Asianet Suvarna News Asianet Suvarna News

ಮೈತ್ರಿ ತೀರ್ಮಾನ ಮಾಡದಿದ್ದರೆ ಜೆಡಿಎಸ್‌ ಪಕ್ಷ ಹೈಜಾಕ್‌ ಆಗ್ತಾ ಇತ್ತು: ವೈ.ಎಸ್‌.ವಿ.ದತ್ತ

ಮೈತ್ರಿ, ತಾತ್ವಿಕ ರಾಜಕಾರಣದ ಒಂದು ಭಾಗ. ಪಕ್ಷದ ಅಸ್ತಿತ್ವ ಉಳಿಯಬೇಕಾದರೆ ಬಿಜೆಪಿ ಜೊತೆಯಲ್ಲಿ ಹೊಂದಾಣಿಕೆ ಮಾಡಿಕೊಳ್ಳುವುದು ಅನಿವಾರ್ಯ, ಹಾಗಾಗಿ ಈ ತೀರ್ಮಾನಕ್ಕೆ ಬರಲಾಗಿದೆ ಎಂದು ಮಾಜಿ ಶಾಸಕ ವೈ.ಎಸ್‌.ವಿ.ದತ್ತ ಹೇಳಿದ್ದಾರೆ. 

Ex Mla YSV Datta Talks Over BJP JDS Alliance At Chikkamagaluru gvd
Author
First Published Jan 25, 2024, 8:51 PM IST

ಚಿಕ್ಕಮಗಳೂರು (ಜ.25): ಮೈತ್ರಿ, ತಾತ್ವಿಕ ರಾಜಕಾರಣದ ಒಂದು ಭಾಗ. ಪಕ್ಷದ ಅಸ್ತಿತ್ವ ಉಳಿಯಬೇಕಾದರೆ ಬಿಜೆಪಿ ಜೊತೆಯಲ್ಲಿ ಹೊಂದಾಣಿಕೆ ಮಾಡಿಕೊಳ್ಳುವುದು ಅನಿವಾರ್ಯ, ಹಾಗಾಗಿ ಈ ತೀರ್ಮಾನಕ್ಕೆ ಬರಲಾಗಿದೆ ಎಂದು ಮಾಜಿ ಶಾಸಕ ವೈ.ಎಸ್‌.ವಿ.ದತ್ತ ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಕ್ಷದ ತೀರ್ಮಾನಕ್ಕೆ ಬಹುತೇಕ ಎಲ್ಲರ ಒಪ್ಪಿಗೆ ಇದೆ. ಇದಕ್ಕೆ ಎಲ್ಲರೂ ಬದ್ಧರಾಗಿದ್ದೇವೆ ಎಂದರು. 2006ರಲ್ಲಿ ರಾಜ್ಯದಲ್ಲಿ ರಾಜಕೀಯ ಕ್ರಾಂತಿ ಆಗಿತ್ತು. ಎಚ್‌.ಡಿ. ಕುಮಾರಸ್ವಾಮಿ ಯೊಂದಿಗೆ ನಮ್ಮ ಜೆಡಿಎಸ್‌ ಪಕ್ಷದ ಬಹುತೇಕ ಶಾಸಕರು ಬಿಜೆಪಿ ಜತೆ ಸರ್ಕಾರ ರಚನೆ ಮಾಡಲು ತೀರ್ಮಾನಿಸಿದ್ದರು. 

ಆಗ ಪಕ್ಷದ ವರಿಷ್ಟರಾದ ದೇವೇಗೌಡರು ವೈಯಕ್ತಿಕ ಆಘಾತದಿಂದ ಜರ್ಜಿತರಾಗಿದ್ದರು. ಅವರ ಆರೋಗ್ಯ ಕೂಡ ಹದಗೆಟ್ಟಿತ್ತು. ಮೈತ್ರಿಗೆ ವಿರೋಧ ವ್ಯಕ್ತಪಡಿಸಿದವರಲ್ಲಿ ನಾನೂ ಕೂಡ ಒಬ್ಬ ಎಂದು ಹಿಂದಿನ ದಿನಗಳನ್ನು ಮೆಲುಕು ಹಾಕಿದರು. ಕುಮಾರಸ್ವಾಮಿಯವರ ನಿಲುವನ್ನು ಒಂದಿಬ್ಬರು ಜೆಡಿಎಸ್‌ ಶಾಸಕರು ವಿರೋಧ ವ್ಯಕ್ತಪಡಿಸಿದ್ದರು. ಇನ್ನುಳಿದಂತೆ ಹಲವು ಮಂದಿ ಬೆಂಬಲಕ್ಕೆ ನಿಂತಿದ್ದರು. ಸಿದ್ದರಾಮಯ್ಯರವರ ಸಚಿವ ಸಂಪುಟದಲ್ಲಿ ಪ್ರಮುಖ ಖಾತೆಯಲ್ಲಿರುವವರು, ಆಯಾ ಕಟ್ಟಿನ ಸ್ಥಾನಗಳಲ್ಲಿ ಮಂತ್ರಿಯಾಗಿದ್ದವರು, ಅಂದರೆ ಜೆಡಿಎಸ್ ಮೂಲ ನಿವಾಸಿಗರು ಕೂಡ ಬಿಜೆಪಿ ಜೊತೆಗೆ ಹೋಗಲೇಬೇಕೆಂದು ಕುಮಾರಸ್ವಾಮಿ ಮೇಲೆ ಒತ್ತಡ ಹಾಕಿದ್ದರು ಎಂದು ಹೇಳಿದರು.

ರಾಮಲಲ್ಲಾ ಪ್ರತಿಷ್ಠಾಪನೆ ದಿನ ಮಸೀದಿ ಕೆಡವುವ ಸಂಕಲ್ಪ ತೊಟ್ಟಿದ್ದ ಸಂಸದ ಅನಂತ ಕುಮಾರ್ ಹೆಗಡೆ!

ಬಿಜೆಪಿಯೊಂದಿಗೆ ಹೋಗದೆ ಇದ್ದಿದ್ದರೆ ಜೆಡಿಎಸ್ ಪಕ್ಷ ಹೈಜಾಕ್‌ ಆಗ್ತಾ ಇತ್ತು, ಪಕ್ಷದ ಚಿಹ್ನೆ ಕೂಡ ಇರುತ್ತಿರಲಿಲ್ಲ ಹಾಗಾಗಿ ಪಕ್ಷದ ಅಸ್ತಿತ್ವಕ್ಕಾಗಿ ಕುಮಾರಸ್ವಾಮಿ ಅವರು ಆ ತೀರ್ಮಾನ ತೆಗೆದುಕೊಂಡರು ಎಂದ ಅವರು, ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ ಚಿಕ್ಕಮಗಳೂರಿನಲ್ಲಿ ಶೋಭಾಯಾತ್ರೆಗೆ ಅವಕಾಶ ನೀಡುವುದಿಲ್ಲ ಎಂದು ಗಟ್ಟಿ ನಿರ್ಧಾರ ತೆಗೆದುಕೊಂಡಿದ್ದರು. ಎಲ್‌.ಕೆ. ಅದ್ವಾನಿ ಅವರು ಯಾತ್ರೆ ಕೈಗೊಂಡಿದ್ದ ಸಂದರ್ಭದಲ್ಲಿ ಯಡಿಯೂರಪ್ಪ ಅವರನ್ನು ಕರೆಸಿ ದೇವೇಗೌಡರು ಮಾತನಾಡಿ, ಕರ್ನಾಟಕದಲ್ಲಿ ಹೊಂದಾಣಿಕೆ ಸರ್ಕಾರ ಇದೆ, ಹೆಚ್ಚು ಕಮ್ಮಿ ಆಗಿ ಶಾಂತಿ ಕದಡುವಂತೆ ಆದ್ರೆ ನಮ್ಮ ತೀರ್ಮಾನವನ್ನು ಪುನರಾವರ್ತನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದರು.

ವಿದ್ಯುತ್ ಸಮಸ್ಯೆಗಳಿಗೆ ಅಧಿಕಾರಿಗಳು ತಕ್ಷಣವೇ ಸ್ಪಂದಿಸಿ: ಸಚಿವ ಸಂತೋಷ್‌ ಲಾಡ್ ಸೂಚನೆ

ರಾಜಕಾರಣದಲ್ಲಿ ಈ ಹಿಂದೆ ನಡೆದಿರುವ ಬೆಳವಣಿಗೆಗಳ ಬಗ್ಗೆ ಪ್ರಸ್ತಾಪಿಸಿದ ದತ್ತ, ರಾಜಕೀಯ ಪಕ್ಷಗಳಲ್ಲಿ ತಾತ್ವಿಕತೆ, ಸಿದ್ಧಾಂತ ಕಾಲಕಾಲಕ್ಕೆ ಕಲಬೆರಕೆ ಆಗುತ್ತಾ ಬಂದಿವೆ. ನಾನು ದೀರ್ಘ ಕಾಲದಿಂದ ಪಕ್ಷಕ್ಕೆ ಬದ್ಧನಾಗಿದ್ದೇನೆ. ಜೆಡಿಎಸ್‌ ಪಕ್ಷ ಜಾತ್ಯತೀತ ನಿಲುವಿಗೆ ಬದ್ಧವಾಗಿದೆ ಎಂದು ಹೇಳಿದರು. ಈಗಿನ ಮೈತ್ರಿ ಲೋಕಸಭಾ ಚುನಾವಣೆಗೆ ಮಾತ್ರ ಸೀಮಿತ ಎಂದ ಅವರು, ಹೊಂದಾಣಿಕೆ ತೀರ್ಮಾನಕ್ಕೆ ನಾವುಗಳು ಬದ್ಧರಾಗಿದ್ದೇವೆ. ಕಡೂರು, ಹಾಸನ ಲೋಕಸಭಾ ಕ್ಷೇತ್ರಕ್ಕೆ ಸೇರುತ್ತದೆ. ಅಲ್ಲಿ ಪಕ್ಷದ ಅಭ್ಯರ್ಥಿಯಾಗಿ ಯಾರೇ ಸ್ಪರ್ಧೆಗೆ ನಿಂತರೂ ಪಕ್ಷದ ಕಾರ್ಯಕರ್ತರಾಗಿ ದುಡಿಯುವುದು ನಮ್ಮ ಕರ್ತವ್ಯ. ವ್ಯಕ್ತಿಗತ ನಿಲುವು ಏನೇ ಇದ್ದರೂ ಪಕ್ಷದ ಅಸ್ತಿತ್ವ ಮುಖ್ಯ. ಸಿದ್ಧಾಂತಗಳೆಲ್ಲಾ ನಂತರ ನೋಡೋಣ ಎಂದರು. ನಾನು ಕಡೂರು ಕ್ಷೇತ್ರದ ಶಾಸಕನಾಗಿದ್ದೆ. ಜಿಲ್ಲೆಯಲ್ಲಿ ಪಕ್ಷ ಕಟ್ಟುವ ನಿಟ್ಟಿನಲ್ಲಿ ಗಮನಹರಿಸಲಿಲ್ಲ, ಕಾರ್ಯಕರ್ತರು ಕ್ರಿಯಾ ಶೀಲರಾಗಿದ್ದಾರೆ. ಯಾರೂ ಕೂಡ ನಿರಾಶವಾದಿಗಳಾಗಬೇಕಾಗಿಲ್ಲ. ರಾಜಕಾರಣದಲ್ಲಿ ಆಶಾವಾದಿಗಳಾಗಬೇಕು ಎಂದು ಹೇಳಿದರು.

Follow Us:
Download App:
  • android
  • ios