Asianet Suvarna News Asianet Suvarna News

ದೇವೇಗೌಡರಿಗೆ ವೋಟು ಹಾಕಿಸಿದ್ದು ನಾನು, ಪ್ರಜ್ವಲ್‌ ಬಂದಿರಲಿಲ್ಲ: ಶಾಸಕ ಶಿವಲಿಂಗೇಗೌಡ

ದೇವೇಗೌಡರು ಇಲ್ಲದಿದ್ದರೆ ಶಿವಲಿಂಗೇಗೌಡರು ಶಾಸಕರಾಗುತ್ತಿರಲಿಲ್ಲ" ಎಂಬ ಸಂಸದ ಪ್ರಜ್ವಲ್‌ ರೇವಣ್ಣ ಹೇಳಿಕೆಗೆ ಅರಸೀಕೆರೆ ಶಾಸಕ ಕೆ.ಎಂ.ಶಿವಲಿಂಗೇಗೌಡರು ಖಾರವಾಗಿಯೇ ಚಾಟಿ ಬೀಸಿದ್ದಾರೆ. 

Mla KM Shivalinge Gowda Slams On MP Prajwal Revanna At Hassan gvd
Author
First Published Oct 29, 2023, 8:37 PM IST

ಹಾಸನ (ಅ.29): "ದೇವೇಗೌಡರು ಇಲ್ಲದಿದ್ದರೆ ಶಿವಲಿಂಗೇಗೌಡರು ಶಾಸಕರಾಗುತ್ತಿರಲಿಲ್ಲ" ಎಂಬ ಸಂಸದ ಪ್ರಜ್ವಲ್‌ ರೇವಣ್ಣ ಹೇಳಿಕೆಗೆ ಅರಸೀಕೆರೆ ಶಾಸಕ ಕೆ.ಎಂ.ಶಿವಲಿಂಗೇಗೌಡರು ಖಾರವಾಗಿಯೇ ಚಾಟಿ ಬೀಸಿದ್ದಾರೆ. ಅರಸೀಕೆರೆಯಲ್ಲಿ ದೇವೇಗೌಡರಿಗೆ 70, 80, 90 ಸಾವಿರ ಓಟು ಹಾಕಿಸಿದ್ದು ನಾನು. ಆಗ ಪ್ರಜ್ವಲ್ ಬಂದಿರಲಿಲ್ಲ ಎನ್ನುವ ಮೂಲಕ ಸಂಸದ ಪ್ರಜ್ವಲ್‌ ರೇವಣ್ಣ ಹೇಳಿಕೆಗೆ ಶಾಸಕ ಕೆ.ಎಂ.ಶಿವಲಿಂಗೇಗೌಡ ತಿರುಗೇಟು ನೀಡಿದರು. ಅರಸೀಕೆರೆ ನಗರದ ಅವರ ನಿವಾಸದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇವೇಗೌಡರ ಬಗ್ಗೆ ನಾನು ಯಾವುದೇ ರೀತಿಯಲ್ಲೂ ಹಗುರವಾದ ಮಾತುಗಳನ್ನು ಆಡುವುದಿಲ್ಲ. 

ದೇವೇಗೌಡರ ಋಣ ನಮ್ಮ ಮೇಲಿದೆಯೋ, ನನ್ನ ಋಣ ಬೇರೆಯವರ ಮೇಲಿದೆಯೋ ಎನ್ನುವುದನ್ನು ಇತಿಹಾಸ ಹೇಳುತ್ತದೆ. 1991ರಲ್ಲಿ ದೇವೇಗೌಡರಿಗೆ ಅರಸೀಕೆರೆಯಲ್ಲಿ ಕೇವಲ ಹದಿಮೂರು ಸಾವಿರ ಓಟು ಬರುತ್ತಿತ್ತು. ಆದಾದ ಮೇಲೆ ಮೂರು ಲೋಕಸಭಾ ಚುನಾವಣೆಯಲ್ಲಿ 70, 80, 90 ಸಾವಿರ ಓಟು ಕೊಡಿಸಿದ್ದು ನಾನು. ಆಗ ಪ್ರಜ್ವಲ್‌ ರೇವಣ್ಣ ಬಂದಿದ್ರಾ ಓಟು ಹಾಕಿಸೋಕೆ? ಪ್ರಜ್ವಲ್‌ ನಿಂತಾಗಲು ಒಂದು ದಿನ ಪ್ರಚಾರಕ್ಕೆ ಬರದಿದ್ದರೂ ತೊಂಭತ್ತು ಸಾವಿರ ಓಟು ಕೊಡ್ಸಿದ್ದೀನಿ. ಇಂತವರು ಋಣದ ಬಗ್ಗೆ ಮಾತನಾಡುತ್ತಾರೆ. ನಾನು ದೇವೇಗೌಡರ ಋಣದ ಬಗ್ಗೆ ಮಾತನಾಡಲ್ಲ. 

ಶಿಕ್ಷಣದಿಂದ ಹೆಣ್ಣು ಮಕ್ಕಳ ಪ್ರಗತಿ: ಸಚಿವ ಮುನಿಯಪ್ಪ

ಅವರು ಟಿಕೆಟ್ ಕೊಟ್ಟು ಆಶೀರ್ವಾದ ಮಾಡಿದ್ದಾರೆ. ಸಮಯ, ಸಂದರ್ಭ ಬೇರೆ ಪಕ್ಷಕ್ಕೆ ಬಂದಿದ್ದೀನಿ. ಇವರು ಬಿಜೆಪಿ ಜೊತೆ ಹೋಗಲ್ಲ ಅಂದಿದ್ರು. ನನ್ನ ಹೆಣನೂ ಹೋಗಲ್ಲ ಅಂದಿದ್ರು. ಈಗ ಹೇಗೆ ಹೊಂದಾಣಿಕೆ ಮಾಡಿಕೊಂಡರು. ಹೀಗಿದ್ದ ಮೇಲೆ ಇವರು ನಮ್ಮ ಬಗ್ಗೆ ಮಾತನಾಡುವುದೇನಿದೆ. ಋಣ ಯಾರ ಮೇಲಿದೆ ಎನ್ನುವುದನ್ನು ಮಾತನಾಡುವುದಕ್ಕೂ ಮುನ್ನ ಶಿವಲಿಂಗೇಗೌಡ ಬರುವವರೆಗೂ ಅರಸೀಕೆರೆಯಲ್ಲಿ ಜೆಡಿಎಸ್ ಹೇಗಿತ್ತು? ನಾನು ಬಂದ ಮೇಲೆ ಹೇಗಿದೆ ಎನ್ನುವುದನ್ನು ತಿಳಿದುಕೊಳ್ಳಲಿ ಎಂದು ಹೇಳಿದರು.

ಅನುದಾನ ಕೊಟ್ಟಿಲ್ಲ: ಒಂದು ವೇಳೆ ನಾನು ದೇವೇಗೌಡರ ಋಣದಲ್ಲಿ ಇರಬಹುದು. ಹಾಗಂದ ಮಾತ್ರಕ್ಕೆ ಅವರ ಮನೆ ಮಕ್ಕಳಿಗೆಲ್ಲಾ ಋಣಿಯಾಗಿರಬೇಕು ಅಂತ ಏನಿಲ್ವಲ್ಲಾ. ಪ್ರಜ್ವಲ್ ಸಂಸದರಾದ ನಂತರದಲ್ಲಿ ನನಗೆ ಒಂದೇ ಒಂದು ರುಪಾಯಿ ಅನುದಾನ ಕೊಟ್ಟಿಲ್ಲ, ನನ್ನ ಒಂದು ಕೆಲಸ ಮಾಡಿಕೊಟ್ಟಿಲ್ಲ. ಅವರ ಸಹಾಯದಿಂದ ನನ್ನ ಕ್ಷೇತ್ರಕ್ಕೆ ಒಂದು ರುಪಾಯಿ ಕೆಲಸವನ್ನು ಮಾಡ್ಸಿಲ್ಲ. ಅರಸೀಕೆರೆ ತಾಲೂಕಿನಲ್ಲಿ 36 ಪಂಚಾಯ್ತಿ ಇದೆ. 36 ಗ್ರಾಮ ಪಂಚಾಯ್ತಿಗಳು ಕೂಡ ನನ್ನ ಹಿಡಿತದಲ್ಲಿವೆ. ನನ್ನ ಕ್ಷೇತ್ರ ಏನು ಅಂತಾ ನನಗೆ ಗೊತ್ತು. ಅದರ ಬಗ್ಗೆ ಪ್ರಜ್ವಲ್‌ ಗೇ ಏನು ಗೊತ್ತಿದೆ ಎಂದು ಟೀಕಿಸಿದರು.

ಸಿಎಂ ಸ್ಥಾನದ ಹಂಚಿಕೆ: ನಮ್ಮ ಶಾಸಕರಿಂದಲೇ ದ್ವಂದ್ವ: ಸಿಎಂ ಸ್ಥಾನದ ಹಂಚಿಕೆಯನ್ನು ಎರಡುವರೆ ಮಾಡಿದರೋ, ಐದು ವರ್ಷ ಮಾಡಿದರೋ ನಮಗ್ಯಾರಿಗೂ ಗೊತ್ತಿಲ್ಲ. ಅವರವರ ಒಪ್ಪಂದ ಅವರು ಏನು ಮಾಡಿಕೊಂಡಿದ್ದಾರೋ ನನಗೆ ಗೊತ್ತಿಲ್ಲ. ಈಗಂತೂ ಸಿದ್ದರಾಮಯ್ಯನ ಸರ್ಕಾರ ಚೆನ್ನಾಗಿ ನಡೆಯುತ್ತಿದೆ. ಮುಂದೆ ಹಂಚಿಕೆ ಮಾಡಿಕೊಳ್ಳುತ್ತಾರೋ ಬಿಡುತ್ತಾರೋ ನಮಗೆ ಗೊತ್ತಿಲ್ಲ ಎಂದು ಶಿವಲಿಂಗೇಗೌಡರು ಹೇಳಿದರು. ನಮ್ಮ ಎಂಎಲ್‌ಎಗಳೇ ದ್ವಂದ್ವ ನೀತಿ ತರುತ್ತಿದ್ದಾರೆ ಎನಿಸುತ್ತಿದೆ. ಸಿಎಂ ಆಗಿ ಸಿದ್ದರಾಮಯ್ಯ ಅವರೇ ಮುಂದುವರಿತಾರೆ ಅಂತಾ ಒಬ್ಬರು ಹೇಳುತ್ತಾರೆ. ಒಬ್ಬರು ಇಲ್ಲಾ ಅಂತಾರೆ. 

ಅವರಿಗೆ ಹೈಕಮಾಂಡ್‌ನಲ್ಲಿ ಆಗಿರುವ ಒಪ್ಪಂದ ಗೊತ್ತಿಲ್ಲದೆ ಹೇಳಿರಬಹುದು. ಇವರು ಗೊತ್ತಿಲ್ಲದೆ ಮೇಲೆ ಸುಮ್ಮಿನಿರಬೇಕು. ಇದು ನನ್ನ ವೈಯುಕ್ತಿಕ ಅಭಿಪ್ರಾಯ ಅಂತ ಹೇಳಬೇಕು. ನಮ್ಮ ಶಾಸಕರು ಸ್ಬಲ್ಪ ತಪ್ಪು ತಪ್ಪು ಮಾತನಾಡುತ್ತಾರೆ. ಹೈಕಮಾಂಡ್ ಏನು ಹೇಳುತ್ತೆ, ಅದೇ ಅಂತಿಮ. ಡಿಕೆಶಿಯವರು ಮಾತನಾಡಬೇಡಿ ಅಂತ ಹೇಳಿದ್ರು. ಆದರೂ ಎಂಎಲ್‌ಎಗಳು ಮಾತನಾಡುತ್ತಿದ್ದಾರೆ ಏನು ಮಾಡುವುದು? ಅವರು ಹೇಳಿದ್ದಕ್ಕೆ ನಾವು ಮಾತನಾಡದೆ ಮೌನವಾಗಿದ್ದೀವಿ.ಪಾರ್ಟಿಯೊಳಗೆ ದ್ವಂದ್ವ ಮಾಡಬಾರದು. ಹಾಗಿದ್ರೆ ಪಾರ್ಟಿ ಮೀಟಿಂಗ್‌ನಲ್ಲಿ ಮಾತನಾಡಲಿ ಎಂದು ಕೆಲ ಶಾಸಕರ ಹೇಳಿಕೆಗೆ ಅಸಮಾಧಾನ ವ್ಯಕ್ತಪಡಿಸಿದದರು.

ನಾನು ಸಚಿವನಾಗೋ ವಿಶ್ವಾಸವಿದೆ: 25 ಹಿರಿಯ ಶಾಸಕರಿಗೆ ಮಂತ್ರಿ ಮಾಡುವವರೆಗೆ ನಿಗಮ ಮಂಡಳಿಯಲ್ಲಿ ಅವಕಾಶ ನೀಡಲು ತೀರ್ಮಾನ ಆಗಿದೆ. ಮುಂದೆ ಸಚಿವ ಸ್ಥಾನ ಸಿಗುವವರೆಗೆ ಅವರನ್ನು ನೇಮಕ ಮಾಡಲು ತೀರ್ಮಾನ ಆಗಿದೆ. ಬಹುಶಃ ಈ ವಾರದ ಒಳಗೆ ಈ ನೇಮಕಾತಿ ಪ್ರಕ್ರಿಯೆ ಮುಗಿಯಬಹುದು ಎಂದು ಶಿವಲಿಂಗೇಗೌಡ ಸ್ಪಷ್ಟಪಡಿಸಿದರು.

ಈ ಹಿಂದೆ ನಮ್ಮ‌ ಬಹಿರಂಗ ಸಭೆಯಲ್ಲೇ ಶಿವಲಿಂಗೇಗೌಡರನ್ನು ಮಂತ್ರಿ ಮಾಡುವುದಾಗಿ ಹೇಳಿದ್ದಾರೆ. ಈಗ ನಿಗಮ ಮಂಡಳಿ ನೀಡಲಾಗುವುದು ಅಂದಾಗ ಅದು ಹೈಕಮಾಂಡ್ ತೀರ್ಮಾನ ಇರುತ್ತದೆ. ಅವರ ತೀರ್ಮಾನಕ್ಕೆ ನಾವು ಬದ್ಧನಾಗಿ ಇರಬೇಕಾಗುತ್ತೇನೆ. ನಾನು ಜೆಡಿಎಸ್‌ ಬಿಟ್ಟು ಕಾಂಗ್ರೆಸ್‌ ಸೇರುವಾಗ ಕಾಂಗ್ರೆಸ್ ಸರ್ಕಾರ ಬಂದರೆ ಸಚಿವರನ್ನಾಗಿ ಮಾಡುವುದಾಗಿ ಹೇಳಿದ್ದಾರೆ. ಸಿದ್ದರಾಮಯ್ಯ, ಡಿಕೆಶಿ ಮತ್ತು ಸುರ್ಜೆವಾಲಾ ಮೂವರೂ ಕೂಡ ಭರವಸೆ ಕೊಟ್ಟಿದ್ದಾರೆ. ಹಾಗಾಗಿ ನನಗೆ ಅವಕಾಶ ಸಿಕ್ಕೇ ಸಿಗುತ್ತದೆ ಎಂದು ಶಾಸಕ ಶಿವಲಿಂಗೇಗೌಡ ವಿಶ್ವಾಸ ವ್ಯಕ್ತಪಡಿಸಿದರು.

ಅರ್ಕಾವತಿ ಎಡ-ಬಲ ದಂಡೆಯಲ್ಲಿ ವಾಕ್ಪಾತ್‌ ನಿರ್ಮಾಣ: ರಾಜ್ಯ ಸರ್ಕಾರದಿಂದ 126 ಕೋಟಿ!

ಆಪರೇಷನ್ ಕಮಲದ ಬಗ್ಗೆ ಮಾತಾಡುವವರು ಹುಚ್ಚರು: ಆಪರೇಷನ್ ಕಮಲ ಅಂತಾ ಯಾರೇ ಮಾತಾಡಲಿ ಅವರು ಹುಚ್ಚರು ಎಂದು ಶಾಸಕ ಶಿವಲಿಂಗೇಗೌಡ ವ್ಯಂಗ್ಯವಾಡಿದ್ದಾರೆ. ಈ ಜನ್ಮದಲ್ಲಿ ಆಪರೇಷನ್ ಕಮಲ ಸಾಧ್ಯವಿಲ್ಲ. ಕೆಲವರು ಸೋತಿದ್ದಾರೆ ಅವರಿಗೆ ಮಾಡೋಕೆ‌ ಕೆಲಸ ಇಲ್ಲ. ಹಾಗಾಗಿ ಪ್ರಚಾರಕ್ಕೆ ಏನೇನೊ ಮಾತಾಡುತ್ತಾರೆ. ಆಪರೇಷನ್‌ ಕಮಲ ಎನ್ನುವುದು ನಿಜವಾದರೆ ಪ್ರಜಾಪ್ರಭುತ್ವ ಎನ್ನೋದಕ್ಕ ಅರ್ಥ ಇಲ್ಲ. ಅಂತಹದ್ದೇನಾದರು ಆದರೆ ಪ್ರಜಾಪ್ರಭುತ್ವ ವಿಸರ್ಜನೆ ಮಾಡಬೇಕಾಗುತ್ತೆ. ಅಕಸ್ಮಾತ್ 50 ಜನ ಆಪರೇಷನ್ ಆದರೆ ಆಗ ಜನ ಯಾವಾಗ ಯಾವುದಲ್ಲಿ ಹೊಡೀತಾರೊ ಗೊತ್ತಿಲ್ಲ. ಈಗ ಯಾವುದೋ ಹೋಟೆಲ್‌ನಲ್ಲಿ ಯಾರೋ ಸಿಕ್ಕಾಗ ಬಾ ನಿನ್ನ ಮಂತ್ರಿ ಮಾಡ್ತಿವಿ ಐವತ್ತು ಕೋಟಿ ಹಣನೀ ಕೊಡ್ತೀನಿ ಅಂತಾ ಆಫರ್ ಮಾಡಬಹುದು. ಆದರೆ ಅದೆಲ್ಲಾ ಆಗುತ್ತಾ. ಇದು ಈ ಜನ್ಮದಲ್ಲಿ ನಡೆಯಲ್ಲ ಬಿಡಿ ಎಂದು ಶಿವಲಿಂಗೇಗೌಡರು ಹೇಳಿದರು.

Follow Us:
Download App:
  • android
  • ios