Koratagere Election Result 2023: ಜನರ ಆಶೀರ್ವಾದ ಗೆಲುವಿಗೆ ಕಾರಣ: ಡಾ.ಜಿ.ಪರಮೇಶ್ವರ್
ನನ್ನ ಗೆಲುವಿಗೆ ಕೊರಟಗೆರೆ ಮತದಾರರ ಆಶೀರ್ವಾದ ಕಾರಣವಾಗಿದ್ದು, ವಿಶೇಷವಾಗಿ ತಾಯಂದಿರು ನನಗೆ ಹೆಚ್ಚಿನ ಮತ ನೀಡಿದ್ದಾರೆ. ಕಾರ್ಯಕರ್ತರು ಮತ್ತು ಮುಖಂಡರ ಶ್ರಮ ನನ್ನ ಗೆಲುವಿಗೆ ಮುಖ್ಯ ಕಾರಣ ಎಂದು ನೂತನ ಶಾಸಕ ಡಾ.ಜಿ.ಪರಮೇಶ್ವರ ತಿಳಿಸಿದರು.
ಕೊರಟಗೆರೆ (ಮೇ.14): ನನ್ನ ಗೆಲುವಿಗೆ ಕೊರಟಗೆರೆ ಮತದಾರರ ಆಶೀರ್ವಾದ ಕಾರಣವಾಗಿದ್ದು, ವಿಶೇಷವಾಗಿ ತಾಯಂದಿರು ನನಗೆ ಹೆಚ್ಚಿನ ಮತ ನೀಡಿದ್ದಾರೆ. ಕಾರ್ಯಕರ್ತರು ಮತ್ತು ಮುಖಂಡರ ಶ್ರಮ ನನ್ನ ಗೆಲುವಿಗೆ ಮುಖ್ಯ ಕಾರಣ ಎಂದು ನೂತನ ಶಾಸಕ ಡಾ.ಜಿ.ಪರಮೇಶ್ವರ ತಿಳಿಸಿದರು. ಪಟ್ಟಣದ ರಾಜೀವ ಭವನದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ. ಕೊರಟಗೆರೆ ಕ್ಷೇತ್ರದ ಪ್ರತೀ ಹಳ್ಳಿಗಳಲ್ಲೂ ರಾಜ್ಯದ ಬದಲಾವಣೆಗೆ ಕೊರಟಗೆರೆ ಕ್ಷೇತ್ರದಲ್ಲೂ ಸಹ ನನಗೆ ಮತ ನೀಡುವಂತೆ ಕೇಳಿಕೊಂಡಿದ್ದೆ ಅದಕ್ಕೆ ನಮ್ಮ ಮತದಾರರು ಸ್ಪಂದಿಸಿ ಮತ ನೀಡಿದ್ದಾರೆ. ಇದೇ ವಾತಾವರಣ ತುಮಕೂರು ಜಿಲ್ಲೆ ಮತ್ತು ರಾಜ್ಯದಲ್ಲೂ ಹರಡಿ ಕಾಂಗ್ರೆಸ್ ಪಕ್ಷವು ಸ್ಪಷ್ಟಬಹುಮತದಲ್ಲಿ ಬಹುದೊಡ್ಡ ಪಕ್ಷವಾಗಿ ಅಧಿಕಾರಕ್ಕೆ ಬಂದಿದೆ.
ನಾವು ಮತದಾರರ ನಂಬಿಕೆಯನ್ನು ಉಳಿಸಿಕೊಳ್ಳುವ ಕೆಲಸವನ್ನು ಮಾಡುತ್ತೇವೆ ಈ ಬಾರಿಯ ಕಾಂಗ್ರೆಸ್ ಪಕ್ಷದ ಭರವಸೆಗಳು ದೊಡ್ಡಮಟ್ಟದಲ್ಲಿದ್ದು ಅವುಗಳನ್ನು ಜನರಿಗೆ ತಲುಪಿಸಲು ಒಂದು ಅಯವ್ಯಯವನ್ನು ಮಾಡಲಾಗುವುದು, ಕೊಟ್ಟಭರವಸೆಯನ್ನು ಈಡೇರಿಸಲಾಗುವುದು. ಕಾಂಗ್ರೆಸ್ ಪಕ್ಷದ ಈ ಗೆಲುವು ರಾಜ್ಯದ ಮತದಾರರ ಗೆಲುವಾಗಿದೆ ಎಂದರು. ಈ ಚುನಾವಣೆಯಲ್ಲಿ ರಾಜ್ಯದ ಜನರು ಬಿಜೆಪಿ ದುರಾಡಳಿತದ ಬಗ್ಗೆ ಬೇಸತ್ತಿದ್ದರು. ಕಾಂಗ್ರೆಸ್ ಪಕ್ಷವು ಬಹುತೇಕ ಉತ್ತಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಎಲ್ಲದಕ್ಕಿಂತ ಹೆಚ್ಚಾಗಿ ರಾಜ್ಯದ ಜನತೆ ಕಾಂಗ್ರೆಸ್ ಪಕ್ಷದ ಪರವಾಗಿ ನಿಂತದ್ದು ಪಕ್ಷ ಅಧಿಕಾರಕ್ಕೆ ಬರಲು ಕಾರಣವಾಯಿತು. ಈ ಚುನಾವಣೆಯಲ್ಲಿ ನನ್ನ ವಿರುದ್ಧ ಮಾತನಾಡಿದವರಿಗೆ ಕ್ಷೇತ್ರದ ಜನತೆ ತಕ್ಕ ಉತ್ತರ ನೀಡಿದ್ದಾರೆ. ಇನ್ನು ಕೊರಟಗೆರೆಯನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವುದು ನನ್ನ ಗುರಿಯಾಗಿದೆ ಎಂದರು.
ಹೈಕಮಾಂಡ್ ನನಗೆ ಸಿಎಂ ಸ್ಥಾನ ನೀಡಿದರೆ ತಿರಸ್ಕರಿಸಲಾರೆ: ಡಾ.ಜಿ.ಪರಮೇಶ್ವರ್
ಮುಖ್ಯಮಂತ್ರಿ ಹೈಕಮಾಂಡ್ ನಿರ್ಧಾರ: ಕಾಂಗ್ರೆಸ್ ಪಕ್ಷದಲ್ಲಿ ಸಾಕಷ್ಟುಮಂದಿ ಮುಖ್ಯಮಂತ್ರಿ ಆಕಾಂಕ್ಷಿಗಳು ಮತ್ತು ಅರ್ಹತೆಯುಳ್ಳವರು ಇದ್ದಾರೆ. ಆದರೆ ಮುಖ್ಯಮಂತ್ರಿ ಆಯ್ಕೆ ಒಂದು ಮಾರ್ಗಸೂಚಿಯ ಮೇರೆ ನಡೆಯಲಿದ್ದು ಸಿ.ಎಲ್.ಪಿ. ಸಭೆ ಮತ್ತು ವರಿಷ್ಠರ ತೀರ್ಮಾನದ ಮೇಲೆ ಮುಖ್ಯಮಂತ್ರಿಯನ್ನು ಆಯ್ಕೆ ಮಾಡಲಾಗುತ್ತದೆ ಎಂದರು.
ಸುಧಾಕರ್‌ಲಾಲ್ ವಿರುದ್ಧ 14,347 ಮತಗಳ ಅಂತರದಲ್ಲಿ ಗೆಲುವು: ಕಾಂಗ್ರೆಸ್‌ನ ಡಾ. ಜಿ. ಪರಮೇಶ್ವರ್ ಅವರು ಸತತ ಎರಡನೇ ಬಾರಿ ಕೊರಟಗೆರೆ ವಿಧಾನಸಭಾ ಕ್ಷೇತ್ರದಿಂದ ಜಯಸಾಧಿಸಿದ್ದಾರೆ. 79099 ಮತಗಳನ್ನು ಗಳಿಸಿದ ಪರಮೇಶ್ವರ್ ಜೆಡಿಎಸ್ ಅಭ್ಯರ್ಥಿ ಪಿ.ಆರ್.ಸುಧಾಕರ್‌ಲಾಲ್ ವಿರುದ್ಧ 14,347 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ.
ಜೆಡಿಎಸ್ ಅಭ್ಯರ್ಥಿ ಪಿ.ಆರ್.ಸುಧಾಕರ್‌ಲಾಲ್ ವಿರುದ್ಧ 64752, ಬಿಜೆಪಿಯ ಬಿ.ಹೆಚ್. ಅನಿಲ್ ಕುಮಾರ್ 24091, ಆಮ್ ಆದ್ಮಿ ಪಕ್ಷದ ಡಿ.ಹನುಮಂತರಾಯಪ್ಪ 1233, ಬಹುಜನ ಸಮಾಜ ಪಕ್ಷದ ಎಸ್.ಜಿ. ಮಂಜುನಾಥ 1011, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರವಿಕುಮಾರ್ ಕೆ.ಸಿ. 344, ಉತ್ತಮ ಪ್ರಜಾಕೀಯ ಪಕ್ಷದ ನಾಗೇಂದ್ರ ಟಿ.ಎನ್. 850, ವೆಲ್‌ಫೇರ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ಹನುಮಯ್ಯ ಎನ್. 140, ಪಕ್ಷೇತರರಾದ ಮುನಿಯಪ್ಪ ಕೆ.ಎಂ. 1159, ಬಿ.ಎನ್. ವಿಜಯಲಕ್ಷ್ಮಿ 254, ವಿ.ಶಾಂತಕುಮಾರ್ 230, ಹನುಮಂತರಾಯಪ್ಪ 655 ಮತಗಳನ್ನು ಪಡೆದಿದ್ದಾರೆ.
ಜೆಡಿಎಸ್‌ನ ಸುಧಾಕರಲಾಲ್ ಕ್ಷೇತ್ರದಲ್ಲಿ ಚಿರಪರಿಚಿತರು ಹಾಗೂ 3 ಬಾರಿ ಜಿ.ಪಂ. ಸದಸ್ಯರು ಒಮ್ಮೆ ಶಾಸಕರಾಗಿ ಕೆಲಸ ನಿರ್ವಹಿಸಿದ್ದರೂ ಅದ್ಯಾಕೋ ಈ ಬಾರಿಯೂ ಅವರು ಸೋಲನ್ನು ಅನುಭವಿಸುವಂತಾಯಿತು. ಇನ್ನು ಬಿಜೆಪಿಯಿಂದ ನಿವೃತ್ತ ಐಎಎಸ್ ಅಧಿಕಾರಿ ಅನಿಲ್ ಕುಮಾರ್ ಸಾಕಷ್ಟುಮತ ಪಡೆಯುತ್ತಾರೆಂಬ ನಿರೀಕ್ಷೆ ಹುಸಿಯಾಯಿತು. ಆರಂಭದಿಂದಲೂ ಪರಮೇಶ್ವರ್ ಮುನ್ನಡೆ ಕಾಯ್ದುಕೊಂಡು ಅಂತಿಮವಾಗಿ ಗೆಲುವಿನ ದಡ ಮುಟ್ಟಿದರು.
130 ಕ್ಕೂ ಹೆಚ್ಚು ಸ್ಥಾನ ಕಾಂಗ್ರೆಸ್‌ಗೆ ಬರಲಿದೆ : ಡಾ. ಜಿ. ಪರಮೇಶ್ವರ್
ಕೊರಟಗೆರೆ ಮೀಸಲು ಕ್ಷೇತ್ರ ಬಹಳ ವಿಶಿಷ್ಟವಾದ ಕ್ಷೇತ್ರವಾಗಿದೆ. ಎಲ್ಲಾ ಸಮುದಾಯವರನ್ನು ಒಳಗೊಂಡ ಕ್ಷೇತ್ರ ಇದಾಗಿದ್ದು ಕ್ಷೇತ್ರ ಪುನರ್ ವಿಂಗಡಣೆಯಾದ ಬಳಿಕ ಮಧುಗಿರಿ ಮೀಸಲು ಕ್ಷೇತ್ರದ ಬದಲಿಗೆ ಕೊರಟಗೆರೆ ಮೀಸಲು ಕ್ಷೇತ್ರವಾಗಿ ರೂಪುಗೊಂಡಿತು. ಕಳೆದ ಬಾರಿ ಡಿಸಿಎಂ ಆಗಿದ್ದ ಪರಮೇಶ್ವರ್ ನೀರಾವರಿ ಸೇರಿದಂತೆ, ರಸ್ತೆ, ಮೂಲ ಸೌಕರ್ಯ ಹೀಗೆ ಎಲ್ಲಾ ಯೋಜನೆಗಳನ್ನು ದೊಡ್ಡ ಮಟ್ಟದಲ್ಲಿ ಕೊರಟಗೆರೆಗೆ ತಂದಿದ್ದರು.
ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಮೊದಲಿನಿಂದಲೂ ಕ್ಷೇತ್ರದಲ್ಲೇ ಸುತ್ತುತ್ತಿದ್ದರು. ಇದು ಕೂಡ ಪರಮೇಶ್ವರ್ ಅವರು ಸುಲಭವಾಗಿ ಸಾಮಾನ್ಯರ ಜನರ ಕೈಗೆ ಸಿಗುತ್ತಾರೆಂಬ ಮಾತು ಕ್ಷೇತ್ರದ ತುಂಬಾ ಓಡಾಡುತ್ತಿತ್ತು. ಅಂತಿಮವಾಗಿ ಆರಂಭದಿಂದಲೂ ಮುನ್ನಡೆ ಕಾಯ್ದುಕೊಂಡ ಪರಮೇಶ್ವರ್ ಗೆಲುವಿನ ದಡ ಮುಟ್ಟುವ ಮೂಲಕ 6ನೇ ಬಾರಿಗೆ ವಿಧಾನಸಭೆ ಪ್ರವೇಶಿಸುವಂತಾಯಿತು.