ಕಾಂಗ್ರೆಸ್ ಶಾಸಕರೊಂದಿಗಿನ ಸಭೆ ಕುರಿತು ಮಾಧ್ಯಮಗಳಲ್ಲಿ ಬರುತ್ತಿರುವ ನಾಯಕತ್ವ ಬದಲಾವಣೆ ವಿಚಾರ ಕೇವಲ ಊಹಾಪೋಹ. ಇದು ಕೇವಲ ಸಂಘಟನಾತ್ಮಕ ಚಟುವಟಿಕೆ ಮಾತ್ರ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್‌ಸಿಂಗ್ ಸುರ್ಜೇವಾಲಾ ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರು (ಜು.01): ಕಾಂಗ್ರೆಸ್ ಶಾಸಕರೊಂದಿಗಿನ ಸಭೆ ಕುರಿತು ಮಾಧ್ಯಮಗಳಲ್ಲಿ ಬರುತ್ತಿರುವ ನಾಯಕತ್ವ ಬದಲಾವಣೆ ವಿಚಾರ ಕೇವಲ ಊಹಾಪೋಹ. ಇದು ಕೇವಲ ಸಂಘಟನಾತ್ಮಕ ಚಟುವಟಿಕೆ ಮಾತ್ರ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್‌ಸಿಂಗ್ ಸುರ್ಜೇವಾಲಾ ಸ್ಪಷ್ಟಪಡಿಸಿದ್ದಾರೆ. ಶಾಸಕರೊಂದಿಗೆ ಒನ್ ಟು ಒನ್ ಚರ್ಚೆ ನಡೆಸುವ ಮೊದಲು ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಅಭಿವೃದ್ಧಿ ಹಾಗೂ ಪಕ್ಷ ಸಂಘಟನೆ ನಮ್ಮ ಆದ್ಯತೆಯ ವಿಷಯಗಳು.
ಈ ನಿಟ್ಟಿನಲ್ಲಿ ಶಾಸಕರ ಅಭಿಪ್ರಾಯ ಕೇಳುತ್ತಿದ್ದೇವೆ. ಈ ಬಗ್ಗೆ ಮಾಧ್ಯಮಗಳಲ್ಲಿ ಬರುತ್ತಿರುವ ನಾಯಕತ್ವ ಬದಲಾವಣೆ ವಿಚಾರ ಊಹಾಪೋಹ ಮಾತ್ರ ಎಂದು ಸ್ಪಷ್ಪಪಡಿಸಿದರು. ಶಾಸಕರನ್ನು ಕರೆದು ಅವರ ಕ್ಷೇತ್ರಗಳಲ್ಲಿ ಅಭಿವೃದ್ಧಿ ಗುರಿ, ಸಾಧನೆಗಳ ಬಗ್ಗೆ ಮಾಹಿತಿ ಪಡೆಯುತ್ತೇವೆ. ಈ ಮೂರು ದಿನ ಎರಡು ವಿಭಾಗಗಳ ಶಾಸಕರ ಸಭೆ ಕರೆದಿದ್ದು, ಮುಂದಿನ ವಾರ ಉಳಿದ ವಿಭಾಗದ ಶಾಸಕರನ್ನು ಕರೆಯುತ್ತೇವೆ. ನಂತರ ಪರಾಜಿತ ಅಭ್ಯರ್ಥಿಗಳು, ಆ ನಂತರ ಸಂಸದರು, ಪರಾಜಿತ ಲೋಕಸಭೆ ಅಭ್ಯರ್ಥಿಗಳನ್ನು ಕರೆಯುತ್ತೇವೆ.
ಅಂತಿಮವಾಗಿ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಅವರೊಂದಿಗೂ ಅಭಿವೃದ್ಧಿ ಬಗ್ಗೆ ಚರ್ಚಿಸುತ್ತೇವೆ. ಇದೊಂದು ನಿರಂತರ ಪ್ರಕ್ರಿಯೆ ಎಂದು ಹೇಳಿದರು. ರಾಜ್ಯದಲ್ಲಿ ಮನೆ-ಮನೆಗೂ ಗ್ಯಾರಂಟಿ ಯೋಜನೆ ತಲುಪುತ್ತಿದೆ. 4 ಲಕ್ಷ ಯುವಕರಿಗೆ ವಿದ್ಯಾರ್ಥಿವೇತನ ನೀಡಲಾಗುತ್ತಿದೆ. ಗ್ಯಾರಂಟಿಗಳಿಂದಾಗಿ ವರ್ಷಕ್ಕೆ 52 ಸಾವಿರ ಕೋಟಿ ರು. ಹಣ ಜನರ ಖಾತೆಗೆ ನೇರವಾಗಿ ಹೋಗುತ್ತಿದೆ. ಗೃಹಲಕ್ಷ್ಮೀ ಯೋಜನೆಯಿಂದಲೇ 24 ಸಾವಿರ ಕೋಟಿ ರು. ಮಹಿಳೆಯರ ಖಾತೆಗಳಿಗೆ ಹೋಗುತ್ತಿದೆ.
4 ಕೋಟಿ ಜನರಿಗೆ ಅಕ್ಕಿ ನೀಡುತ್ತಿದ್ದೇವೆ. ಹೀಗಾಗಿ ಕಾಂಗ್ರೆಸ್ ಗ್ಯಾರಂಟಿ ಯೋಜನೆ ಬಗ್ಗೆ ಶಾಸಕರಿಂದ ಮಾಹಿತಿ ಪಡೆಯುತ್ತಿದ್ದೇವೆ. ಕಾಂಗ್ರೆಸ್ ಸಂಘಟನೆ ಅವರವರ ಕ್ಷೇತ್ರದಲ್ಲಿ ಹೇಗಿದೆ ಎಂಬ ವರದಿ ಪಡೆಯುತ್ತಿದ್ದೇವೆ. ಮುಂಚೂಣಿ ಘಟಕಗಳು ಹೇಗೆ ಕೆಲಸ ಮಾಡುತ್ತಿವೆ ಎಂಬ ಬಗ್ಗೆ ಪ್ರಗತಿ ಪರಿಶೀಲನೆ ನಡೆಸುತ್ತಿದ್ದೇವೆ. ಎಷ್ಟು ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳಾಗುತ್ತಿವೆ. ಎಷ್ಟು ಬಾಕಿಯಿವೆ ಎಂಬ ಮಾಹಿತಿ ಪಡೆಯುತ್ತಿದ್ದೇವೆ ಎಂದು ಸುರ್ಜೇವಾಲಾ ಹೇಳಿದರು.
