ರಾಜ್ಯದಲ್ಲಿ ಪಕ್ಷ ಅಧಿಕಾರಕ್ಕೆ ಬಂದರೆ ಜಾರಿ ಮಾಡುವುದಾಗಿ ಈಗಾಗಲೇ ‘ಐದು ಗ್ಯಾರಂಟಿ’ ಯೋಜನೆಗಳನ್ನು ಘೋಷಿಸಿರುವ ಕಾಂಗ್ರೆಸ್‌ ಪಕ್ಷವು, ಇನ್ನೂ ಹತ್ತು ಹಲವು ಭರವಸೆಗಳನ್ನು ಒಳಗೊಂಡ ಚುನಾವಣಾ ಪ್ರಣಾಳಿಕೆಯನ್ನು ಮಂಗಳವಾರ ಅಧಿಕೃತವಾಗಿ ಬಿಡುಗಡೆ ಮಾಡಲಿದೆ.

ಬೆಂಗಳೂರು (ಮೇ.01): ರಾಜ್ಯದಲ್ಲಿ ಪಕ್ಷ ಅಧಿಕಾರಕ್ಕೆ ಬಂದರೆ ಜಾರಿ ಮಾಡುವುದಾಗಿ ಈಗಾಗಲೇ ‘ಐದು ಗ್ಯಾರಂಟಿ’ ಯೋಜನೆಗಳನ್ನು ಘೋಷಿಸಿರುವ ಕಾಂಗ್ರೆಸ್‌ ಪಕ್ಷವು, ಇನ್ನೂ ಹತ್ತು ಹಲವು ಭರವಸೆಗಳನ್ನು ಒಳಗೊಂಡ ಚುನಾವಣಾ ಪ್ರಣಾಳಿಕೆಯನ್ನು ಮಂಗಳವಾರ ಅಧಿಕೃತವಾಗಿ ಬಿಡುಗಡೆ ಮಾಡಲಿದೆ. ಪ್ರಣಾಳಿಕೆ ರಚನಾ ಸಮಿತಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್‌ ಅಧ್ಯಕ್ಷತೆಯಲ್ಲಿ ಈಗಾಗಲೇ ಪ್ರಣಾಳಿಕೆ ಅಂತಿಮಗೊಂಡಿದ್ದು, ಮಂಗಳವಾರ ಕೆಪಿಸಿಸಿ ಕಚೇರಿಯಲ್ಲಿ ವಾಗ್ದಾನಗಳ ಪಟ್ಟಿಬಿಡುಗಡೆಗೊಳ್ಳಲಿದೆ.

ಮೂಲಗಳ ಪ್ರಕಾರ ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕ, ಕರಾವಳಿ ಕರ್ನಾಟಕ, ಮಲೆನಾಡು ಪ್ರದೇಶ ಹಾಗೂ ಬೆಂಗಳೂರು ನಗರಗಳಿಗೆ ಪ್ರತ್ಯೇಕ ಪ್ರಣಾಳಿಕೆ ನೀಡಲಾಗುವುದು. ಜನವರಿಯಲ್ಲೇ ಕರಾವಳಿ ಕರ್ನಾಟಕಕ್ಕೆ 10 ಅಂಶಗಳ ಪ್ರಣಾಳಿಕೆ ಬಿಡುಗಡೆ ಮಾಡಿದ್ದು, ಇದೇ ರೀತಿಯಲ್ಲಿ ಬೇರೆ ವಿಭಾಗಗಳಿಗೂ ಪ್ರದೇಶವಾರು ಕಾರ್ಯಕ್ರಮ ಪ್ರಕಟಿಸಲಾಗುವುದು ಎಂದು ತಿಳಿದುಬಂದಿದೆ.

ಪ್ರಧಾನಿ ಮೋದಿ ಮಾತಿಗೆ ಮರುಳಾಗಬೇಡಿ: ಎಚ್‌.ಡಿ.ಕುಮಾರಸ್ವಾಮಿ

ಐದು ಗ್ಯಾರಂಟಿ ಯೋಜನೆ ಈಗಾಗಲೇ ಪ್ರಕಟ: ಈಗಾಗಲೇ ಪ್ರತಿ ಮನೆಗೆ 200 ಯುನಿಟ್‌ ಉಚಿತ ವಿದ್ಯುತ್‌ ನೀಡುವ ‘ಗೃಹ ಜ್ಯೋತಿ’, ಪ್ರತಿ ಮನೆಯೊಡತಿಗೆ 2 ಸಾವಿರ ರು. ಮಾಸಿಕ ಸಹಾಯ ಧನ ನೀಡುವ ‘ಗೃಹ ಲಕ್ಷ್ಮೇ’, ಪದವೀಧರರಿಗೆ 3 ಸಾವಿರ ರು. ಹಾಗೂ ಡಿಪ್ಲೊಮಾ ಪದವೀಧರರಿಗೆ 1,500 ರು. ಮಾಸಿಕ ನಿರುದ್ಯೋಗ ಭತ್ಯೆ ನೀಡುವ ‘ಯುವ ನಿಧಿ’, ಪ್ರತಿ ತಿಂಗಳು ಪ್ರತಿ ವ್ಯಕ್ತಿಗೆ 10 ಕೆ.ಜಿ. ಅಕ್ಕಿ ನೀಡುವ ‘ಅನ್ನಭಾಗ್ಯ’, ಮಹಿಳೆಯರಿಗೆ ಉಚಿತ ಪ್ರಯಾಣದ ‘ಸಖಿ’ ಭರವಸೆ ಸೇರಿದಂತೆ ಐದು ಗ್ಯಾರಂಟಿ ಯೋಜನೆ ಪ್ರಕಟಿಸಲಾಗಿದೆ.

ಅಂಗನವಾಡಿ, ಆಶಾ ಸಿಬ್ಬಂದಿ ಗೌರವ ಧನ ಹೆಚ್ಚಳ: ಭಾನುವಾರ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರು ಅಂಗನವಾಡಿ ಕಾರ್ಯಕರ್ತೆಯರಿಗೆ 11,500 ರು.ಗಳಿಂದ 15 ಸಾವಿರ ರು., ಅಂಗನವಾಡಿ ಸಹಾಯಕಿಯರ ಸಹಾಯಧನ 7,500 ರು.ಗಳಿಂದ 10 ಸಾವಿರ ರು., ಆಶಾ ಕಾರ್ಯಕರ್ತೆಯರ ಗೌರವ ಧನ 5 ಸಾವಿರ ರು.ಗಳಿಂದ 8 ಸಾವಿರ ರು., ಬಿಸಿಯೂಟ ಅಡುಗೆ ಸಹಾಯಕರ ಗೌರವ ಧನ 3,700 ರು.ಗಳಿಂದ 5 ಸಾವಿರ ರು.ಗಳಿಗೆ ಹೆಚ್ಚಳ ಮಾಡುವುದಾಗಿ ಘೋಷಿಸಿದ್ದಾರೆ. 

ಭ್ರಷ್ಟಾಚಾರವನ್ನು ಎಂದೆಂದಿಗೂ ಬಿಜೆಪಿ ಸಹಿಸುವುದಿಲ್ಲ: ಕೇಂದ್ರ ಸಚಿವ ರಾಜನಾಥ್‌ ಸಿಂಗ್‌

ಇವುಗಳ ಜತೆಯಲ್ಲಿ ಪೌರಕಾರ್ಮಿಕರ ಹುದ್ದೆ ಕಾಯಂ, ಹಳೆ ಪಿಂಚಣಿ ಮರು ಜಾರಿ ಸೇರಿದಂತೆ ಹಲವು ಮಹತ್ವದ ಅಂಶಗಳನ್ನು ಕಾಂಗ್ರೆಸ್‌ ಪ್ರಣಾಳಿಕೆ ಒಳಗೊಂಡಿರಲಿದೆ ಎಂದು ಮೂಲಗಳು ತಿಳಿಸಿವೆ. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.