ಕಾಂಗ್ರೆಸ್‌ ಸಂಸದ, ಕರ್ನಾಟಕ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸುರ್ಜೇವಾಲಾ ಅವರಿಗೆ ನೀಡಲಾಗಿದ್ದ ವೈ ಪ್ಲಸ್‌ ಭದ್ರತೆಯನ್ನು ಕೇಂದ್ರ ಸರ್ಕಾರ ಹಿಂಪಡೆದಿದೆ.

ನವದೆಹಲಿ: ಕಾಂಗ್ರೆಸ್‌ ಸಂಸದ, ಕರ್ನಾಟಕ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸುರ್ಜೇವಾಲಾ ಅವರಿಗೆ ನೀಡಲಾಗಿದ್ದ ವೈ ಪ್ಲಸ್‌ ಭದ್ರತೆಯನ್ನು ಕೇಂದ್ರ ಸರ್ಕಾರ ಹಿಂಪಡೆದಿದೆ. ಸುರ್ಜೇವಾಲಾ ಅವರಿಗೆ ಪ್ರಸ್ತುತ ಯಾವುದೇ ಬೆದರಿಕೆಗಳು ಇಲ್ಲದ ಕಾರಣ ಭದ್ರತೆ ಹಿಂಪಡೆಯಲಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯ ಹೇಳಿದೆ.

ಆದರೆ ಸುರ್ಜೇವಾಲಾ ಅವರ ಪರ ವಕೀಲರು ಇದನ್ನು ಪಂಜಾಬ್‌ ಮತ್ತು ಹರ್ಯಾಣ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದು, ‘ನಾಯಕರಿಗೆ ಬೆದರಿಕೆ ಕರೆ ಇವೆ. ಹೀಗಾಗಿ ಭದ್ರತೆ ಕೊಡಬೇಕು’ ಎಂದು ಮನವಿ ಮಾಡಿದ್ದಾರೆ. ಸುರ್ಜೇವಾಲಾ ಪಂಜಾಬ್‌ನಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ.

ಸುರ್ಜೇವಾಲಾ ಸಭೆ ಬಗ್ಗೆ ಶಾಸಕರು, ಸಚಿವರ ಆಕ್ಷೇಪ: ಸಿಎಂ ಅನುಪಸ್ಥಿತಿಯಲ್ಲಿ ಸಭೆ ಎಷ್ಟು ಸರಿ?

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಉಪಸ್ಥಿತಿಯಿಲ್ಲದೆ ಶಾಸಕರು ಹಾಗೂ ಸಚಿವರೊಂದಿಗೆ ಪ್ರತ್ಯೇಕವಾಗಿ ಸಭೆ ನಡೆಸಿದ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಗ್ ಸುರ್ಜೇವಾಲಾ ಕಾರ್ಯವೈಖರಿ ಬಗ್ಗೆ ಸಿದ್ದರಾಮಯ್ಯ ಬಣದ ಕೆಲ ಸಚಿವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ. ಸ್ವಪಕ್ಷೀಯ ಸಚಿವ ಕೆ.ಎನ್‌. ರಾಜಣ್ಣ ಹಾಗೂ ಪರಿಷತ್‌ ಸದಸ್ಯ ರಾಜೇಂದ್ರ ರಾಜಣ್ಣ ಅವರು ಸುರ್ಜೇವಾಲಾ ಸಭೆಗಳ ಬಗ್ಗೆ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದರು.

ಸುರ್ಜೇವಾಲಾ ಅವರು ನಡೆಸುತ್ತಿರುವ ಪ್ರಕ್ರಿಯೆ ಬಗ್ಗೆ ನನಗೆ ಸಮಾಧಾನ ಇಲ್ಲ. ಅವರಿಗೆ ನನ್ನ ಬಗ್ಗೆ ಬೇಜಾರಿದ್ದರೆ ಏನು ಬೇಕಾದರೂ ಮಾಡಿಕೊಳ್ಳಲಿ ಎಂದು ನೇರವಾಗಿ ಕೆ.ಎನ್‌. ರಾಜಣ್ಣ ಹೇಳಿದ್ದರು. ಬುಧವಾರ ಸುರ್ಜೇವಾಲಾ ಅವರನ್ನು ಭೇಟಿ ಮಾಡಬೇಕಾಗಿದ್ದ ಅವರು ವಿದೇಶಕ್ಕೆ ತೆರಳಿದ್ದು, ಎಚ್.ಸಿ. ಮಹದೇವಪ್ಪ ಅವರೂ ಭೇಟಿ ಮಾಡಿಲ್ಲ. ಮತ್ತೆ ಕೆಲ ಸಚಿವರು ಸುರ್ಜೇವಾಲ ಅವರನ್ನು ಭೇಟಿಯಾಗಿದ್ದರೂ ಒಳಗೆ ಅಸಮಾಧಾನ ಹೊಂದಿದ್ದರು ಎಂದು ಹೇಳಲಾಗಿದೆ.

ಬೆನ್ನಲ್ಲೇ ಬಿಜೆಪಿ ಹಾಗೂ ಜೆಡಿಎಸ್‌ ನಾಯಕರು ಸುರ್ಜೇವಾಲಾ ಅವರು ಸೂಪರ್‌ ಸಿಎಂ ಆಗಿದ್ದಾರೆ. ಗುರುವಾರ ನಡೆಯುವ ಸಂಪುಟ ಸಭೆಯೂ ಸುರ್ಜೇವಾಲ ಅವರ ಅಧ್ಯಕ್ಷತೆಯಲ್ಲೇ ನಡೆಯುತ್ತಾ ಎಂದು ವ್ಯಂಗ್ಯವಾಡಿದ್ದರು. ಇದರ ಬೆನ್ನಲ್ಲೇ ರಾಜೇಂದ್ರ, ‘ಸುರ್ಜೇವಾಲ ಅವರ ನಡೆಗೆ ಅಸಮಾಧಾನ ಇದೆ ನಿಜ. ಬಹಳಷ್ಟು ಹಿರಿಯ ಶಾಸಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಸುರ್ಜೆವಾಲ ಅನುದಾನ ಕೊಡುತ್ತಾರಾ? ಸುರ್ಜೆವಾಲ ಸಭೆ ಮುಗಿದ ಬಳಿಕ ಇದು ಯಾವ ತಿರುವು ಪಡೆಯುತ್ತದೆ ಎಂಬುದು ನೋಡಬೇಕು’ ಎಂದು ಹೇಳಿದ್ದರು.