ಮುಖ್ಯಮಂತ್ರಿ ಸಿದ್ದರಾಮಯ್ಯ ಆಧುನಿಕ ಚಾರ್ವಾಕನಿದ್ದಂತೆ: ಸಿ.ಟಿ.ರವಿ
ಸಾಲ ಮಾಡಿಯಾದರೂ ತುಪ್ಪ ತಿನ್ನು ಎನ್ನುವುದು ಮುನಿ ಚಾರ್ವಾಕ ಸಿದ್ಧಾಂತ. ಆಧುನಿಕ ಚಾರ್ವಾಕರಾಗಿರುವ ಸಿದ್ದರಾಮಯ್ಯ ಸಾಲ ಮಾಡಿ ರಾಜ್ಯ ಮುಳುಗಿಸಿದರೂ ತುಪ್ಪ ಕೊಡುವ ನೀತಿಯನ್ನು ಅನುಸರಿಸುತ್ತಿದ್ದಾರೆ. ಆದಾಯಕ್ಕಿಂತ ಖರ್ಚು ಹೆಚ್ಚಾಗಿದೆ ಎಂದು ಮಾಜಿ ಸಚಿವ ಸಿ.ಟಿ.ರವಿ ಆರೋಪಿಸಿದರು.
ಮೈಸೂರು (ಆ.30): ಸಾಲ ಮಾಡಿಯಾದರೂ ತುಪ್ಪ ತಿನ್ನು ಎನ್ನುವುದು ಮುನಿ ಚಾರ್ವಾಕ ಸಿದ್ಧಾಂತ. ಆಧುನಿಕ ಚಾರ್ವಾಕರಾಗಿರುವ ಸಿದ್ದರಾಮಯ್ಯ ಸಾಲ ಮಾಡಿ ರಾಜ್ಯ ಮುಳುಗಿಸಿದರೂ ತುಪ್ಪ ಕೊಡುವ ನೀತಿಯನ್ನು ಅನುಸರಿಸುತ್ತಿದ್ದಾರೆ. ಆದಾಯಕ್ಕಿಂತ ಖರ್ಚು ಹೆಚ್ಚಾಗಿದೆ ಎಂದು ಮಾಜಿ ಸಚಿವ ಸಿ.ಟಿ.ರವಿ ಆರೋಪಿಸಿದರು. ರಾಜ್ಯ ಸರ್ಕಾರದ ನೂರು ದಿನಗಳ ಆಡಳಿತದ ಕುರಿತು ಬಿಜೆಪಿ ಕರ್ನಾಟಕ ಪ್ರಕಟಿಸಿರುವ ಹಳಿ ತಪ್ಪಿದ ಆಡಳಿತ ಪುಸ್ತಕವನ್ನು ನಗರದ ಬಿಜೆಪಿ ಕಚೇರಿಯಲ್ಲಿ ಬಿಡುಗಡೆಗೊಳಿಸಿ ಮಾತನಾಡಿದ ಅವರು, ನಾಡಿನಲ್ಲಿ ಬರಗಾಲ ಆವರಿಸಿದ್ದು, ರೈತರ ಬವಣೆಯಲ್ಲಿ ಬೇಯುತ್ತಿದ್ದಾರೆ. ಹೀಗಿದ್ದರೂ ರಾಜ್ಯ ಸರ್ಕಾರ ಸಂಭ್ರಮದ ತುದಿಯಲ್ಲಿ ತೇಲುತ್ತಿದೆ ಎಂದು ಟೀಕಿಸಿದರು.
ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ತೀರ್ಮಾನಕ್ಕೂ ಮುನ್ನವೇ ತಮಿಳುನಾಡಿಗೆ ನೀರು ಬಿಟ್ಟರು. ‘ಇಂಡಿಯಾ’ದಲ್ಲಿ ಒಡಕುವುಂಟು ಆಗದಂತೆ ಮತ್ತು ತಮಿಳುನಾಡು ಸಿಎಂ ಸ್ಟಾಲಿನ್ ಮೆಚ್ಚಿಸಲು ನೀರು ಬಿಟ್ಟು ರಾಜ್ಯದ ರೈತರನ್ನು ಬಲಿಕೊಟ್ಟರು. ಸಂಭ್ರಮದ ಮನಸ್ಥಿತಿಯ ಬಗ್ಗೆ ಸಿದ್ದರಾಮಯ್ಯ ಅವರೇ ಹೇಳಬೇಕು ಎಂದು ಆಗ್ರಹಿಸಿದರು. ಈ ಸರ್ಕಾರದ 100 ದಿನಗಳಲ್ಲಿ ಬಿಜೆಪಿ ಸರ್ಕಾರದ ಜನಪರ ಯೋಜನೆಗಳನ್ನು ರದ್ದು ಮಾಡಿದೆ. ಶಕ್ತಿ ಯೋಜನೆ ಮುಖಾಂತರ ಬಸ್ ದರ ಏರಿಸಿ ಪುರುಷರಿಗೆ ಬರೆ ಹಾಕಿದೆ. ಗೃಹಜ್ಯೋತಿ ಯೋಜನೆಯಡಿ ದುಪ್ಪಟ್ಟು ಬಿಲ್ ಬಂದಿದೆ.
ಜನರ ಮಧ್ಯೆ ಇರುವುದು ಕಾಂಗ್ರೆಸ್ಸಿಗೆ ಅಪರಾಧ ಅನಿಸುತ್ತೆ: ಸಿ.ಟಿ.ರವಿ
ಅನಿಯಮಿತ ವಿದ್ಯುತ್ ಕಡಿತ ಮಾಡಲಾಗುತ್ತಿದೆ. ಮಳೆಗಾಲದಲ್ಲಿಯೇ ವಿದ್ಯುತ್ ಕಡಿತ ಮಾಡಿದ ಕುಖ್ಯಾತಿ ಕಾಂಗ್ರೆಸ್ ಸರ್ಕಾರಕ್ಕೆ ಸಲ್ಲುತ್ತದೆ ಎಂದು ಅವರು ಆರೋಪಿಸಿದರು. ಗೃಹಲಕ್ಷೀ ಹಣ ಹೊಂದಿಸಲು ಮದ್ಯದ ದರ ಏರಿಕೆ ಮಾಡಲಾಗಿದೆ. ಮೂಲಸೌಕರ್ಯಕ್ಕೆ ಒತ್ತು ಕೊಡುವ ಯಾವ ಯೋಜನೆಯನ್ನು ರೂಪಿಸಲಿಲ್ಲ. ಬೆಲೆ ಏರಿಕೆ ದುಪ್ಪಟ್ಟಾಗಿದೆ. ಸಂಬಳ, ನಿವೃತ್ತ ವೇತನ, ಗ್ಯಾರಂಟಿ ಯೋಜನೆಗೆ ಮಾಸಿಕ 14500 ಕೋಟಿ ಬೇಕು. ರಾಜ್ಯದ ಆದಾಯವೇ 12 ಸಾವಿರ ಕೋಟಿ, ಉಳಿಕೆ ಹಣವನ್ನು ಸಾಲ ಮಾಡಲು ನಿರ್ಧರಿಸಿದೆ ಎಂದು ಅವರು ದೂರಿದರು.
ಗ್ಯಾರಂಟಿ ಯೋಜನೆಗಳಿಗಾಗಿ ಪರಿಶಿಷ್ಟರ ಜಾತಿ, ಪಂಗಡದವರ ಹಣ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಪ್ಯಾಕ್ಟ್ಚೆಕ್ ಹೆಸರಿನಲ್ಲಿ ಅಭಿಪ್ರಾಯ ದಮನಿಸುವ ಸುಳ್ಳು ಪ್ರಕರಣ ದಾಖಲಿಸುತ್ತಿದೆ. ಬೆಲೆ ಏರಿಕೆಯನ್ನು ಸಂಭ್ರಮಿಸಲು ಮೈಸೂರಲ್ಲಿ ರಾಹುಲ್ ಗಾಂಧಿ ಕರೆಸಿ ಕಾರ್ಯಕ್ರಮ ಮಾಡುತ್ತಿದ್ದಾರೆ ಎಂದು ಅವರು ಟೀಕಿಸಿದರು. ರೈತರ ಆತಹತ್ಯೆ ದುಪ್ಪಟ್ಟಾಗಿದೆ. ಚಿತ್ರದುರ್ಗ, ಕೋಲಾರದಲ್ಲಿ ಕಲುಷಿತ ನೀರು ಸೇವಿಸಿ ಜನರು ಮೃತಪಟ್ಟಿದ್ದಾರೆ. ತಮ್ಮ ವೈಫಲ್ಯಗಳನ್ನು ಮರೆಮಾಚಲು ಹಿಂದಿನ ವಿವಾದಗಳನ್ನು ಕೆದಕುತ್ತಿದ್ದಾರೆ ಎಂದು ಅವರು ದೂರಿದರು.
ಮತ್ತೆ ಕಾಂಗ್ರೆಸ್ ಕದ ತಟ್ಟಿದರೆ ಮರ್ಯಾದೆಗೇಡು: ಸಿ.ಟಿ.ರವಿ
ಶಾಸಕರು ದನಗಳಲ್ಲ: ಬಿಜೆಪಿ ಶಾಸಕರು ಕಾಂಗ್ರೆಸ್ ಸೇರ್ಪಡೆ ಕುರಿತು ಪ್ರತಿಕ್ರಿಯಿಸಿದ ಅವರು, ದನ ಆದರೆ ಕಟ್ಟಿಹಾಕಬಹುದು. ಹೋಗುವವರನ್ನು ತಡೆಯಲಾಗುವುದೇ? ಸದ್ಯಕ್ಕೆ ಕಾಂಗ್ರೆಸ್‌ನಲ್ಲಿ ಶಾಸಕರ ಅಸಮಾಧಾನ ಇದೆ. ಅಲ್ಲಿರುವವರ ಭಾರ ತಡೆದುಕೊಳ್ಳುವುದೇ ಕಷ್ಟ. ಹೋದವರ ಭಾರವನ್ನು ತಡೆಯುವರೇ? ಬಿಜೆಪಿ 66 ಶಾಸಕರು ಪಕ್ಷ ನಿಷ್ಠರು. ಸಮೃದ್ಧಿಯ ಕಾಲದಲ್ಲಿ ಮಾತ್ರವಲ್ಲ ಕಷ್ಟಬಂದಾಗ ಎಲ್ಲರ ನಿಷ್ಠೆ ಗೊತ್ತಾಗುತ್ತದೆ ಎಂದು ಹೇಳಿದರು. ಇಷ್ಟರಲ್ಲಿ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಬೇಕಿತ್ತು. ತಡವಾಗಿರುವುದರ ಹಿಂದೆ ಸದ್ದುದ್ದೇಶ ಇರಬಹುದು. ಸಂಸತ್ ಚುನಾವಣೆಗೆ ನಾನು ಟಿಕೆಟ್ ಆಕಾಂಕ್ಷಿಯಲ್ಲ ಎಂದು ಅವರು ಸ್ಪಷ್ಟಪಡಿಸಿದರು. ಶಾಸಕ ಟಿ.ಎಸ್. ಶ್ರೀವತ್ಸ, ಮಾಜಿ ಶಾಸಕ ಎಲ್. ನಾಗೇಂದ್ರ, ಬಿಜೆಪಿ ಜಿಲ್ಲಾಧ್ಯಕ್ಷೆ ಮಂಗಳಾ ಸೋಮಶೇಖರ್, ಮುಖಂಡರಾದ ಮಿರ್ಲೆ ಶ್ರೀನಿವಾಸಗೌಡ, ಮೋಹನ್, ಮಹೇಶ್, ಗಿರಿಧರ್ ಮೊದಲಾದವರು ಇದ್ದರು.