50 ಕೋಟಿ ಆಮಿಷ ಗೊತ್ತಿಲ್ಲ, ಆಪರೇಶನ್‌ ಕಮಲಕ್ಕೆ ಬಿಜೆಪಿಯವರು ಯತ್ನಿಸಿದ್ದಾರೆ: ಸಿದ್ದರಾಮಯ್ಯ

ಆಪರೇಶನ್‌ ಕಮಲಕ್ಕೆ ಬಿಜೆಪಿಯವರು ಯತ್ನಿಸುತ್ತಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ಕಾಂಗ್ರೆಸ್ ಶಾಸಕ ರವಿ ಗಣಿಗ ಹೇಳಿಕೆ ನೀಡಿದ ಬೆನ್ನಲ್ಲೇ ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ‘ಬಿಜೆಪಿಯವರು ನಮ್ಮ ಸರ್ಕಾರವನ್ನು ಅಸ್ಥಿರಗೊಳಿಸಲು ಯತ್ನಿಸುತ್ತಿದ್ದಾರೆಂಬ ಮಾಹಿತಿ ಇದೆ’ ಎಂದಿದ್ದಾರೆ.

CM Siddaramaiah Slams On BJP Over Operation Kamala gvd

ಮಂಗಳೂರು (ಅ.29): ಆಪರೇಶನ್‌ ಕಮಲಕ್ಕೆ ಬಿಜೆಪಿಯವರು ಯತ್ನಿಸುತ್ತಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ಕಾಂಗ್ರೆಸ್ ಶಾಸಕ ರವಿ ಗಣಿಗ ಹೇಳಿಕೆ ನೀಡಿದ ಬೆನ್ನಲ್ಲೇ ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ‘ಬಿಜೆಪಿಯವರು ನಮ್ಮ ಸರ್ಕಾರವನ್ನು ಅಸ್ಥಿರಗೊಳಿಸಲು ಯತ್ನಿಸುತ್ತಿದ್ದಾರೆಂಬ ಮಾಹಿತಿ ಇದೆ’ ಎಂದಿದ್ದಾರೆ. ಉಡುಪಿಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ ಅವರು ಮಂಗಳೂರು ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.

ಬಿಜೆಪಿಯವರು ಕಾಂಗ್ರೆಸ್‌ ಶಾಸಕರಿಗೆ 50 ಕೋಟಿ ರು. ಆಮಿಷ ಒಡ್ಡಿರುವ ಬಗ್ಗೆ ಕಾಂಗ್ರೆಸ್‌ ಶಾಸಕರ ಆರೋಪದ ಕುರಿತು ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ಆರೋಪ ಮಾಡಿದವರನ್ನೇ ಕೇಳಬೇಕು. ಆದರೆ ನಮ್ಮ ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿಯವರು ಪ್ರಯತ್ನ ನಡೆಸುತ್ತಿರುವ ಮಾಹಿತಿ ಇದೆ ಎಂದು ಹೇಳಿದರು.

ದಾಖಲೆ ನೋಡಿದರೆ ರಾಮನಗರಕ್ಕೆ ಎಚ್‌ಡಿಕೆ ಕೊಡುಗೆ ಗೊತ್ತಾಗುತ್ತೆ: ಎಚ್‌.ಡಿ.ರೇವಣ್ಣ

ರಾಜಕೀಯ ಚರ್ಚೆ ಆಗಿಲ್ಲ: ಗೃಹ ಸಚಿವ ಡಾ.ಜಿ. ಪರಮೇಶ್ವರ್‌ ಅವರ ಮನೆಯಲ್ಲಿ ಡಿ.ಕೆ.ಶಿವಕುಮಾರ್‌ ಅವರನ್ನು ಹೊರಗಿಟ್ಟು ಸಭೆ ನಡೆಸಲಾಗಿತ್ತು ಎಂಬ ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯ, ಪರಮೇಶ್ವರ್‌ ಊಟಕ್ಕೆ ಕರೆದಿರುವುದಕ್ಕೆ ಮಸಾಲೆ ಹಾಕುವುದು ಯಾಕೆ? ನನಗೆ, ಮಹಾದೇವಪ್ಪ, ಸತೀಶ್‌ ಜಾರಕಿಹೊಳಿ ಅವರನ್ನು ಊಟಕ್ಕೆ ಕರೆದಿದ್ದರು. ಲೋಕಾಭಿರಾಮವಾಗಿ ಮಾತುಕತೆ ನಡೆಸಲಾಗಿದೆ. ರಾಜಕೀಯ ಚರ್ಚೆ ನಡೆದಿಲ್ಲ ಎಂದು ಸ್ಪಷ್ಟಪಡಿಸಿದರು.

ನಿಗಮ ಮಂಡಳಿಗೆ ಶಾಸಕರಿಗೆ ಆದ್ಯತೆ: ವಿವಿಧ ನಿಗಮ ಮಂಡಳಿಗಳಿಗೆ ಅಧ್ಯಕ್ಷರ ನೇಮಕಾತಿಯನ್ನು ಶೀಘ್ರದಲ್ಲೇ ಮಾಡಲಿದ್ದೇವೆ. ಪ್ರಥಮ ಹಂತದಲ್ಲಿ ಶಾಸಕರಿಗೆ ಆದ್ಯತೆ ನೀಡಿ, ಎರಡನೇ ಹಂತದಲ್ಲಿ ಕಾರ್ಯಕರ್ತರಿಗೆ ಹಾಗೂ ಮಾಜಿ ಶಾಸಕರಿಗೆ ಅವಕಾಶ ನೀಡಲಿದ್ದೇವೆ ಎಂದು ತಿಳಿಸಿದರು.

ಕೇಂದ್ರ ಬರ ಪರಿಹಾರ ಕೊಟ್ಟಿಲ್ಲ: ರಾಜ್ಯದಲ್ಲಿ ಬರ ಪರಿಸ್ಥಿತಿ ತಲೆದೋರಿ 33 ಸಾವಿರ ಕೋಟಿ ರು.ಗೂ ಅಧಿಕ ನಷ್ಟ ಉಂಟಾಗಿದೆ. ಅದರಲ್ಲಿ 17,910 ಕೋಟಿ ರು. ಪರಿಹಾರ ನೀಡುವಂತೆ ಕೇಂದ್ರ ಸರ್ಕಾರ ಎರಡು ಬಾರಿ ಮನವಿ ನೀಡಲಾಗಿದೆ. ಕೇಂದ್ರ ತಂಡ ಬಂದು ಪರಿಶೀಲನೆಯನ್ನೂ ನಡೆಸಿದೆ. ಆದರೆ ಒಂದು ರುಪಾಯಿ ಪರಿಹಾರ ಕೊಟ್ಟಿಲ್ಲ. ನಮ್ಮ ಸಚಿವರು ಹೋದರೆ ಭೇಟಿಗೆ ಸಮಯವನ್ನೂ ನೀಡಿಲ್ಲ. ಕೇಂದ್ರ ಸರ್ಕಾರ ಕರ್ನಾಟಕದ ಬಗ್ಗೆ ಮಲತಾಯಿ ಧೋರಣೆ ಪ್ರದರ್ಶಿಸುತ್ತಿದೆ ಎಂದು ಸಿದ್ದರಾಮಯ್ಯ ಆರೋಪಿಸಿದರು.

ಧರ್ಮಸ್ಥಳದಲ್ಲಿ ಅತ್ಯಾಚಾರ ಮತ್ತು ಕೊಲೆಗೀಡಾದ ಸೌಜನ್ಯಾ ಪ್ರಕರಣದ ಬಗ್ಗೆ ಸಿಬಿಐ ತನಿಖೆ ನಡೆಸಿದೆ. ಮರು ತನಿಖೆ ಆಗಬೇಕಾದರೆ ಕೇಂದ್ರ ಸರ್ಕಾರ ಯೋಚನೆ ಮಾಡಬೇಕು ಎಂದು ಹೇಳಿದರು. ಕಾಂಗ್ರೆಸ್ ದ.ಕ. ಜಿಲ್ಲಾಧ್ಯಕ್ಷ ಹರೀಶ್‌ ಕುಮಾರ್‌, ಮಾಜಿ ಸಚಿವರಾದ ರಮಾನಾಥ ರೈ, ಅಭಯಚಂದ್ರ ಜೈನ್‌, ಶಾಸಕ ಅಶೋಕ್‌ ರೈ, ಮಾಜಿ ಶಾಸಕರಾದ ಜೆ.ಆರ್‌. ಲೋಬೊ, ಐವನ್‌ ಡಿಸೋಜ, ಪ್ರಮುಖರಾದ ಶಶಿಧರ ಹೆಗ್ಡೆ ಮತ್ತಿತರರು ಇದ್ದರು.

ದೇವೇಗೌಡರಿಗೆ ವೋಟು ಹಾಕಿಸಿದ್ದು ನಾನು, ಪ್ರಜ್ವಲ್‌ ಬಂದಿರಲಿಲ್ಲ: ಶಾಸಕ ಶಿವಲಿಂಗೇಗೌಡ

ಹರೀಶ್‌ ಪೂಂಜ ಬಚ್ಚಾ: ‘ಸಿಎಂ ಕಲೆಕ್ಷನ್‌ ಮಾಸ್ಟರ್‌’ ಎಂಬ ಶಾಸಕ ಹರೀಶ್‌ ಪೂಂಜ ಅವರ ಫೇಸ್‌ಬುಕ್‌ ಬರಹದ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಹರೀಶ್‌ ಪೂಂಜಾ ಶಾಸಕ ಆಗಿದ್ದು ಮೊನ್ನೆ. ನಾನು 1983ರಲ್ಲೇ ಶಾಸಕ ಆಗಿ 1985ರಲ್ಲಿ ಸಚಿವ ಆಗಿದ್ದೋನು. ಯಾರೂ ನನ್ನನ್ನು ಈ ರೀತಿ ಕರೆದಿಲ್ಲ. ಪಾಪ ಪೂಂಜ ರಾಜಕೀಯದಲ್ಲಿ ಬಚ್ಚಾ. ಅವರ ಮಾತನ್ನು ಬಿಜೆಪಿ ಸರ್ಕಾರ ಮತ್ತು ಬಿಜೆಪಿ ಮುಖ್ಯಮಂತ್ರಿಗಳಿಗೆ ಹೇಳಲಿ ಎಂದು ಕಿಡಿಕಾರಿದರು.

Latest Videos
Follow Us:
Download App:
  • android
  • ios