Voters Data Theft Case: ವೋಟರ್‌ಗೇಟ್ ಹಗರಣ ಸಾಬೀತು: ಕಾಂಗ್ರೆಸ್
ವೋಟರ್‌ಗೇಟ್ ಹಗರಣ ಸಂಬಂಧ ಕೇಂದ್ರ ಚುನಾವಣಾ ಆಯೋಗವು ನೇಮಿಸಿರುವ ತನಿಖಾಧಿಕಾರಿಗಳು ಇಬ್ಬರು ಐಎಎಸ್ ಅಧಿಕಾರಿಗಳನ್ನು ಅಮಾನತುಗೊಳಿಸಿದ್ದಾರೆ. ಜತೆಗೆ 3 ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿ ಮರು ಪರಿಷ್ಕರಣೆಗೆ ಆದೇಶಿಸಿದ್ದಾರೆ.
ಬೆಂಗಳೂರು (ನ.27): ‘ವೋಟರ್‌ಗೇಟ್ ಹಗರಣ ಸಂಬಂಧ ಕೇಂದ್ರ ಚುನಾವಣಾ ಆಯೋಗವು ನೇಮಿಸಿರುವ ತನಿಖಾಧಿಕಾರಿಗಳು ಇಬ್ಬರು ಐಎಎಸ್ ಅಧಿಕಾರಿಗಳನ್ನು ಅಮಾನತುಗೊಳಿಸಿದ್ದಾರೆ. ಜತೆಗೆ 3 ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿ ಮರು ಪರಿಷ್ಕರಣೆಗೆ ಆದೇಶಿಸಿದ್ದಾರೆ. ತನ್ಮೂಲಕ ಹಗರಣ ನಡೆದಿರುವುದು ಸಾಬೀತಾದಂತಾಗಿದ್ದು, ಪ್ರಕರಣದ ಪ್ರಮುಖ ಕಿಂಗ್‌ಪಿನ್ ಆಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮೇಲೆ ಮೊದಲು ಕ್ರಮ ಆಗಬೇಕು’ ಎಂದು ರಾಜ್ಯ ಕಾಂಗ್ರೆಸ್ ನಾಯಕರು ಒತ್ತಾಯಿಸಿದ್ದಾರೆ.
ಈ ಬಗ್ಗೆ ಕೆಪಿಸಿಸಿ ಕಚೇರಿಯಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು, ‘ಬೆಂಗಳೂರು ನಗರ ಉಸ್ತುವಾರಿ ಹೊಂದಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚನೆಯಂತೆಯೇ ಹಗರಣ ನಡೆದಿದೆ. ಹೀಗಾಗಿ ಮೊದಲು ಬೊಮ್ಮಾಯಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಜತೆಗೆ ಅವರ ಮೇಲೆ ಕ್ರಮವಾಗಬೇಕು’ ಎಂದು ಆಗ್ರಹಿಸಿದರು.
ಸಿದ್ದು ಅವಧಿಯ ಚಿಲುಮೆ ವ್ಯವಹಾರವೂ ತನಿಖೆ: ಸಿಎಂ ಬೊಮ್ಮಾಯಿ
ಜತೆಗೆ ಚುನಾವಣಾ ಆಯೋಗವು ಶಿವಾಜಿನಗರ, ಚಿಕ್ಕಪೇಟೆ ಹಾಗೂ ಮಹದೇವಪುರ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಮಾತ್ರ ಮತದಾರರ ಪಟ್ಟಿಮರು ಪರಿಷ್ಕರಣೆಗೆ ಆದೇಶಿಸಿದೆ. ಬೆಂಗಳೂರು ನಗರದ 28 ಕ್ಷೇತ್ರ, ರಾಜ್ಯದ 224 ಕ್ಷೇತ್ರಗಳಲ್ಲೂ ಅಕ್ರಮ ನಡೆದಿದ್ದು, ಎಲ್ಲಾ ಕ್ಷೇತ್ರಗಳ ಮತದಾರರ ಪಟ್ಟಿಪರಿಷ್ಕರಣೆಯಾಗಬೇಕು ಎಂದು ಒತ್ತಾಯ ಮಾಡಿದರು.
ಸಿಎಂ ಮೇಲೆ ಕ್ರಮವಾಗಬೇಕು- ಸಿದ್ದು: ಸಿದ್ದರಾಮಯ್ಯ ಮಾತನಾಡಿ, ರಾಜ್ಯ ಸರ್ಕಾರವು ಅಕ್ರಮವನ್ನು ಮುಚ್ಚಿ ಹಾಕಲು ಯತ್ನಿಸಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷವು ಪ್ರಕರಣದ ಬಗ್ಗೆ ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡಿತ್ತು. ಅದರಂತೆ ಕೇಂದ್ರ ಆಯೋಗವು ನೇಮಿಸಿರುವ ತನಿಖಾಧಿಕಾರಿಗಳು ಮತದಾರರ ಮಾಹಿತಿ ಕಳವು ಪ್ರಕರಣದಲ್ಲಿ ಬೆಂಗಳೂರು ನಗರ ಜಿಲ್ಲಾಧಿಕಾರಿ ಹಾಗೂ ಕೇಂದ್ರ ಅಪರ ಚುನಾವಣಾಧಿಕಾರಿ (ಬಿಬಿಎಂಪಿ ವಿಶೇಷ ಆಯುಕ್ತ) ಸೇರಿ ಇಬ್ಬರು ಐಎಎಸ್ ಅಧಿಕಾರಿಗಳನ್ನು ಅಮಾನತು ಮಾಡಿದ್ದಾರೆ. ತನ್ಮೂಲಕ ಈ ಅಧಿಕಾರಿಗಳು ಅಕ್ರಮದಲ್ಲಿ ಭಾಗಿಯಾಗಿರುವುದು ಹಾಗೂ ಹಗರಣ ನಡೆದಿರುವುದು ಸಾಬೀತಾದಂತಾಗಿದೆ ಎಂದು ಹೇಳಿದರು.
ಇನ್ನು ಮುಖ್ಯಮಂತ್ರಿಗಳು ಹಾಗೂ ಜಿಲ್ಲಾ ಮುಖ್ಯ ಚುನಾವಣಾ ಅಧಿಕಾರಿ ಗಮನಕ್ಕೆ ಬಾರದೆ ಈ ಇಬ್ಬರು ಅಧಿಕಾರಿಗಳು ಅಕ್ರಮದಲ್ಲಿ ಭಾಗಿಯಾಗಲು ಸಾಧ್ಯವೇ ಇಲ್ಲ. ಮಾಹಿತಿ ಕಳವು ಆಗದಿದ್ದರೆ, ಅಕ್ರಮ ನಡೆಯದಿದ್ದರೆ, ಮತದಾರರ ಪಟ್ಟಿಯಿಂದ ಅಕ್ರಮವಾಗಿ ಹೆಸರುಗಳನ್ನು ತೆಗೆದು ಹಾಕದಿದ್ದರೆ ಇವರ ಅಮಾನತು ಆಗುತ್ತಿರಲಿಲ್ಲ. ಹೀಗಾಗಿ ಪ್ರಮುಖ ಕಿಂಗ್‌ಪಿನ್ ಆಗಿರುವ ಬೊಮ್ಮಾಯಿ ಮೇಲೆ ಕ್ರಮವಾಗಬೇಕು ಎಂದು ಒತ್ತಾಯಿಸಿದರು.
ಸಿಎಂ ಸೂಚನೆಯಿಲ್ಲದೆ ಅಕ್ರಮ ಸಾಧ್ಯವಿಲ್ಲ- ಡಿಕೆಶಿ: ಡಿ.ಕೆ. ಶಿವಕುಮಾರ್ ಮಾತನಾಡಿ, ರಾಜ್ಯ ಸರ್ಕಾರವು ತನ್ನ ಬಳಿ ಇಲ್ಲದ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು 7-8 ಸಾವಿರ ಬಿಎಲ್‌ಒಗಳನ್ನು ಅಕ್ರಮವಾಗಿ ನೇಮಿಸಿ, ಮತದಾರರ ಮಾಹಿತಿ ಕದಿಯಲು ಪ್ರಯತ್ನಿಸಿದೆ. ಚುನಾವಣೆಯಲ್ಲಿ ಬಿಜೆಪಿಗೆ ಅನುಕೂಲವಾಗುವಂತೆ ಅಧಿಕಾರ ದುರ್ಬಳಕೆ ಮಾಡಿಕೊಳ್ಳಲು ಪ್ರಯತ್ನಿಸಿದೆ. ಮುಖ್ಯಮಂತ್ರಿಗಳ ಸೂಚನೆ ಇಲ್ಲದೆ ಈ ಅಕ್ರಮ ನಡೆಯಲು ಸಾಧ್ಯವಿಲ್ಲ. ಹೀಗಾಗಿ ಮುಖ್ಯಮಂತ್ರಿಗಳೇ ನೇರ ಹೊಣೆ ಎಂದು ಹೇಳಿದರು.
ನ.2ರಂದೇ ಚಿಲುಮೆ ಅನುಮತಿ ರದ್ದು: ಬಿಬಿಎಂಪಿ ಆಯುಕ್ತ ತುಷಾರ್
ಇದು ಕ್ರಿಮಿನಲ್ ಅಪರಾಧವಾಗಿದ್ದು, ಇದರಲ್ಲಿ ಯಾರೆಲ್ಲಾ ಭಾಗಿಯಾಗಿದ್ದಾರೋ ಎಲ್ಲರ ಮೇಲೂ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು. ಪೊಲೀಸ್, ಎಂಜಿನಿಯರ್, ಶಿಕ್ಷಕರು ಸೇರಿದಂತೆ ವಿವಿಧ ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ, ಅಂಕಪಟ್ಟಿಅಕ್ರಮ ನಡೆಸಿದವರೇ ಈಗ ಮತಪಟ್ಟಿಯಲ್ಲೂ ಅಕ್ರಮ ನಡೆಸಲು ನಕಲಿ ಬಿಎಲ್‌ಒ ಅಧಿಕಾರಿಗಳನ್ನು ನೇಮಕ ಮಾಡಿದ್ದಾರೆ. ತನ್ಮೂಲಕ ರಾಜ್ಯಕ್ಕೆ ಕಳಂಕ ತಂದಿದ್ದಾರೆ. ಈ ಅಕ್ರಮದಲ್ಲಿ ಭಾಗಿಯಾಗಿರುವ ಜನಪ್ರತಿನಿಧಿಗಳ ಹೆಸರು ಮೊದಲು ಹೊರಗೆ ಬರಬೇಕು ಎಂದು ಒತ್ತಾಯಿಸಿದರು.