ಲೋಕಸಭೆಯ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಯಾರಿಗೆ ನ್ಯಾಯ ಕೊಟ್ಟಿದ್ದಾರೋ ಗೊತ್ತಿಲ್ಲ. ಅವರ ಆ ಗೊತ್ತಿಲ್ಲದ ಸಾಧನೆಗೆ ಗೊತ್ತಿಲ್ಲದ ಪ್ರಶಸ್ತಿ ಕೊಟ್ಟಿದ್ದಾರೆ. ಅವರಿಗೆ ಶುಭವಾಗಲಿ ಎಂದು ಸಂಸದ ಬೊಮ್ಮಾಯಿಯವರು ವ್ಯಂಗ್ಯ ಮಾಡಿದರು.

ಗದಗ (ಜು.18): ಲೋಕಸಭೆಯ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಯಾರಿಗೆ ನ್ಯಾಯ ಕೊಟ್ಟಿದ್ದಾರೋ ಗೊತ್ತಿಲ್ಲ. ಅವರ ಆ ಗೊತ್ತಿಲ್ಲದ ಸಾಧನೆಗೆ ಗೊತ್ತಿಲ್ಲದ ಪ್ರಶಸ್ತಿ ಕೊಟ್ಟಿದ್ದಾರೆ. ಅವರಿಗೆ ಶುಭವಾಗಲಿ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿಯವರು ವ್ಯಂಗ್ಯ ಮಾಡಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಐಸಿಸಿ ಹಿಂದುಳಿದ ವರ್ಗಗಳ ಸಮಿತಿಯಿಂದ ಲೋಕಸಭೆ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿಗೆ ನ್ಯಾಯ ಯೋಧ ಬಿರುದು ಕೊಟ್ಟಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ರಾಹುಲ್ ಗಾಂಧಿಯವರು ಯಾರಿಗೆ ನ್ಯಾಯ ಕೊಟ್ಟರು ಯಾರಿಗೂ ಗೊತ್ತಿಲ್ಲ.

ಗೊತ್ತಿಲ್ಲದ ಸಾಧನೆಗೆ ಗೊತ್ತಿಲ್ಲದ ಪ್ರಶಸ್ತಿ ಕೊಟ್ಟಿದ್ದಾರೆ. ಪಡೆದುಕೊಂಡವರಿಗೂ ಕೊಟ್ಟವರಿಗೂ ಶುಭವಾಗಲಿ ಎಂದರು. ಏರೋ ಸ್ಪೇಸ್ ಉದ್ಯಮಕ್ಕೆ ಆಂಧ್ರಪ್ರದೇಶ ಸರ್ಕಾರ ಆಹ್ವಾನದ ಕುರಿತು ಕೇಳಿದ ಪ್ರಶ್ನೆಗೆ ಏರೋಸ್ಪೇಸ್ ಟೆಕ್ನಾಲಜಿ ಕಳೆದ ಆರೇಳು ದಶಕದಿಂದ ಕರ್ನಾಟದಲ್ಲಿದೆ. ಕರ್ನಾಟಕ ಬಿಟ್ಟು ಏರೋಸ್ಪೇಸ್ ಟೆಕ್ನಾಲಜಿ ಉದ್ಯಮ ಹೋಗುವುದಿಲ್ಲ ಎಂದರು. ಮಾಜಿ ಸಚಿವ ಬಿ ಶ್ರೀರಾಮುಲು ಹಾಗೂ ಜನಾರ್ದನ ರೆಡ್ಡಿ ಅವರನ್ನು ಒಂದು ಮಾಡಲಾಗುತ್ತಿದೆ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಅವರನ್ನು ಒಂದು ಮಾಡುವ ಅಗತ್ಯ ಇಲ್ಲ. ಅವರು ಮೊದಲಿನಿಂದಲೂ ಒಂದೇ ಇದ್ದಾರೆ ಎಂದರು.

ಗದಗ-ಬೆಟಗೇರಿ ನೀರು ಪೂರೈಕೆಗೆ ಗಂಭೀರ ಕ್ರಮ ಆಗಲಿ: ಗದಗ-ಬೆಟಗೇರಿ ಅವಳಿ ನಗರಕ್ಕೆ ನಿರಂತರ ನೀರು ಪೂರೈಕೆ ಯೋಜನೆಗೆ 2017ರಲ್ಲಿಯೇ ಲೋಕಾರ್ಪಣೆಗೊಳಿಸಲಾಗಿದೆ. ಆದರೂ ಸರಿಯಾಗಿ ವಾರ್ಡವಾರು ನಿರಂತರ ನೀರು ಪೂರೈಕೆ ಸಾಧ್ಯವಾಗಿಲ್ಲ. ಈ ಬಗ್ಗೆ ನಗರಸಭೆ ಅಧಿಕಾರಿಗಳು ಗಂಭೀರವಾಗಿ ನೀರು ಪೂರೈಕೆಗೆ ಕ್ರಮ ಕೈಗೊಳ್ಳಬೇಕೆಂದು ಹೇಳಿದರು. ಅವಳಿ ನಗರಕ್ಕೆ ನೀರು ಪೂರೈಕೆಗಾಗಿ ಈಗಾಗಲೇ ತುಂಗಭದ್ರಾ ಹಾಗೂ ಮಲಪ್ರಭಾ ನದಿಯಿಂದ ನೀರು ಪೂರೈಕೆಗೆ ಯೋಜನೆ ಸಿದ್ಧಪಡಿಸಿ ಅನುಷ್ಠಾನಗೊಳಿಸುವ ಮೂಲಕ ನಿರಂತರ ನೀರು ಒದಗಿಸಲು ಚಾಲನೆಯನ್ನು ನೀಡಲಾಗಿದ್ದರೂ ಸಹ ಈವರೆಗೂ ನಗರದ ಸಾರ್ವಜನಿಕರಿಗೆ ನಿಯಮಿತವಾಗಿ ನೀರು ಪೂರೈಕೆ ಸಾಧ್ಯವಾಗದಿರುವುದು ವಿಷಾದನೀಯ.

ನೀರು ಪೂರೈಕೆಯಲ್ಲಿ ಇರುವ ಸಮಸ್ಯೆ ತಾತ್ಕಾಲಿಕ ಶೀಘ್ರ ಪರಿಹಾರಕ್ಕೆ ಯೋಜನೆ ರೂಪಿಸಿ ಅನುಷ್ಠಾನಗೊಳಿಸಲು ಈ ಹಿಂದಿನ ಸಭೆಯಲ್ಲಿಯೇ ಸೂಚಿಸಲಾಗಿತ್ತು. ಅಧಿಕಾರಿ ವರ್ಗ ಮಾತ್ರ ನೀಡಿರುವ ಸೂಚನೆಯನ್ನು ಪಾಲನೆ ಮಾಡುವಲ್ಲಿ ವಿಳಂಬ ಧೋರಣೆ ಕಂಡುಬರುತ್ತಿದೆ ಎಂದರು. ಅವಳಿ ನಗರಕ್ಕೆ ನೀರು ಪೂರೈಕೆ ಕುರಿತಂತೆ ಶಾಸಕರಾದ ಸಿ.ಸಿ. ಪಾಟೀಲ ಹಾಗೂ ಎಸ್.ವಿ. ಸಂಕನೂರ ಅವರು ಸಹ ಅಸಮರ್ಪಕ ನೀರು ಪೂರೈಕೆಯನ್ನು ಸರಿಪಡಿಸುವಂತೆ ಸಭೆಯಲ್ಲಿ ಸುದೀರ್ಫವಾಗಿ ಚರ್ಚಿಸಿದರು. ಇದಕ್ಕೆ ಸಂಸದ ಬಸವರಾಜ ಬೊಮ್ಮಾಯಿ ಅವರು, ತಾವು ಬಾಲ್ಯದಲ್ಲಿರುವಾಗಲೇ ಅಂದರೆ 1987ರಿಂದಲೇ ಗದಗ ನೀರಿನ ಸಮಸ್ಯೆ ಕುರಿತು ಅರಿವಿದೆ. ಅದರ ಪರಿಹಾರಕ್ಕೆ ಇದುವರೆಗೂ ಸಾಧ್ಯವಾಗದಿರುವುದು ಅಧಿಕಾರಿ ವರ್ಗದ ಕಾರ್ಯವೈಖರಿಗೆ ಹಿಡಿದ ಕೈಗನ್ನಡಿಯಾಗಿದೆ ಎಂದರು.

ವಸತಿ ಯೋಜನೆ ಕುರಿತಂತೆ ಸಭೆಯಲ್ಲಿ ಚರ್ಚಿಸಲಾಗಿ ಕೇಂದ್ರ ಪುರಸ್ಕೃತ ಯೋಜನೆಗಳ ಗುರಿ ಸಾಧನೆಗೆ ಅಧಿಕಾರಿವರ್ಗ ಕಾರ್ಯ ಪ್ರವೃತ್ತರಾಗಬೇಕು. ಆ ಮೂಲಕ ಪ್ರತಿ ಅರ್ಹ ಕುಟುಂಬಕ್ಕೂ ಸೂರು ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುವಂತೆ ನಿರ್ದೇಶಿಸಿದರು. ಹಿಂದಿನ ಸಭೆಯಲ್ಲಿ ಸೂಚಿಸಿದ ಕಾರ್ಯಗಳನ್ನು ಸರಿಯಾಗಿ ಅನುಷ್ಠಾನಗೊಳಿಸಿ ವಿಶಿಷ್ಟ ಸಾಧನೆಯೊಂದಿಗೆ ಅಧಿಕಾರಿಗಳು ಸಭೆಗೆ ಆಗಮಿಸಬೇಕು. ಪ್ರತಿ ಸಭೆಯಲ್ಲಿ ನೀಡಿರುವ ಸೂಚನೆಗಳ ಪಾಲನೆ ಮಾಡಿ ಗದಗ ಜಿಲ್ಲೆ ಆರ್ಥಿಕ ಪ್ರಗತಿಯಲ್ಲಿ ಅಧಿಕಾರಿ ವರ್ಗವು ಭಾಗಿಯಾಗಬೇಕು ಎಂದರು.