ರಾಜ್ಯದಲ್ಲಿ ಮುಖ್ಯಮಂತ್ರಿ ಹುದ್ದೆ ಖಾಲಿಯಿಲ್ಲ ನಾಯಕತ್ವ ಬದಲಾವಣೆ ಪ್ರಶ್ನೆಯಿಲ್ಲ. ಕೋವಿಡ್ ನಿಯಂತ್ರಣವೊಂದೇ ನಮ್ಮ ಆದ್ಯತೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು ಹೇಳಿಕೆ
ಹುಬ್ಬಳ್ಳಿ (ಮೇ.30) : ರಾಜ್ಯದಲ್ಲಿ ಮುಖ್ಯಮಂತ್ರಿ ಹುದ್ದೆ ಖಾಲಿಯಿಲ್ಲ. ಮೇಲಾಗಿ ಸದ್ಯ ನಮ್ಮ ಮುಂದೆ ನಾಯಕತ್ವ ಬದಲಾವಣೆ ಪ್ರಶ್ನೆಯಿಲ್ಲ. ಕೋವಿಡ್ ನಿಯಂತ್ರಣವೊಂದೇ ನಮ್ಮ ಆದ್ಯತೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು ಹೇಳಿದ್ದಾರೆ. ಇದೇ ವೇಳೆ ಬಿಜೆಪಿಯಲ್ಲಿ ಸಮರ್ಥರಿದ್ದಾರೋ ಇಲ್ಲವೋ? ಎಂಬುದಕ್ಕಿಂತ ಈಗಿರುವವರು ಸಮರ್ಥರಿದ್ದಾರೋ ಇಲ್ಲವೋ? ಮುಂದುವರಿಸಬೇಕೋ ಬೇಡವೋ? ಎಂಬ ಪ್ರಶ್ನೆಯಿದೆ ಅಷ್ಟೇ ಎಂದೂ ಹೇಳಿದ್ದಾರೆ. ಜೋಶಿಯವರ ಈ ಎರಡು ರೀತಿಯ ಹೇಳಿಕೆ ತೀವ್ರ ಕುತೂಹಲ ಮೂಡಿಸಿದೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೋವಿಡ್ ನಿಯಂತ್ರಣವೇ ನಮ್ಮೆಲ್ಲರ ಆದ್ಯತೆ. ನಾಯಕತ್ವದ ಬದಲಾವಣೆ ನಮ್ಮ ಮುಂದಿಲ್ಲ. ವಯಸ್ಸಾಗಿದೆ ಎಂದು ಬಿಎಸ್‌ವೈ ಅವರನ್ನು ಕೆಳಕ್ಕಿಳಿಸಲಾಗದು. ಯಡಿಯೂರಪ್ಪ ಅತ್ಯಂತ ಚೆನ್ನಾಗಿ ಆಡಳಿತ ನಿರ್ವಹಿಸುತ್ತಿದ್ದಾರೆ ಎಂದರು.
'ರಾಷ್ಟ್ರದಲ್ಲಿ ಯಡಿಯೂರಪ್ಪರಂತಹ ಅಸಮರ್ಥ ಮುಖ್ಯಮಂತ್ರಿ ಯಾರಿಲ್ಲ' ..
ನಿಮ್ಮನ್ನು ಕೆಲ ಶಾಸಕರು, ಸಚಿವರು ಭೇಟಿ ಮಾಡಿ ಸಿಎಂ ಆಗುವಂತೆ ಕೋರಿದ್ದಾರೆ ಎಂಬ ಮಾತಿದೆಯಲ್ಲ ಎಂಬ ಪ್ರಶ್ನೆಗೆ, ಈ ವಿಷಯವಾಗಿ ನನ್ನನ್ನು ಯಾರೂ ಭೇಟಿ ಮಾಡಿಲ್ಲ. ಯಾರೊಂದಿಗೂ ಚರ್ಚೆ ಮಾಡಿಲ್ಲ. ದೆಹಲಿ ಹಾಗೂ ಹುಬ್ಬಳ್ಳಿಯಲ್ಲಿದ್ದಾಗ ರಾಜ್ಯದ ಕೆಲ ಮುಖಂಡರು ಭೇಟಿಯಾಗಿದ್ದಾರೆ. ಆದರೆ ಕೇಂದ್ರ ಸಚಿವನಾಗಿರುವ ಹಿನ್ನೆಲೆಯಲ್ಲಿ ಈ ಭೇಟಿ ಸಹಜ. ಕೇಂದ್ರದಿಂದ ಆಗಬೇಕಾದ ಕೆಲಸಗಳ ಬಗ್ಗೆ ಚರ್ಚೆ ನಡೆದಿರುವುದು ಬಿಟ್ಟರೆ ಬೇರೆ ಯಾವ ವಿಷಯಗಳನ್ನೂ ಚರ್ಚೆ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.
ಬಿಜೆಪಿಯಲ್ಲಿ ಯಾರೂ ಸಮರ್ಥ ನಾಯಕರಿಲ್ಲ ಎಂದು ಸಿದ್ದರಾಮಯ್ಯ ಟೀಕಿಸಿದ್ದಕ್ಕೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್‌ನಲ್ಲಿ ಬಹಳಷ್ಟುಜನ ಸಮರ್ಥರಿದ್ದಾರೆ. ಅದಕ್ಕಾಗಿ ಸಿಕ್ಕಾಪಟ್ಟೆಬಡಿದಾಡಿಕೊಳ್ಳುತ್ತಾರೆ. ಅವರು ಬಡಿದಾಡಿಕೊಂಡೇ ಇರಲಿ ಎಂದು ವ್ಯಂಗ್ಯವಾಡಿದರು.
