ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳ ಪೈಕಿ ಕಾಂಗ್ರೆಸ್‌ನ ಮೊದಲ ಪಟ್ಟಿಯಲ್ಲಿ ಮೂರು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಘೋಷಣೆಯಾಗಿದೆ. ಇದರ ಬೆನ್ನಲ್ಲೇ ಸಾಗರದಲ್ಲಿ ಅಸಮಾಧಾನ ಭುಗಿಲೆದ್ದಿದೆ.

ಶಿವಮೊಗ್ಗ (ಮಾ.26) : ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳ ಪೈಕಿ ಕಾಂಗ್ರೆಸ್‌ನ ಮೊದಲ ಪಟ್ಟಿಯಲ್ಲಿ ಮೂರು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಘೋಷಣೆಯಾಗಿದೆ. ಇದರ ಬೆನ್ನಲ್ಲೇ ಸಾಗರದಲ್ಲಿ ಅಸಮಾಧಾನ ಭುಗಿಲೆದ್ದಿದೆ.

ಮೊದಲ ಪಟ್ಟಿಯಲ್ಲಿ ನಿರೀಕ್ಷೆಯಂತೆ ಸೊರಬ ಮತ್ತು ಭದ್ರಾವತಿಯಲ್ಲಿ ಕ್ರಮವಾಗಿ ಮಧು ಬಂಗಾರಪ್ಪ ಮತ್ತು ಬಿ.ಕೆ.ಸಂಗಮೇಶ್‌ ಅವರ ಹೆಸರು ಮೊದಲೇ ಪಕ್ಕಾ ಆಗಿದ್ದು, ಈ ಎರಡೂ ಕ್ಷೇತ್ರಗಳಿಂದ ತಲಾ ಒಂದು ಹೆಸರು ಮಾತ್ರ ಪ್ರಸ್ತಾಪವಾಗಿತ್ತು.

Shivamogga: ನನ್ನೆದುರು ಕಣಕ್ಕಿಳಿ​ಸಲು ಕಾಂಗ್ರೆ​ಸ್‌ಗೆ ಅಭ್ಯರ್ಥಿಯೇ ಇಲ್ಲ: ಜ್ಞಾನೇಂದ್ರ

ಆದರೆ ಈಗ ಪ್ರಕಟಗೊಂಡ ಸಾಗರದಲ್ಲಿ ಮಾತ್ರ ಹಲವು ಹೆಸರುಗಳು ಮುಂಚೂಣಿಗೆ ಬಂದಿತ್ತು. ಇದರಲ್ಲಿ ಪ್ರಮುಖವಾಗಿ ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಅವರ ಪುತ್ರಿ ಡಾ.ರಾಜನಂದಿನಿ, ಬೇಳೂರು ಗೋಪಾಲಕೃಷ್ಣ, ಹೊನಗೋಡು ರತ್ನಾಕರ್‌ ಸೇರಿದಂತೆ ಹಲವರು ಟಿಕೆಟ್‌ ಆಕಾಂಕ್ಷಿಯಾಗಿದ್ದರು. ಕಳೆದ ಚುನಾವಣೆಯಲ್ಲಿ ಇದೇ ತಮ್ಮ ಕೊನೆಯ ಚುನಾವಣೆ ಎಂದು ಹೇಳಿಕೊಂಡು ಅನುಕಂಪ ಪಡೆಯಲು ಯತ್ನಿಸಿದ್ದರೂ ವಿಫಲರಾಗಿದ್ದ ಕಾಗೋಡು ತಿಮ್ಮಪ್ಪ ಅವರು ಈ ಬಾರಿ ಪುನಃ ಸ್ಪರ್ಧಿಸುವ ಆಸೆ ವ್ಯಕ್ತಪಡಿಸಿದ್ದರು. ವಯಸ್ಸಿನ ಕಾರಣ ತಮಗೆ ಸಿಗದಿದ್ದರೆ ತಮ್ಮ ಪುತ್ರಿ ಡಾ. ರಾಜನಂದಿನಿ ಅವರಿಗೆ ಟಿಕೆಟ್‌ ನೀಡುವಂತೆ ಡಿ.ಕೆ.ಶಿವಕುಮಾರ್‌, ಸಿದ್ದರಾಮಯ್ಯ ಮಾತ್ರವಲ್ಲದೆ, ತಮ್ಮ ನಿಕಟವರ್ತಿ ಕಾಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಕೂಡ ಭೇಟಿ ಮಾಡಿ ಮನವಿ ಸಲ್ಲಿಸಿದ್ದರು. ಆದರೆ, ಅಚ್ಚರಿಯೆಂಬಂತೆ ಬೇಳೂರು ಗೋಪಾಲಕೃಷ್ಣ ಅವರಿಗೆ ಟಿಕೆಟ್‌ ಪ್ರಕಟವಾಗಿದೆ.

ಒಂದು ತಿಂಗಳ ಹಿಂದೆ ಕಾಗೋಡು ತಿಮ್ಮಪ್ಪನವರ ಬೆಂಬಲಿಗರಲ್ಲಿ ಹಲವರು ಕಾಗೋಡು ಬಿಟ್ಟು ಬೇರೆಯವರಿಗೆ ಟಿಕೆಟ್‌ ನೀಡಿದರೆ ತಾವು ಕೂಡ ಸ್ಪರ್ಧಿಸುವುದಾಗಿ ಎಚ್ಚರಿಕೆ ನೀಡುವ ಮೂಲಕ ಪರೋಕ್ಷವಾಗಿ ಬೇಳೂರು ಗೋಪಾಲಕೃಷ್ಣ ಅವರಿಗೆ ಟಿಕೆಟ್‌ ನೀಡುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಆದರೆ ಅದೆಲ್ಲವನ್ನೂ ಮೀರಿ ಬೇಳೂರಿಗೆ ಟಿಕೆಟ್‌ ಪ್ರಕಟವಾಗಿದೆ.

ರಕ್ತಕ್ರಾಂತಿ ಹೆಸರಿನಲ್ಲಿ ಶಾಂತಿ ಕದಡುತ್ತಿರುವ ಮಧು ಬಂಗಾರಪ್ಪ: ಕುಮಾರ ಬಂಗಾರಪ್ಪ ವಾಗ್ದಾಳಿ

ಡಾ.ರಾಜನಂದಿನಿಗೆ ಬಂಡಾಯ ಏಳಲು ಪ್ರಚೋದನೆ:

ಟಿಕೆಟ್‌ ಪಟ್ಟಿಹೊರ ಬರುತ್ತಿದ್ದಂತೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಕಾಗೋಡು ತಿಮ್ಮಪ್ಪ ಬೆಂಬಲಿಗರು ಡಾ.ರಾಜನಂದಿನಿ ಅವ​ರಿಗೆ ಬಂಡಾಯವಾಗಿ ಸ್ಪರ್ಧೆ ಮಾಡುವ ಹೇಳಿಕೆ ನೀಡುವಂತೆ ಪ್ರಚೋದನೆ ನೀಡಿದರು. ಆದರೆ ಇದಕ್ಕೆ ಸಹಮತ ವ್ಯಕ್ತಪಡಿಸದ ಡಾ. ರಾಜನಂದಿನಿ ಅವರು ಕಾದುನೋಡುವ ಮನಃಸ್ಥಿತಿಯನ್ನು ಹೊರಹಾಕಿದರು. ತಾವು ತಮಗೆ ಟಿಕೆಟ್‌ ಕೇಳದೇ ತಂದೆ ಕಾಗೋಡು ತಿಮ್ಮಪ್ಪ ಅವರಿಗೇ ಟಿಕೆಟ್‌ ಕೇಳಿದ್ದರೆ ಬಹುಶಃ ಟಿಕೆಟ್‌ ಸಿಗುತ್ತಿತ್ತೇನೋ ಎಂದು ಹೇಳಿಕೊಂಡರು ಎಂದು ಮೂಲಗಳು ತಿಳಿಸಿವೆ.

ಭದ್ರಾ​ವತಿ ಶಾಸಕ ಸಂಗಮೇಶ್ವರ್‌ ಕಾಂಗ್ರೆಸ್‌ ಅಭ್ಯರ್ಥಿ

ಭದ್ರಾವತಿ: ಬಹುತೇಕ ನಿರೀಕ್ಷೆಯಂತೆ ಈ ಬಾರಿ ಸಹ ಕಾಂಗ್ರೆಸ್‌ ಪಕ್ಷದಿಂದ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ಶಾಸಕ ಬಿ.ಕೆ. ಸಂಗಮೇಶ್ವರ್‌ ಅವ​ರಿಗೆ ಅವಕಾಶ ಲಭಿಸಿದ್ದು, ಶನಿವಾರ ಬಿಡುಗಡೆಗೊಂಡ ಮೊದಲ ಪಟ್ಟಿಯಲ್ಲಿ ಅವರ ಹೆಸರು ಪ್ರಕಟಗೊಂಡಿರುವುದು ಅಭಿಮಾನಿಗಳು ಹಾಗೂ ಕಾರ್ಯಕರ್ತರಲ್ಲಿ ಸಂಭ್ರಮ ಉಂಟುಮಾಡಿದೆ.

ಸಂಗಮೇಶ್ವರ್‌ ಇದುವರೆಗೂ 3 ಬಾರಿ ಕ್ಷೇತ್ರದ ಶಾಸಕರಾಗಿದ್ದು, ಮಾಜಿ ಶಾಸಕ ದಿವಂಗತ ಎಂ.ಜೆ. ಅಪ್ಪಾಜಿ ಅವರಿಗೆ ಪ್ರತಿಸ್ಪರ್ಧಿಯಾಗಿ 1999ರಿಂದ ವಿಧಾನಸಭೆ ಚುನಾವಣೆ ಎದುರಿಸುತ್ತಿದ್ದಾರೆ. ಸಂಗಮೇಶ್ವರ್‌ ಒಂದು ಬಾರಿ ಪಕ್ಷೇತರ ಅಭ್ಯರ್ಥಿಯಾಗಿ, ಎರಡು ಬಾರಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ.

1999ರ ಮೊದಲ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಅಪ್ಪಾಜಿ ಎದುರು ಸೋಲು ಕಂಡಿದ್ದರು. 2004ರಲ್ಲಿ ಕಾಂಗ್ರೆಸ್‌ನಿಂದ ಅಪ್ಪಾಜಿ ಸ್ಪರ್ಧೆ ಮಾಡಿದ ಹಿನ್ನೆಲೆ ಸಂಗಮೇಶ್ವರ್‌ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. 2008ರಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಅಪ್ಪಾಜಿ ವಿರುದ್ಧ ಗೆಲುವು ಸಾಧಿಸಿದ್ದರು. ಪ್ರಸ್ತುತ ಜೆಡಿಎಸ್‌ ರಾಜ್ಯಾಧ್ಯಕ್ಷ ಆಗಿರುವ ಸಿ.ಎಂ. ಇಬ್ರಾಹಿಂ 2013ರಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧೆ ಮಾಡಿದ ಹಿನ್ನೆಲೆ ಸಂಗಮೇಶ್ವರ್‌ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವಂತಾಯಿತು. ಅಪ್ಪಾಜಿ ಎದುರು ಸಂಗಮೇಶ್ವರ್‌ ಮತ್ತು ಇಬ್ರಾಹಿಂ ಇಬ್ಬರು ಸಹ ಸೋಲುವಂತಾಯಿತು. 2018ರಲ್ಲಿ ಸಂಗಮೇಶ್ವರ್‌ ಕಾಂಗ್ರೆಸ್‌ದಿಂದ ಸ್ಪರ್ಧಿಸಿ ಅಪ್ಪಾಜಿ ವಿರುದ್ಧ ಗೆಲುವು ಸಾಧಿಸಿದ್ದರು. ಈ ಬಾರಿ ಚುನಾವಣೆಯಲ್ಲಿ ಅಪ್ಪಾಜಿ ಪತ್ನಿ ಶಾರದ ಅಪ್ಪಾಜಿ ಪ್ರತಿಸ್ಪರ್ಧಿ ಆಗಿದ್ದಾರೆ.

ಪ್ರತಿ ಬಾರಿ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಲು ಆಕಾಂಕ್ಷಿಗಳ ನಡುವೆ ತೀವ್ರ ಪೈಪೋಟಿ ನಡೆಯುತ್ತಿತ್ತು. ಆದರೆ ಈ ಬಾರಿ ಯಾವುದೇ ಪೈಪೋಟಿ ಇಲ್ಲದೇ ಇರುವುದು ಕಂಡುಬಂದಿತು. ಕಾಂಗ್ರೆಸ್‌ ಪಕ್ಷದಿಂದ ಸ್ಪರ್ಧಿಸಲು ಅವಕಾಶ ಕೋರಿ ಏಕೈಕ ಅರ್ಜಿ ಸಲ್ಲಿಕೆಯಾಗಿತ್ತು. ಈ ಹಿನ್ನೆಲೆಯಲ್ಲಿ ಈ ಬಾರಿ ಸಂಗಮೇಶ್ವರ್‌ ಅವ​ರಿಗೆ ಸ್ಪರ್ಧಿಸಲು ಅವಕಾಶ ಸಿಗುವುದು ಬಹುತೇಕ ಖಚಿತವಾಗಿತ್ತು. ಮೊದಲ ಪಟ್ಟಿಯಲ್ಲಿಯೇ ಹೆಸರು ಪ್ರಕಟಗೊಂಡಿರುವುದು ಅಭಿಮಾನಿಗಳು, ಕಾರ್ಯಕರ್ತರಲ್ಲಿ ಸಂಭ್ರಮ ಉಂಟು ಮಾಡುವ ಜೊತೆಗೆ ಮತ್ತಷ್ಟುಹುಮ್ಮಸ್ಸು ಹೆಚ್ಚು ಮಾಡಿದೆ.

Shivamogga: ನನ್ನೆದುರು ಕಣಕ್ಕಿಳಿ​ಸಲು ಕಾಂಗ್ರೆ​ಸ್‌ಗೆ ಅಭ್ಯರ್ಥಿಯೇ ಇಲ್ಲ: ಜ್ಞಾನೇಂದ್ರ

ಈ ಹಿಂದೆ ಚುನಾವಣೆ ಘೋಷಣೆಯಾಗಿ ನಾಮಪತ್ರ ಸಲ್ಲಿಕೆಗೆ ಕೆಲವು ದಿನಗಳು ಬಾಕಿ ಇರುವಾಗ ಅಭ್ಯರ್ಥಿಗಳ ಪಟ್ಟಿಬಿಡುಗಡೆ ಆಗುತ್ತಿತ್ತು. ಆದರೆ ಈ ಬಾರಿ ಚುನಾವಣೆ ಘೋಷಣೆಗೂ ಮೊದಲು ಪಟ್ಟಿಬಿಡುಗಡೆಯಾಗಿದೆ. ಇದರಿಂದಾಗಿ ಸಂಗಮೇಶ್ವರ್‌ ಪರ ಮತಯಾಚನೆ ನಡೆಸಲು ಹೆಚ್ಚಿನ ಸಮಯ ಲಭಿಸಿದೆ.

ಈಗಾಗಲೇ ಕ್ಷೇತ್ರದಲ್ಲಿ ಶಾರದ ಅಪ್ಪಾಜಿ ಜೆಡಿಎಸ್‌ನಿಂದ, ಮೆಡಿಕಲ್‌ ಆನಂದ್‌ ಆಮ್‌ ಆದ್ಮಿ ಪಾರ್ಟಿ ಪಕ್ಷದಿಂದ ಸ್ಪರ್ಧಿಸುವ ಅಧಿ​ಕೃತ ಅಭ್ಯರ್ಥಿಗಳಾಗಿದ್ದಾರೆ. ಉಳಿದಂತೆ ಬಿಜೆಪಿ ಪಕ್ಷದಿಂದ ಸ್ಪರ್ಧಿಸುವ ಅಭ್ಯರ್ಥಿ ಯಾರು ಎಂಬುದನ್ನು ಕಾದುನೋಡಬೇಕಾಗಿದೆ.