ಬೆಂಗಳೂರು, (ಮೇ.29): ಇದು ನರಹಂತಕ ಸರ್ಕಾರ, ಅಸಮರ್ಥ ಮುಖ್ಯಮಂತ್ರಿಯಿಂದಾಗಿ ರಾಜ್ಯದ ಜನ ಸಂಕಷ್ಟ ಅನುಭವಿಸುವಂತಾಗಿದೆ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದರು.

ಕೆಪಿಸಿಸಿ ಕಚೇರಿಯಲ್ಲಿ ಮಹಿಳಾ ಕಾಂಗ್ರೆಸ್ ವತಿಯಿಂದ ಮಕ್ಕಳಿಗೆ ನೀಡಲಾಗುವ ಪೌಷ್ಠಿಕ ಆಹಾರ ಒಳಗೊಂಡ ಹೆಲ್ತ್ ಕಿಟ್ ಗಳನ್ನು ಮನೆ ಮನೆಗೆ ತಲುಪಿಸುವ ಅಭಿಯಾನಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು, ನರಹಂತಕ ಸರ್ಕಾರವನ್ನು ನಾನು ನನ್ನ ಜೀವನದಲ್ಲಿ ನೋಡಿರಲಿಲ್ಲ. ಯಡಿಯೂರಪ್ಪ ಅವರಂತಹ ಅಸಮರ್ಥ, ದುರ್ಬಲ ಮುಖ್ಯಮಂತ್ರಿ ದೇಶದಲ್ಲೇ ಇಲ್ಲ. ಕೇಂದ್ರ ಸರ್ಕಾರದಿಂದ ಆಮ್ಲಜನಕ ತರಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ ಎಂದು ಕಿಡಿಕಾರಿದರು.

ಹೈಕೋರ್ಟ್ ಆದೇಶ ನೀಡಿದ ಬಳಿಕ 1200 ಮೆಟ್ರಿಕ್ ಟನ್ ಆಮ್ಲಜನಕ ನೀಡುವಂತೆ ಆದೇಶಿಸಿತ್ತು. ಕೇಂದ್ರ ಅದನ್ನು ಸುಪ್ರೀಂಕೋರ್ಟ್ ನಲ್ಲಿ ಪ್ರಶ್ನಿಸಿ ಅಮಾನವೀಯವಾಗಿ ನಡೆದುಕೊಂಡಿತ್ತು ಎಂದರು.

'ರಾಮನ ಬಗ್ಗೆ ಮಾತಾಡೋ ಪಕ್ಷ, ರೇಪ್ ಆರೋಪಿ ಹೋಂ ಮಿನಿಸ್ಟರ್ ಭೇಟಿ ಮಾಡ್ತಾರೆ' 

ನ್ಯಾಯಾಲಯಗಳ ಆದೇಶದ ಹೊರತಾಗಿ ರಾಜ್ಯಕ್ಕೆ ಕೇಂದ್ರ ಸರ್ಕಾರ ಪೂರ್ಣ ಪ್ರಮಾಣದಲ್ಲಿ ಆಮ್ಲಜನಕವನ್ನು ನೀಡುತ್ತಿಲ್ಲ. ಇವತ್ತಿಗೂ 1100 ಮೆಟ್ರಿಕ್ ಟನ್ ಮಾತ್ರ ಬರುತ್ತಿದೆ ಎಂದರು. ನಾವು 100 ಕೋಟಿ ಯೋಜನೆಯಲ್ಲಿ ಲಸಿಕೆ ಕಾರ್ಯಕ್ರಮ ರೂಪಿಸಿದರೆ, ಅದರ ಬಗ್ಗೆ ಬಿಜೆಪಿಯ ಸಿ.ಟಿ.ರವಿ ಸೇರಿದಂತೆ ಅನೇಕರು ಹಗುರವಾಗಿ ಮಾತನಾಡುತ್ತಿದ್ದಾರೆ. ಕಾಂಗ್ರೆಸಿಗರು ಮನೆಯಿಂದ ತಂದು ಕೊಡುಲ್ಲ ಎನ್ನುತ್ತಿದ್ದಾರೆ, ಹಾಗಾದರೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮುಖ್ಯಸ್ಥರು ತಮ್ಮ ಮನೆಯಿಂದ ಹಣ ತಂದು ಖರ್ಚು ಮಾಡುತ್ತಿದ್ದಾರಾ ಎಂದು ಪ್ರಶ್ನಿಸಿದರು.

ರಾಜ್ಯದಲ್ಲಿ ಲಸಿಕೆ ಸರಿಯಾಗಿ ಸಿಗುತ್ತಿಲ್ಲ. ಲೆಕ್ಕಚಾರದ ಪ್ರಕಾರ ಎಂಟು ಕೋಟಿ ಲಸಿಕೆ ಬೇಕು, ಅಷ್ಟು ಇವರ ಬಳಿ ಇಲ್ಲ. ಇನ್ನೊಂದು ಕಡೆ ಮುಕ್ತ ಮಾರುಕಟ್ಟೆಯಲ್ಲಿ ಖಾಸಗಿ ಆಸ್ಪತ್ರೆಗಳು ಲಸಿಕೆ ಖರೀದಿ ಮಾಡಿ ತಮ್ಮ ಮನಸ್ಸಿಗೆ ಬಂದಂತೆ ದರ ನಿಗದಿ ಮಾಡಿ ಜನರಿಗೆ ನೀಡುತ್ತಿದೆ. ಅದಕ್ಕೆ ಬಿಜೆಪಿ ಸಂಸದರು ಬೆಂಬಲ ನೀಡುತ್ತಿದ್ದಾರೆ ಎಂದು ಆರೋಪಿಸಿದರು.

ಬ್ಲಾಕ್ ಫಂಗಸ್ ಸೇರಿ ಅನೇಕ ಶೀಲಿಂಧ್ರ ರೋಗಗಳಿಗೆ ಔಷಧಿ ಕೊರತೆ ಇದೆ. ನಮ್ಮ ಪಕ್ಷದ ಮಾಜಿ ಶಾಸಕ ಬಿ.ಬಿ.ಚಿಮ್ಮನಕಟ್ಟಿ ಅವರ ಪತ್ನಿಗೆ ಬ್ಲಾಕ್ ಫಂಗಸ್ ಆಗಿತ್ತು. ದಿನಕ್ಕೆ ಐದರಿಂದ ಆರು ಇಂಜಕ್ಷನ್ ಬೇಕು, ಅದನ್ನು ಕೊಡಿಸಲು ಸಚಿವರಾದ ಅಶೋಕ್, ಸುಧಾಕರ್, ಮುಖ್ಯಕಾರ್ಯದರ್ಶಿ ಸೇರಿದಂತೆ ಹಲವಾರು ಮಂದಿಗೆ ನಾನೇ ಖುದ್ದು ಕರೆ ಮಾಡಿದರೂ 58 ಇಂಜೆಕ್ಷನ್ ಕೊಡಿಸಲಷ್ಟೆ ಸಾಧ್ಯವಾಯಿತು. ಇನ್ನೂ ಜನ ಸಾಮಾನ್ಯರ ಪಾಡೇನು. ನನ್ನ ಕ್ಷೇತ್ರದಲ್ಲೂ 41 ಜನರಿಗೆ ಬ್ಲಾಕ್ ಫಂಗಸ್ ಹಾಗಿದೆ. ಒಬ್ಬರು ಸಾವನ್ನಪ್ಪಿದದಾರೆ. ಚಿಕಿತ್ಸೆಗೆ ಔಷಧಿಯ ಕೊರತೆ ಇದೆ. ಸರ್ಕಾರದ ಜವಾಬ್ದಾರಿ ಏನು ಎಂದು ಪ್ರಶ್ನಿಸಿದರು.

ನಮ್ಮಲ್ಲಿ‌ ಒಬ್ಬರು ಮಂತ್ರಿ ಇದ್ದಾರೆ. ಸದಾನಂದಗೌಡ ಗೊಬ್ಬರ ಮಂತ್ರಿ. ಸಾಕಷ್ಟು ಕೊಟ್ಟಿದ್ದೇನೆ ಅಂತಾರೆ. ಎಷ್ಟು ಕೊಟ್ಟಿದ್ದಿರಿ...? ನಾನು ಅವರ ಬಗ್ಗೆ ಮಾತಾಡಲ್ಲ ಬಿಡಿ. ರಾಜಕಾರಣ ಅಂತಾರೆ ಬಿಡಿ ಅಂತ ಲೇವಡಿ ಮಾಡಿದರು.
"