ಪ್ರಧಾನಿ ಮೋದಿ ಅವರ ಇಂಧನ ಮಿತಬಳಕೆ ಹೇಳಿಕೆಯನ್ನು ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಸಮರ್ಥಿಸಿಕೊಂಡಿದ್ದಾರೆ. ದೇಶದ ಹಿತದೃಷ್ಟಿಯಿಂದ ನೀಡಿದ ಸಲಹೆಯನ್ನು ಟೀಕಿಸುವ ಮೂಲಕ ಕಾಂಗ್ರೆಸ್ ಸಣ್ಣತನ ಪ್ರದರ್ಶಿಸುತ್ತಿದೆ ಎಂದು ಕಿಡಿಕಾರಿದ್ದಾರೆ.

 ಬೆಂಗಳೂರು: ಮುಂದೆ ದೇಶದ ಆರ್ಥಿಕ ಬೆಳವಣಿಗೆಗೆ ಹಿನ್ನಡೆ ಆಗಬಾರದು ಎಂಬ ದೃಷ್ಟಿಯಲ್ಲಿ ಪ್ರಧಾನಿ ಮೋದಿ ಅವರು ಇಂಧನ ಮಿತ ಬಳಕೆ ಕುರಿತು ಹೇಳಿಕೆ ನೀಡಿದ್ದಾರೆ. ಇದನ್ನು ಕಾಂಗ್ರೆಸ್‌ ನಾಯಕರು ಟೀಕೆ ಮಾಡಿ ಸಣ್ಣತನ ಪ್ರದರ್ಶಿಸುತ್ತಿದ್ದಾರೆ ಎಂದು ಕೇಂದ್ರ ಕೈಗಾರಿಕಾ ಸಚಿವ ಎಚ್‌.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್‌ನವರೇ ಆ ಜಾಗದಲ್ಲಿದ್ದಿದ್ದರೆ ಏನು ಮಾಡುತ್ತಿದ್ದರು? ಹೇಗೆ ಸಮಸ್ಯೆ ಬಗೆಹರಿಸುತ್ತಿದ್ದರು? ಈಗ ಟೀಕೆ ಮಾಡಿ ಸಣ್ಣತನ ಪ್ರದರ್ಶನ ಮಾಡುತ್ತಿದ್ದಾರೆ. ಭಾರತ ತೈಲ ಉತ್ಪಾದನೆ ಮಾಡುವುದಿಲ್ಲ, ಬೇರೆ ದೇಶಗಳಿಂದ ಆಮದು ಮಾಡಿಕೊಳ್ಳಬೇಕು. ದೇಶದ ಹಿತದೃಷ್ಟಿಯಿಂದ ಮುಂದೆ ಆಗಬಹುದಾದ ಅನಾಹುತಗಳಿಗೆ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಬೇಕಾದ ಹಿನ್ನೆಲೆಯಲ್ಲಿ ನರೇಂದ್ರ ಮೋದಿ ಸಲಹೆ ನೀಡಿದ್ದಾರೆ ಎಂದು ಸಮರ್ಥಿಸಿದರು.

ಮೋದಿ ಮನವಿಯನ್ನು ನಾವೊಬ್ಬರೇ ಪಾಲನೆ ಮಾಡಲ್ಲ, ದೇಶದ ಹಿತದೃಷ್ಟಿ ಪ್ರಶ್ನೆ ಎದುರಾದಾಗ ಎಲ್ಲಾ ಪಕ್ಷಗಳು, ಎಲ್ಲರ ಜವಾಬ್ದಾರಿಯೂ ಇದೆ. ಸಣ್ಣತನಬಿಟ್ಟು ತನ್ನ ಜವಾಬ್ದಾರಿಯನ್ನು ರಾಜ್ಯ ಸರ್ಕಾರ ನಿಭಾಯಿಸಲಿ ಎಂದರು.

ಕಾಂಗ್ರೆಸ್‌ ಕಾಲದಲ್ಲಿ ಮರುಪರೀಕ್ಷೆ ಆಗಿಲ್ವಾ?:

ನೀಟ್ ಮರು ಪರೀಕ್ಷೆ ನಿರ್ಧಾರ ಕುರಿತು ವಿಪಕ್ಷಗಳ ಟೀಕೆಗೆ ಉತ್ತರಿಸಿದ ಅವರು, ನಮ್ಮ ರಾಜ್ಯದಲ್ಲಿ ಎಷ್ಟು ಬಾರಿ ಪರೀಕ್ಷೆ ಮುಂದಕ್ಕೆ ಹಾಕಿಲ್ಲ? ಕಾಂಗ್ರೆಸ್ ಕಾಲದಲ್ಲಿ ಎಷ್ಟು ಅನಾಹುತ ಆಗಿಲ್ಲ? ರಾಜಸ್ಥಾನದಲ್ಲಿ ಪೇಪರ್ ಲೀಕ್ ಆಗಿತ್ತು. ಯಾರೋ ಮಾಡಿದ ತಪ್ಪಿಗೆ ಕೇಂದ್ರ ಸರ್ಕಾರದ ಮೇಲೆ ತಪ್ಪು ಹೊರೆಸಲು ಆಗದು. ನಮ್ಮ ರಾಜ್ಯದಲ್ಲಿ ಅನೇಕ ಬಾರಿ ಇಂತಹ ಸಂದರ್ಭ ಕಾಂಗ್ರೆಸ್‌ ಕಾಲದಲ್ಲೂ ಅಗಿದೆ. ಈ ಕುರಿತು ಚರ್ಚೆ ನಡೆಸಲು ಕಾಂಗ್ರೆಸ್‌ನವರಿಗೆ ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದರು.