ಚುನಾವಣೆ ಘೋಷಣೆಯಾದಾಗಿನಿಂದ ಚಾಮರಾಜನಗರಕ್ಕೆ ಬಾರದ ಉಸ್ತುವಾರಿ ಸಚಿವ ವೆಂಕಟೇಶ್!
ಲೋಕಸಭಾ ಚುನಾವಣೆ ವೇಳೆ ಆ ಗ್ರಾಮದ ಜನರು ರೊಚ್ಚಿಗೆದ್ದು ಮತಯಂತ್ರ ಧ್ವಂಸಗೊಳಿಸಿದ್ದಲ್ಲದೇ ಪೊಲೀಸರು ಹಾಗೂ ಮತಗಟ್ಟೆ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದರು.
ವರದಿ: ಪುಟ್ಟರಾಜು.ಆರ್.ಸಿ, ಏಷಿಯಾನೆಟ್ ಸುವರ್ಣ ನ್ಯೂಸ್, ಚಾಮರಾಜನಗರ.
ಚಾಮರಾಜನಗರ (ಮೇ.17): ಲೋಕಸಭಾ ಚುನಾವಣೆ ವೇಳೆ ಆ ಗ್ರಾಮದ ಜನರು ರೊಚ್ಚಿಗೆದ್ದು ಮತಯಂತ್ರ ಧ್ವಂಸಗೊಳಿಸಿದ್ದಲ್ಲದೇ ಪೊಲೀಸರು ಹಾಗೂ ಮತಗಟ್ಟೆ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದರು. ನಂತರ ಅವರ ಬದುಕು ಮೂರಾಬಟ್ಟೆಯಾಗಿದ್ದು, ಬಂಧನ ಭೀತಿಯಿಂದ ಗ್ರಾಮ ತೊರೆದಿದ್ದಾರೆ. ಇಷ್ಟೆಲ್ಲಾ ಆದರೂ ಉಸ್ತುವಾರಿ ಸಚಿವರು ಭೇಟಿ ಕೊಟ್ಟು ಜನರ ಸಮಸ್ಯೆ ಆಲಿಸಿಲ್ಲ ಅಂತಾ ಆಕ್ರೋಶ ವ್ಯಕ್ತವಾಗಿದೆ. ಈ ಕುರಿತು ಒಂದು ಸ್ಟೋರಿ ಇಲ್ಲಿದೆ ನೋಡಿ..
ಹೌದು ಏ 26 ರಂದು ನಡೆದ ಲೋಕಸಭಾ ಚುನಾವಣೆ ವೇಳೆ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದ ಕಾಡಂಚಿನ ಗ್ರಾಮವಾದ ಇಂಡಿಗನತ್ತ ಗ್ರಾಮಸ್ಥರು ಮೂಲಭೂತ ಸೌಕರ್ಯ ಸಿಕ್ಕಿಲ್ಲವೆಂದು ಚುನಾವಣೆ ಬಹಿಷ್ಕರಿಸಿದರು. ಅಧಿಕಾರಿಗಳ ಮನವೊಲಿಕೆ ನಡುವೆ ಹೈಡ್ರಾಮಾ ನಡೆದು ಮತಪೆಟ್ಟಿಗೆ ಧ್ವಂಸ ಮಾಡಿದ್ದರು. ನಂತರ ಗ್ರಾಮದ 200 ಕ್ಕೂ ಹೆಚ್ಚು ಮಂದಿ ವಿರುದ್ಧ ಪ್ರಕರಣ ದಾಖಲಾಗಿ ಊರು ತೊರೆದಿದ್ದರು. ಇದರಿಂದ ಗ್ರಾಮದಲ್ಲಿ ಸಾಕಷ್ಟು ಅನಾಹುತ ಸಂಭವಿಸಿದೆ.ನೀರು, ಮೇವಿಲ್ಲದೇ ಎಮ್ಮೆ,ದನಕರು ಕೂಡ ಸಾವನ್ನಪ್ಪಿದ ನಿದರ್ಶನವಿದೆ.
ನಂತರ ಜಿಲ್ಲಾಡಳಿತದಿಂದ ಮೇವು, ನೀರು ಪೂರೈಸುವ ಕೆಲಸವಾಗಿದೆ. ಉಸ್ತುವಾರಿ ಸಚಿವ ಕೆ ವೆಂಕಟೇಶ್ ಯಾಕೆ ಬಂದಿಲ್ಲ ಅಂತಾ ಪ್ರಶ್ನಿಸುತ್ತಿದ್ದಾರೆ. ಬರೀ ಇಂಡಿಗನತ್ತ ಗ್ರಾಮದ ಪ್ರಕರಣ ಅಷ್ಟೇ ಅಲ್ಲ,ಜಿಲ್ಲೆಯ ಹಲವು ಕಡೆ ಕೆರೆ ಕಟ್ಟೆ ಖಾಲಿಯಗಿವೆ. ಇದರಿಂದ ಜನ ಜಾನುವಾರುಗಳಿಗೆ ನೀರು,ಮೇವಿನ ಕೊರತೆಯಿದೆ. ಬಿದ್ದ ಮೊದಲ ಮಳೆಯ ಜೊತೆ ಬಿರುಗಾಳಿ ಬೀಸಿ ಗುಂಡ್ಲುಪೇಟೆ ಹಾಗು ಕೆಲವು ಭಾಗಗಳಲ್ಲಿ ಲಕ್ಷಾಂತರ ರೂಪಾಯಿ ಬಾಳೆ ನಾಶವಾಗಿ ರೈತ ಬೀದಿಗೆ ಬಂದಿದ್ದರು ಸಹ ಉಸ್ತುವಾರಿ ಸಚಿವ ವೆಂಕಟೇಶ್ ಜನರ ಸಮಸ್ಯೆ ಆಲಿಸುವ ಕೆಲಸ ಮಾಡ್ತಿಲ್ಲ ಅಂತಾ ಆರೋಪ ಮಾಡ್ತಿದ್ದಾರೆ.
ಕೆನಾಲ್ ಕಾಮಗಾರಿಯಿಂದ ಮುಂದಿನ ಪೀಳಿಗೆಗೆ ನೀರು ಸಿಗಲ್ಲ: ಶಾಸಕ ಎಂ.ಟಿ.ಕೃಷ್ಣಪ್ಪ
ಇನ್ನೂ ತಮ್ಮ ಸಮಸ್ಯೆ ಆಲಿಸಲು ಸಚಿವರ ಕಚೇರಿಗೆ ಬಂದ್ರೆ ನೀತಿ ಸಂಹಿತೆ ಹಿನ್ನಲೆ ಅದು ಕೂಡ ಬೀಗ ಜಡಿದಿದೆ. ಯಾರ ಬಳಿ ಸಾರ್ವಜನಿಕರು ತಮ್ಮ ಸಮಸ್ಯೆ ಹೇಳಿಕೊಳ್ತಾರೆಂದು ಸಚಿವರ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಒಟ್ನಲ್ಲಿ ಚುನಾವಣೆ ಘೋಷಣೆ ಬಳಿಕ ಸಚಿವರು ಚಾಮರಾಜನಗರ ಜಿಲ್ಲೆಯನ್ನು ಸಂಪೂರ್ಣ ಕಡೆಗಣಿಸಿದ್ದು, ಹೊರಗಿನವರಿಗೆ ಉಸ್ತುವಾರಿ ಹೊಣೆ ಕೊಟ್ರೆ ಇದೇ ಪರಿಸ್ಥಿತಿ. ಅಭಿವೃದ್ಧಿ ಹಾಗೂ ಸಾರ್ವಜನಿಕರ ಕುಂದು ಕೊರತೆಗೆ ಸ್ಪಂದಿಸಲ್ಲವೆಂಬ ಆರೋಪ ಮಾಡ್ತಿದ್ದಾರೆ. ಇಂಡಿಗನತ್ತ ದಂತಹ ಪ್ರಕರಣ ನಡೆದರೂ ಯಾಕೆ ಬಂದಿಲ್ಲ ಅಂತಾ ಪ್ರಶ್ನಿಸುತ್ತಿದ್ದಾರೆ. ಇನ್ನಾದ್ರೂ ಉಸ್ತುವಾರಿ ಸಚಿವರು ಚಾಮರಾಜನಗದತ್ತ ಮುಖ ಮಾಡ್ತಾರಾ ಅನ್ನೋದ್ನ ಕಾದುನೋಡಬೇಕಾಗಿದೆ.