ಚಿತ್ರ ನಟರ ಮುಖ ತೋರಿಸಿ ಬಿಜೆಪಿ ಮತಭಿಕ್ಷೆ: ಎಚ್.ಡಿ.ಕುಮಾರಸ್ವಾಮಿ
ಚಿತ್ರ ನಟರು ಸಮಾಜದ ಎಲ್ಲಾ ವರ್ಗಕ್ಕೂ ಸೇರಿದವರಾಗಿದ್ದು, ಅವರ ಮುಖ ತೋರಿಸಿ ಮತ ಪಡೆಯಲು ಬಿಜೆಪಿ ಮುಂದಾಗಿದೆ. ಇದನ್ನು ಗಮನಿಸಿದರೆ ಈ ಬಾರಿ ಚುನಾವಣೆಯಲ್ಲಿ ಬಿಜೆಪಿಗೆ ಗೆಲುವು ಕಷ್ಟಎನ್ನುವುದು ಗೊತ್ತಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರು (ಏ.06): ಚಿತ್ರ ನಟರು ಸಮಾಜದ ಎಲ್ಲಾ ವರ್ಗಕ್ಕೂ ಸೇರಿದವರಾಗಿದ್ದು, ಅವರ ಮುಖ ತೋರಿಸಿ ಮತ ಪಡೆಯಲು ಬಿಜೆಪಿ ಮುಂದಾಗಿದೆ. ಇದನ್ನು ಗಮನಿಸಿದರೆ ಈ ಬಾರಿ ಚುನಾವಣೆಯಲ್ಲಿ ಬಿಜೆಪಿಗೆ ಗೆಲುವು ಕಷ್ಟ ಎನ್ನುವುದು ಗೊತ್ತಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ನಟ ಸುದೀಪ್ ಬಿಜೆಪಿಗೆ ಬೆಂಬಲ ನೀಡುವ ಬಗ್ಗೆ ಬುಧವಾರ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಅವರು, ಯಾವುದೇ ಚಿತ್ರ ನಟರನ್ನು ವೈಯಕ್ತಿಕವಾಗಿ ದುರುಪಯೋಗ ಮಾಡಿಕೊಳ್ಳಲು ಇಷ್ಟಪಡುವುದಿಲ್ಲ. ನಟರನ್ನು ಸ್ವಂತಕ್ಕೆ ದುರುಪಯೋಗ ಮಾಡಿದರೆ ಅವರ ಘನತೆಗೆ ಧಕ್ಕೆ ತಂದಂತಾಗುತ್ತದೆ. ಇಂತಹ ಕೆಲಸ ಮಾಡುವುದಕ್ಕೆ ನಾನು ಇಷ್ಟಪಡುವುದಿಲ್ಲ. ಜೆಡಿಎಸ್ ಪಕ್ಷಕ್ಕೆ ಯಾವುದೇ ಸ್ಟಾರ್ ಪ್ರಚಾರಕರು ಬೇಡ. ನಮ್ಮ ಸ್ಟಾರ್ ಕ್ಯಾಂಪನ್‌ಗಳು ನಮ್ಮ ಕಾರ್ಯಕರ್ತರು . ಅದಕ್ಕಿಂತ ಮಿಗಿಲಾಗಿ ನನ್ನ ಪಂಚರತ್ನ ಯಾತ್ರೆಯ ಪಂಚ ಯೋಜನೆಗಳನ್ನು ಇಟ್ಟುಕೊಂಡು ಜನರ ಬಳಿ ಹೋಗುತ್ತೇನೆ ಎಂದು ಹೇಳಿದರು.
ಸುದೀಪ್ ರಾಜಕೀಯ ಪ್ರವೇಶ ಇಲ್ಲ: ಬಿಜೆಪಿಯ ಪರ ಪ್ರಚಾರ
‘ನಟ ಸುದೀಪ್ ಯಾವುದೇ ಪಕ್ಷ ಸೇರಲಿ ಅಥವಾ ಪ್ರಚಾರ ಮಾಡಲಿ. ಅದು ಅವರ ವೈಯಕ್ತಿಕ ವಿಷಯ. ಸಿನಿಮಾ ನಟರ ಬಗ್ಗೆ ನಾನು ಲಘುವಾಗಿ ಮಾತನಾಡಲು ಹೋಗುವುದಿಲ್ಲ. ಸಿನಿಮಾ ನಟರ ಪ್ರಚಾರದಿಂದ ಮತದಾರರು ಪ್ರಭಾವಕ್ಕೊಳಗಾಗುವುದಿಲ್ಲ. ನಟರು ಪ್ರಚಾರ ಮಾಡಿದ ಕೆಲವು ಕಡೆ ಸೋಲಾಗಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಮಂಡ್ಯದಲ್ಲಿ ಸ್ಟಾರ್‌ಗಳಿಂದ ನಿಖಿಲ್ ಕುಮಾರಸ್ವಾಮಿ ಸೋತಿದ್ದಾರೆ ಎನ್ನುತ್ತಿದ್ದಾರೆ. ಆದರೆ, ಅದು ಸುಳ್ಳು, ನಿಖಿಲ್ ಸೋತಿದ್ದು, ಬಿಜೆಪಿ, ಕಾಂಗ್ರೆಸ್, ರೈತ ಸಂಘಟನೆ ಒಳ ಒಪ್ಪಂದದಿಂದ’ ಎಂದರು.
ಹಾಸನ ಸೇರಿಸಿಯೇ ಪಟ್ಟಿಬಿಡುಗಡೆ ಮಾಡುವೆ: ಜೆಡಿಎಸ್ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬುಧವಾರ ಅಥವಾ ಗುರುವಾರ ಬಿಡುಗಡೆಯಾಗಬಹುದು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ. ಸುದ್ದಿಗಾರರ ಜತೆ ಮಾತನಾಡಿದ ಅವರು, ಮಂಗಳವಾರವಾಗಿದ್ದರಿಂದ ಪಟ್ಟಿಬಿಡುಗಡೆಯಾಗಿಲ್ಲ. ಪಕ್ಷದ ವರಿಷ್ಠ ಎಚ್.ಡಿ.ದೇವೇಗೌಡ ಅವರು ಬುಧವಾರ ಸಂಜೆ ದೆಹಲಿಯಿಂದ ವಾಪಸ್ ಆಗಲಿದ್ದಾರೆ. ನಂತರ ಪಟ್ಟಿಬಿಡುಗಡೆ ಹೊರಬರಲಿದೆ ಎಂದರು. ಹಾಸನ ಕ್ಷೇತ್ರದ ಟಿಕೆಟ್ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಹಾಸನವನ್ನು ಸೇರಿಸಿ ಪಟ್ಟಿಬಿಡುಗಡೆ ಮಾಡುತ್ತೇನೆ.
ಅದನ್ನು ಬಿಟ್ಟು ಮಾಡಿದರೆ ಇನ್ನೊಂದು ಕಥೆ ಹುಟ್ಟಿಕೊಳ್ಳುತ್ತದೆ. ಆದ್ದರಿಂದ ಆ ಪಟ್ಟಿಯಲ್ಲಿ ಹಾಸನದ್ದು ಒಳಗೊಂಡಂತೆ ತೀರ್ಮಾನ ಮಾಡುತ್ತೇವೆ. ಮೊದಲ ಪಟ್ಟಿಬಿಡುಗಡೆಯಾದಾಗಲೂ ಯಾವುದೇ ಸಮಸ್ಯೆ ಇರಲಿಲ್ಲ. ಎರಡನೇ ಪಟ್ಟಿವೇಳೆ ಹಾಸನದ್ದು ಹೆಚ್ಚು ಪ್ರಚಾರವಾಗಿದೆ. ಹಾಸನ ವಿಚಾರದಿಂದ ಜನತಾದಳಕ್ಕೂ ಹೆಚ್ಚು ಪ್ರಚಾರವಾಗಿದೆ. ಇದರಿಂದ ರಾಜ್ಯದಲ್ಲಿ ಜೆಡಿಎಸ್ ಪಕ್ಷಕ್ಕೆ ಶೇ.2-3ರಷ್ಟುಮತ ಪ್ರಮಾಣ ಹೆಚ್ಚಾಗಲಿದೆ. ನಮ್ಮ ಗುರಿ ಮುಟ್ಟಲು ನಾವು ಯಾವುದೇ ದುಡುಕಿನ ತೀರ್ಮಾನ ಮಾಡಲ್ಲ. ಕಾರ್ಯಕರ್ತರ ಅಪೇಕ್ಷೆ, ಗೆಲ್ಲುವ ಮಾನದಂಡದಲ್ಲಿಯೇ ಟಿಕೆಟ್ ಕೊಡುತ್ತೇವೆ.
ನಾನು ಕಿಂಗ್ ಆಗುವುದನ್ನು ತಪ್ಪಿಸಲು ಸಾಧ್ಯವಿಲ್ಲ: ಎಚ್.ಡಿ.ಕುಮಾರಸ್ವಾಮಿ
ಕಾಂಗ್ರೆಸ್ ಪಟ್ಟಿ ಬಿಡುಗಡೆಯ ವಿಚಾರದ ಬಗ್ಗೆ ನಾನು ಚಿಂತೆ ಮಾಡಿಲ್ಲ. ನಾವು ನಮ್ಮದೇ ರೀತಿಯಲ್ಲಿ ಅಭ್ಯರ್ಥಿಗಳನ್ನು ತೀರ್ಮಾನ ಮಾಡುತ್ತೇವೆ ಎಂದು ತಿಳಿಸಿದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.