Asianet Suvarna News Asianet Suvarna News

ಸಿದ್ರಾಮಣ್ಣರವರೇ 5 ವರ್ಷ ಸಿಎಂ ಆಗಿದ್ರಿ, ಏನು ಮಾಡಿದ್ರೀ?: ಸಿಎಂ ಬೊಮ್ಮಾಯಿ

ಸಿದ್ರಾಮಣ್ಣರವರೇ 5 ವರ್ಷ ಸಿಎಂ ಆಗಿದ್ರಿ, ಏನು ಮಾಡಿದ್ರೀ? ಅನ್ನಭಾಗ್ಯ ಕೊಟ್ಟಿದ್ದು ನೀವು ಅಂದ್ರಿ, ಅಕ್ಕಿ ಮೋದಿದು, ಖಾಲಿ ಚೀಲ ನಿಮ್ಮದು, ಅದಕ್ಕೆ ಪೋಟೋನೂ ನಿಮ್ಮದೇ. ಯಾರದ್ದೋ ದುಡ್ಡು, ಸಿದ್ರಾಮಣ್ಣ ನ ಜಾತ್ರೆ..

CM Basavaraj Bommai Outraged Against Siddaramaiah Over Janasankalpa Yatra gvd
Author
First Published Nov 28, 2022, 12:30 AM IST

ಕೊಪ್ಪ (ನ.28): ಸಿದ್ರಾಮಣ್ಣರವರೇ 5 ವರ್ಷ ಸಿಎಂ ಆಗಿದ್ರಿ, ಏನು ಮಾಡಿದ್ರೀ? ಅನ್ನಭಾಗ್ಯ ಕೊಟ್ಟಿದ್ದು ನೀವು ಅಂದ್ರಿ, ಅಕ್ಕಿ ಮೋದಿದು, ಖಾಲಿ ಚೀಲ ನಿಮ್ಮದು, ಅದಕ್ಕೆ ಪೋಟೋನೂ ನಿಮ್ಮದೇ. ಯಾರದ್ದೋ ದುಡ್ಡು, ಸಿದ್ರಾಮಣ್ಣ ನ ಜಾತ್ರೆ.. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೊಪ್ಪದ ಪಟ್ಟಣ ಪಂಚಾಯಿತಿಯ ಲಾಲ್‌ ಬಹದ್ದೂರ್‌ ಶಾಸ್ತ್ರಿ ಕ್ರೀಡಾಂಗಣದಲ್ಲಿ ಭಾನುವಾರ ಬಿಜೆಪಿ ವತಿಯಿಂದ ಏರ್ಪಡಿಸಿದ್ದ ಜನಸಂಕಲ್ಪ ಯಾತ್ರೆ ಕಾರ್ಯಕ್ರಮ ಉದ್ಘಾಟಿಸಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಹೀಗಳೆದ ಪರಿಯಿತು.

ಅನ್ನಭಾಗ್ಯಕ್ಕೆ ಕನ್ನ ಹಾಕಿದ್ರು, ಎಸ್ಸಿ -ಎಸ್ಟಿಗಳ ಬಗ್ಗೆ ಬಹಳ ಮಾತನಾಡುತ್ತಾರೆ. ಆದರೆ ಹಾಸ್ಟೆಲ್‌ಗಳ ದಿಂಬು ಹಾಸಿಗೆಯಲ್ಲೂ ಭ್ರಚ್ಟಾಚಾರ ಮಾಡಿದರು. ಸಣ್ಣ ಹಾಗೂ ಭಾರಿ ನೀರಾವರಿಯಲ್ಲೂ ಅಕ್ರಮ ಆಗಿದೆ. ಬಿ.ಡಿ.ಎ.ನಲ್ಲೂ ಭ್ರಷ್ಟಚಾರ ಮಾಡಿದ್ದಾರೆ ಎಂದು ಮುಖ್ಯಮಂತ್ರಿ ಕಾಂಗ್ರೆಸ್‌ ಆಡಳಿತದ ವಿರುದ್ಧ ಭ್ರಷ್ಟಾಚಾರದ ಗಂಭೀರ ಆರೋಪ ಮಾಡಿದರು. ಪ್ರಕರಣಗಳನ್ನು ಮುಚ್ಚಿ ಹಾಕಲು ಲೋಕಾಯುಕ್ತ ಸಂಸ್ಥೆಯನ್ನು ಮುಚ್ಚಿ, ಎಸಿಬಿ ಮಾಡಿದ್ರು. ಆಗ 50 ಕೇಸುಗಳಲ್ಲಿ ಬಿ-ರಿಪೋರ್ಚ್‌ ಕೊಟ್ಟು ಮುಚ್ಚಿ ಹಾಕಿದ್ರು. ಇದು, ನಿಮ್ಮ ಆಡಳಿತ. ಈಗ ದಾಖಲೆ ಸಹಿತ ಕೇಸ್‌ಗಳನ್ನು ದಾಖಲಾಗುತ್ತಿದೆ. 

Voters Data Theft Case: ವೋಟರ್‌ಗೇಟ್‌ ಹಗರಣ ಸಾಬೀತು: ಕಾಂಗ್ರೆಸ್‌

ಈಗ ಆಮಿಷ ಕೊಟ್ಟು ಕೇಸ್‌ ವಾಪಸ್‌ ಪಡೆಯುವ ಕೆಲಸ ನಿಮ್ಮಿಂದ ಆಗುತ್ತಿವೆ ಎಂದು ಕಾಂಗ್ರೆಸ್‌ ಪಕ್ಷವನ್ನು ಟೀಕಿಸಿದರು. ಜನಸಂಕಲ್ಪ ಯಾತ್ರೆಯಲ್ಲಿ ಜನಸ್ಪಂದನೆ ರಾಜ್ಯದಲ್ಲಿ ಉತ್ತಮ ರೀತಿಯಲ್ಲಿ ಸಿಗುತ್ತಿದೆ. ಜನಸಂಕಲ್ಪದ ಅನುಗುಣವಾಗಿ ನಾವು ಆಡಳಿತ ನೀಡುತ್ತಿದ್ದೇವೆ. ರಾಜ್ಯದಲ್ಲಿ ಡಬಲ್‌ ಎಂಜಿನ್‌ ಸರ್ಕಾರ ಇದೆ. ಈ ಕಾರಣಕ್ಕಾಗಿಯೇ ರಾಜ್ಯದಲ್ಲಿ 6 ಸಾವಿರ ಕಿ.ಮೀ. ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಆಗುತ್ತಿದೆ. ಬಂದರುಗಳು ಅಭಿವೃದ್ಧಿ ಆಗುತ್ತಿವೆ ಎಂದು ಹೇಳಿದರು. ರಾಜ್ಯದಲ್ಲಿ ಜಲಜೀವನ್‌ ಮಿಷನ್‌ ಜಾರಿಗೆ ಬಂದಿದೆ. ಒಂದೂವರೆ ವರ್ಷದಲ್ಲಿ 30 ಲಕ್ಷ ಮನೆಗಳಿಗೆ ಕುಡಿಯುವ ನೀರಿನ ಸಂಪರ್ಕ ಕಲ್ಪಿಸಲಾಗಿದೆ. 

ಇದು ಸಾಧಾರಣ ಕೆಲಸ ಅಲ್ಲ, ಒಂದೂವರೆ ಸಾವಿರ ಕೋಟಿ ವೆಚ್ಚದಲ್ಲಿ ಮಲೆನಾಡಿನ ಭಾಗದಲ್ಲಿ ಕುಡಿಯುವ ನೀರು ನೀಡಲಾಗುತ್ತಿದೆ. ಬದ್ಧತೆ, ಸಂಕಲ್ಪ ಇರುವ ನಾಯಕತ್ವ ಮೋದಿ ಅವರದು. ಭಾರತದಲ್ಲಿ 7 ಕೋಟಿ ಮನೆಗಳಿಗೆ ಕುಡಿಯುವ ನೀರು ಕೊಡಲಾಗುತ್ತಿದೆ. ಕುಡಿಯುವ ನೀರು ಕೊಡಲು ಆಗದೇ ಇದ್ದವರು, ಬದುಕು ಕಟ್ಟಿಕೊಡಲು ಸಾಧ್ಯವಾ ಎಂದು ಪ್ರಶ್ನಿಸಿದ ಅವರು, ಎಲ್ಲ ಕಾಲದಲ್ಲೂ ಜನರನ್ನು ಮೋಸ ಮಾಡಲು ಸಾಧ್ಯವಿಲ್ಲ. ಜನರು ಜಾಗೃತರಾಗಿದ್ದಾರೆ ಎಂದರು. ಮಾಜಿ ಸಿಎಂ ಯಡಿಯೂರಪ್ಪ ಮಾತನಾಡಿ, ಕಾಂಗ್ರೆಸ್‌ ಪಕ್ಷ ತನ್ನ ಅಸ್ತಿತ್ವವನ್ನು ಕಳೆದುಕೊಂಡಿದೆ. 

ಇಡೀ ದೇಶದಲ್ಲಿ ಕೇವಲ 2 ರಾಜ್ಯದಲ್ಲಿ ಮಾತ್ರ ಅಧಿಕಾರದಲ್ಲಿದೆ. ಬರುವ ಚುನಾವಣೆಯಲ್ಲಿ ಆ ಎರಡು ರಾಜ್ಯಗಳಲ್ಲಿ ಬಿಜೆಪಿ ಗೆಲ್ಲುವ ಮೂಲಕ ಕಾಂಗ್ರೆಸ್‌ ದೇಶದಲ್ಲಿ ಧೂಳಿ ಪಟ ಆಗಲಿದೆ ಎಂದು ಹೇಳಿದರು. ಕಾಂಗ್ರೆಸ್‌ ಪಕ್ಷಕ್ಕೆ ಭವಿಷ್ಯ ಇಲ್ಲ. ಈ ದೇಶದಲ್ಲಿ 63 ವರ್ಷ ಆಡಳಿತ ಮಾಡಿರುವ ನಿಮ್ಮ ಸಾಧನೆ ಏನು, ರಾಜ್ಯದಲ್ಲಿ ನಾನು ಸಿಎಂ ಆಗಿದ್ದಾಗ 27 ಲಕ್ಷ ಹೆಣ್ಣು ಮಕ್ಕಳಿಗೆ ಬಾಂಡ್‌ ನೀಡಿದ್ದೇನೆ. ಸುವರ್ಣ ಗ್ರಾಮ ಯೋಜನೆ ಸೇರಿದಂತೆ ಹಲವು ಯೋಜನೆಗಳ ಮೂಲಕ ರಾಜ್ಯವನ್ನು ಕಟ್ಟುವ ಕೆಲಸ ಮಾಡಿದ್ದೇನೆ. ಹಣ, ಹೆಂಡ, ತೋಳ್ಬಲದಿಂದ ಜಾತಿಯ ವಿಷ ಬೀಜ ಬಿತ್ತಿ ಚುನಾವಣೆಯಲ್ಲಿ ಗೆಲ್ಲುವ ಕಾಲ ಹೋಗಿದೆ ಎಂದರು.

ಕೇಂದ್ರದ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಮಾತನಾಡಿ, ಚಿಕ್ಕಮಗಳೂರಿಗೆ ನರೇಂದ್ರ ಮೋದಿ ಅವರು 2014ರಲ್ಲಿ ಬಂದಿದ್ದ ಸಂದರ್ಭದಲ್ಲಿ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಆಗುತ್ತೆ ಎಂದು ಹೇಳಿದ್ದರು. ಯಾವುದೇ ರಕ್ತಪಾತ ಇಲ್ಲದೆ ರಾಮ ಮಂದಿರ ನಿರ್ಮಾಣ ಆಗುತ್ತಿದೆ. ಇದು, ನಮ್ಮ ಹೆಮ್ಮೆ ಎಂದ ಅವರು, ಕಾಶ್ಮೀರ ಸಮಸ್ಯೆಯನ್ನು ಬಗೆಹರಿಸಿ ಶಾಂತಿ ನೆಲೆಸುವ ಕೆಲಸ ಆಗಿದೆ. 370ನೇ ವಿಧಿ ರದ್ದುಪಡಿಸಿದೆ. ಹೇಳಿದಂತೆ ನಡೆದುಕೊಳ್ಳುವ ಪಕ್ಷ ಬಿಜೆಪಿ ಎಂದರು. ಕೇಂದ್ರದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರದಲ್ಲಿದ್ದಾಗ ಅಡಕೆ ವಿಷಕಾರಿ ಎಂದು ಕೋರ್ಚ್‌ ಮುಂದೆ ಹೇಳಲಾಗಿತ್ತು. 

JDS Pancharatna Rathayatra: ಬಸವರಾಜ ಬೊಮ್ಮಾಯಿ ಹೆಬ್ಬೆಟ್ಟು ಸಿಎಂ: ಹೆಚ್‌.ಡಿ.ಕುಮಾರಸ್ವಾಮಿ

ಈ ವಿಷಯದಲ್ಲಿ ಅಡಕೆ ಬೆಳೆಗಾರರಿಗೆ ಆಗುವ ಅನ್ಯಾಯವನ್ನು ತಟೆಗಟ್ಟುವ ನಿಟ್ಟಿನಲ್ಲಿ ರಾಜ್ಯದ ಬಿಜೆಪಿ ನಾಯಕರು ಈ ವಿಷಯವನ್ನು ಪ್ರಧಾನಿ ನರೇಂದ್ರ ಮೋದಿ ಅವರ ಗಮನಕ್ಕೆ ತಂದು, ಕಾನೂನಾತ್ಮಕವಾಗಿ ನ್ಯಾಯ ಸಿಗುವ ನಿಟ್ಟಿನಲ್ಲಿ ಪ್ರಯತ್ನ ಸಾಗಿದೆ ಎಂದು ತಿಳಿಸಿದರು. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ರಾಜ್ಯ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್‌, ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಡಿ.ಎನ್‌. ಜೀವರಾಜ್‌ ಮಾತನಾಡಿದರು. ಕಾರ್ಯಕ್ರಮದಲ್ಲಿ ತರೀಕೆರೆ ಶಾಸಕ ಡಿ.ಎಸ್‌. ಸುರೇಶ್‌, ವಿಧಾನ ಪರಿಷತ್ತು ಸದಸ್ಯ ಎಂ.ಕೆ. ಪ್ರಾಣೇಶ್‌, ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್‌.ಸಿ.ಕಲ್ಮರುಡಪ್ಪ, ರಾಮಸ್ವಾಮಿ ಉಪಸ್ಥಿತರಿದ್ದರು.

Follow Us:
Download App:
  • android
  • ios