ಸಂಸತ್‌ನಲ್ಲಿ ಮಹಿಳಾ ಮೀಸಲು ಮಸೂದೆ ವಿಫಲಗೊಂಡಿದ್ದಕ್ಕೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ವಿಪಕ್ಷಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದೇವೇಗೌಡರ ಕಾಲದಲ್ಲಿ ನಡೆದ ಘಟನೆಯನ್ನು ಸ್ಮರಿಸಿದ ಅವರು, ಕಾಂಗ್ರೆಸ್‌ನ ಮಹಿಳಾ ವಿರೋಧಿ ಮನಸ್ಥಿತಿಯನ್ನು ಟೀಕಿಸಿದ್ದಾರೆ 

ನವದೆಹಲಿ ಏ(.19) : ಸಂಸತ್‌ನಲ್ಲಿ ಮಹಿಳಾ ಮೀಸಲು ಮಸೂದೆಯನ್ನು ಸೋಲಿಸಿದ ವಿಪಕ್ಷ ಕೂಟದ ಶಕ್ತಿಗಳನ್ನು ರಾಷ್ಟ್ರದ ನಾರಿಶಕ್ತಿ ಎಂದಿಗೂ ಕ್ಷಮಿಸುವುದಿಲ್ಲ. ಇದು ಮಾತೃಶಕ್ತಿಗೆ ಆಗಿರುವ ಅವಮಾನ. ಇದಕ್ಕೆ ಕಾರಣರಾದ ಎಲ್ಲರೂ ತಕ್ಕ ಶಾಸ್ತಿ ಅನುಭವಿಸಬೇಕಾಗುತ್ತದೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಲೋಕಸಭೆಯಲ್ಲಿ ಪ್ರತಿಪಕ್ಷಗಳ ಬೆಂಬಲ ಸಿಗದೆ ಮಹಿಳಾ ಮೀಸಲು ಮಸೂದೆ ಬಿದ್ದುಹೋದ ಬಗ್ಗೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿದ ಎಚ್ಡಿಕೆ, ಕರಾಳ ಇತಿಹಾಸ ಮರುಕಳಿಸಿದೆ. ಮೂರು ದಶಕಗಳ ನಂತರವೂ ಕಾಂಗ್ರೆಸ್ ಪಕ್ಷದ ಮಹಿಳಾ ವಿರೋಧಿ ಮನಸ್ಥಿತಿ ಕೊಂಚವೂ ಬದಲಾಗಿಲ್ಲ ಎನ್ನುವುದಕ್ಕೆ ಲೋಕಸಭೆ ಮತ್ತೊಮ್ಮೆ ಸಾಕ್ಷಿಯಾಯಿತು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಅಂದು ಎಚ್.ಡಿ.ದೇವೇಗೌಡರ ನೇತೃತ್ವದ ಸಂಯುಕ್ತ ರಂಗ ಸರಕಾರವು ಲೋಕಸಭೆ, ವಿಧಾನಸಭೆಗಳಲ್ಲಿ ಮಹಿಳೆಯರಿಗೆ 33% ಮೀಸಲು ನೀಡುವ ಕ್ರಾಂತಿಕಾರಿ ನಿರ್ಧಾರ ಕೈಗೊಂಡು ಸಂಸತ್ತಿನಲ್ಲಿ ಮಸೂದೆ ಮಂಡಿಸಿತ್ತು. ಅಂದು ಇದೇ ಕಾಂಗ್ರೆಸ್ ಮತ್ತು ಅದರ ಸಹಚರ ಶಕ್ತಿಗಳು ಆ ಪ್ರಯತ್ನವನ್ನು ಸಂಘಟಿತವಾಗಿ ವಿಫಲಗೊಳಿಸಿದ್ದವು. ಆವತ್ತು ಮಹಿಳೆಯರಿಗೆ ಆಗಿದ್ದ ಐತಿಹಾಸಿಕ ಅನ್ಯಾಯ ಸರಿಪಡಿಸಲು ಪ್ರಧಾನಿ ನರೇಂದ್ರ ಮೋದಿ ಅವರು ದಿಟ್ಟಹೆಜ್ಜೆ ಇರಿಸಿದ್ದರು. ಪುನಾ ಅದೇ ಕಾಂಗ್ರೆಸ್ ಹಾಗೂ ಅದರ ಮಿತ್ರಪಕ್ಷಗಳು ಸೇರಿ ಮೋದಿ ಅವರ ಪ್ರಯತ್ನಕ್ಕೆ ತಡೆಯೊಡ್ಡಿವೆ ಎಂದು ಅವರು ಕಿಡಿಕಾರಿದ್ದಾರೆ.

ರಾಷ್ಟ್ರದ ನಾರಿಶಕ್ತಿಗೆ ನನ್ನ ಮನವಿ ಇಷ್ಟೇ, ನಿಮಗೆ ನಿರಾಶೆ ಬೇಕಿಲ್ಲ. ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಮುಂದೊಂದು ದಿನ ನಿಮಗೆ ಅಗ್ರಮನ್ನಣೆ ಸಿಕ್ಕೇ ಸಿಗುತ್ತದೆ. 33% ಮಹಿಳಾ ಮೀಸಲು ಗುರಿ ಸಾಧಿಸುವುದು ಶತಸಿದ್ಧ ಎಂದು ಅವರು ಭರವಸೆ ನೀಡಿದ್ದಾರೆ.