ನೂತನ ಸಂಸತ್ ಭವನ ಹೊಗಳಿದ ಶಾರುಖ್ ವಿರುದ್ಧ ಕಾಂಗ್ರೆಸ್ ಗರಂ, ಖಾನ್ ಕಿಂಗ್ ಅಲ್ಲ ಎಂದ ನಾಯಕ!
ಪ್ರಧಾನಿ ನರೇಂದ್ರ ಮೋದಿ ನೂತನ ಸಂಸತ್ ಭವನದಲ್ಲಿ ಐತಿಹಾಸಿಕ ಸೆಂಗೋಲ್ ಪ್ರತಿಷ್ಠಾಪಿಸಿದ್ದಾರೆ. ಈ ಮೂಲಕ ಹೊಸ ಸಂಸತ್ ಭವನ ಅಧಿಕೃತವಾಗಿ ಉದ್ಘಾಟನೆಯಾಗಿದೆ. ಹೊಸ ಸಂಸತ್ ಭವನ ಹಾಗೂ ಪ್ರಧಾನಿ ಮೋದಿಯನ್ನು ಬಾಲಿವುಡ್ ನಟ ಶಾರುಖ್ ಖಾನ್ ಪ್ರಶಂಸಿದ್ದಾರೆ. ಇದು ಕಾಂಗ್ರೆಸ್ ನಾಯಕರನ್ನು ಕೆರಳಿಸಿದೆ.
ನವದೆಹಲಿ(ಮೇ.28): ರಾಷ್ಟ್ರ ರಾಜಧಾನಿಯಲ್ಲಿ ನೂತನ ಸಂಸತ್ ಭವನ ಉದ್ಘಾಟನೆಯಾಗಿದೆ. ಪ್ರಜಾಭುತ್ವದ ದೇಗುಲ ಉದ್ಘಾಟನೆ ಹಲವು ಕಾರಣಗಳಿಂದ ವಿವಾದಕ್ಕೆ ಕಾರಣಾಗಿದೆ. ಕಾಂಗ್ರೆಸ್ ಸೇರಿದಂತೆ ಹಲವು ವಿಪಕ್ಷಗಳು ಕಾರ್ಯಕ್ರಮಕ್ಕೆ ಬಹಿಷ್ಕಾರ ಹಾಕಿದೆ. ಇಷ್ಟೇ ಅಲ್ಲ ಸರಣಿ ಟ್ವೀಟ್ ಮೂಲಕ ನೂತನ ಸಂಸತ್ ಭವನ, ಪ್ರಧಾನಿ ಮೋದಿ, ಬಿಜೆಪಿಯನ್ನು ಟೀಕಿಸಿದೆ. ಇದರ ನಡುವೆ ಬಾಲಿವುಡ್ ನಟ ಶಾರುಖ್ ಖಾನ್ ನೂತನ ಸಂಸತ್ ಭವನ ಹಾಗೂ ಪ್ರಧಾನಿ ಮೋದಿಯನ್ನು ಹೊಗಳಿದ್ದಾರೆ. ಇದು ಕಾಂಗ್ರೆಸ್ ಕೆರಳಿಸಿದೆ. ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್ ನಾಯಕ, ಖಾನ್ ಇನ್ಯಾವತ್ತು ಕಿಂಗ್ ಅಲ್ಲ ಎಂದಿದ್ದಾರೆ.
ಹೊಸ ಸಂಸತ್ ಭವನವನ್ನು ಉದ್ದೇಶಿತ ಕಾಲಮಿತಿಯೊಳಗೆ ಪೂರ್ಣಗೊಳಿಸಿ ಇದೀಗ ಉದ್ಘಾಟನೆಗೊಂಡಿದೆ. ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ಮೋದಿಗೆ ಭಾರಿ ಮೆಚ್ಚುಗೆಯ ಸುರಿಮಳೆ ವ್ಯಕ್ತವಾಗಿದೆ. ಸುಸಜ್ಜಿತ ಕಟ್ಟಡದ ವಿಡಿಯೋವನ್ನು ಮೋದಿ ಹಂಚಿಕೊಂಡಿದ್ದರು ಇದೇ ವೇಳೆ ನಿಮ್ಮ ನಿಮ್ಮ ಧ್ವನಿಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲು ಮೋದಿ ಮನವಿ ಮಾಡಿದ್ದರು. ಇದರಂತೆ ಶಾರುಕ್ ಖಾನ್ ತಮ್ಮ ಧ್ವನಿ ಮೂಲಕ ಈ ವಿಡಿಯೋ ಹಂಚಿಕೊಂಡಿದ್ದಾರೆ.
ಈ ವಿಡಿಯೋದಲ್ಲಿ ಶಾರುಖ್ ಖಾನ್ ನಮ್ಮ ಸಂವಿಧಾನವನ್ನು ಎತ್ತಿಹಿಡಿಯುವ, ದೇಶದ ಪ್ರತಿಯೊಬ್ಬ ಪ್ರಜೆಯನ್ನು ಪ್ರತಿನಿಧಿಸುವ ಹಾಗೂ ಜನರ ವೈವಿಧ್ಯತೆಯನ್ನು ರಕ್ಷಿಸುವ ಭವ್ಯ ಮನೆಯಾಗಿದೆ. ಪ್ರಧಾನಿ ಮೋದಿಜಿ ಹೊಸ ಭಾರತಕ್ಕಾಗಿ ಹೊಸ ಸಂಸತ್ ಕಟ್ಟಡ ಆದರೆ ಗತವೈಭವದ ಹಳೆಯ ಕನಸಿನೊಂದಿಗೆ ಹೆಜ್ಜೆ ಹಾಕುತ್ತಿದ್ದೇವೆ. ಜೈ ಹಿಂದ್. ನನ್ನ ಸಂಸತ್ ನನ್ನ ಹೆಮ್ಮೆ ಎಂದು ಶಾರುಖ್ ಖಾನ್ ಹೇಳಿದ್ದಾರೆ.
ಆದರೆ ಶಾರುಖ್ ಖಾನ್ ಟ್ವೀಟ್ ಮೂಲಕ ಹೊಸ ಸಂಸತ್ ಭವನ ಹಾಗೂ ಪ್ರಧಾನಿ ಮೋದಿ ಹೊಗಳಿದ ಬೆನ್ನಲ್ಲೇ ಭಾರಿ ಟೀಕೆ ಎದುರಿಸಿದ್ದಾರೆ. ಹಲವರು ಶಾರುಖ್ ಖಾನ್ ವಿರುದ್ಧ ಸರಣಿ ಟ್ವೀಟ್ ಮಾಡಿದ್ದಾರೆ. ಇತ್ತ ಉತ್ತರ ಪ್ರದೇಶದ ಕಾಂಗ್ರೆಸ್ ವಕ್ತಾರ ಪಂಖುರಿ ಪಾಠಕ್, ಗರಂ ಆಗಿದ್ದಾರೆ. ನಿಮ್ಮ ಪುತ್ರನನನ್ನು ವಿನಾ ಕಾರಣ ಜೈಲಿಗಟ್ಟಿದಾಗ ನಾವು ನಿಮ್ಮ ಬೆಂಬಲಕ್ಕೆ ನಿಂತೆವು. ನಿಮ್ಮ ಚಿತ್ರವನ್ನು ಬಹಿಷ್ಕರಿಸಿದಾಗ ನಿಮಗೆ ಬೆಂಬಲ ಸೂಚಿಸಿದೆವು. ಧರ್ಮದ ಕಾರಣಕ್ಕಾಗಿ ನಿಮ್ಮನ್ನು ಟಾರ್ಗೆಟ್ ಮಾಡಿದಾಗ ನಿಮಗೆ ಸಹಕಾರ ನೀಡಿದೆವು. ಇದೀಗ ನೀವು ಏನು ಮಾಡಿದ್ದೀರಿ ಅದನ್ನೇ ಪಡೆಯಲು ಅರ್ಹರು. ಆದರೆ ಇನ್ಯಾವತ್ತು ನೀವು ಕಿಂಗ್ ಅಲ್ಲ ಎಂದು ಪಂಖುರಿ ಪಾಠಕ್ ಹೇಳಿದ್ದಾರೆ.
ಕಾಂಗ್ರೆಸ್ ಹೊಸ ಸಂಸತ್ ಭವನ ಉದ್ಘಾಟನೆ ಕಾರ್ಯಕ್ರಮಕ್ಕೆ ಬಹಿಷ್ಕಾರ ಹಾಕಿದೆ. ಕಾಂಗ್ರೆಸ್ ಜೊತೆ 20ಕ್ಕೂ ಹೆಚ್ಚು ವಿಪಕ್ಷಗಳು ಕಾರ್ಯಕ್ರಕ್ಕೆ ಬಹಿಷ್ಕಾರ ಹಾಕಿದೆ. ಹೊಸ ಸಂಸತ್ ಭವನವನ್ನು ಪ್ರಧಾನಿ ಮೋದಿ ಉದ್ಘಾಟನೆ ಮಾಡಬಾರದು, ರಾಷ್ಟ್ರಪತಿ ಉದ್ಘಾಟನೆ ಮಾಡಬೇಕು ಅನ್ನೋದು ಕಾಂಗ್ರೆಸ್ ಹಾಗೂ ವಿಪಕ್ಷಗಳ ವಾದಾಗಿದೆ. ಸಂಸತ್ ಭವನ ಕಟ್ಟಡ ನಿರ್ಮಾಣದಿಂದ ಹಿಡಿದು ಇದೀಗ ಉದ್ಘಾಟನೆವರೆಗೆ ವಿವಾದಗಳಿಂದಲೇ ತುಂಬಿಕೊಂಡಿದೆ. ಆದರೆ ಈ ಎಲ್ಲಾ ವಿವಾದಗಳ ನಡುವೆ ಪ್ರಧಾನಿ ಮೋದಿ ಸನಾತನ ಧರ್ಮದ ಪ್ರಕಾರ, ಐತಿಹಾಸಿಕ ಸೆಂಗೋಲ್ ಪ್ರತಿಷ್ಠಾಪಿಸಿ ಸಂಸತ್ ಭವನ ಉದ್ಘಾಟನೆ ಮಾಡಿದ್ದಾರೆ. ಇದು ಕೂಡ ಹಲವು ವಿಪಕ್ಷಗ ಕಣ್ಣುಕೆಂಪಾಗಿಸಿದೆ. ಇದರ ವಿರುದ್ಧವೂ ಸರಣಿ ಟೀಕೆ ನಡೆಯುತ್ತಿದೆ.