ಕರ್ನಾಟಕದ ಗೃಹಲಕ್ಷ್ಮೀ ಮಾದರಿಯಲ್ಲಿ ಮಹಿಳೆಯರ ಖಾತೆಗೆ ಪ್ರತಿ ತಿಂಗಳು ಸಹಾಯಧನ ಸೇರಿ ಸದ್ಯದಲ್ಲೇ ವಿಧಾನಸಭೆ ಚುನಾವಣೆ ಎದುರಿಸಲಿರುವ ಅಸ್ಸಾಂ ರಾಜ್ಯದಲ್ಲೂ ಕಾಂಗ್ರೆಸ್ ಇದೀಗ ಪಂಚ ಗ್ಯಾರಂಟಿ ಭರವಸೆಗಳನ್ನು ಘೋಷಿಸಿದೆ.

ನಬೋಚಾ (ಅಸ್ಸಾಂ) : ಕರ್ನಾಟಕದ ಗೃಹಲಕ್ಷ್ಮೀ ಮಾದರಿಯಲ್ಲಿ ಮಹಿಳೆಯರ ಖಾತೆಗೆ ಪ್ರತಿ ತಿಂಗಳು ಸಹಾಯಧನ ಸೇರಿ ಸದ್ಯದಲ್ಲೇ ವಿಧಾನಸಭೆ ಚುನಾವಣೆ ಎದುರಿಸಲಿರುವ ಅಸ್ಸಾಂ ರಾಜ್ಯದಲ್ಲೂ ಕಾಂಗ್ರೆಸ್ ಇದೀಗ ಪಂಚ ಗ್ಯಾರಂಟಿ ಭರವಸೆಗಳನ್ನು ಘೋಷಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮಹಿಳೆಯರಿಗೆ ಮಾಸಿಕ ಸಹಾಯಧನ, ಹೊಸದಾಗಿ ಉದ್ಯಮ

ಮಹಿಳೆಯರಿಗೆ ಮಾಸಿಕ ಸಹಾಯಧನ, ಹೊಸದಾಗಿ ಉದ್ಯಮ ಸ್ಥಾಪನೆ ಅಥವಾ ವಿಸ್ತರಣೆಗಾಗಿ ಮಹಿಳೆಯರಿಗೆ 50 ಸಾವಿರ ಹಣಕಾಸು ನೆರವು, ಪ್ರತಿ ಕುಟುಂಬಕ್ಕೂ 25 ಲಕ್ಷ ಕ್ಯಾಶ್‌ಲೆಸ್‌ ಆರೋಗ್ಯ ವಿಮೆ, ಹಿರಿಯ ನಾಗರಿಕರಿಗೆ ಪ್ರತಿ ತಿಂಗಳು 1,250 ರು. ಆರ್ಥಿಕ ನೆರವು ಮತ್ತು 10 ಲಕ್ಷ ಭೂಮಿಪುತ್ರರಿಗೆ (ಸ್ಥಳೀಯರಿಗೆ) ಭೂಮಿ ಹಕ್ಕು ನೀಡುವ ಪಂಚ ಗ್ಯಾರಂಟಿಗಳನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಘೋಷಿಸಿದ್ದಾರೆ.

ನಬೋಚಾದಲ್ಲಿ ಭಾನುವಾರ ಚುನಾವಣಾ ಪ್ರಚಾರ ಸಭೆಯಲ್ಲಿ ಈ ಘೋಷಣೆ ಮಾಡಿದ ಅವರು ರಾಜಸ್ಥಾನ, ತೆಲಂಗಾಣ ಮತ್ತು ಕರ್ನಾಟಕದಲ್ಲಿ ಈಗಾಗಲೇ ನಾವು ಕೊಟ್ಟ ಭರವಸೆ ಈಡೇರಿಸಿದ್ದೇವೆ ಎಂದು ತಿಳಿಸಿದರು.

ಇದೇ ವೇಳೆ ಅಸ್ಸಾಂನಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಖ್ಯಾತ ಗಾಯಕ ಜುಬೀನ್‌ ಗರ್ಗ್‌ ಹತ್ಯೆ ಪ್ರಕರಣದಲ್ಲಿ 100 ದಿನದಲ್ಲಿ ನ್ಯಾಯ ಕೊಡಿಸುತ್ತೇವೆ ಎಂದು ವಾಗ್ದಾನ ಮಾಡಿದರು.

ಕರ್ನಾಟಕ ಮಾದರಿಯಲ್ಲಿ ಪಟ್ಟಾ ವಿತರಣೆ:

‘ಅಸ್ಸಾಂನಲ್ಲಿ ಹಾಜಿ ಬಿಜೆಪಿ ಸರ್ಕಾರವು ವಾರ್ಷಿಕ ಭೂಮಿ ಪಟ್ಟಾ ನೀಡುತ್ತಿದೆ. ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ನಾವು ಶಾಶ್ವತ ಪಟ್ಟಾವನ್ನು 10 ಲಕ್ಷ ಮಂದಿ ಭೂಮಿಪುತ್ರರಿಗೆ (ಸ್ಥಳೀಯ ನಿವಾಸಿಗಳು) ನೀಡಲಿದ್ದೇವೆ. ಈ ಮೂಲಕ ಅವರಿಗೆ ಪ್ರತಿ ವರ್ಷ ಪಟ್ಟಾ ನವೀಕರಿಸುವ ಅಗತ್ಯವೇ ಬೀಳುವುದಿಲ್ಲ. ನಾವು ಕರ್ನಾಟಕದಲ್ಲಿ ಈಗಾಗಲೇ 6.80 ಲಕ್ಷ ಮಂದಿಗೆ ಪಟ್ಟಾ ನೀಡಿದ್ದೇವೆ’ ಎಂದು ಅವರು ತಿಳಿಸಿದರು.

ಇದೇ ವೇಳೆ ರಾಜ್ಯ ಬಿಜೆಪಿ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ಆರೋಪಿಸಿದ ಅವರು, ‘ಬಿಜೆಪಿಯು ಅಸ್ಸಾಂನಲ್ಲಿ ಡಬಲ್‌ ಎಂಜಿನ್‌ ಸರ್ಕಾರವನ್ನು ಅಸ್ಸಾಂನ ಲೂಟಿಗಾಗಿ ಬಳಸಿಕೊಳ್ಳುತ್ತಿದೆ. ಹಿಮಂತ ಬಿಸ್ವ ಶರ್ಮಾ ಅವರೊಬ್ಬ ನಕಲಿ ಮುಖ್ಯಮಂತ್ರಿ‘ ಎಂದು ಆರೋಪಿಸಿದರು.