ಕೋಟಿ ನಗದು ಪತ್ತೆ ಬಗ್ಗೆ ಸಿಬಿಐ ತನಿಖೆ ನಡೆಸಿ: ಬಿ.ಎಸ್.ಯಡಿಯೂರಪ್ಪ
ಗುತ್ತಿಗೆದಾರರ ನಿವಾಸದಲ್ಲಿ ಪತ್ತೆಯಾದ ಕೋಟಿ ಕೋಟಿ ನಗದು ಹಣ ಪ್ರಕರಣವನ್ನು ಇ.ಡಿ. ಮತ್ತು ಸಿಬಿಐ ತನಿಖೆಗೆ ವಹಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಒತ್ತಾಯಿಸಿದ್ದಾರೆ.
ಬೆಂಗಳೂರು (ಅ.18): ಗುತ್ತಿಗೆದಾರರ ನಿವಾಸದಲ್ಲಿ ಪತ್ತೆಯಾದ ಕೋಟಿ ಕೋಟಿ ನಗದು ಹಣ ಪ್ರಕರಣವನ್ನು ಇ.ಡಿ. ಮತ್ತು ಸಿಬಿಐ ತನಿಖೆಗೆ ವಹಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಒತ್ತಾಯಿಸಿದ್ದಾರೆ. ಸೋಮವಾರ ಡಾಲರ್ಸ್ ಕಾಲೋನಿಯ ನಿವಾಸದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಐಟಿ ದಾಳಿ ಪತ್ತೆಯಾದ ಹಣ ಯಾರದ್ದು ಎಂಬುದು ಗೊತ್ತಾಗಬೇಕಾದರೆ, ತನಿಖೆಯಾಗಬೇಕು. ತನಿಖೆಯ ಬಳಿಕ ಸತ್ಯಾಂಶ ಹೊರಬರಲಿದೆ. ಹೀಗಾಗಿ ತನಿಖೆಯನ್ನು ಸಿಬಿಐ ಮತ್ತು ಇಡಿ ನಡೆಸಬೇಕು ಎಂದರು. ಚುನಾವಣೆಗೆ ಹಣ ಸಂಗ್ರಹ ಮಾಡಿರುವುದು ಎಂಬುದನ್ನು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
ಕಾಂಗ್ರೆಸ್‌ನವರು ಚುನಾವಣೆಗೆ ಹಣ ಸಂಗ್ರಹ ಮಾಡುವ ಕೆಲಸಕ್ಕೆ ಮುಂದಾಗಿದ್ದಾರೆ. ಪಂಚರಾಜ್ಯ ಚುನಾವಣೆಗೆ ಹಣ ಸಂಗ್ರಹಿಸುವುದನ್ನು ಬಿಟ್ಟು ಅಭಿವೃದ್ಧಿಯ ಕಡೆ ಸರ್ಕಾರ ಗಮನಹರಿಸಬೇಕು ಎಂದು ಹೇಳಿದರು. ಇದೇ ವೇಳೆ ವಿದ್ಯುತ್ ದರ ಹೆಚ್ಚಳವನ್ನು ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು. ಇದೇ ವೇಳೆ ವಿದ್ಯುತ್ ಕೊರತೆ ಕುರಿತು ಪ್ರತಿಕ್ರಿಯೆ ನೀಡಿದ ಅವರು, ರಾಜ್ಯದಲ್ಲಿ ವಿದ್ಯುತ್ ಕಣ್ಣಾಮುಚ್ಚಾಲೆ ಇದೆ. ಪಂಪ್‌ಸೆಟ್ ಇರುವ ರೈತರು ಸಂಕಷ್ಟದಲ್ಲಿದ್ದಾರೆ. ವಿದ್ಯುತ್ ಪೂರೈಕೆಯಾಗದೆ ಸಂಪೂರ್ಣವಾಗಿ ಬೆಳೆ ನಾಶವಾಗಿದೆ. ಸರ್ಕಾರ ತಕ್ಷಣವೇ ಬೋರ್ ವೆಲ್‌ಗಳಿಗೆ ವಿದ್ಯುತ್ ನೀಡುವ ಕೆಲಸ ಮಾಡಬೇಕು. ಇದರಿಂದ ರೈತರಿಗೆ ಅನುಕೂಲವಾಗಲಿದೆ ಎಂದು ಒತ್ತಾಯಿಸಿದರು.
ರಾಜ್ಯದಲ್ಲಿ ಬರಗಾಲಕ್ಕೆ ಸರ್ಕಾರ ಸ್ಪಂದಿಸುತ್ತಿಲ್ಲ: ಬಿಎಸ್‌ವೈ ವಾಗ್ದಾಳಿ
ವಿದ್ಯುದ್ದರ ಹೆಚ್ಚಳ ವಾಪಸ್ ಪಡೆಯಿರಿ: ವಿದ್ಯುತ್ ದರ ಹೆಚ್ಚಳ ಮಾಡಿ ಏನು ಮಾಡುತ್ತಾರೆ. ಇದರಿಂದ ರೈತರಿಗೆ, ಜನ ಸಾಮಾನ್ಯರಿಗೆ ಸಮಸ್ಯೆಯಾಗಲಿದೆ. ಆರಂಭದಲ್ಲಿ ಹಲವು ಕಾರ್ಯಕ್ರಮಗಳನ್ನು ಘೋಷಣೆ ಮಾಡಿ, ಈಗ ಒಂದೊಂದೇ ಬರೆ ಎಳೆಯುವ ಕೆಲಸ ಮಾಡುತ್ತಿದೆ. ಬೇರೆ ಬೇರೆ ರೀತಿಯ ಸುಲಿಗೆ ಮಾಡಿ ಹಣ ವಸೂಲಿ ಮಾಡುತ್ತಿದೆ. ಇದು ಖಂಡನೀಯವಾಗಿದ್ದು, ವಿದ್ಯುತ್ ದರ ಹೆಚ್ಚಳವನ್ನು ವಾಪಸ್ ಪಡೆಯಬೇಕು ಎಂದರು.
ಹಬ್ಬ ಮುಗಿದ ಬಳಿಕ ರಾಜ್ಯ ಪ್ರವಾಸ: ಹಬ್ಬ ಮುಗಿದ ಬಳಿಕ ರಾಜ್ಯ ಪ್ರವಾಸ ಮಾಡಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು. ಸುದ್ದಿಗಾರರ ಜತೆಗೆ ಮಾತನಾಡಿ, ನಾನು ಈಗಾಗಲೇ ರಾಜ್ಯ ಪ್ರವಾಸ ಆರಂಭಿಸಬೇಕಿತ್ತು. ಹಬ್ಬ ಮುಗಿಯಲಿ. ಆ ಬಳಿಕ ಎಲ್ಲರೂ ಒಟ್ಟಾಗಿ ಪ್ರವಾಸ ಮಾಡುತ್ತೇವೆ ಎಂದು ಹೇಳಿದರು.
ನನಗೆ ಬಿ.ಎಸ್.ಯಡಿಯೂರಪ್ಪ ಅವರೇ ಹೈಕಮಾಂಡ್: ಎಸ್.ಟಿ.ಸೋಮಶೇಖರ್
ಅಧಿವೇಶನ ಆಗಲಿ: ವರ್ಷಕ್ಕೊಮ್ಮೆ ಅಧಿವೇಶ ಮಾಡಬೇಕು ಎಂಬ ಉದ್ದೇಶದಿಂದ ಕೋಟ್ಯಂತರ ರುಪಾಯಿ ಖರ್ಚು ಮಾಡಿ, ಬೆಳಗಾವಿಯಲ್ಲಿ ದೊಡ್ಡಸೌಧ ನಿರ್ಮಾಣ ಮಾಡಿದ್ದೇವೆ. ಅಲ್ಲಿ ಅಧಿವೇಶನ ನಡೆಯಲಿಲ್ಲ ಎಂದರೆ ಏನು ಪ್ರಯೋಜನ ಎಂದು ಯಡಿಯೂರಪ್ಪ ಇದೇ ವೇಳೆ ಪ್ರಶ್ನಿಸಿದರು. ಬೆಳಗಾವಿಯಲ್ಲಿ ದೊಡ್ಡ ಸೌಧ ಕಟ್ಟಿದರೂ ಅಧಿವೇಶನ ನಡೆಯಲಿಲ್ಲ ಎಂದರೆ ಯಾವುದೇ ಪ್ರಯೋಜನ ಆಗುವುದಿಲ್ಲ. ಸರ್ಕಾರ ಈ ಬಗ್ಗೆ ತೀರ್ಮಾನ ಕೈಗೊಳ್ಳಬೇಕು. ಅದು ಸರ್ಕಾರಕ್ಕೆ ಬಿಟ್ಟ ವಿಷಯ ಎಂದರು. ರಾಜ್ಯದಲ್ಲಿ ಮಳೆ ಕೊರತೆಯಿಂದಾಗಿ ಈಗಾಗಲೇ ಲೋಡ್ ಶೆಡ್ಡಿಂಗ್ ಸಮಸ್ಯೆ ಆರಂಭವಾಗಿದೆ. ಎಲ್ಲರಿಗೂ ವಿದ್ಯುತ್ ಶಾಕ್ ನೀಡುತ್ತಿದೆ. ರೈತರ ಪಂಪ್‌ಸೆಟ್‌ಗೆ ನೀರು ಸಿಗುತ್ತಿಲ್ಲ. ಇದರಿಂದ ಬೆಳೆ ಬೆಳೆಯಲು ಆಗದ ಪರಿಸ್ಥಿತಿ ನಿರ್ಮಾಣ ಆಗಿದೆ. ಈ ಬಗ್ಗೆ ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.