ಸುಮಲತಾ-ಎಚ್‌ಡಿಕೆ ವಾರ್ : ಸಿದ್ದು, ಡಿಕೆಶಿ ಬಣ ಇಬ್ಭಾಗ
- ಸುಮಲತಾ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಾರ್
- ಕಿತ್ತಾಟದ ವಿಚಾರದಲ್ಲಿ ಕಾಂಗ್ರೆಸ್ ಬಣ ರಾಜಕಾರಣವೂ ಇಬ್ಭಾಗ
- ಸಿದ್ದರಾಮಯ್ಯ ಬಣದ ನಾಯಕರು ನೇರವಾಗಿ ಸುಮಲತಾ ಪರ ವಕಾಲತ್ತು
ಬೆಂಗಳೂರು (ಜು.13): ಗಣಿಗಾರಿಕೆ ವಿಚಾರದಲ್ಲಿ ಸಂಸದೆ ಸುಮಲತಾ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನಡುವೆ ನಡೆದಿರುವ ಕಿತ್ತಾಟದ ವಿಚಾರದಲ್ಲಿ ಕಾಂಗ್ರೆಸ್ ಬಣ ರಾಜಕಾರಣವೂ ಇಬ್ಭಾಗವಾಗಿದೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಈ ವಿಚಾರದಲ್ಲಿ ಜಾಣ ಮೌನ ವಹಿಸುವ ಮೂಲಕ ಕುಮಾರಸ್ವಾಮಿ ಬಗ್ಗೆ ತುಸು ಮೃದು ಧೋರಣೆ ತೋರಿದರೆ, ಸಿದ್ದರಾಮಯ್ಯ ಬಣದ ನಾಯಕರು ನೇರವಾಗಿ ಸುಮಲತಾ ಪರ ವಕಾಲತ್ತು ಆರಂಭಿಸಿದ್ದಾರೆ.
ಸುಮಲತಾ-JDS ನಾಯಕರ ರಣಭಯಂಕರ ಯುದ್ಧ : ಸವಾಲ್ ಹಾಕಿ ಅಖಾಡಕ್ಕೆ ಸಂಸದೆ ..
ಡಿ.ಕೆ.ಶಿವಕುಮಾರ್ ಅವರು ಮಂಡ್ಯದ ಈ ಗದ್ದಲದ ವಿಚಾರದಲ್ಲಿ ಯಾವುದೇ ಬಹಿರಂಗ ಹೇಳಿಕೆ ನೀಡಲು ಹಿಂಜರಿಕೆ ತೋರುತ್ತಿರುವುದು ಹಲವು ಬಾರಿ ವ್ಯಕ್ತವಾಗಿದೆ. ಸೋಮವಾರವಂತೂ ಈ ಬಗೆಗಿನ ಪ್ರಶ್ನೆ ತೂರಿ ಬಂದ ಕೂಡಲೇ ಪತ್ರಿಕಾಗೋಷ್ಠಿಯನ್ನು ಅಷ್ಟಕ್ಕೆ ನಿಲ್ಲಿಸಿ ಅವರು ಹೊರ ನಡೆದರು. ಈ ವಿವಾದ ಆರಂಭವಾದಾಗಿನಿಂದ ಶಿವಕುಮಾರ್ ತಮ್ಮ ನಿಲುವನ್ನು ಸ್ಪಷ್ಟವಾಗಿ ವ್ಯಕ್ತಪಡಿಸಿಲ್ಲ. ಇನ್ನು ಸಿದ್ದರಾಮಯ್ಯ ಸಹ ನೇರವಾಗಿ ಈ ವಿಚಾರದಲ್ಲಿ ವಾಗ್ದಾಳಿ ನಡೆಸದೆ ಇದ್ದರೂ ಅವರ ಪರ ನಾಯಕರು ಬಹಿರಂಗವಾಗಿ ಸುಮಲತಾ ಪರ ನಿಲುವು ವ್ಯಕ್ತಪಡಿಸಲು ಆರಂಭಿಸಿದ್ದಾರೆ.
ಸಿದ್ದರಾಮಯ್ಯ ಅವರ ಆಪ್ತರೆನಿಸಿದ ಮಾಜಿ ಸಚಿವೆ ಉಮಾಶ್ರೀ ಅವರು ಸೋಮವಾರ ಬಹಿರಂಗವಾಗಿ ಈ ಬಗ್ಗೆ ಹೇಳಿಕೆ ನೀಡಿ, ಕುಮಾರಸ್ವಾಮಿ ಧೋರಣೆಯನ್ನು ಖಂಡಿಸಿದ್ದಾರೆ. ಇನ್ನು ಕಾಂಗ್ರೆಸ್‌ನ ಮಂಡ್ಯ ನಾಯಕರಾದ ಹಾಗೂ ಸಿದ್ದರಾಮಯ್ಯ ಅವರ ಆಪ್ತರಾದ ಚೆಲುವರಾಯಸ್ವಾಮಿ, ನರೇಂದ್ರಸ್ವಾಮಿ ಮೊದಲಾದವರು ಪರೋಕ್ಷವಾಗಿ ಸುಮಲತಾ ಪರ ನಿಂತಿದ್ದಾರೆ ಎಂದು ಹೇಳಲಾಗುತ್ತಿದೆ.