ನ.2ರಂದೇ ಚಿಲುಮೆ ಅನುಮತಿ ರದ್ದು: ಬಿಬಿಎಂಪಿ ಆಯುಕ್ತ ತುಷಾರ್
ಮತದಾರರ ಮಾಹಿತಿ ಕಳವು ಸಂಬಂಧ ಚಿಲುಮೆ ಸಂಸ್ಥೆ ವಿರುದ್ಧ ಸೆ.29ಕ್ಕೆ ದೂರು ಬಂದ ಹಿನ್ನೆಲೆಯಲ್ಲಿ ಈಗಾಗಲೇ ಸಂಸ್ಥೆಗೆ ನೀಡಲಾದ ಮತದಾನ ಜಾಗೃತಿ ಅಭಿಯಾನದ ಅನುಮತಿ ರದ್ದುಪಡಿಸಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದ್ದಾರೆ.
ಬೆಂಗಳೂರು (ನ.20): ಮತದಾರರ ಮಾಹಿತಿ ಕಳವು ಸಂಬಂಧ ಚಿಲುಮೆ ಸಂಸ್ಥೆ ವಿರುದ್ಧ ಸೆ.29ಕ್ಕೆ ದೂರು ಬಂದ ಹಿನ್ನೆಲೆಯಲ್ಲಿ ಈಗಾಗಲೇ ಸಂಸ್ಥೆಗೆ ನೀಡಲಾದ ಮತದಾನ ಜಾಗೃತಿ ಅಭಿಯಾನದ ಅನುಮತಿ ರದ್ದುಪಡಿಸಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದ್ದಾರೆ.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ ಅವರು, ಸೆ.29ರಂದು ಚಿಲುಮೆ ಸಂಸ್ಥೆಯ ವಿರುದ್ಧ ದೂರು ಬಂದ ಹಿನ್ನೆಲೆಯಲ್ಲಿ ಮತದಾನ ಜಾಗೃತಿ ಕುರಿತು ವಿಶೇಷ ಅಭಿಯಾನಕ್ಕೆ ಸಂಯೋಜನಾಧಿಕಾರಿಯಾದ ಬಿಬಿಎಂಪಿ ಮಾರುಕಟ್ಟೆವಿಭಾಗದ ಉಪ ಆಯುಕ್ತರು ಚಿಲುಮೆ ಸಂಸ್ಥೆಗೆ ಶೋಕಾಸ್ ನೋಟಿಸ್ ನೀಡಿ ಉತ್ತರ ಪಡೆದು ನ.2ರಂದು ಮತದಾರ ಜಾಗೃತಿಗೆ ನೀಡಲಾದ ಅನುಮತಿ ರದ್ದುಪಡಿಸಲಾಗಿದೆ ಎಂದು ತಿಳಿಸಿದರು.
ಚಿಲುಮೆ ಸಂಸ್ಥೆಯನ್ನು ನಾನು ಬಳಸಿಲ್ಲ: ಸಚಿವ ಅಶ್ವತ್ಥ್ ನಾರಾಯಣ
ಸಮನ್ವಯ ಟ್ರಸ್ಟ್ ನೀಡಿದ ದೂರಿನಲ್ಲಿ ಮತದಾರ ಮಾಹಿತಿ ಕಳವು ಬಗ್ಗೆ ಆರೋಪವಿಲ್ಲ. ಮತಗಟ್ಟೆಅಧಿಕಾರಿಯ ಗುರುತಿನ ಚೀಟಿಗಳನ್ನು ದುರ್ಬಳಕೆ ಮಾಡಿಕೊಂಡಿರುವ ಬಗ್ಗೆ ದೂರು ನೀಡಿದ್ದರು. ಹೀಗಾಗಿ, ಪೊಲೀಸ್ ತನಿಖೆಗೆ ದೂರು ನೀಡದೆ ಸಂಸ್ಥೆಗೆ ನೀಡಲಾಗಿದ್ದ ಅನುಮತಿ ರದ್ದುಪಡಿಸಲಾಗಿತ್ತು. ಆದರೆ, ಮಾಧ್ಯಮಗಳಲ್ಲಿ ಮತದಾರರ ಮಾಹಿತಿ ಕಳವು, ಖಾಸಗಿ ಆ್ಯಪ್ ಮೂಲಕ ಅಕ್ರಮವಾಗಿ ಮಾಹಿತಿ ಸಂಗ್ರಹ ಬಗ್ಗೆ ವರದಿ ಪ್ರಕಟಗೊಂಡ ಹಿನ್ನೆಲೆಯಲ್ಲಿ ನ.16 ರಂದು ಹಲಸೂರು ಗೇಟ್ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ ಎಂದು ಸ್ಪಷ್ಟಪಡಿಸಿದರು.
2018ರಿಂದ ನಿರಂತರವಾಗಿ ಮತದಾನ ಜಾಗೃತಿ ಕುರಿತು ಚಿಲುಮೆ ಸಂಸ್ಥೆಗೆ ಅನುಮತಿ ನೀಡಲಾಗುತ್ತಿದೆ. ಈವರೆಗೆ ಯಾವುದೇ ಆಕ್ಷೇಪಣೆ ಬಂದಿಲ್ಲ. ಹೀಗಾಗಿ, ಈ ಬಾರಿ ಆಧಾರ್ ಸಂಖ್ಯೆಯನ್ನು ಮತದಾರರ ಚೀಟಿಯೊಂದಿಗೆ ಜೋಡಣೆ ಮಾಡುವ ಬಗ್ಗೆ ಜಾಗೃತಿ ಮೂಡಿಸುವುದಕ್ಕೆ ಸಂಸ್ಥೆಗೆ ಅನುಮತಿ ನೀಡಲಾಗಿತ್ತು. ಚಿಲುಮೆ ಸಂಸ್ಥೆಯು ಬಿಬಿಎಂಪಿಯ ವಿವಿಧ ದತ್ತಾಂಶ ಸಂಗ್ರಹಣೆ ಸಮೀಕ್ಷೆಗಳನ್ನು ನಡೆಸಿದೆ. ಒಂದು ವೇಳೆ ಆಕ್ರಮವಾಗಿ ಮತದಾರರ ಮಾಹಿತಿ ಸಂಗ್ರಹಿಸಿರುವುದು ದೃಢಪಟ್ಟರೆ ಕಾನೂನು ಕ್ರಮ ಕೈಗೊಳ್ಳಲಾಗುವುದು. ಈ ಎಲ್ಲದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಒಂದೆರಡು ದಿನದಲ್ಲಿ ವರದಿ ಬರಲಿದೆ. ವರದಿ ಆಧಾರದ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಸದ್ಯದ ಮಾಹಿತಿ ಪ್ರಕಾರ ಮಹದೇವಪುರದಲ್ಲಿ ಅತಿ ಹೆಚ್ಚು ಅಕ್ರಮವಾಗಿ ಮತದಾರರ ಮಾಹಿತಿ ಸಂಗ್ರಹಿಸಲಾಗಿದೆ ಎಂದು ತಿಳಿದು ಬಂದಿದೆ. ಚಿಕ್ಕಪೇಟೆ, ಯಲಹಂಕದಲ್ಲಿ ಒಂದೆರಡು ಕಡೆ ಮಾಹಿತಿ ಸಂಗ್ರಹಿಸಲಾದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಉಳಿದ ಕಡೆ ಯಾವುದೇ ಅಕ್ರಮ ಮಾಹಿತಿ ಸಂಗ್ರಹದ ಬಗ್ಗೆ ತಿಳಿದು ಬಂದಿಲ್ಲ ಎಂದರು.
ವಾಟರ್‌ಗೇಟ್ ರೀತಿ ವೋಟರ್‌ಗೇಟ್ ಹಗರಣ: ಸಿದ್ದರಾಮಯ್ಯ
ಪ್ರಾದೇಶಿಕ ಆಯುಕ್ತರಿಂದಲೂ ತನಿಖೆ: ಮತದಾರರ ಮಾಹಿತಿ ಕಳವು ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ಪ್ರಾದೇಶಿಕ ಆಯುಕ್ತರಿಗೆ ಚುನಾವಣಾ ಆಯೋಗದ ಮುಖ್ಯ ಚುನಾವಣಾಧಿಕಾರಿಗಳು ಸೂಚಿಸಿದ್ದಾರೆ. ಪ್ರಾದೇಶಿಕ ಆಯುಕ್ತರು ತನಿಖೆ ನಡೆಸಿ ವರದಿ ನೀಡಲಿದ್ದಾರೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದರು.