಡುವುದು, ಕೆಟ್ಟ ಹೆಸರು ತರುವ ಕೆಲಸ ಮಾಡಬಾರದು. ಎಲ್ಲವೂ ತನಿಖೆ ಮೂಲಕ ಗೊತ್ತಾಗಲಿದ್ದು, ಇದರ ಹಿಂದೆ ಯಾರೇ ಇದ್ದರೂ ಸರ್ಕಾರ ಕ್ರಮ ತೆಗೆದುಕೊಳ್ಳಲಿದೆ ಎಂದು ಭರವಸೆ ನೀಡಿದರು.
ಯಾರೋ ಒಬ್ಬರ ತೇಜೋವಧೆ ಸರಿಯಲ್ಲ: ಸುದ್ದಿಗಾರರೊಂದಿಗೆ ಭಾನುವಾರ ಮಾತನಾಡಿ, ದಕ್ಷಿಣ ಕನ್ನಡ ಪೊಲೀಸರು ಈ ಬಗ್ಗೆ ಈಗಾಗಲೇ ತನಿಖೆ ನಡೆಸುತ್ತಿದ್ದರು. ಆದರೆ ಈ ಅನುಮಾನಾಸ್ಪದ ಸಾವುಗಳ ತನಿಖೆಗೆ ಎಸ್ಐಟಿ ರಚನೆ ಆಗಬೇಕು ಎಂಬ ಒತ್ತಡಗಳು ಇದ್ದವು. ಹೀಗಾಗಿ ಎಸ್‌ಐಟಿ ರಚನೆಯಾಗಿದೆ ಎಂದು ಹೇಳಿದರು.
ಬಿಜೆಪಿ ಪರ ಸಂಘಟನೆಗಳ ಒತ್ತಡ ಇತ್ತು: ಹೂತು ಹಾಕಿರುವ ಸ್ಥಳದಲ್ಲಿ ಸಿಗುವ ಮೃತ ದೇಹಗಳ ಅವಶೇಷಗಳ ಆಧಾರದ ಮೇಲೆ ತನಿಖೆ ಆಗಬೇಕು. ಒಂದು, ಎರಡಲ್ಲ ನೂರಾರು ಜನ ಸತ್ತಿದ್ದಾರೆ ಎಂಬ ಬಗ್ಗೆ ಆರೋಪಗಳಿವೆ. ಈ ಬಗ್ಗೆ ತನಿಖೆಯಾಗಬೇಕಿದೆ. ಇದಕ್ಕೆ ಬಿಜೆಪಿ ಪರ ಇರುವ ಸಂಘಟನೆಗಳ ಒತ್ತಾಯದ ಮೇರೆಗೆ ಎಸ್‌ಐಟಿ ರಚನೆ ಆಗಿದೆ. ಕೆಲವರು ಸ್ವಾರ್ಥಕ್ಕಾಗಿ ಸಾಮಾಜಿಕ ಜಾಲತಾಣಗಳಲ್ಲಿ ತೋಚಿದಂತೆ ಸುದ್ದಿ ಮಾಡುತ್ತಿದ್ದಾರೆ. ಇದೆಲ್ಲದಕ್ಕೂ ತನಿಖಾ ವರದಿ ಬಂದ ಬಳಿಕವಷ್ಟೇ ಉತ್ತರ ಸಿಗಲಿದೆ ಎಂದು ದಿನೇಶ್ ಗುಂಡೂರಾವ್ ಹೇಳಿದರು.
