Dharwad Constituency Results 2023: ಸೋಲು ಮರೆತು, ಲೋಕಸಭೆ ಚುನಾವಣೆಗೆ ಶೆಟ್ಟರ್ ತಯಾರಿ?
ಬಿಜೆಪಿ ಟಿಕೆಟ್ ನಿರಾಕರಣೆಯಿಂದ ಸ್ವಾಭಿಮಾನಕ್ಕೆ ಪೆಟ್ಟುಬಿದ್ದು ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದು ತಮ್ಮ ಅನುಗಾಲದ ಶಿಷ್ಯನ ವಿರುದ್ಧವೇ ಸೋಲುಂಡಿರುವ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಮುಂದಿನ ರಾಜಕೀಯ ನಡೆ ಏನು?
ಮಲ್ಲಿಕಾರ್ಜುನ ಸಿದ್ದಣ್ಣವರ
ಹುಬ್ಬಳ್ಳಿ (ಮೇ.14): ಬಿಜೆಪಿ ಟಿಕೆಟ್ ನಿರಾಕರಣೆಯಿಂದ ಸ್ವಾಭಿಮಾನಕ್ಕೆ ಪೆಟ್ಟುಬಿದ್ದು ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದು ತಮ್ಮ ಅನುಗಾಲದ ಶಿಷ್ಯನ ವಿರುದ್ಧವೇ ಸೋಲುಂಡಿರುವ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಮುಂದಿನ ರಾಜಕೀಯ ನಡೆ ಏನು? ಶೆಟ್ಟರ್ ರಾಜಕೀಯ ನಿವೃತ್ತಿ ಘೋಷಿಸುತ್ತಾರಾ? ಕಾಂಗ್ರೆಸ್ ಇವರನ್ನು ಮೇಲ್ಮನೆಗೆ ನೇಮಕ ಮಾಡುತ್ತಾ? 2024ರ ಲೋಕಸಭೆ ಚುನಾವಣೆಯಲ್ಲಿ ಧಾರವಾಡ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿಯಾಗುತ್ತಾರಾ? ಬಿಜೆಪಿ ಮುಂದಿನ ಭವಿಷ್ಯದ ದೃಷ್ಟಿಯಿಂದ ವರಿಷ್ಟರೇ ಮುಂದಾಗಿ ಶೆಟ್ಟರ್ ಅವರನ್ನು ಪಕ್ಷಕ್ಕೆ ವಾಪಸ್ ಸೇರಿಸಿಕೊಳ್ಳುತ್ತಾರಾ? ವಿಧಾನಸಭೆಯ ಫಲಿತಾಂಶದ ಬೆನ್ನಲ್ಲೇ ಇಂಥ ಪ್ರಶ್ನೆಗಳು ಹು-ಧಾ ಸೆಂಟ್ರಲ್ ಕ್ಷೇತ್ರ ಅಷ್ಟೇ ಅಲ್ಲ.
ರಾಜ್ಯಾದ್ಯಂತ ಬಿಜೆಪಿ ಮತ್ತು ಕಾಂಗ್ರೆಸ್ ವಲಯದಲ್ಲಿ ಕೇಳಿಬರುತ್ತಿವೆ. ತಮ್ಮ ಸೋಲನ್ನು ಅಷ್ಟೇ ಸಹಜ ಎಂಬಂತೆ ಸ್ವೀಕರಿಸಿರುವ ಶೆಟ್ಟರ್ ‘ನನಗೀಗ 67, 70ನೇ ವಯಸ್ಸಿಗೆ ಚುನಾವಣಾ ರಾಜಕೀಯದಿಂದ ನಿವೃತ್ತನಾಗುತ್ತೇನೆ. ಅಲ್ಲೀಯವರೆಗೆ ರಾಜಕೀಯವಾಗಿ ಮೊಲಿಗಿಂತಲೂ ಸಕ್ರೀಯನಾಗಿ ಇರುತ್ತೇನೆ ಮತ್ತು ಕಾಂಗ್ರೆಸ್ ಪಕ್ಷದ ಸಂಘಟನೆಯಲ್ಲಿ ತೊಡಗಿಕೊಳ್ಳುತ್ತೇನೆ’ ಎಂದು ಮಾಧ್ಯಮಗಳಿಗೆ ಪ್ರತಿಕ್ರೀಯಿಸಿದ್ದಾರೆ. ಈ ಹೇಳಿಕೆ ಇನ್ನಷ್ಟು ಚರ್ಚೆಗೆ ಕಾರಣವಾಗಿದೆ. ‘ವಿಧಾನಸಭೆ ಚುನಾವಣೆ ನನಗೆ ಸೆಮಿಪೈನಲ್, 2024ರ ಲೋಕಸಭೆ ಚುನಾವಣೆ ಫೈನಲ್’ ಎಂದು ಹಿಂದೆ ಅವರೇ ಹೇಳಿದಂತೆ ಮುಂದಿನ ಲೋಕಸಭೆಗೆ ತಯಾರಾಗುತ್ತಾರಾ? ಇದನ್ನು ಶೆಟ್ಟರೇ ಸ್ಪಷ್ಟಪಡಿಸಬೇಕಿದೆ. ಇಲ್ಲವೇ ಕಾಂಗ್ರೆಸ್ ಪ್ರತಿಕ್ರೀಯಿಸಬೇಕಿದೆ. ಮೂರೂವರೆ ದಶಕಗಳ ಕಾಲ ಸಕ್ರೀಯ ರಾಜಕೀಯದಲ್ಲಿ ಇರುವ ಶೆಟ್ಟರ್ ಈಗ ಇದ್ದಕ್ಕಿದ್ದಂತೆ ಮೂಲೆ ಹಿಡಿದು ಕುಡ್ರೂವ ಜಾಯಮಾನವಲ್ಲ.
Koratagere Election Result 2023: ಜನರ ಆಶೀರ್ವಾದ ಗೆಲುವಿಗೆ ಕಾರಣ: ಡಾ.ಜಿ.ಪರಮೇಶ್ವರ್
ಡಿಸಿಸಿ ಯಜಮಾನ: ನಾಯಕತ್ವದ ಕೊರತೆಯಿಂದ ಬಳಲುತ್ತಿರುವ ಧಾರವಾಡ ಜಿಲ್ಲಾ ಕಾಂಗ್ರೆಸ್ಸಿಗೆ ಈಗ ಶೆಟ್ಟರೇ ಯಜಮಾನ ಎನ್ನುವುದು ನಿರ್ವಿವಾದ. ಸಮಾನ ವಯಸ್ಕರಿರುವ ಕಾಂಗ್ರೆಸ್ಸಿಗರು ಶೆಟ್ಟರ್ ಹಿರಿತನಕ್ಕೆ ಗೌರವ ಕೊಟ್ಟು ನಡೆದುಕೊಳ್ಳುತ್ತಿದ್ದಾರೆ. ಸಚಿವ ಸ್ಥಾನದಲ್ಲಿ ಮುಂದುವರೆಯುವ ಇರಾದೆಯಿಂದ ಒಲ್ಲದ ಮನಸ್ಸಿನಿಂದ ಕಳೆದ ಬಾರಿ ಲೋಕಸಭೆಗೆ ಸ್ಪರ್ಧಿಸಿದ್ದ ವಿನಯ ಕುಲಕರ್ಣಿ ಸೋಲುಂಡರು. ಕೋರ್ಚ್ ಅಲೆದಾಟದಿಂದ ಹೈರಾಣಾಗಿರುವ ಅವರು ಈಗ ಮತ್ತೆ ಲೋಕಸಭೆಗೆ ಒಪ್ಪುವುದು ಕಷ್ಟ. ಮೇಲಾಗಿ ಧಾರವಾಡ ಜಿಲ್ಲಾ ಕಾಂಗ್ರೆಸ್ಸಿನಲ್ಲಿ ಪ್ರಬಲ ಲಿಂಗಾಯತ ನಾಯಕರ ಕೊರತೆಯನ್ನು ಶೆಟ್ಟರ್ ತುಂಬಿದ್ದಾರೆ. ಹಾಗಾಗಿ 2024ರ ಲೋಕಸಭೆಗೆ ಧಾರವಾಡ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿ ಶೆಟ್ಟರೇ ಎನ್ನುವ ಮಾತುಗಳು ಕಳೆದ ಒಂದು ವಾರದಿಂದ ಕಾಂಗ್ರೆಸ್ ವಲಯದಲ್ಲಿ ಕೇಳಿ ಬರುತ್ತಿವೆ.
ಬಿಜೆಪಿಗೆ ವಾಪಸ್?: ಶೆಟ್ಟರಿಗೂ ಬಿಜೆಪಿಗೂ ಮೂರೂವರೆ ದಶಕಗಳ ನಂಟು. ರಾಜ್ಯದಲ್ಲಿ ಬಿಜೆಪಿ ಕಟ್ಟಿಬೆಳೆಸಿದವರಲ್ಲಿ ಶೆಟ್ಟರ್ ಪ್ರಮುಖರು. ಅದೇ ಕಾಲಕ್ಕೆ ಬಿಜೆಪಿ ಇವರನ್ನು ಶಾಸಕ, ಮಂತ್ರಿ, ಮುಖ್ಯಮಂತ್ರಿ. ರಾಜ್ಯಾಧ್ಯಕ್ಷ, ಸ್ಪೀಕರ್ ಹುದ್ದೆಗಳನ್ನು ನೀಡಿ ಗೌರವಿಸಿದೆ. ಈಗ ಟಿಕೆಟ್ ಕಾರಣಕ್ಕೆ ಮುನಿಸಿಕೊಂಡು ಬಿಜೆಪಿ ಬಿಟ್ಟಿರುವ ಶೆಟ್ಟರ್ ಗೆಲುವು ಸಾಧಿಸಿದ್ದರೆ ಶಾಶ್ವತವಾಗಿ ಬಜೆಪಿಯಿಂದ ದೂರವಾಗುತ್ತಿದ್ದರು. ಆದರೆ, ಸೋತಿದ್ದಾರೆ. ಈ ಚುನಾವಣೆಯಲ್ಲಿನ ಸೋಲಿನಿಂದಾಗಿ ಪಕ್ಷಕ್ಕೆ ಆಗಿರುವ ಹಾನಿ ಮತ್ತು ಲಿಂಗಾಯತರ ಮುನಿಸು ತಣಿಸಲು ಶೆಟ್ಟರ್ ಅಗತ್ಯತೆ ಬಿಜೆಪಿಗಿದೆ. ಹಾಗಾಗಿ ಮುನಿಸು ಮರೆತು ವಾಪಸ್ ಬನ್ನಿ ಎಂದು ಬಿಜೆಪಿ ವರೀಷ್ಟರೇ ಮುಂದಾಗಿ ಇವರಿಗೆ ಆಹ್ವಾನ ನೀಡಬಹುದು ಎನ್ನುವ ಮಾತುಗಳೂ ಕೇಳಿಬರುತ್ತಿವೆ.
Chikkamagaluru Election Results 2023: ಸಿ.ಟಿ.ರವಿ ಸೋಲಿಗೆ ಅವರ ನಾಲಿಗೆಯೇ ಕಾರಣ: ಎಸ್.ಎಲ್.ಭೋಜೇಗೌಡ
ಯಾಕೆಂದರೆ ಕೆಜೆಪಿ, ಬಿಎಸ್‌ಆರ್ ಕಟ್ಟಿದ್ದ ಬಿಎಸ್‌ವೈ, ಶ್ರೀರಾಮುಲು ವಾಪಸ್ ಬಿಜೆಪಿಗೆ ಬಂದ ನಿದರ್ಶನಗಳಿವೆ. ಶೆಟ್ಟರ್ ವಿಷಯದಲ್ಲಿ ಹೀಗೂ ಆಗುವ ಸಾಧ್ಯತೆಗಳಿವೆ. ಸತತ ಆರುಬಾರಿ ಗೆದ್ದಿರುವ ಶೆಟ್ಟರ್ ಗೌರವಯುತ ನಿವೃತ್ತಿ ಬಯಸಿದದಾಗಿ ಹಲವು ಬಾರಿ ಹೇಳಿದ್ದಾರೆ. ಲೋಕಸಭೆಗೆ ಸ್ಪರ್ಧಿಸಿ, ಗೆಲುವು ಸಾಧಿಸಿದ ಬಳಿಕ ನಿವೃತ್ತಿ ಹೊಂದುತ್ತಾರಾ? ಬಹುಮತದಿಂದ ಸರ್ಕಾರ ರಚಿಸುತ್ತಿರುವ ಕಾಂಗ್ರೆಸ್ ಮೇಲ್ಮನೆಗೆ ನೇಮಕ ಮಾಡುವ ಮೂಲಕ ಇಂಥದೊಂದು ಗೌರವದ ನಿವೃತ್ತಿಗೆ ಅನುಕೂಲ ಮಾಡುತ್ತಾ? ಕಾದುನೊಡಬೇಕಿದೆ.