ಸಿದ್ದು ಅವಧಿಯ ಚಿಲುಮೆ ವ್ಯವಹಾರವೂ ತನಿಖೆ: ಸಿಎಂ ಬೊಮ್ಮಾಯಿ
ಸಿದ್ದರಾಮಯ್ಯ ಸರ್ಕಾರದ ಅವಧಿಯೂ ಸೇರಿದಂತೆ ಈವರೆಗೆ ಮತದಾರರ ಪರಿಷ್ಕರಣೆಯಲ್ಲಿ ಖಾಸಗಿ ಸಂಸ್ಥೆಗಳನ್ನು ಬಳಸಿಕೊಂಡಿದ್ದರ ಬಗ್ಗೆ ತನಿಖೆ ನಡೆಸಲು ಸೂಚಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಬೆಂಗಳೂರು (ನ.21): ಸಿದ್ದರಾಮಯ್ಯ ಸರ್ಕಾರದ ಅವಧಿಯೂ ಸೇರಿದಂತೆ ಈವರೆಗೆ ಮತದಾರರ ಪರಿಷ್ಕರಣೆಯಲ್ಲಿ ಖಾಸಗಿ ಸಂಸ್ಥೆಗಳನ್ನು ಬಳಸಿಕೊಂಡಿದ್ದರ ಬಗ್ಗೆ ತನಿಖೆ ನಡೆಸಲು ಸೂಚಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಹದ್ದುಮೀರಿ ಅಧಿಕಾರ ದುರುಪಯೋಗ ಮಾಡಿಕೊಂಡಿದೆ. ಈ ಮೊದಲು ಕೇವಲ 2022ರದ್ದು ಮಾತ್ರ ತನಿಖೆ ಮಾಡಿಸಲು ಸೂಚಿಸಲಾಗಿತ್ತು. ಆದರೆ ಈಗ 2013ರಿಂದ ತನಿಖೆ ಮಾಡಿಸಲು ಸೂಚಿಸಲಾಗಿದೆ. ಎಲ್ಲ ಸತ್ಯಗಳೂ ಹೊರಬರಲಿವೆ ಎಂದು ತೀಕ್ಷ್ಣವಾಗಿ ಹೇಳಿದರು.
ಚುನಾವಣಾ ಆಯೋಗದ ನಿಯಮಾವಳಿಯನ್ನು ಗಾಳಿಗೆ ತೂರಿ ಕಾಂಗ್ರೆಸ್ ಸರ್ಕಾರ ಚಿಲುಮೆ ಸಂಸ್ಥೆಗೆ ಆದೇಶವನ್ನು ನೀಡಿದ್ದು, ತನಿಖೆಯ ಮೂಲಕ ಎಲ್ಲ ಸತ್ಯಗಳು ಹೊರಬರಲಿವೆ. ಕಾಂಗ್ರೆಸ್ ನಾಯಕರ ಆರೋಪ ನಿರಾಧಾರವಾಗಿದ್ದು, ಈ ಪ್ರಕರಣ ಅವರಿಗೆ ತಿರುಗುಬಾಣವಾಗಲಿದೆ ಎಂದರು. ಯಾವ ಉದ್ದೇಶದಿಂದ ಚಿಲುಮೆ ಸಂಸ್ಥೆಗೆ ಅವರು ಆದೇಶ ನೀಡಿದ್ದರು ಎಂಬ ಸತ್ಯಾಸತ್ಯತೆ ಜನರಿಗೆ ಗೊತ್ತಾಗಬೇಕು. ಈಗ ಮತದಾನದ ಜಾಗೃತಿ ಮೂಡಿಸುವ ಕಾರ್ಯಕ್ಕೆ ಆದೇಶ ನೀಡಲಾಗಿತ್ತು. ಚಿಲುಮೆ ಸಂಸ್ಥೆಗೆ ಯಾವುದೇ ರಾಜಕೀಯ ಪಕ್ಷದ ಜೊತೆ ಸಂಬಂಧ ಇರಬಾರದು ಎಂಬ ಷರತ್ತನ್ನು ವಿಧಿಸಲಾಗಿತ್ತು.
ಮತ ಪಟ್ಟಿ ಪರಿಷ್ಕರಣೆ ಚಿಲುಮೆಗೆ ಸರ್ಕಾರ ಕೊಟ್ಟಿಲ್ಲ: ಸಿಎಂ ಬೊಮ್ಮಾಯಿ
ಆದರೆ ಸಿದ್ದರಾಮಯ್ಯ ಸರ್ಕಾರ ಚುನಾವಣಾ ಆಯೋಗ ನಿರ್ವಹಿಸಬೇಕಾದ ಮತ ಪರಿಷ್ಕರಣೆಯ ಕಾರ್ಯವನ್ನೇ ಸಂಸ್ಥೆಗೆ ನೀಡಿತ್ತು. ಚುನಾವಣಾ ಆಯೋಗ ನಿರ್ವಹಿಸಬೇಕಾದ ಕಾರ್ಯವನ್ನು ಖಾಸಗಿ ಸಂಸ್ಥೆಗೆ ವಹಿಸಿದ್ದು ಅಕ್ಷಮ್ಯ ಅಪರಾಧ. ಅವರ ಅವಧಿಯಲ್ಲಿ ತಹಶೀಲ್ದಾರ್ ಅವರಿಗೆ ಬಿಎಲ್‌ಓಗಳ ನೇಮಕ ಮಾಡುವ ಆದೇಶವನ್ನೂ ನೀಡಲಾಗಿತ್ತು. ಸಿದ್ದರಾಮಯ್ಯ ಸರ್ಕಾರದಲ್ಲಿ ಹದ್ದುಮೀರಿ ಅಧಿಕಾರದ ದುರುಪಯೋಗ ಮಾಡಲಾಗಿದೆ ಎಂದು ಹೇಳಿದರು. ಮತದಾರರ ಪರಿಷ್ಕರಣೆಯ ಕಾರ್ಯದಲ್ಲಿ ಮತದಾರರ ಹೆಸರನ್ನು ಸೇರಿಸುವುದು ಹಾಗೂ ಕೈಬಿಡುವುದು ಚುನಾವಣಾ ಆಯೋಗದ ಕೆಲಸವೇ ಹೊರತು ಸರ್ಕಾರದ್ದಲ್ಲ. ನಮ್ಮ ಸರ್ಕಾರದ ಮೇಲೆ ರಾಜಕೀಯ ಪ್ರೇರಿತವಾಗಿ ಆರೋಪ ಹೊರಿಸಲಾಗುತ್ತಿದೆ ಎಂದರು.
ಮತದಾರರ ವಿವರ ಪಡೆಯಲು ಸಚಿವರು ಸಂಸ್ಥೆಯನ್ನು ಏಜೆನ್ಸಿಯಾಗಿ ಬಳಸಿಕೊಂಡಿದ್ದಾರೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಎಲ್ಲಾ ಪಕ್ಷಗಳು ಸಂಸ್ಥೆಗಳನ್ನು ಏಜೆನ್ಸಿಯಾಗಿ ಬಳಸಿಕೊಳ್ಳುತ್ತಾರೆ. ರಾಜಕೀಯ ಪಕ್ಷಗಳು ಸಮೀಕ್ಷೆಯನ್ನು ಮಾಡಿಸುತ್ತವೆ. ಇಲ್ಲಿ ಸರ್ಕಾರ ಯಾವ ರೀತಿಯ ಆದೇಶವನ್ನು ನೀಡಿದೆ ಎಂಬುದಷ್ಟೇ ಮುಖ್ಯ. ನಮ್ಮ ಸರ್ಕಾರದ ಆದೇಶದಲ್ಲಿ ರಾಜಕೀಯ ಪಕ್ಷಗಳೊಂದಿಗೆ ಸಂಬಂಧವಿರಬಾರದು ಎಂಬ ಷರತ್ತು ವಿಧಿಸಿದೆ. ಅವರ ಆದೇಶದಲ್ಲಿ ಈ ಷರತ್ತನ್ನು ವಿಧಿಸಿಯೇ ಇರಲಿಲ್ಲ ಮತ್ತು ಬಿಎಲ್‌ಓ ನೇಮಕಾತಿಗೂ ಅನುಮತಿಯನ್ನು ಕಾನೂನು ಬಾಹಿರವಾಗಿ ನೀಡಿದ್ದರು ಎಂದು ಹರಿಹಾಯ್ದರು.
ಕಾಂಗ್ರೆಸ್‌ಗೆ ಆತಂಕ: ಈ ಬಾರಿ ಚುನಾವಣಾ ಆಯೋಗವು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಬಳಸಿ ಎರಡು ಪ್ರದೇಶದಲ್ಲಿ ಇರುವ ವೋಟರ್ ಐಡಿಗಳನ್ನು ತೆಗೆಯುವ ಕೆಲಸವನ್ನು ಮಾಡುತ್ತಿದೆ. ಈ ರೀತಿ ನಕಲಿ ಮತದಾರರನ್ನು ತೆಗೆದರೆ ಮಾತ್ರ ನ್ಯಾಯಸಮ್ಮತವಾದ ಚುನಾವಣೆ ನಡೆಸಲು ಸಾಧ್ಯ. ಬೇರೆ ಪ್ರದೇಶದಲ್ಲಿದ್ದವರನ್ನು ಬೇರೆ ಯಾವುದೇ ಪ್ರದೇಶಕ್ಕೆ ಸೇರಿಸಿ ಮತ ಹಾಕಿಸುವ ಕಾಂಗ್ರೆಸ್ ಅವರ ತಂತ್ರ ಬಂದ್ ಆಗಲಿದೆ ಎಂಬ ಆತಂಕದಿಂದ ಈ ರೀತಿ ಹುಯಿಲೆಬ್ಬಿಸಿದ್ದಾರೆ ಎಂದು ಇದೇ ವೇಳೆ ಮುಖ್ಯಮಂತ್ರಿಗಳು ಹೇಳಿದರು.
ಸಿಎಂ ಬೊಮ್ಮಾಯಿಗೆ ಧಮ್ ಇದ್ದರೆ ತನಿಖೆ ನಡೆಸಲಿ: ಡಿ.ಕೆ.ಶಿವಕುಮಾರ್
ಕೇಂದ್ರ ಚುನಾವಣಾ ಆಯೋಗಕ್ಕೂ ಕಾಂಗ್ರೆಸ್ ದೂರು ನೀಡಲಿದೆ ಎಂಬುದಕ್ಕೆ ಉತ್ತರಿಸಿದ ಮುಖ್ಯಮಂತ್ರಿಗಳು, ಅವರು ಯಾರಿಗೆ ಬೇಕಾದರೂ ದೂರು ನೀಡಲಿ. ನ್ಯಾಯ ಹಾಗೂ ಸತ್ಯ ಖಂಡಿತ ಹೊರಬರಲಿದೆ ಹಾಗೂ ಅವರು ಎಬ್ಬಿಸಿರುವ ಈ ಪ್ರಕರಣ ಅವರಿಗೆ ತಿರುಗು ಬಾಣವಾಗಲಿದೆ ಎಂದು ತಿಳಿಸಿದರು.