ನಾವು ಯಾವತ್ತೂ ನಿಮಗೆ ಸುಳ್ಳು ಹೇಳಲ್ಲ, ಸುಳ್ಳು ಭರವಸೆ ನೀಡಲ್ಲ: ರಾಹುಲ್ ಗಾಂಧಿ
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕರ್ನಾಟಕ ಸರ್ಕಾರದ ಐದು ಗ್ಯಾರಂಟಿಗಳ ಮಾದರಿಯನ್ನು ಕಾಂಗ್ರೆಸ್ ದೇಶಾದ್ಯಂತ ವಿಸ್ತರಿಸಲಿದೆ ಎಂದು ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಘೋಷಿಸಿದರು.
ಮೈಸೂರು (ಆ.31): ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕರ್ನಾಟಕ ಸರ್ಕಾರದ ಐದು ಗ್ಯಾರಂಟಿಗಳ ಮಾದರಿಯನ್ನು ಕಾಂಗ್ರೆಸ್ ದೇಶಾದ್ಯಂತ ವಿಸ್ತರಿಸಲಿದೆ ಎಂದು ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಘೋಷಿಸಿದರು. ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಬುಧವಾರ ರಾಜ್ಯ ಸರ್ಕಾರ ಆಯೋಜಿಸಿದ್ದ ಗೃಹಲಕ್ಷ್ಮೀ ಯೋಜನೆಗೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಕಾಂಗ್ರೆಸ್ ಸರ್ಕಾರ ಚುನಾವಣಾ ಪ್ರಚಾರದ ವೇಳೆ ನೀಡಿದ್ದ ಭರವಸೆ ಈಡೇರಿಸಿದೆ. ನಾವು ಯಾವತ್ತೂ ಸುಳ್ಳು ಭರವಸೆಗಳನ್ನು ನೀಡುವುದಿಲ್ಲ. ನುಡಿದಂತೆ ನಡೆದಿದ್ದೇವೆ.
ಕರ್ನಾಟಕದಲ್ಲಿ ನಾವು ಜಾರಿಗೆ ತಂದ ಯೋಜನೆಗಳು ಇನ್ನು ಮುಂದೆ ದೇಶಾದ್ಯಂತ ವಿಸ್ತರಣೆಯಾಗಲಿದೆ. ಈ ಐದು ಗ್ಯಾರಂಟಿಗಳು ಕೇವಲ ಕಲ್ಯಾಣ ಯೋಜನೆಗಳಲ್ಲ, ಬದಲಾಗಿ ಆಡಳಿತದ ಮಾದರಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಇದೇ ವೇಳೆ ಮಹಿಳೆಯರನ್ನು ಮರದ ಬೇರುಗಳಿಗೆ ಹೋಲಿಸಿದ ರಾಹುಲ್ ಗಾಂಧಿ, ಅತ್ಯಂತ ವಿಶಾಲವಾದ ಮರಕ್ಕೂ ಸದೃಢವಾದ ಬೇರು ಇರಲೇಬೇಕು. ಇದೇ ಕಾರಣಕ್ಕೆ ಮಹಿಳೆಯರ ಸಬಲೀಕರಣ ಕಾರ್ಯಕ್ರಮವಾಗಿ ಗೃಹಲಕ್ಷ್ಮೀ ಯೋಜನೆ ಜಾರಿಗೊಳಿಸಿದ್ದೇವೆ. ಅಡಿಪಾಯ ಸಧೃಡವಾಗಿದ್ದರೆ ಮಾತ್ರ ದೊಡ್ಡ ಕಟ್ಟಡ ಕಟ್ಟಲು ಸಾಧ್ಯ ಎಂದರು.
ರಾಜಕಾರಣದಿಂದ ಹೊರಗೆ ಹೆಜ್ಜೆ ಇಟ್ಟಿಲ್ಲ, ಸಮಯ, ಸಂದರ್ಭ ಎಲ್ಲದಕ್ಕೂ ಉತ್ತರ ಕೊಡುತ್ತೆ: ನಿಖಿಲ್
ಭಾರತ್ ಜೋಡೋ ಯಾತ್ರೆ ವೇಳೆ ನಾನು 600 ಕಿ.ಮೀ. ಪಾದಯಾತ್ರೆ ನಡೆಸಿ ಹಲವು ಮಹಿಳೆಯರೊಂದಿಗೆ ಮಾತನಾಡಿದ್ದೆ. ಆ ವೇಳೆ ಬೆಲೆ ಏರಿಕೆ ಎಲ್ಲರಿಗೂ ಬರೆ ಹಾಕಿದಂತಾಗಿದೆ ಎಂಬುದು ಅರಿವಿಗೆ ಬಂತು. ಪೆಟ್ರೋಲ್, ಡೀಸೆಲ್, ಅಡುಗೆ ಅನಿಲಗಳ ಬೆಲೆ ಏರಿಕೆ ಪರಿಣಾಮ ಮಹಿಳೆಯರ ಮೇಲೆ ಆಗಿದ್ದು, ಈ ಹೊರೆ ಹೊರಲು ಸಾಧ್ಯವಿಲ್ಲ ಎಂದು ಅವರು ನೋವು ತೋಡಿಕೊಂಡಿದ್ದರು. ಮಹಿಳೆಯರೇ ಈ ರಾಜ್ಯದ ಅಡಿಪಾಯ. ಚುನಾವಣೆಗೂ ಮುನ್ನ ರಾಜ್ಯ ಕಾಂಗ್ರೆಸ್‌ನ ಎಲ್ಲಾ ನಾಯಕರು ಐದು ಗ್ಯಾರೆಂಟಿ ಈಡೇರಿಸುವ ಭರವಸೆ ನೀಡಿದ್ದರು. ಅದರಂತೆ ಇಂದು ಕೋಟ್ಯಾಂತರ ಮಹಿಳೆಯರಿಗೆ . 2000 ನೀಡಿದ್ದೇವೆ. ಈ ಗೃಹಲಕ್ಷ್ಮೀ ಯೋಜನೆಯು ವಿಶ್ವದ ಅತಿದೊಡ್ಡ ನಗದು ವರ್ಗಾವಣೆ ಯೋಜನೆಯಾಗಿದೆ ಎಂದು ತಿಳಿಸಿದರು.
ಇಂದಿನಿಂದ ಪ್ರತಿ ತಿಂಗಳು ರಾಜ್ಯದ ಪ್ರತಿ ಮಹಿಳೆಯರ ಖಾತೆಗೆ .2000 ನಗದು ಸೇರಲಿದೆ. ಇದು ನಮ್ಮ ಮತ್ತು ರಾಜ್ಯ ಕಾಂಗ್ರೆಸ್ ಸರ್ಕಾರದ ಗ್ಯಾರೆಂಟಿ ಭರವಸೆ ಆಗಿದೆ. ಚುನಾವಣೆಗೂ ಮುನ್ನ ರಾಜ್ಯದ ಮಹಿಳೆಯರಿಗೆ ಉಚಿತ ಬಸ್ ಸೌಲಭ್ಯ ನೀಡುವ ಭರವಸೆ ನೀಡಿದ್ದೆವು. ಈ ಯೋಜನೆಯನ್ನೂ ಇಂದು ಈಡೇರಿಸಿದ್ದೇವೆ. ಇಂದು ರಾಜ್ಯದಲ್ಲಿ ಮಹಿಳೆಯರಿಗೆ ಉಚಿತ ಬಸ್ ಸೌಲಭ್ಯ ನೀಡಿದ್ದೇವೆ. ಅಲ್ಲದೆ ಅನ್ನಭಾಗ್ಯ ಯೋಜನೆ ಅಡಿ ಅರ್ಹ ಫಲಾನುಭವಿಗಳಿಗೆ ತಲಾ 10 ಕೆಜಿ ಅಕ್ಕಿ, ಗೃಹ ಜ್ಯೋತಿ ಯೋಜನೆಯ ಮೂಲಕ 200 ಯುನಿಟ್ ವಿದ್ಯುತ್ ಅನ್ನು ಉಚಿತವಾಗಿ ನೀಡುತ್ತಿರುವುದಾಗಿ ತಿಳಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಆಧುನಿಕ ಚಾರ್ವಾಕನಿದ್ದಂತೆ: ಸಿ.ಟಿ.ರವಿ
ನಾವು ಎಂದಿಗೂ ಸುಳ್ಳು ಹೇಳುವುದಿಲ್ಲ. ಆಗುವುದಾದರೆ ಆಗುತ್ತದೆ ಎನ್ನುತ್ತೇವೆ. ಇದು ನಮ್ಮ ಯೋಜನೆ ಅಲ್ಲ, ನಿಮ್ಮ ಯೋಜನೆ. ಭಾರತ್ ಜೋಡೋ ವೇಳೆ ನಿಮ್ಮ ಮಾತು ಕೇಳಿ ಈ ಯೋಜನೆ ಮಾಡಿದ್ದೇವೆ. ಇದು ಯಾವುದೇ ಬಂಡವಾಳಶಾಯಿಗಳಿಗೆ ಮಾಡಿದ ಯೋಜನೆ ಅಲ್ಲ. ನಿಮಗಾಗಿ ನೀವೇ ಮಾಡಿಕೊಂಡ ಯೋಜನೆ. ಆದರೆ, ದೆಹಲಿಯಲ್ಲಿನ ಕೇಂದ್ರ ಸರ್ಕಾರ ಕೋಟ್ಯಧಿಪತಿಗಳಿಗೆ ಮಾತ್ರವೇ ಇದ್ದು, ಕಾಮಗಾರಿಗಳು, ಟೆಂಡರ್‌ಗಳು ಅವರ ಕೆಲವೇ ಸ್ನೇಹಿತರಿಗೆ ಸಿಗುತ್ತಿದೆ ಎಂದು ದೂರಿದರು.