ಹಿಂದಿನ ಸರ್ಕಾರದ ಎಲ್ಲಾ ಕಾಮಗಾರಿಗೆ ಸಿದ್ದು ಬ್ರೇಕ್: ಇಲಾಖೆಗಳಿಗೆ ಹಣ ಬಿಡುಗಡೆ, ಪಾವತಿಗೂ ತಡೆ
ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ನೂತನ ಸರ್ಕಾರ ಅಸ್ತಿತ್ವಕ್ಕೆ ಬಂದ ಬೆನ್ನಲ್ಲೇ ವಿವಿಧ ಇಲಾಖೆಗಳಿಂದ ಇನ್ನೂ ಪ್ರಾರಂಭವಾಗದಂತಹ ಹಿಂದಿನ ಸರ್ಕಾರದ ಎಲ್ಲಾ ಕಾಮಗಾರಿಗಳನ್ನೂ ತಡೆ ಹಿಡಿದು ಆದೇಶ ಹೊರಡಿಸಲಾಗಿದೆ.
ಬೆಂಗಳೂರು (ಮೇ.23): ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ನೂತನ ಸರ್ಕಾರ ಅಸ್ತಿತ್ವಕ್ಕೆ ಬಂದ ಬೆನ್ನಲ್ಲೇ ವಿವಿಧ ಇಲಾಖೆಗಳಿಂದ ಇನ್ನೂ ಪ್ರಾರಂಭವಾಗದಂತಹ ಹಿಂದಿನ ಸರ್ಕಾರದ ಎಲ್ಲಾ ಕಾಮಗಾರಿಗಳನ್ನೂ ತಡೆ ಹಿಡಿದು ಆದೇಶ ಹೊರಡಿಸಲಾಗಿದೆ. ಅಲ್ಲದೆ, ಎಲ್ಲಾ ಇಲಾಖೆಗಳು ಹಾಗೂ ಇಲಾಖೆಗಳ ಅಡಿ ಬರುವ ನಿಗಮ, ಮಂಡಳಿ, ಪ್ರಾಧಿಕಾರಗಳಿಗೆ ಸಂಬಂಧಿಸಿದಂತೆ ಹಣ ಬಿಡುಗಡೆ ಹಾಗೂ ಪಾವತಿಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ತಡೆ ಹಿಡಿಯಲಾಗಿದೆ ಎಂದು ಹಣಕಾಸು ಇಲಾಖೆ ಸರ್ಕಾರದ ಕಾರ್ಯದರ್ಶಿ ಡಾ.ಏಕ್‌ರೂಪ್ ಕೌರ್ ಸುತ್ತೋಲೆಯಲ್ಲಿ ತಿಳಿಸಿದ್ದಾರೆ.
ಈ ಸುತ್ತೋಲೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಟಿಪ್ಪಣಿಯಂತೆ ಹೊರಡಿಸಿದ್ದು, ಹಣ ಪಾವತಿ ತಡೆಯುವ ಜತೆಗೆ ಪ್ರಾರಂಭವಾಗಬೇಕಿರುವ ಕಾಮಗಾರಿಗಳನ್ನು ಪ್ರಾರಂಭ ಮಾಡದಂತೆ ಸೂಚಿಸಲಾಗಿದೆ. ಸುತ್ತೋಲೆಯನ್ನು ಎಲ್ಲಾ ಇಲಾಖೆಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು ಹಾಗೂ ಕಾರ್ಯದರ್ಶಿಗಳಿಗೆ ರವಾನಿಸಲಾಗಿದೆ. ಜತೆಗೆ ಇಲಾಖೆ ಮುಖ್ಯಸ್ಥರು, ರಾಜ್ಯದ ಎಲ್ಲಾ ನಿಗಮ, ಮಂಡಳಿ, ಪ್ರಾಧಿಕಾರಿಗಳು, ಎಲ್ಲಾ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು, ಮುಖ್ಯ ಲೆಕ್ಕಾಧಿಕಾರಿಗಳು, ಆರ್ಥಿಕ ಇಲಾಖೆಯ ಅಧಿಕಾರಿಗಳಿಗೆ ಕಳುಹಿಸಲಾಗಿದೆ.
ಸ್ಥಳೀಯ ಸಮಸ್ಯೆಗಳ ಪರಿಹಾರಕ್ಕೆ ಹೆಚ್ಚಿನ ನಿಗಾ: ಶಾಸಕ ವಿಜಯೇಂದ್ರ ಭರವಸೆ
ಅಗತ್ಯ ಕಾಮಗಾರಿಗೆ ಒಪ್ಪಿಗೆ ಸಾಧ್ಯತೆ: ರಾಜ್ಯದಲ್ಲಿ ಪ್ರತಿ ಬಾರಿಯೂ ಹೊಸ ಸರ್ಕಾರ ರಚನೆಗೊಂಡಾಗ ಹಿಂದಿನ ಸರ್ಕಾರದ ಕಾಮಗಾರಿಗಳನ್ನು ತಡೆ ಹಿಡಿಯಲಾಗುತ್ತದೆ. ಸಚಿವರಾಗಿ ನಿಯೋಜನೆಗೊಂಡವರು ತಮ್ಮ ಇಲಾಖೆ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಕಾಮಗಾರಿಗಳ ಕುರಿತು ಪರಿಶೀಲನೆ ನಡೆಸಿ ಅತ್ಯಗತ್ಯ ಇರುವುದಕ್ಕೆ ಮಾತ್ರ ಒಪ್ಪಿಗೆ ನೀಡುವ ಸಾಧ್ಯತೆಯಿದೆ. ಪಕ್ಷಗಳು ಚುನಾವಣಾ ಪ್ರಣಾಳಿಕೆಯಲ್ಲಿ ಜನರಿಗೆ ಭರವಸೆಗಳನ್ನು ನೀಡಿರುತ್ತದೆ. ಅದಕ್ಕೆ ಪೂರಕವಾಗಿ ಕಾರ್ಯಕ್ರಮಗಳನ್ನು ರೂಪಿಸಲು ಹಿಂದಿನ ಸರ್ಕಾರದಲ್ಲಿನ ಅನಗತ್ಯ ಕಾಮಗಾರಿಗಳನ್ನು ತಡೆ ಹಿಡಿಯಲಾಗುತ್ತದೆ.
ಮಳೆಗಾಲ ಎದುರಿಸಲು ಕೊಡಗು ಜಿಲ್ಲಾಡಳಿತ ಸಿದ್ಧತೆ: ಜೂನ್ 1ರ ಬಳಿಕ ಎನ್‌ಡಿಆರ್‌ಎಫ್ ತಂಡ ಆಗಮನ
ರಾಜ್ಯದಲ್ಲಿ ಸಚಿವರಿಗೆ ಇನ್ನೂ ಖಾತೆ ಹಂಚಿಕೆ ಆಗಿಲ್ಲ. ಹೀಗಾಗಿ ಸಚಿವರು ಖಾತೆಗಳ ಜವಾಬ್ದಾರಿ ವಹಿಸಿಕೊಂಡ ಬಳಿಕ ಪರಿಶೀಲಿಸಿ ಅಗತ್ಯವಿರುವ ಕಾಮಗಾರಿಗಳಿಗೆ ಒಪ್ಪಿಗೆ ನೀಡುವ ಸಾಧ್ಯತೆಯಿದೆ. ಉಳಿದ ಕಾಮಗಾರಿಗಳನ್ನು ಶಾಶ್ವತವಾಗಿ ರದ್ದು ಮಾಡಬಹುದು. ಇನ್ನು ಸದ್ಯದಲ್ಲೇ ಪ್ರಣಾಳಿಕೆಗೆ ಅನುಗುಣವಾಗಿ ಬಜೆಟ್ ತಯಾರಿ ನಡೆಸಿ ಜುಲೈನಲ್ಲಿ ಹೊಸ ಬಜೆಟ್ ಮಂಡಿಸುವುದಾಗಿ ಸಿದ್ದರಾಮಯ್ಯ ಘೋಷಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಆರ್ಥಿಕ ಇಲಾಖೆ ಸುತ್ತೋಲೆಯು ಮಹತ್ವ ಪಡೆದುಕೊಂಡಿದೆ.