ನಾನು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿಯಲ್ಲ. ಪಕ್ಷ ಯಾರನ್ನೇ ನೇಮಕ ಮಾಡಿದರೂ ನಾವು ಕೆಲಸ ಮಾಡುತ್ತೇವೆ. ಯಾರಿಗೆ ರಾಜ್ಯಾಧ್ಯಕ್ಷ ಸ್ಥಾನ ನೀಡಿದರೂ ನಾವು ಒಪ್ಪುತ್ತೇವೆ. ಪಕ್ಷವು ಯಾವುದೇ ಜವಾಬ್ದಾರಿ ನೀಡಿದರೂ ನಿಭಾಯಿಸುತ್ತೇನೆ: ಡಾ.ಸಿ.ಎನ್‌.ಅಶ್ವತ್ಥ ನಾರಾಯಣ

ಬೆಂಗಳೂರು(ಜೂ.25):  ‘ನಾನು ರಾಮನಗರ ಉಸ್ತುವಾರಿಯಾದಾಗ, ನಿನಗೂ, ರಾಮನಗರಕ್ಕೂ ಏನು ಸಂಬಂಧ ಎಂದು ಕೇಳಿದ್ದರು. ಈಗ ನಾನು ಕೇಳುತ್ತೇನೆ, ನಿನಗೂ, ಬೆಂಗಳೂರಿಗೂ ಏನಪ್ಪ ಸಂಬಂಧ ಶಿವಕುಮಾರ್‌?’ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರ ಬ್ರ್ಯಾಂಡ್‌ ಬೆಂಗಳೂರು ಪರಿಕಲ್ಪನೆಗೆ ಶಾಸಕ ಡಾ.ಸಿ.ಎನ್‌.ಅಶ್ವತ್ಥ ನಾರಾಯಣ ನೀಡಿರುವ ತಿರುಗೇಟು ಇದು.

ಶನಿವಾರ ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ರಾಮನಗರ ನನ್ನ ಪೂರ್ವಿಕರ ಜಿಲ್ಲೆ. ನನಗೆ ಕೇಳಿದ ಹಾಗೆ ನಿನಗೂ ಕೇಳುತ್ತಿದ್ದೇನೆ. ನಿನಗೂ, ಬೆಂಗಳೂರಿಗೆ ಏನು ಸಂಬಂಧ? ಎಂದು ಏಕವಚನದಲ್ಲಿಯೇ ಕಿಡಿಕಾರಿದರು.
ಡಿ.ಕೆ.ಶಿವಕುಮಾರ್‌ ರಿಯಲ್‌ ಎಸ್ಟೇಟ್‌ ವ್ಯಾಪಾರಿ. ಬೆಂಗಳೂರಿಗೆ ಅವರಿಂದ ಏನು ಆಗುವುದಿಲ್ಲ. ಅವರಿಗೆ ಜನರ ಮೇಲೆ ಕಾಳಜಿ ಇಲ್ಲ. ಶಿವಕುಮಾರದ್ದು ದ್ವೇಷದ ರಾಜಕಾರಣ ಮತ್ತು ವೇಷದ ರಾಜಕಾರಣ. ಶಿವಕುಮಾರ್‌ ಎಂದರೆ ದ್ವೇಷ, ಕಿರುಕುಳ. ಜನರು ಅವರನ್ನು ಕಳೆದ 35 ವರ್ಷಗಳಿಂದ ನೋಡಿದ್ದಾರೆ. ಶಿವಕುಮಾರ್‌ ಎಂದರೆ ಯಾರು ಎಂಬುದನ್ನು ಗಮನಿಸಿದ್ದಾರೆ. ಅವರಿಗೆ ಜನರ ಪರ ಕಾಳಜಿ ಇಲ್ಲ ಎಂದು ಟೀಕಾಪ್ರಹಾರ ನಡೆಸಿದರು.

ಬಂಧನ ಭಯದಿಂದ ಮುಕ್ತಿ, 4 ವಾರ ರಿಲೀಫ್ ಪಡೆದ ಅಶ್ವಥ್ ನಾರಾಯಣ್

ಗ್ಯಾರಂಟಿ ವಿಚಾರದಲ್ಲಿ ಕಾಂಗ್ರೆಸ್‌ನವರು ಮಾತು ತಪ್ಪುತ್ತಿದ್ದಾರೆ. ಅವರು ನುಡಿದಂತೆ ಉಚಿತ ಗ್ಯಾರಂಟಿಗಳನ್ನು ನೀಡಬೇಕು. ರಾಜ್ಯದ ಪ್ರತಿಯೊಬ್ಬರಿಗೂ ಕೊಡಬೇಕು. ಆದಾಯದ ಮಾನದಂಡ ಮೇಲೆ ಮಾತ್ರ ನೀಡುತ್ತೇವೆ ಎಂದು ಈಗ ಹೇಳುತ್ತಿದ್ದಾರೆ. ಗ್ಯಾರಂಟಿಗಳಿಗೆ ದಿನಾಂಕ ಮಾತ್ರ ಘೋಷಣೆಯಾಗಿದ್ದು, ಯೋಜನೆ ಚಾಲನೆ ಆಗಿಲ್ಲ. ಗ್ಯಾರಂಟಿಗಳನ್ನು ನೀಡಲು ಪ್ರಾರಂಭಿಸಿ, ಬೇಕಾದವರು ಅರ್ಜಿ ಹಾಕಿಕೊಳ್ಳುತ್ತಾರೆ. ಕಾಂಗ್ರೆಸ್‌ ಸರ್ಕಾರಕ್ಕೆ ಗ್ಯಾರಂಟಿಗಳನ್ನು ನೀಡಲು ಇಷ್ಟವಿಲ್ಲ. ಕಳ್ಳನಿಗೆ ಪಿಳ್ಳೆ ನೆಪ ಎಂಬಂತೆ ಇವರ ಪರಿಸ್ಥಿತಿಯಾಗಿದೆ ಎಂದು ವಾಗ್ದಾಳಿ ನಡೆಸಿದರು.

'ಸಿದ್ದು ಹತ್ಯೆ' ವಿವಾದಾತ್ಮಕ ಹೇಳಿಕೆ; ಎಫ್‌ಐಆರ್‌ ರದ್ದು ಕೋರಿ ಹೈಕೋರ್ಟ್ ಗೆ ಅಶ್ವತ್ಥನಾರಾಯಣ

ಗೃಹಲಕ್ಷ್ಮೀ, ಗೃಹಜ್ಯೋತಿ, ಅನ್ನಭಾಗ್ಯ, ಯುವನಿಧಿ ಎಲ್ಲ ಯೋಜನೆಗಳು ಗೊಂದಲದಲ್ಲಿವೆ. ಮಹಿಳೆಯರಿಗೆ ಬಸ್‌ ಪ್ರಯಾಣ ಮಾತ್ರ ಉಚಿತಕೊಟ್ಟರು. ಅದು ಸಹ ಗೊಂದಲದಲ್ಲಿದೆ. ಬಸ್‌ಗಳಿಲ್ಲ, ಬಸ್‌ ಬಾಗಿಲು ಮುರಿದು ಹೋಗುತ್ತಿವೆ. ಕೇಂದ್ರ ಸರ್ಕಾರವು ಈಗಾಗಲೇ ಐದು ಕೆಜಿ ಅಕ್ಕಿ ನೀಡುತ್ತಿದೆ. ಕಾಂಗ್ರೆಸ್‌ನವರು ಇನ್ನೂ ಒಂದು ಕೆಜಿಯೂ ಅಕ್ಕಿ ಕೊಟ್ಟಿಲ್ಲ. ಕಾಂಗ್ರೆಸ್‌ ಸರ್ಕಾರಕ್ಕಿಂತ ಹೆಚ್ಚು ಅನ್ನಭಾಗ್ಯ ನೀಡಿದವರು ನಾವು. ಐದು ಕೆಜಿ ಅಕ್ಕಿ ಇರಲಿ, ಉಳಿದ ಐದು ಕೆಜಿಗೆ ಹಣ ಕೊಡಿ ಎಂದು ಹೇಳಿದರು.

ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿಯಲ್ಲ!

ಬಿಜೆಪಿ ರಾಜ್ಯಾಧ್ಯಕ್ಷರ ಆಯ್ಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಾನು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿಯಲ್ಲ. ಪಕ್ಷ ಯಾರನ್ನೇ ನೇಮಕ ಮಾಡಿದರೂ ನಾವು ಕೆಲಸ ಮಾಡುತ್ತೇವೆ. ಯಾರಿಗೆ ರಾಜ್ಯಾಧ್ಯಕ್ಷ ಸ್ಥಾನ ನೀಡಿದರೂ ನಾವು ಒಪ್ಪುತ್ತೇವೆ. ಪಕ್ಷವು ಯಾವುದೇ ಜವಾಬ್ದಾರಿ ನೀಡಿದರೂ ನಿಭಾಯಿಸುತ್ತೇನೆ. ಈ ಹಿಂದೆ ಉಪಮುಖ್ಯಮಂತ್ರಿ ಸ್ಥಾನ ಬಯಸಿರಲಿಲ್ಲ, ಪಕ್ಷವು ನೀಡಿದ್ದು, ಅದನ್ನು ನಿಭಾಯಿಸಿದೆ ಎಂದರು.