ನಮ್ಮ ಗ್ಯಾರಂಟಿ ಲೇವಡಿ ಮಾಡಿ ಮೋದಿ ಅವರೇ ಕೊಡಲು ಹೊರಟಿದ್ದಾರೆ: ಸಿದ್ದರಾಮಯ್ಯ
ನಮ್ಮನ್ನು ಉಚಿತ ಗ್ಯಾರಂಟಿಗಳಿಂದ ದಿವಾಳಿಗಳಾಗುತ್ತಾರೆ ಎಂದವರೆ ಈಗ ಮೋದಿ ಗ್ಯಾರಂಟಿ ಕೊಡಲು ಹೊರಟಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಮುಕುಂದ ರಾವಂದೂರು
ರಾವಂದೂರು (ಜ.25): ನಮ್ಮನ್ನು ಉಚಿತ ಗ್ಯಾರಂಟಿಗಳಿಂದ ದಿವಾಳಿಗಳಾಗುತ್ತಾರೆ ಎಂದವರೆ ಈಗ ಮೋದಿ ಗ್ಯಾರಂಟಿ ಕೊಡಲು ಹೊರಟಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಪಿರಿಯಾಪಟ್ಟಣ ತಾಲೂಕಿನ ಮುತ್ತಿನಮುಳಸೋಗೆ ಗ್ರಾಮದಲ್ಲಿ ಕಾವೇರಿ ನದಿಯಿಂದ 150 ಕೆರೆಕಟ್ಟೆಗಳಿಗೆ ನೀರುತುಂಬಿಸುವ ಯೋಜನೆ ಉದ್ಘಾಟಿಸಿ ಕೊಪ್ಪ ಗ್ರಾಮದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕುಡಿಯುವ ನೀರು ಒದಗಿಸಲು, ಅಂತರ್ಜಲ ಪ್ರಮಾಣ ಹೆಚ್ಚಿಸಲು ಈ ಕಾರ್ಯಕ್ರಮ ಅನುಷ್ಠಾನಗೊಳಿಸುತ್ತಿದ್ದೇವೆ. ಇದರಿಂದ 79 ಹಳ್ಳಿಗಳ 93 ಸಾವಿರ ಜನಸಂಖ್ಯೆಗೆ ಅನುಕೂಲವಾಗಲಿದೆ.
ತಾಲೂಕಿನ 150 ಕೆರೆ- ಕಟ್ಟೆಗಳಿಗೆ ನೀರು ತುಂಬಿಸುವ ಯೋಜನೆಗೆ 2017ರಲ್ಲಿ ಈ ನಾನೇ ಶಂಕುಸ್ಥಾಪನೆ ನೆರವೇರಿಸಿದ್ದೆ. ಮಂಜೂರು ಮಾಡಿದ್ದು ಕೂಡ ನಮ್ಮದೇ ಸರಕಾರ. ಇದು ಬಿಜೆಪಿಯವರ ಕೊಡುಗೆ ಅಲ್ಲ. ಈ ಯೋಜನೆ ಜಾರಿಯಾಗಲು ಅಂದು ಶಾಸಕರಾಗಿದ್ದ ಕೆ. ವೆಂಕಟೇಶ್ ಕಾರಣ ಎಂದರು. ಬಿಜೆಪಿಯವರು ಒಂದು ಲಕ್ಷ ಕೋಟಿ ರು. ಖರ್ಚು ಮಾಡುತ್ತೇವೆ ಎಂದಿದ್ದರು. ಆದರೆ, ಮಾಡಲಿಲ್ಲ. ರಾಜ್ಯದ ಎಲ್ಲ ತಾಲ್ಲೂಕುಗಳಲ್ಲಿ ಬರಗಾಲವಿದೆ. ರಾಜ್ಯದ ಜನರು ಕಷ್ಟಕ್ಕೆ ಸಿಲುಕಬಾರದೆಂದು ಬರಗಾಲವನ್ನು ಅತ್ಯಂತ ಸಮರ್ಥವಾಗಿ ನಿಭಾಯಿಸಿದ್ದೇವೆ.
ಮೈತ್ರಿ ತೀರ್ಮಾನ ಮಾಡದಿದ್ದರೆ ಜೆಡಿಎಸ್ ಪಕ್ಷ ಹೈಜಾಕ್ ಆಗ್ತಾ ಇತ್ತು: ವೈ.ಎಸ್.ವಿ.ದತ್ತ
ಒಂದು ರು. ಬಿಡುಗಡೆ ಮಾಡಿಲ್ಲ - ಎನ್ ಡಿಆರ್ ಎಫ್ ನಲ್ಲಿ ಹಣ ಬಿಡುಗಡೆ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರದ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿ ಮನವಿ ಮಾಡಿದ್ದೆ. ಕೇಂದ್ರ ಸರ್ಕಾರವು ಬರ ಪರಿಹಾರವಾಗಿ ಒಂದೇ ಒಂದು ರು. ಪಾಯಿಯನ್ನು ಕೊಟ್ಟಿಲ್ಲ. ಇವರಿಗೆ ರೈತರ ಬಗ್ಗೆ ಕಾಳಜಿ ಇಲ್ಲ ಮುಂದಿನ ಚುನಾವಣೆಯಲ್ಲಿ ನಿಮಗೆ ಓಟು ಕೊಡಬೇಕೆ ಎಂಬುದನ್ನು ಜನರು ತೀರ್ಮಾನಿಸಬೇಕು ಎಂದರು.
ದೇವೇಗೌಡರು ಹಣ ಬಿಡುಗಡೆ ಮಾಡಿಸಿ: ಬಿ.ಎಸ್. ಯಡಿಯೂರಪ್ಪ ಅವರು ಮಾತ್ರ ರೈತನ ಮಕ್ಕಳಾ? ನಾವು ರೈತರ ಮಕ್ಕಳಲ್ಲವಾ? ನಾವು ಹಿಂದೂಗಳಲ್ಲವೇ? ಎಂದು ಕೇಳಿದರು. ದೇವೇಗೌಡರೇ ನೀವು- ಪ್ರಧಾನಿ ಜೊತೆ ಚೆನ್ನಾಗಿದ್ದೀರಲ್ಲಾ ಕೇಂದ್ರದಿಂದ ಹಣ ಬಿಡುಗಡೆ ಮಾಡಿಸಿ ಎಂದರು. ಬಿಜೆಪಿಯನ್ನು ವಿರೋಧ ಮಾಡುತ್ತಿದ್ದ ಜೆಡಿಎಸ್ ನವರು ಈಗ ಮತ ಹಾಗೂ ಅಧಿಕಾರಕ್ಕಾಗಿ ಕೋಮುವಾದಿಗಳ ಜೊತೆ ಕೈಜೋಡಿಸಿದ್ದಾರೆ. ಈ ಡೋಂಗಿಗಳನ್ನು ಸೋಲಿಸಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಾತನಾಡಿ, ನಮ್ಮದು ಜನರ ಬದುಕಿನ ಬಗ್ಗೆ ಚಿಂತೆ. ಬೇರೆ ಪಕ್ಷದವರಿಗೆ ಭಾವನೆಯೇ ಮುಖ್ಯವಾಗಿದೆ. ರೈತರಿಗೆ ಸಂಬಳ, ಬಡ್ತಿ, ಪಿಂಚಣಿ ಅಥವಾ ಲಂಚ ಸಿಗುವುದಿಲ್ಲ. ಅವರಿಗೆ ನೀರಾವರಿ ಒದಗಿಸಲು ನಾವು ಆದ್ಯತೆ ನೀಡಲ ಬದ್ಧವಾಗಿದ್ದೇವೆ. ನಮ್ಮ ಗ್ಯಾರಂಟಿ ನೋಡಿ ಬಿಜೆಪಿ ಸ್ನೇಹಿತರ ಕಮಲ ಮುದುಡಿ ಹೋಗಿದೆ. ಜೆಡಿಎಸ್ನವರೇ ಬಿಜೆಪಿಯವರ ವಕ್ತಾರರಾಗಿದ್ದಾರೆ ಎಂದರು. ಅನ್ನಭಾಗ್ಯ ಯೋಜನೆ ಅಕ್ಕಿಯನ್ನೇ ಬಿಜೆಪಿಯವರು ಅರಿಸಿನ ಹಾಕಿ ಕೊಟ್ಟಿದ್ದಾರೆ ಎಂದು ಟೀಕಿಸಿದರು. ನಮ್ಮ ಗ್ಯಾರಂಟಿ ಕಾರ್ಯಕ್ರಮಗಳೇ ನಮ್ಮ ಮಂತ್ರಾಕ್ಷತೆ. ಎಲ್ಲರಿಗೂ ನ್ಯಾಯ ಸಿಗಬೇಕು ಎಂಬುದು ನಮ್ಮ ಉದ್ದೇಶ. ಬಿಜೆಪಿಯವರಷ್ಟೆ ಹಿಂದೂಗಳೇ. ನಾವು ಹಿಂದೂಗಳಲ್ಲವೇ? ಎಂದು ಕೇಳಿದರು.
ಮೇಕೆದಾಟು ವಿಚಾರದಲ್ಲಿ ಕರ್ನಾಟಕ ಸರಕಾರ ಗಮನ ಕೊಡುತ್ತಿಲ್ಲ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಹೇಳಿದ್ದಾರೆ. ಡಿಪಿಆರ್ ಬಗ್ಗೆ ಚರ್ಚೆ ಆಗುತ್ತಿದೆ. ಆ ಯೋಜನೆಯನ್ನು ನಮ್ಮ ಸರ್ಕಾರದ ಅವಧಿಯಲ್ಲಿ ಮಾಡಿಯೇ ತೀರುತ್ತೇವೆ. ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆಗಿದ್ದಾಗ ಸಾವಿರ ಕೋಟಿ ರು. ನೀಡಿದ್ದರು. ಆ ಯೋಜನೆ ಏನಾಯಿತು? ಅದನ್ನೇಕೆ ದೇವೇಗೌಡರು ಕೇಳುತ್ತಿಲ್ಲ? ನೀವೀಗ ಪ್ರಧಾನಿ ಜೊತೆ ಹತ್ತಿರದಲ್ಲಿದ್ದೀರಿ. ನೀವೇಕೆ ಈ ಯೋಜನೆ ಅನುಷ್ಠಾನದ ಬಗ್ಗೆ ಮಾತನಾಡುತ್ತಿಲ್ಲ ದೇವೇಗೌಡರೇ ಎಂದು ಪ್ರಶ್ನಿಸಿದರು.
ಸಚಿವ ಕೆ.ವೆಂಕಟೇಶ್ ಮಾತನಾಡಿ, ರಾಜಕಾರಣಿಗಳು ಜನರ ಬಗ್ಗೆ ಯೋಚನೆ ಮಾಡುವವರು ಬಹಳ ಕಡಿಮೆ. ಅವರ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡವರು ಹಾಗೂ ಯೋಚನೆ ಮಾಡುವವರು ಜನಮಾನಸದಲ್ಲಿ ಉಳಿಯುತ್ತಾರೆ. ಅಂಥವರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದಿದ್ದಾರೆ. ಮುಖ್ಯಮಂತ್ರಿ ಆಗದೇ ಇದ್ದಿದ್ದರೆ ಇಂತಹ ಯೋಜನೆಗಳು ಅನುಷ್ಠಾನಕ್ಕೆ ಬರುತ್ತಿರಲಿಲ್ಲ ಎಂದರು.
ತಾಲೂಕನ್ನು ಆಳಿದ ಹಿಂದಿನ ಶಾಸಕರು ನೀರಾವರಿ ಯೋಜನೆ ಬಗ್ಗೆ ದೊಡ್ಡ ಭಾಷಣ ಮಾಡಿದ್ದರು. ಯಾರೂ ಯಾವ ಯೋಜನೆಯನ್ನೂ ಜಾರಿ ಮಾಡಲಿಲ್ಲ. ಏನೇನು ಯೋಜನೆ ಬಂದಿವೆಯೋ ಅವೆಲ್ಲವೂ ನನ್ನ ಕಾಲದಲ್ಲಿ ಆಗಿದ್ದೆಯೇ ಹೊರತು ಬೇರೆಯವರು ಮಾಡಲಿಲ್ಲ ಎಂದರು. ಸಿದ್ದರಾಮಯ್ಯ ಅವರು ತಾಲೂಕಿಗೆ ನೀಡಿರುವ ಕೊಡುಗೆಯನ್ನು ತಲೆತಲಾಂತರಗಳು ಕೂಡ ಮರೆಯಲಾಗದು. ಜನರ ಬಗ್ಗೆ ಕಾಳಜಿ ಇದ್ದವರು ಮಾತ್ರ ಇಂಥ ಕಾರ್ಯಕ್ರಮ ನೀಡಬಹುದು. ಬಿಜೆಪಿಯವರು ಅಧಿಕಾರಕ್ಕೆ ಬಂದು ಬಡವರ ಪರವಾದ ಕಾರ್ಯಕ್ರಮಗಳನ್ನೆಲ್ಲ ತೆಗೆದು ಹಾಕಿದರು ಎಂದು ದೂರಿದರು.
ರಾಮಲಲ್ಲಾ ಪ್ರತಿಷ್ಠಾಪನೆ ದಿನ ಮಸೀದಿ ಕೆಡವುವ ಸಂಕಲ್ಪ ತೊಟ್ಟಿದ್ದ ಸಂಸದ ಅನಂತ ಕುಮಾರ್ ಹೆಗಡೆ!
ಸಚಿವರಾದ ಡಾ.ಎಚ್.ಸಿ. ಮಹದೇವಪ್ಪ, ಭೋಸರಾಜು, ಶಾಸಕರಾದ ಡಿ. ರವಿಶಂಕರ್. ಮಂತರ್ಗೌಡ, ಕೆ. ಹರೀಶ್ ಗೌಡ, ವಿಧಾನಪರಿಷತ್ ಸದಸ್ಯರಾದ ಡಾ.ಡಿ. ತಿಮ್ಮಯ್ಯ, ಮರಿತಿಬ್ಬೇಗೌಡ, ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ, ಗ್ರಾಮಾಂತರ ಜಿಲ್ಲಾ ಸಮಿತಿಯ ಅಧ್ಯಕ್ಷ ಬಿ.ಜೆ. ವಿಜಯ್ ಕುಮಾರ್, ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ, ಜಿಪಂ ಸಿಇಒ ಕೆ.ಎಂ. ಗಾಯಿತ್ರಿ, ದಕ್ಷಿಣ ವಲಯ ಐಜಿಪಿ ಡಾ.ಎಂ.ಬಿ. ಬೋರಲಿಂಗಯ್ಯ, ಎಸ್ಪಿ ಸೀಮಾ ಲಾಟ್ಕರ್ ಪಾಲ್ಗೊಂಡಿದ್ದರು.