ಬಾಗಲಕೋಟೆ: ಎಸ್.ಆರ್.ಪಾಟೀಲಗೆ ಸಿಗುವುದೇ ಉನ್ನತ ಜವಾಬ್ದಾರಿ?
ಪಕ್ಷ ಹಾಗೂ ಸರ್ಕಾರದ ಭಾಗವಾಗಿ ಸುದೀರ್ಘ ಕಾಲ ವಿಧಾನ ಪರಿಷತ್ ಸದಸ್ಯರಾಗಿ, ಸರ್ಕಾರದಲ್ಲಿ ಸಚಿವರಾಗಿ, ಪ್ರತಿಪಕ್ಷದ ನಾಯಕರಾಗಿ ತಮ್ಮನ್ನು ಗುರುತಿಸಿಕೊಂಡಿದ್ದ ಎಸ್.ಆರ್.ಪಾಟೀಲರಿಗೆ 16 ತಿಂಗಳ ಹಿಂದೆ ನಡೆದ ಕೆಲವು ರಾಜಕೀಯ ಬೆಳವಣಿಗೆಗಳು ಅವರನ್ನು ಪಕ್ಷದಲ್ಲಿ ನೇಪಥ್ಯಕ್ಕೆ ಸರಿಸಲು ಕಾರಣವಾಯಿತು.
ಈಶ್ವರ ಶೆಟ್ಟರ
ಬಾಗಲಕೋಟೆ(ಮೇ.23): ಕಾಂಗ್ರೆಸ್ ಪಕ್ಷದಲ್ಲಿ ನಾಲ್ಕು ದಶಕಗಳ ಕಾಲ ಒಂದಿಲ್ಲ ಒಂದು ಜವಾಬ್ದಾರಿ ನಿರ್ವಹಿಸಿದ್ದ ಬಾಗಲಕೋಟೆಯ ಹಿರಿಯ ರಾಜಕಾರಣಿ ಮಾಜಿ ಸಚಿವ ಎಸ್.ಆರ್.ಪಾಟೀಲ ಅವರಿಗೆ ಸದ್ಯದ ಸರ್ಕಾರದಲ್ಲಾಗಲಿ ಅಥವಾ ಪಕ್ಷದಲ್ಲಾಗಲಿ ಮತ್ತೊಮ್ಮೆ ಜವಾಬ್ದಾರಿ ಸಿಗಬಹುದೇ ಎಂಬ ಕುತೂಹಲ ರಾಜಕೀಯ ವಲಯದಲ್ಲಿ ಸದ್ಯ ಚರ್ಚಿತ ವಿಷಯವಾಗಿದೆ.
1987ರಿಂದಲೇ ಕಾಂಗ್ರೆಸ್ ಪಕ್ಷದ ಮೂಲಕ ಅಂದಿನ ಜಿಲ್ಲಾ ಪರಿಷತ್ ಸದಸ್ಯರಾಗಿ ಅಂದಿನ ವಿಜಯಪುರ ಜಿಲ್ಲೆಯ ಜಿಲ್ಲಾ ಪರಿಷತ್‌ನ ವಿರೋಧ ಪಕ್ಷದ ನಾಯಕರಾಗಿ ಸಾರ್ವಜನಿಕ ಜೀವನದಲ್ಲಿ ಗುರುತಿಸಿಕೊಂಡಿದ್ದ ಎಸ್.ಆರ್.ಪಾಟೀಲ ಅವರು ಮೂರು ದಶಕಗಳ ಕಾಲ ಅಧಿಕಾರಯುತ ರಾಜಕಾರಣದಿಂದ ಎಂದು ಹಿಂದೆ ಸರಿದಿದ್ದಿಲ್ಲ. ಪಕ್ಷ ಹಾಗೂ ಸರ್ಕಾರದ ಭಾಗವಾಗಿ ಸುದೀರ್ಘ ಕಾಲ ವಿಧಾನ ಪರಿಷತ್ ಸದಸ್ಯರಾಗಿ, ಸರ್ಕಾರದಲ್ಲಿ ಸಚಿವರಾಗಿ, ಪ್ರತಿಪಕ್ಷದ ನಾಯಕರಾಗಿ ತಮ್ಮನ್ನು ಗುರುತಿಸಿಕೊಂಡಿದ್ದ ಎಸ್.ಆರ್.ಪಾಟೀಲರಿಗೆ 16 ತಿಂಗಳ ಹಿಂದೆ ನಡೆದ ಕೆಲವು ರಾಜಕೀಯ ಬೆಳವಣಿಗೆಗಳು ಅವರನ್ನು ಪಕ್ಷದಲ್ಲಿ ನೇಪಥ್ಯಕ್ಕೆ ಸರಿಸಲು ಕಾರಣವಾಯಿತು.
ರಾಜ್ಯದಲ್ಲಿ ಕಾಂಗ್ರೆಸ್ ಗೆಲುವು ಬೆನ್ನಲ್ಲೆ ಬಾಗಲಕೋಟೆಯಲ್ಲಿ ವಿಜಯ ರಥಯಾತ್ರೆಗೆ ಸಿದ್ಧತೆ
ಹಿನ್ನೆಡೆಗೆ ಹಲವು ಕಾರಣಗಳು:
ಪಕ್ಷದ ಉನ್ನತ ಸ್ಥಾನದಲ್ಲಿದ್ದ ಎಸ್.ಆರ್.ಪಾಟೀಲ ಅವರು ಕಾಂಗ್ರೆಸ್ ಪಕ್ಷದ ಕಾರ್ಯಾಧ್ಯಕ್ಷರಂತಹ ಜವಾಬ್ದಾರಿ ನಿರ್ವಹಿಸುವ ಅವಕಾಶ ಪಡೆದು ಅಧಿಕಾರಯುತ ರಾಜಕಾರಣದಲ್ಲಿ ಗುರುತಿಸಿಕೊಂಡಿದ್ದ ಅವರಿಗೆ ರಾಜಕೀಯವಾಗಿ ಹಿನ್ನೆಡೆಯಾಗಲು ಹಲವು ಕಾರಣಗಳು ಇದ್ದರು ಸಹ ಅವರ ಅತಿಯಾದ ಆತ್ಮವಿಶ್ವಾಸವು ಸಹ ಅವರ ನಿರ್ಧಾರಗಳಿಗೆ ಬಹುಮಟ್ಟಿಗೆ ಹಿನ್ನೆಡೆಯಾಯಿತು ಎಂಬ ಚರ್ಚೆ ಪಕ್ಷದ ವಲಯದಲ್ಲಿ ಇಂದಿಗೂ ನಡೆಯುತ್ತಿದೆ.
2021ರ ಅಂತ್ಯದಲ್ಲಿ ನಡೆದ ಪರಿಷತ್ ಚುನಾವಣೆಯಲ್ಲಿ ಸ್ಥಳೀಯ ಸಂಸ್ಥೆಗಳ ಮೂಲಕ ನಾಲ್ಕು ಬಾರಿ ಅವಿಭಜಿತ ವಿಜಯಪುರ ಜಿಲ್ಲೆಯನ್ನು ಪ್ರತಿನಿಧಿಸಿದ್ದ ಎಸ್.ಆರ್.ಪಾಟೀಲರಿಗೆ ಪಕ್ಷ ಟಿಕೆಟ್ ನಿರಾಕರಿಸಿದಾಗಿನಿಂದ ಅವರಿಗೆ ರಾಜಕೀಯ ಹಿನ್ನೆಡೆ ಆರಂಭವಾಯಿತು ಎಂದು ವಿಶ್ಲೇಷಿಸಲಾಗುತ್ತಿದೆ. ಅಂದು ಪಕ್ಷವು ಎಂ.ಬಿ.ಪಾಟೀಲ ಸಹೋದರ ಸುನೀಲಗೌಡ ಪಾಟೀಲರಿಗೆ ಮಣೆ ಹಾಕಿತು. ಹೀಗಾಗಿ ಎಸ್.ಆರ್.ಪಾಟೀಲ ಅವರು ಪಕ್ಷದ ಕೆಲವು ನಾಯಕರ ವಿರುದ್ಧ ಅಸಮಾಧಾನಗೊಂಡಿದ್ದು ನಿಜ. ಆದರೆ, ನಂತರದ ದಿನಗಳಲ್ಲಿ ಉತ್ತರ ಕರ್ನಾಟಕದ ಅಭಿವೃದ್ಧಿಗಾಗಿ ಟ್ರ್ಯಾಕ್ಟರ್ ರಾರಯಲಿ ಮಾಡಿ ಜನತೆಯ ವಿಶ್ವಾಸ ಗಳಿಸಿದ ಎಸ್.ಆರ್.ಪಾಟೀಲರಿಗೆ ಪಕ್ಷದಿಂದ ಸಿಗಬೇಕಾದ ಗೌರವ ದೊರೆಯಲಿಲ್ಲ. ಹೀಗಾಗಿ ಅವರಲ್ಲಿನ ಅಭಿವೃದ್ಧಿ ಚಿಂತನೆಗೆ ಜನತೆ ಗೌರವ ನೀಡಿದರೂ ಪಕ್ಷ ನೀಡಲಿಲ್ಲ ಎಂಬ ನೋವು ಸಹಜವಾಗಿತ್ತು.
Bagalkote: ಮಲಪ್ರಭಾ ನದಿಗೆ ನೀರು ಬಿಡಲು ಸಿಎಂ ಸಿದ್ದರಾಮಯ್ಯ ಸೂಚನೆ
ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ದೇವರಹಿಪ್ಪರಗಿ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಎಸ್.ಆರ್.ಪಾಟೀಲರಿಗೆ ಪಕ್ಷದ ವರಿಷ್ಠರು ಟಿಕೆಟ್ ನೀಡಲು ಮುಂದಾಗಿದ್ದರು ಸಹ ಸ್ಥಳೀಯ ಅದರಲ್ಲೂ ಜಿಲ್ಲಾ ಕೇಂದ್ರದ ನಾಯಕರ ವಿರೋಧದ ಕಾರಣಕ್ಕೆ ಟಿಕೆಟ್ ತಪ್ಪಿದ್ದರಿಂದ ಅಸಮಾಧಾನಗೊಂಡಿದ್ದ ಎಸ್.ಆರ್.ಪಾಟೀಲ ಕೆಲವು ದಿನಗಳ ಕಾಲ ದೂರ ಇದ್ದು ಚುನಾವಣೆಯ ಹತ್ತಿರದಲ್ಲಿ ಪಕ್ಷದ ಕೆಲವು ಕ್ಷೇತ್ರಗಳಲ್ಲಿ ಪ್ರಚಾರ ಕೈಗೊಂಡಿದ್ದರು.
ಕಾರ್ಯಾಧ್ಯಕ್ಷ ಸ್ಥಾನದಂತಹ ಜವಾಬ್ದಾರಿ ನಿರ್ವಹಿಸಿರುವ ಎಸ್.ಆರ್.ಪಾಟೀಲ ಸದ್ಯ ಚುನಾಯಿತ ಪ್ರತಿನಿಧಿ ಇಲ್ಲದಿರಬಹುದು, ಆದರೆ ಪಕ್ಷ ಸಂಘಟನೆಗೆ ಬೇಕಾದ ಹಲವು ಜವಾಬ್ದಾರಿಗಳು ಸಹಜವಾಗಿ ಇರುತ್ತವೆ. ಜೊತೆಗೆ ಒಂದು ವರ್ಷದಲ್ಲಿ ಬರುವ ಲೋಕಸಭೆ ಚುನಾವಣೆ ಇರುವುದರಿಂದ ಪಕ್ಷ ಅವರನ್ನು ಹೇಗೆ ಸಮಾಧಾನ ಪಡಿಸಿ ಜವಾಬ್ದಾರಿ ನೀಡುತ್ತದೆ ಎಂಬುದನ್ನು ಕಾಯ್ದನೋಡಬೇಕು.
ಪಕ್ಷ ಗುರುತಿಸುವುದೇ?
ಸದಾಕಾಲ ಪಕ್ಷದ ಹಾಗೂ ಸರ್ಕಾರದಲ್ಲಿ ಜವಾಬ್ದಾರಿ ಹೊಂದಿರುತ್ತಿದ್ದ ಎಸ್.ಆರ್.ಪಾಟೀಲ ಅವರಿಗೆ ಸದ್ಯ ಆಡಳಿತಾರೂಢ ಕಾಂಗ್ರೆಸ್ ಪಕ್ಷ ಯಾವುದಾದರೂ ಮಹತ್ವದ ಜವಾಬ್ದಾರಿಯನ್ನು ನೀಡಬಹುದೆ? ಎಂಬ ಕುರಿತು ಹಲವು ಚರ್ಚೆಗಳು ಆರಂಭವಾಗಿವೆ. ಪಕ್ಷ ಜವಾಬ್ದಾರಿ ನೀಡಿದಾಗಲೆಲ್ಲ ಉತ್ಸಾಹದಿಂದ ಕಾರ್ಯನಿರ್ವಹಿಸಿರುವ ಪಾಟೀಲರ 18 ತಿಂಗಳದ ವನವಾಸ ಈ ಬಾರಿಯ ಸರ್ಕಾರದಲ್ಲಿ ಮುಕ್ತಿ ಕಾಣಬಹುದೇ? ಎಂಬುದು ಸದ್ಯದ ಕುತೂಹಲವಾಗಿದೆ.